ಆಸ್ತಿ ಪಂಜರ
ಸರಿತಾಳ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಏಡ್ಸ್ನಿಂದ ಅವರು..

ಕಳೆದ ವರ್ಷ ಸರಿತಾಳ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಏಡ್ಸ್ನಿಂದ ಅವರು ಸತ್ತಿದ್ದಾರೆ ಎಂಬ ವಿಷಯ 8 ವರ್ಷದ ಮಗಳಿಗೆ ತಿಳಿದಿಲ್ಲ. ಆಕೆ ಶಾಲೆಗೆ ಹೋಗುತ್ತಿದ್ದಾಳೆ. ಬಟ್ಟೆ, ಚಪ್ಪಲಿ, ಪಠ್ಯಪುಸ್ತಕ ಇದಕ್ಕೆಲ್ಲ ರೊಕ್ಕ ಬೇಕು. ಸರಿತಾಳ ಚಿಕ್ಕಪ್ಪ- ಚಿಕ್ಕಮ್ಮ ಹಣ ಕೊಡಲು ಸಿದ್ಧವಿಲ್ಲ. ಆದರೆ ಸರಿತಾಳ ತಂದೆಯ ಪಾಲಿನ ಹೊಲವನ್ನು ಚಿಕ್ಕಪ್ಪ ವಶಪಡಿಸಿಕೊಂಡಿದ್ದಾರೆ. ಸರಿತಾಳ ಕೈಯಿಂದ ಮನೆಕೆಲಸ ಮಾಡಿಸುತ್ತಾರೆ. ಎಷ್ಟು ಕೆಲಸ ಮಾಡಿದರೂ ಸಮಾಧಾನವಿಲ್ಲ. ಬಾಯಿಗೆ ಬಂದಂತೆ ಬೈಯುತ್ತಾರೆ. ಮನೆಯಿಂದ ಹೊರಹಾಕಿದರೆ ಸರಿತಾಳ ಆಸ್ತಿ ಸಿಗದೆ ಹೋಗಬಹುದು ಎಂಬ ಭಯ. ತಂದೆ ತಾಯಿ ಕಳೆದುಕೊಂಡ ತಬ್ಬಲಿ ಸರಿತಾಗೆ ಮನೆಂು ವಾತಾವರಣ ಮನಸ್ಸಿಗೆ ನೆಮ್ಮದಿ ನೀಡುತ್ತಿಲ್ಲ.
ನಾಲ್ಕು ವರ್ಷದ ಮನೋಜ ಇನ್ನೂ ಮಾತು ಕಲಿಯುತ್ತಿದ್ದ. ಈತ ಎಚ್ಐವಿ ಸೋಂಕಿತ ಬಾಲಕ. ತಂದೆ ತಾಯಿ ಇಬ್ಬರೂ ಇಲ್ಲ. ಹೆತ್ತವರು ತೀರಿಕೊಂಡ ನಂತರ ಮನೋಜ ಮನೆಯವರಿಗೆ ಬೇಡವಾದ. ಸಿರಿವಂತರಾದರೂ ಬಾಲಕನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಜ್ಜನ ಮನೆಯವರು ಕರೆದುಕೊಂಡು ಹೋಗಿ ಸಾಕಿದರು. ಎರಡು ವರ್ಷ ಕಳೆದ ಮೇಲೆ ಅಜ್ಜನ ಮನೆಯಲ್ಲೂ ಬಾಲಕನನ್ನು ಇಟ್ಟುಕೊಳ್ಳಲು ಕೆಲವರು ವಿರೋಧಿಸಿದರು. ಅನಿವಾರ್ಯವಾಗಿ ಸರಕಾರೇತರ ಸಂಸ್ಥೆ ನಡೆಸುವ ಆಶ್ರಮಕ್ಕೆ ಸೇರಿಸಲಾಯಿತು. ಮನೆಯಲ್ಲಿ ಸಾಕಷ್ಟು ಆಸ್ತಿ ಇದ್ದರೂ ಮನೋಜನ ಖರ್ಚಿಗೆ ಒಂದು ರೂಪಾಯಿ ಕೊಡುತ್ತಿಲ್ಲ.
