ವೃಥಾ ಹಣ ಖರ್ಚು
ಒಂದು ಮನೆ ಅಂದ ಮೇಲೆ ಇತ್ತಿತ್ತ ಕಡೆ ಹೀಗಿದ್ದರೇನೆ ಚಂದ, ಅದು ಆ ಕಡೆ ಇದ್ದರೇನೆ ಶ್ರೇಷ್ಠ, ಈ ಕಡೆ ಇರುವುದರಿಂದಲೇ ನಿಮಗೆ ನಷ್ಟ ಆಗ್ತಾ ಇರೋದು ಎಂದು ಹೇಳುವ ಜ್ಯೋತಿಷಿಗಳು ಈಗ ಗಲ್ಲಿಗೆ ಒಬ್ಬರಿದ್ದಾರೆ. ವಾಸ್ತು ಎಂಬುದು ನಮಗೆ ನಾವುಗಳೇ ಇತ್ತೀಚಿಗೆ ಮಾಡಿಕೊಂಡ ಕಟ್ಟಳೆ, ನಿಯಮಗಳೇ ಹೊರತು ಅದರಿಂದೇನೂ ನಷ್ಟವಾಗದು. ನಮ್ಮ ಹಿಂದಿನ ಕಾಲದ ಜನರು ವಾಸ್ತು ನಂಬಿಯೇ ಮನೆ ಕಟ್ಟಿದವರಲ್ಲ. ಇಷ್ಟಾಗಿಯೂ ಅವರು ಯಾವುದೇ ತೊಂದರೆ ಇಲ್ಲದೆ ನೂರಾರು ವರ್ಷ ಕಾಲ ಗಟ್ಟಿಮುಟ್ಟಾಗಿ ಇದ್ದು ಬದುಕಿ ಬಾಳಿ ಹೋಗಿದ್ದಾರೆ. ಅಂತಹದರಲ್ಲಿ ವಾಸ್ತು ಎಂಬ ಗುಮ್ಮ ಅವರಿಗೆ ಕಾಡಿದ್ದೇ ಇಲ್ಲ. ಆದರೆ ತೀರಾ ಇತ್ತೀಚಿಗೆ ವಾಸ್ತು ಪ್ರತಿಯೊಬ್ಬರನ್ನೂ ತಲೆ ತಿನ್ನುತ್ತಿದೆ. ಜನ ಹಿಂದೆಮುಂದೆ ಯೋಚಿಸದೇ ಜ್ಯೋತಿಷಿಗಳು ಹೇಳಿದ್ದೇ ವೇದವಾಕ್ಯವೆಂದು ತಿಳಿದು ಅದರಂತೆ ಪಾಲಿಸಲು ಹೊರಟು ಬಿಡುತ್ತಾರೆ. ಇದರಿಂದ ನಮ್ಮಲ್ಲಿ ಮಾನಸಿಕ ಖಿನ್ನತೆಯು ಹೆಚ್ಚಾಗುವುದರ ಜೊತೆಗೆ ವೃಥಾ ಹಣದ ಖರ್ಚು. ನಮ್ಮ ಮನೋಬಲ, ಮಾನಸಿಕ ಸ್ಥಿರತೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಲ್ಲಿ ಈ ವಾಸ್ತು ಅನಗತ್ಯ ಅನಿಸದೇ ಇರದು. ಹೀಗಾಗಿ ಎಲ್ಲಾ ಓ.ಕೆ, ಈ ವಾಸ್ತು ಯಾಕೆ?
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ವಾಸ್ತುವಿನಲ್ಲಿ ವಿಜ್ಞಾನ ಅಡಗಿದೆ
ವಸತು ಇತಿ ವಾಸ್ತು. ವಸತು ಎಂದರೆ ಸಂಸ್ಕೃತದಲ್ಲಿ ವಾಸಿಸು ಅಥವಾ ವಾಸಿಸಲಿ ಎಂದರ್ಥ. ಅದೇ ಮುಂದೆ ವಾಸ್ತು ಎಂದಾಗಿರಬಹುದೆಂದು ನನ್ನ ಅಭಿಪ್ರಾಯ. ವಾಸ್ತು ಬೇಕೇ ಅಥವಾ ಬೇಡವೇ ಅನ್ನುವುದಕ್ಕಿಂತ ನಮಗೆ ವಾಸ್ತುವನ್ನು ಅನುಸರಿಸುವುದರಿಂದ ವೈಜ್ಞಾನಿಕವಾಗಿ ಏನೇನು ಅನುಕೂಲಗಳುಂಟಾಗುತ್ತವೆ ಎಂದು ತಿಳಿದುಕೊಂಡು ನಮಗೆ ಅನುಕೂಲಕರವಾದ ಕೆಲವೊಂದು ವಿಷಯಗಳನ್ನು ಅನುಸರಿಸಲು ಅಡ್ಡಿಯಿಲ್ಲ. ಉದಾಹರಣೆಗೆ ಪೂರ್ವ ಈಶಾನ್ಯ ಅಥವಾ ಉತ್ತರ ಈಶಾನ್ಯಕ್ಕೆ ಮುಂಬಾಗಿಲು ಇರಬೇಕು ಎನ್ನುತ್ತಾರೆ. ಇದರಿಂದ ಮನೆಯೊಳಗೆ ಸೂರ್ಯನ ಬಿಸಿಲು ಹಾಗೂ ಬೆಳಕು ಚೆನ್ನಾಗಿ ಬೀಳುವುದು. ಇದರಿಂದ ಮನೆಯೊಳಗಿನ ಸಣ್ಣಸಣ್ಣ ಕ್ರಿಮಿಗಳೆಲ್ಲಾ ನಾಶ ಹೊಂದುವವು. ಮನೆಯ ಎದುರಿಗೆ ತುಳಸಿ ಕಟ್ಟೆಯನ್ನಿಡುವರು. ತುಳಸಿಯು ಔಷಧಿಯ ಸಸ್ಯವಾಗಿರುವುದರಿಂದ ಅದರ ಮೂಲಕ ಮನೆಯೊಳಗೆ ಬೀಸುವ ಗಾಳಿಯು ಆರೋಗ್ಯಕ್ಕೆ ಪೂರಕವಾಗಿರುವುದು. ನೈರುತ್ಯದಲ್ಲಿ ಮನೆಯ ಯಜಮಾನ ಮಲಗುವ ಕೋಣೆಯಿರಬೇಕೆಂದು ವಾಸ್ತು ಬಲ್ಲವರು ಹೇಳುತ್ತಾರೆ. ನೈಋತ್ಯ ದಿಕ್ಕಿನಲ್ಲಿ ಬೀಸುವ ಗಾಳಿಯು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಇದರಿಂದ ಕಷ್ಟಪಟ್ಟು ಮನೆಯ ಎಲ್ಲರ ಒಳಿತಿಗಾಗಿ ದುಡಿಯುವ ಮನೆಯ ಯಜಮಾನನ ಆರೋಗ್ಯ ಚೆನ್ನಾಗಿರಲೆಂದು ಇದರ ಆಶಯ. ಹಾಗೂ ಆಗ್ನೇಯಕ್ಕೆ ಅಡುಗೆ ಮನೆಯಿದ್ದು, ಅಡುಗೆ ಮಾಡುವ ಸ್ಥಳವು ಆ ಕೋಣೆಯ ಪೂರ್ವ ದಿಕ್ಕಿಗೆ ಇರಬೇಕೆಂದು, ಹಾಗೂ ಕಿಟಕಿಯು ಪೂರ್ವಕ್ಕೆ ಇರಬೇಕೆಂದು ವಾಸ್ತುಶಾಸ್ತ್ರದಲ್ಲಿ ಹೇಳಿದೆ. ಇದರಿಂದ ಆಗುವ ಅನುಕೂಲವೇನೆಂದರೆ, ಅಡುಗೆ ಮಾಡುವಾಗ ಬೆಳಕು ಸರಿಯಾಗಿ ಬೀಳುವುದು. ಅಡುಗೆ ಮನೆಯಲ್ಲಿ ನಿತ್ಯ ಸೂರ್ಯನ ಬಿಸಿಲು ಬೀಳುವುದರಿಂದ ಅಲ್ಲಿನ ವಾತಾವರಣವು ಅನೇಕ ರೋಗಕಾರಕ ಸೂಕ್ಷ್ಮಜೀವಿಗಳಿಂದ ಮುಕ್ತವಾಗುವುದು. ಇಂತಹ ಕೆಲವು ಆಚರಣೆಗಳನ್ನೆಲ್ಲಾ ಆಚರಿಸಲು ಅನುಕೂಲವೇ ಆಗುವುದು. ಆದರೆ ಪಶ್ಚಿಮ ದಿಕ್ಕಿಗೆ ರಸ್ತೆಯಿರುವ ನಿವೇಶನವಾಗಿದ್ದಾಗಲೂ ಪೂರ್ವಕ್ಕೆ ಮುಖ್ಯದ್ವಾರವನ್ನಿಡಬೇಕೆಂದರೆ ಅದು ಮೂರ್ಖತನವಾಗುವುದು. ನಮ್ಮ ಪೂರ್ವಜರು ಮಾಡಿರುವ ಆಚರಣೆಗಳೆಲ್ಲಾ ವೈಜ್ಞಾನಿಕವಾಗಿಯೂ, ಆರೋಗ್ಯಕ್ಕೆ ಪೂರಕವಾಗಿಯೂ ಇರುವವು. ಒಟ್ಟಿನಲ್ಲಿ ಮನೆಯೊಳಗೆ ಗಾಳಿ, ಬೆಳಕು, ಬಿಸಿಲು ಬೀಳುವಂತೆ ಮನೆಯನ್ನು ನಿರ್ಮಿಸುವುದರಿಂದ ಎಲ್ಲಾ ರೀತಿಯಲ್ಲಿಯೂ ಒಳಿತೇ ಆಗುವುದು.
- ವಿದ್ಯಾ ನಾಡಿಗ, ಬಿಜಾಪುರ
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

