ಸೂಜಿ ಹುಷಾರು
ನವಜಾತ ಶಿಶುವಿನಿಂದ ಆರಂಭಿಸಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವಯೋವೃದ್ಧರವರೆಗೂ ಇಂದು ಚುಚ್ಚುಮದ್ದು...

ಇಂಜೆಕ್ಷನ್- ಹೆಸರು ಕೇಳಿದೊಡನೆ ದೇಹದ ಯಾವುದೋ ಮೂಲೆಯೊಂದರಲ್ಲಿ ಚುಚ್ಚಿದಂತಾಗುತ್ತದೆ. ನವಜಾತ ಶಿಶುವಿನಿಂದ ಆರಂಭಿಸಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವಯೋವೃದ್ಧರವರೆಗೂ ಇಂದು ಚುಚ್ಚುಮದ್ದು ಅನಿವಾರ್ಯ. ಹೀಗಾಗಿ ಅದರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದೂ ಇಂದಿನ ಅಗತ್ಯ.
ಅಸುರಕ್ಷಿತ ಚುಚ್ಚುಮದ್ದು ಬಳಕೆ ಎಚ್ಐವಿ, ಹೆಪಟೈಟಿಸ್ (ಪಿತ್ತ ಜನಕಾಂಗದ ಊತ) ಸೇರಿದಂತೆ ವಿವಿಧ ಸೋಂಕುಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಮೂಲದ ವೈದ್ಯ ಡಾ. ಬೇಬಿ ಮನೋಜ್ ಚುಚ್ಚುಮದ್ದುಗಳ ಸುರಕ್ಷತೆಗೆ ಸಂಬಂಧಿಸಿ ಸಂಶೋಧನೆ ನಡೆಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಂಶೋಧನೆಯ ಫಲವಾಗಿ ಪ್ರಸ್ತುತ ಬಳಸುತ್ತಿರುವ ಚುಚ್ಚುಮದ್ದುಗಳಿಗೆ ಪರ್ಯಾಯವಾಗಿ ಸುರಕ್ಷಿತ ಇಂಜೆಕ್ಷನ್ಗಳ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇವರ ಈ ಸಂಶೋಧನೆ 2011ರ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮದ ಪ್ರಶಸ್ತಿಗೂ ಭಾಜನವಾಗಿದೆ. ಸಂಶೋಧನೆಯನ್ನು ಮೆಚ್ಚಿರುವ ಜಿನಿವಾ ಮೂಲದ ವರ್ಲ್ಡ್ ಪ್ರಾಪರ್ಟಿ ಆರ್ಗನೈಷನ್ ಉತ್ತಮ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಿದೆ.
ಏನಿದು ಸಂಶೋಧನೆ?
ಪ್ರಸ್ತುತ ನಾವು ಬಳಸುತ್ತಿರುವ ಚುಚ್ಚುಮದ್ದುಗಳು ಸುರಕ್ಷಿತವಾಗಿಲ್ಲ. ಇಂದು ಪ್ರತಿ ವ್ಯಕ್ತಿಗೂ ಬೇರೆ ಬೇರೆ ಸೂಜಿಗಳನ್ನು ಬಳಸಲಾಗುತ್ತಿದೆ. ಆದರೂ ಅವು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಬದಲಾಗಿ ಅದೇ ಚುಚ್ಚುಮದ್ದುಗಳು ಹೊಸ ರೂಪದಲ್ಲಿ ವಿನೂತನ ಪ್ಯಾಕಿಂಗ್ಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದು ವೈರಸ್ಗಳು ಪಸರಿಸಲು ಕಾರಣವಾಗುತ್ತವೆ. ಸಂಶೋಧನೆಯೊಂದರ ಪ್ರಕಾರ ಸೂಜಿಯ ನಳಿಕೆಯಲ್ಲಿ ಉಳಿದುಕೊಳ್ಳುವ ರಕ್ತದ ಕಣಗಳಲ್ಲಿ ಅಡಗಿರುವ ವೈರಸ್ಗಳು ಬೇಗನೆ ನಾಶ ಹೊಂದುವುದಿಲ್ಲ.