ಎಚ್ಐವಿಯಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳು ಎದುರಿಸುತ್ತಿರುವ ಹಲವು ಸಾಮಾಜಿಕ, ಆರ್ಥಿಕ ಸಮಸ್ಯೆಗಳೊಂದಿಗೆ ಆಸ್ತಿ ಹಕ್ಕು ವಂಚನೆಯೂ ಒಂದು. ಏನೂ ಗೊತ್ತಿಲ್ಲದ ಸೋಂಕಿತ ಮತ್ತು ತಬ್ಬಲಿ ಮಕ್ಕಳಿಗೆ ಆಸ್ತಿಯ ಹಕ್ಕಿನ ಅರಿವು ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕುಟುಂಬದ ಇತರ ಸದಸ್ಯರು ಈ ಅನಾಥ ಮಕ್ಕಳ ಆಸ್ತಿ ಲಪಟಾಯಿಸಲು ನಾನಾ ಕಸರತ್ತು ಮಾಡುವ ಪ್ರಸಂಗ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾಗಾದರೆ, ಹೀಗೆ ಅನಾಥರಾದ ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕಿಲ್ಲವೆ? ಮಕ್ಕಳು ಕೂಡ ಎಚ್ಐವಿ ಸೋಂಕಿತರಾಗಿದ್ದರೆ ಅವರು ಆಸ್ತಿಯ ಪಾಲುದಾರ ಆಗಲು ಸಾದ್ಯವಿಲ್ಲವೆ?
ಎಚ್ಐವಿ ಸೋಂಕಿತ ಮಕ್ಕಳಿಗೆ ಆಸ್ತಿ ನಿರಾಕರಿಸಲು ಸಾಧ್ಯವಿಲ್ಲ. ಅವರಿಗೆ ಎಚ್ಐವಿ ಇದೆಯೋ ಇಲ್ಲವೋ ಎಂದು ಕಾನೂನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಮಕ್ಕಳಂತೆ ಇವರೂ ಕೂಡ ತಂದೆಯ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿ ಹಕ್ಕಿಗೆ ಬಾಧ್ಯಸ್ತರಾಗಿರುತ್ತಾರೆ. ಹೆಣ್ಣಿರಲಿ, ಗಂಡಿರಲಿ, ಆಸ್ತಿ ಪಡೆಯವ ಹಕ್ಕು ಅವರಿಗೆ ಇದ್ದೇ ಇದೆ. ಆದರೆ, ಈ ಮಕ್ಕಳ ಬಗ್ಗೆ ಕುಟುಂಬದ ಇತರರ ತಿರಸ್ಕಾರ ಭಾವನೆ, ಮೋಸ ಪ್ರವೃತ್ತಿ ಆಸ್ತಿ ವಂಚನೆಗೆ ಕಾರಣ.
ಸ್ವಯಾರ್ಜಿತ ಆಸ್ತಿಯಾಗಿದ್ದರೆ ತಂದೆಯ ಮರಣಾನಂತರ ಮಕ್ಕಳು ಆ ಆಸ್ತಿಯ ಪಾಲುದಾರರು. ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಅವರ ಹೆಸರಿಗೆ ಮಾಡಿಕೊಳ್ಳಲು ಸಾದ್ಯವಿದೆ. ಈ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಎಚ್ಐವಿಯಿಂದ ತಂದೆ ತಾಯಿ ಕಳೆದುಕೊಂಡ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರಾಜ್ಯದಲ್ಲಿ ಹಲವು ಸಾವಿರ ಸಂಖ್ಯೆಯಲ್ಲಿದ್ದಾರೆ. ಈ ಪ್ರಾಯದಲ್ಲಿ ಇವರ ಹೆಸರಿಗೆ ಆಸ್ತಿ ನೋಂದಣಿ ಮಾಡಲಾಗುವುದಿಲ್ಲ. ಈ ಮಕ್ಕಳು ನಾಮಿನಿ ಆಗಿರುತ್ತಾರೆ. ಆದರೆ, ಗಾರ್ಡಿಯನ್ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇವರು ಆಸ್ತಿ ಸಂರಕ್ಷಕರು.
