ಬೈಟುಕಾಫಿ

ಮಳೆದೇವ

ಮಳೆದೇವ
Published On :

ದಕ್ಷಿಣ ಕರ್ನಾಟಕದ ಜನಕ್ಕೆ ಗಣೇಶ ಹಬ್ಬ ಸಂಭ್ರಮ. ಆದರೆ ಉತ್ತರ ಕರ್ನಾಟಕದವರಿಗೆ ಗಣೇಶನಷ್ಟೇ ಜೋಕುಮಾರಸ್ವಾಮಿಯೂ ಮುಖ್ಯ. 'ಅಡ್ಡಡ್ಡ ಮಳೆ ಬಂದು ದೊಡ್ಡ  ದೊಡ್ಡ ಕೆರೆ ತುಂಬಿ ನಮ್ಮ ಗೊಡ್ಡುಗಳೆಲ್ಲಾ ಹೈನಾಗಿ ನನ್ನ ಕೊಮರ ನಿನ್ನ ಶೆಡ್ಡಿಯ ಮ್ಯಾಲ ಸಿರಿ ಬಂದು...' ಎಂದು ಜೋಕುಮಾರನನ್ನು ಪುಟ್ಟಿಯಲ್ಲಿ ಹೊತ್ತೊಯ್ದು ಹಾಡುವ ಗಂಗಾಮತಸ್ಥ ಮಹಿಳೆಯರು ಹಾಡುವ ಪದಗಳು ನಿಮಗೆ ಸೋಜಿಗವುಂಟು ಮಾಡದೆ ಇರವು.
ಈ ಮಹಿಳೆಯರ ಬಾಯಿಂದ ಹೊಮ್ಮುವ ನೂರಾರು ಜೋಕುಮಾರ ಸ್ವಾಮಿ ಪದಗಳು ರೈತರ ವೈಚಾರಿಕ ಬದುಕನ್ನು ಕಟ್ಟಿಕೊಡುತ್ತವೆ. ಜೋಕುಮಾರಸ್ವಾಮಿ ಗಂಗಾಮತಸ್ಥ ಮನೆಯ ಕಂದನಾಗಿದ್ದರಿಂದ ಇಂದಿಗೂ ಗಂಗಾಮತ ಮಹಿಳೆಯರೇ ಜೋಕಪ್ಪನ ಮೂರ್ತಿಯನ್ನು ದೊಡ್ಡ ಪುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತುಕೊಂಡು ಊರೂರು, ಮನೆಮನೆಗೆ ಸಂಚರಿಸಿ ಜೋಕಪ್ಪನ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ಮನೆ ಬಾಗಿಲಿಗೆ ಹೋದಾಗ ರೈತರು ಕಾಳುಕಡಿ, ಬೆಣ್ಣೆ, ಮೆಣಸಿನಕಾಯಿ, ಉಪ್ಪು ಮುಂತಾದ ವಸ್ತುಗಳನ್ನು ಜೋಕಪ್ಪನಿಗೆ ಅರ್ಪಿಸಿ ಭಕ್ತಿ ಮೆರೆಯುತ್ತಾರೆ.

ಜೋಕಪ್ಪ ಮಳೆ ತರಿಸುತ್ತಾನೆ ಎಂಬ ನಂಬಿಕೆ ಉತ್ತರ ಕರ್ನಾಟಕದ ರೈತರಲ್ಲಿ ಬಲವಾಗಿ ಬೇರೂರಿದೆ. ಹೀಗಾಗಿಯೇ ಜೋಕಪ್ಪ ಎಂದರೆ ರೈತರಿಗೆ ಎಲ್ಲಿಲ್ಲದ ಪ್ರೀತಿ. ಜೋಕುಮಾರಸ್ವಾಮಿ ಅತಿಕಾಮಿ, ಮಹಿಳೆಯರನ್ನು ಕಾಡುತ್ತಿದ್ದ ಎಂದು ಹಾಡುಗಳಲ್ಲಿ ವ್ಯಕ್ತವಾಗುತ್ತದೆ. ಈತ ಹುಟ್ಟಿ ಏಳು ದಿನ ಹಾಗೂ ಸತ್ತು ಏಳು ದಿನಗಳ ಸಮಯವನ್ನು 'ಜೋಕಪ್ಪನ ಅಳಲು' ಎಂದು ಕರೆಯುತ್ತಾರೆ. ಈ ಸಂದರ್ಭ ಹೊಸದಾಗಿ ಮದುವೆಯಾದ  ಮಹಿಳೆಯರು ಗಂಡನ ಮನೆಯಲ್ಲಿ ಇರುವುದಿಲ್ಲ. ಜೋಕಪ್ಪನ ಅಳಲಿನಲ್ಲಿ ಗಂಡ ಹೆಂಡತಿ ಕೂಡಿದರೆ ಹುಟ್ಟುವ ಮಗು ಮುಂದಿನ ವರ್ಷ ಬೆಳೆ ಒಕ್ಕಲು ಮಾಡುವ ಸಮಯದಲ್ಲಿ ಹುಟ್ಟುತ್ತಾನೆ. ರೈತರ ಬದುಕಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಈ ಕಟ್ಟಳೆ ಇರಬಹುದು.