ಚುಚ್ಚುಮದ್ದಿನ ಈ ಅಸುರಕ್ಷಿತತೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಡಬ್ಯ್ಲೂಎಚ್ಓ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ 2000ನೇ ವರ್ಷದಲ್ಲಿ ಕೈಗೊಂಡ ಅಧ್ಯಯನದ ಪ್ರಕಾರ, ಅಸುರಕ್ಷಿತ ಚುಚ್ಚುಮದ್ದುಗಳಿಂದಾಗಿ ಸುಮಾರು 21 ಮಿಲಿಯಕ್ಕೂ ಹೆಚ್ಚು ಜನರು ಮಾರಣಾಂತಿಕ ವೈರಸ್ ಹೆಪಟೈಟಿಸ್ಗೆ ತುತ್ತಾಗಿದ್ದಾರೆ. 2 ಮಿಲಿಯಕ್ಕೂ ಅಧಿಕ ಮಂದಿ ಹೆಪಟೈಟಿಸ್ 'ಸಿ' ಸೋಂಕಿಗೆ ತುತ್ತಾಗಿದ್ದಾರೆ. ಸುಮಾರು 2,60,00ಕ್ಕೂ ಅಧಿಕ ಮಂದಿ ಏಡ್ಸ್ಗೆ ತುತ್ತಾಗಿದ್ದಾರೆ. ಆದ್ದರಿಂದಲೇ ಇದನ್ನು ಹತ್ತಿಕ್ಕುವ ಸಲುವಾಗಿ ಸುರಕ್ಷಿತ ಚುಚ್ಚುಮದ್ದುಗಳ ಬಳಕೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತಂದಿದೆ.
ಡಾ. ಬೇಬಿ ಮನೋಜ್ ವೃತ್ತಿಯಲ್ಲಿ ರೇಡಿಯೋಲಜಿಸ್ಟ್ ಆದರೂ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಅವರಿಗೆ ಎಲ್ಲಿಲ್ಲದ ಆಸಕ್ತಿ. ಪ್ರಸ್ತುತ ಅವರು ಸಂಶೋಧಿಸಿರುವ ಚುಚ್ಚುಮದ್ದುಗಳನ್ನು ಪುನಃ ಬಳಸಲು ಸಾಧ್ಯವಿಲ್ಲ. ಇವರ ಚುಚ್ಚುಮದ್ದುಗಳ ಸೂಜಿಯಂತಹ ನಳಿಕೆಗಳ ಬುಡದಲ್ಲಿ ಟೋಪಿಯಂತಹ ವಿನ್ಯಾಸ ರೂಪುಗೊಳಿಸಲಾಗಿದೆ. ಒಮ್ಮೆ ಬಳಕೆಯಾದ ಚುಚ್ಚುಮದ್ದುಗಳ ಸೂಜಿಯಂತಹ ನಳಿಕೆಗಳನ್ನು ಸುಲಭವಾಗಿ ಬುಡ ಸಹಿತ ಮುರಿದು ಹಾಕಬಹುದು. ಮುರಿದ ಚುಚ್ಚುಮದ್ದುಗಳ ನಳಿಕೆ ಮತ್ತೊಮ್ಮೆ ಬಳಕೆಗೆ ಬರುವುದಿಲ್ಲ.