ತಂದೆ ಸತ್ತಿದ್ದು ತಾಯಿ ಇದ್ದರೆ ಆಸ್ತಿ ತಾಯಿ ಹೆಸರಿನಲ್ಲಿರುತ್ತದೆ. ತಂದೆ ತಾಯಿ ಇಬ್ಬರೂ ಸತ್ತಿದ್ದರೆ ಗಾರ್ಡಿಯನ್ ನೇಮಕಕ್ಕೆ ಅವಕಾಶವಿದೆ. ಗಾರ್ಡಿಯನ್ ನೇಮಿಸುವಾಗ ಕುಟುಂಬದ ಸದಸ್ಯರಿಗೆ ಹೆಚ್ಚಿನ ಪ್ರಾತಿನಿಧ್ಯ. ಕುಟುಂಬದ ಸದಸ್ಯರು ಯಾರೂ ಇಲ್ಲ ಅಥವಾ ಅವರು ಬೇಡ ಎಂದಾದರೆ ನ್ಯಾಯಾಲಯವೇ ಸೂಕ್ತ ವ್ಯಕ್ತಿಗಳನ್ನು ನೇಮಿಸುತ್ತದೆ. ಮಕ್ಕಳು 18 ವರ್ಷ ಪೂರೈಸಿದಾಗ ಅವರ ಹೆಸರಿಗೆ ಆಸ್ತಿ ನೋಂದಣಿ ಮಾಡಬೇಕು.
ಕಾನೂನು ಪ್ರಕಾರ ಎಚ್ಐವಿ ಸೋಂಕಿತ ಮಕ್ಕಳಿಗೆ ಆಸ್ತಿ ವಂಚನೆ ಸಾಧ್ಯವಿಲ್ಲ. ಆದರೆ ಕುಟುಂಬದ ಸದಸ್ಯರ ಕುತಂತ್ರದಿಂದ ಮಕ್ಕಳು ಸಂಕಷ್ಟ ಎದುರಿಸುವ ಸನ್ನಿವೇಶವೇ ಹೆಚ್ಚು. ಬಹುತೇಕ ಕುಟುಂಬದವರು ಸೋಂಕಿತ ಅನಾಥ ಮಕ್ಕಳಿಗೆ ಅಗತ್ಯ ಸೌಲಭ್ಯ, ಹಣ ನೀಡದೆ ಸತಾಯಿಸುತ್ತಾರೆ. ಬಟ್ಟೆ, ಶಾಲೆ ವೆಚ್ಚ, ಆರೋಗ್ಯ ಚಿಕಿತ್ಸೆಗೆ ಹಣ ಕೊಡಲು ಕೂಡ ನಿರಾಕರಿಸುತ್ತಾರೆ. ಈ ಸಮಸ್ಯೆ ಬಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು. ಈ ಮಕ್ಕಳು ಹೇಗೂ ಹೆಚ್ಚು ಕಾಲ ಬದುಕುವುದಿಲ್ಲ, ಅವರಿಗೇಕೆ ಆಸ್ತಿ ಎಂಬ ತಾತ್ಸಾರವೇ ಇದಕ್ಕೆ ಕಾರಣ. <
ಕಾನೂನು ನೆರವು
2006-07ರಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಎಚ್ಐವಿ/ಏಡ್ಸ್ ಮಸೂದೆ ಜಾರಿಗೆ ಸಿದ್ಧತೆ ನಡೆಸುತ್ತಿವೆ. ಆದರೆ ಇನ್ನೂ ಇದಕ್ಕೆ ಒಪ್ಪಿಗೆ ದೊರೆತಿಲ್ಲ. ಈ ಕಾನೂನು ಜಾರಿಗೆ ಬಂದರೆ ಎಚ್ಐವಿ ಸೋಂಕಿತರು, ಮಕ್ಕಳು ಸೇರಿದಂತೆ ಎಲ್ಲರಿಗೂ ಸಾಕಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಬೆಂಗಳೂರಿನ ಲಾಯರ್ಸ್ ಕಲೆಕ್ಟಿವ್ ಸುರೇಖಾ ಶೆಟ್ಟಿ. ಎಚ್ಐವಿ ಸೋಂಕಿತ ಬಡವರು ಪ್ರತಿ ಜಿಲ್ಲೆಯಲ್ಲಿರುವ ಉಚಿತ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾನೂನು ನೆರವು ಪಡೆಂುಲು ಸಾದ್ಯವಿದೆ. ಬೆಂಗಳೂರಿನ ಶಿವಾಜಿ ನಗರದ ಟಸ್ಕರ್ ಟೌನ್ನಲ್ಲಿರುವ ವಕೀಲರ ಒಕ್ಕೂಟ ಕೂಡ ಉಚಿತ ಕಾನೂನು ನೆರವು ನೀಡುತ್ತಿದೆ.
- ಗಣೇಶ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