ಪ್ರತಿವರ್ಷ ಗಣೇಶ ವಿಸರ್ಜನೆಯಾಗಿ ಮೂರು ದಿವಸಕ್ಕೆ ಜೋಕಪ್ಪ ಹುಟ್ಟುತ್ತಾನೆ. ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕಪ್ಪನ ಜನನ. ಅಂದಿನಿಂದ ಒಂದು ವಾರ ಜೋಕಪ್ಪನ ಹಬ್ಬ. ವಾರದ ನಂತರ ಜೋಕಪ್ಪ ಸಾಯುತ್ತಾನೆ. ಅನಂತನ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ಜೋಕಪ್ಪನ ಹುಣ್ಣಿಮೆಯೆಂದೇ ಹೆಸರು. ಅಂದು ರೈತರು ಜೋಕಪ್ಪನ ಮೂರ್ತಿಯ ಬೇವಿನಸೊಪ್ಪು ಇತರೆ ವಸ್ತುಗಳಿಂದ ತಯಾರಿಸಿದ ಚರಗವನ್ನು ತೆಗೆದುಕೊಂಡು ಹೋಗಿ ಸೂರ್ಯ ಹುಟ್ಟುವ ಮುಂಚೆಯೇ ಜಮೀನಿನಲ್ಲಿ ಚೆಲ್ಲುತ್ತಾರೆ. ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ. ನಂತರ ಮನೆಯಲ್ಲಿ ಕಡುಬು, ಹುಳಿಸೊಪ್ಪು, ಕಾಳುಗಳ ಪಲ್ಯ,  ಮಿದಿಕಿ ಎನ್ನುವ ಸಜ್ಜೆಯಿಂದ ಮಾಡಿದ ಸಿಹಿಭಕ್ಷ್ಯ ಮಾಡಿಕೊಂಡು ತಮ್ಮ ಜಮೀನು, ಮನೆಮಾಳಿಗೆ ಮೇಲೆ, ಊರ ಹೊರಗಿನ ಹಸಿರಿನ ಮಧ್ಯೆ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಊಟ ಮಾಡಿ ಸಂಭ್ರಮಿಸುತ್ತಾರೆ.

ಜೋಕಪ್ಪನ ಮೂರ್ತಿ ಮಾಡಿ ಊರೂರು ತಿರುಗುವ ಗಂಗಾಮತ ಕುಟುಂಬಗಳು ಇಂದು ಬಡತನ, ಅನಕ್ಷರತೆ ಯಿಂದ ಬೀದಿಗೆ ಬಂದಿವೆ. ಹಳ್ಳಿಗಳಲ್ಲಿ ಭಕ್ತರು ಮೊರಗಟ್ಟಲೇ ನೀಡುತ್ತಿದ್ದ ದವಸಧಾನ್ಯಗಳೂ ಈಗ ಕಡಿಮೆಯಾಗಿವೆ. ಜೋಕಪ್ಪನ ಅಮೂಲ್ಯ ಹಾಡುಗಳು ಮುಂದಿನ ಪೀಳಿಗೆಗೆ ರವಾನೆಯಾಗುತ್ತಿಲ್ಲ.

- ಭೀಮಣ್ಣ  ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.