ಈ ರೀತಿಯ ಚುಚ್ಚುಮದ್ದುಗಳ ತಯಾರಿಕೆಗಾಗಿಯೇ ಮನೋಜ್ ಅವರು ಕೋಜಿಕೋಡ್ ಜಿಲ್ಲೆಯ ನಾಡಪುರಂನಲ್ಲಿ 'ಮೈಕ್ರೋ ಎಕ್ವಿಪ್ಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಿಸ್ಟಮ್' ಎನ್ನುವ ಉತ್ಪಾದನಾ ಕೇಂದ್ರವನ್ನು ತೆರೆದಿದ್ದಾರೆ. ಸುಮಾರು 1.5 ಲಕ್ಷಕ್ಕೂ ಅಧಿಕ ಚುಚ್ಚುಮದ್ದುಗಳನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಪ್ರಸ್ತುತ ಸೆಮಿ ಆಟೋಮೆಟಿಕ್ ಪದ್ಧತಿ ಅನುಸರಿಸಿ ಇಂಜೆಕ್ಷನ್ ತಯಾರಿಸುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಸಂಪೂರ್ಣ ಅಟೋಮೆಟಿಕ್ ತಂತ್ರಜ್ಞಾನ ತೊಡಗಿಸಿಕೊಂಡರೆ ತಯಾರಿಕೆ ವೆಚ್ಚ ಕಡಿಮೆಯಾಗಲಿದೆ ಎಂಬುದು ಡಾ.ಮನೋಜ್ ಅಭಿಪ್ರಾಯ.
ನೂತನ ಮಾದರಿಯ ಚುಚ್ಚುಮದ್ದುಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಂದ ಪ್ರಾರಂಭಿಸಿ ಬಡ ರೋಗಿಗಳನ್ನೂ ತಲುಪುತ್ತಿರುವುದು ಸಂತಸದ ಸಂಗತಿ. ಬಡವರಿಗೆ ಉತ್ಪಾದನಾ ವೆಚ್ಚಕ್ಕೆ ಚುಚ್ಚುಮದ್ದುಗಳು ದೊರೆತರೆ, ದೊಡ್ಡ ಆಸ್ಪತ್ರೆಗಳಿಗೆ ಲಾಭದಾಯಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವುದು ಮನೋಜ್ ಇಂಗಿತ. ಮುಂಬರುವ ದಿನಗಳಲ್ಲಿ ನೋವು ರಹಿತ ಚುಚ್ಚುಮದ್ದುಗಳ ಸಂಶೋಧನೆ ಅವರ ಗುರಿ. ಸೂಜಿಯ ನಳಿಕೆಗೆ ಪೇನ್ಕಿಲ್ಲರ್ ಕೋಟಿಂಗ್ ನೀಡುವ ಮೂಲಕ ನೋವಿಗೆ ಅಂತ್ಯ ಹಾಡುವ ಈ ಸಂಶೋಧನೆ ಪ್ರಗತಿಯ ಹಾದಿಯಲ್ಲಿದೆ. ಇದರೊಂದಿಗೆ ಬಯೋಪ್ಸಿ(ಜೀವಕಣ, ದ್ರವಗಳನ್ನು ದೇಹದಿಂದ ಬೇರ್ಪಡಿಸಿ ರೋಗ ಪತ್ತೆ ಮಾಡುವ ವಿಧಾನ) ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಲು ರೋಬೋಟ್ ಮತ್ತು ಮೈಕ್ರೋವೇವ್ ಕುಕ್ಕಿಂಗ್ ಟ್ಯೂಮರ್ನ್ನು ಸಂಶೋಧಿಸುವ ಹಂಬಲ.
ಚುಚ್ಚುಮದ್ದಿನಿಂದ ಕಾಯಿಲೆ ಹೇಗೆ?
ಚುಚ್ಚುಮದ್ದು ಬಳಕೆ ಮಾಡಿದ ನಂತರ ಸೂಜಿಯ ನಳಿಕೆಯನ್ನು ಬೇರ್ಪಡಿಸಬೇಕು ಅಥವಾ ಕುಲುಮೆಯಲ್ಲಿ ಹಾಕಿ ನಾಶಪಡಿಸಬೇಕು. ಆದರೆ ಸುರಕ್ಷಿತವಲ್ಲದ ಚುಚ್ಚುಮದ್ದುಗಳ ವಿಲೇವಾರಿಯಿಂದಾಗಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ಚಿಂದಿ ಆಯುವ ಮಕ್ಕಳು ಮತ್ತು ವಯಸ್ಕರು ಇಂತಹ ಸೋಂಕಿಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಈ ರೀತಿ ಕಸದ ತಿಪ್ಪೆಯಲ್ಲಿ ದೊರೆಯುವ ಚುಚ್ಚುಮದ್ದುಗಳು ಮೇಲ್ನೋಟಕ್ಕೆ ಅಪಾಯಕಾರಿ ಎನಿಸದೆ ಇರಬಹುದು. ಆದರೆ, ಸೂಜಿಯಲ್ಲಿ ಉಳಿಯುವ ರಕ್ತದ ಕಣದಲ್ಲಿನ ವೈರಸ್ಗಳು ಹಲವಾರು ದಿನ ಬದುಕುಳಿದಿರುತ್ತವೆ. ಇದರಿಂದಾಗಿ ಎಚ್ಐವಿ, ಹೆಪಟೈಟಿಸ್ನಂತಹ ಮಾರಕ ವೈರಸ್ಗಳು ಮಾನವನ ದೇಹಕ್ಕೆ ಸೇರುತ್ತವೆ. ಎಚ್ಬಿವಿ ವೈರಸ್ ಶೇ. 100ರಷ್ಟು ಸೋಂಕನ್ನು ಹರಡುವ ಸಾಧ್ಯತೆ ಇದ್ದು, ಸುಮಾರು ಒಂದು ವಾರ ಮಾನವನ ದೇಹದಿಂದ ಹೊರಗೆ ಸಕ್ರಿಯವಾಗಿರುತ್ತವೆ. ಎಚ್ಐವಿ ವೈರಸ್ 4 ದಿನ ಸಕ್ರಿಯವಾಗಿರುತ್ತದೆ.
ಪ್ರಸ್ತುತ ಸಂಶೋಧನೆಗಳ ಪ್ರಕಾರ ಈ ರೀತಿಯಿಂದ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಭಾರತದಲ್ಲಿ ಸಾವಿಗೀಡಾಗಿದ್ದಾರೆ. ಶೇ. 62ರಷ್ಟು ಚುಚ್ಚುಮದ್ದುಗಳು ಅಸುರಕ್ಷಿತ ಎನ್ನುವ ಮಾಹಿತಿ ಹೊರಬಿದ್ದಿದೆ.
ಚುಚ್ಚುಮದ್ದು ಸಾಗಿ ಬಂದ ದಾರಿ
ಮೊದಲು ಇಂಜೆಕ್ಷನ್ ಹಾಲೋ ಟ್ಯೂಬ್ ರೀತಿಯಲ್ಲಿತ್ತು. ಪ್ರಾಚೀನ ಈಜಿಪ್ಟ್ನ ವೈದ್ಯಕೀಯ ಪದ್ಧತಿಯಲ್ಲಿ ಇವುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಭಾರತೀಯ ಆಯುರ್ವೇದ ಪದ್ಧತಿಯ ಚರಕ ಸಂಹಿತೆ ಕೃತಿಯಲ್ಲಿ ಇಂತಹ ಇಂಜೆಕ್ಷನ್ ಬಳಕೆಯ ಮಾಹಿತಿ ನೀಡಲಾಗಿದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗಾಗಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಎಂದು ಪ್ರಾಚೀನ ಆಯರ್ವೇದ ಕೃತಿಗಳಲ್ಲಿ ವಿವರಿಸಲಾಗಿದೆ. ಈಜಿಪ್ಟ್ನ ವೈದ್ಯಕೀಯ ತಜ್ಞ ಅಮ್ಮರ್-ಇಬ್ನ್-ಅಲಿ-ಅಲ್ ಮಾಸಿಲಿ ಪ್ರಕಾರ ಇವುಗಳನ್ನು ಕಣ್ಣಿನ ಪೊರೆ ತೆಗೆಯಲು ಬಳಸುತ್ತಿದ್ದರು.
- 1497- ಜರ್ಮನ್ ವೈದ್ಯಕೀಯ ತಜ್ಞ ಹಿರಾನಿಮಸ್ ಬರ್ನ್ಶ್ವಿಗ್ ಪಿಸ್ಟನ್ ಸಿರಿಂಜ್ಗಳನ್ನು ಬಳಸುತ್ತಿದ್ದ.
- 1650- ಭೌತಶಾಸ್ತ್ರಜ್ಞ ಬ್ಸೈಸ್ ಪಾಸ್ಕಲ್ ಚುಚ್ಚುಮದ್ದಿನ ಮಾದರಿ ಅಭಿವೃದ್ಧಿಪಡಿಸಿದ.
- 1657- ಆಕ್ಸ್ಫರ್ಡ್ನ ಕ್ರಿಸ್ಟೋಫರ್ ರೆನ್ ಪ್ರಾಣಿಗಳಿಗೆ ಬಳಸುವ ಇಂಜೆಕ್ಷನ್ ಕಂಡುಹಿಡಿದ.
- 1807- ಎಡಿನ್ಬರ್ಗ್ ಮೆಡಿಕಲ್ ಅಂಡ್ ಸರ್ಜಿಕಲ್ ನಿಘಂಟಿನಲ್ಲಿ ಚುಚ್ಚುಮದ್ದು(ಸಿರಿಂಜ್) ಎಂಬ ಪದಕ್ಕೆ ವ್ಯಾಖ್ಯಾನ ನೀಡಲಾಯಿತು.
- 1809- ಫ್ರಾನ್ಕೋಯಿಸ್ ಮೆಗಂಡಿ ನಾಯಿಗಳಿಗೆ ವಿಷಪೂರಿತ ಔಷಧ ನೀಡಲು ಮರದಿಂದ ತಯಾರಿಸಿದ ಚುಚ್ಚುಮದ್ದು ಬಳಸಿದ.
- 1843- ಚುಚ್ಚುಮದ್ದಿನ ವಿನೂತನ ಮಾದರಿಗೆ ಚಾರ್ಲ್ಸ್ ಸೇಜ್ ಪೇಟೆಂಟ್ ಪಡೆದುಕೊಂಡ.
- 1853- ಮಾದಕ ದ್ರವ್ಯ ಸೇವಿಸಲು ಅಲೆಗ್ಸಾಂಡರ್ ವುಡ್ ಉತ್ತಮ ಸೂಜಿಯೊಂದಿಗೆ ಅಳತೆ ಪಟ್ಟಿ ಹೊಂದಿರುವ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿದ.
- 1949- 50-ಆರ್ತರ್ ಸ್ಮಿತ್ ಬಳಸಿ ಬಿಸಾಡುವ ಸಿರಿಂಜ್ ಅಭಿವೃದ್ಧಿಗಾಗಿ ಅಮೆರಿಕದಿಂದ ಪೇಟೆಂಟ್ ಪಡೆದ.
- 1954- ಬೆಕ್ಟನ್ ಡಿಕಿನ್ಸನ್ ಅಮೆರಿಕದಲ್ಲಿ ಪೋಲಿಯೋ ಚುಚ್ಚುಮದ್ದು ನೀಡಲು ಬಳಸಿ ಬಿಸಾಡುವ ಗಾಜು ಮತ್ತು ಸೂಜಿ ನಳಿಕೆಯನ್ನೊಳಗೊಂಡ ಚುಚ್ಚುಮದ್ದು ಅಭಿವೃದ್ಧಿಪಡಿಸಿದ.
- 1974- ಫಿಲ್ ಬ್ರುಕ್ಸ್ ಬಳಸಿ ಬಿಸಾಡುವ ಸಿರಿಂಜ್ಗೆ ಪೇಟೆಂಟ್ ಪಡೆದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


