ಬೈಟುಕಾಫಿ

ಮನೆಯಲ್ಲಿ ಯಾವಾಗಲೂ ಮೆಂತ್ಯ ಇಟ್ಟುಕೊಂಡಿರಿ!

ಮನೆಯಲ್ಲಿ ಯಾವಾಗಲೂ ಮೆಂತ್ಯ ಇಟ್ಟುಕೊಂಡಿರಿ!
Published On :

ಮನೆಯಲ್ಲಿ ಹೆಂಗಸರನ್ನು ಕೇಳಿನೋಡಿ, ಮೆಂತ್ಯದ ಔಷಧೀಯ ಗುಣಗಳು ಅವರಿಗೆ ಚೆನ್ನಾಗಿ ಗೊತ್ತಿರುತ್ತವೆ. ಕೂದಲು ಸೊಂಪಾಗಿ ಬೆಳೆಯುವುದರಿಂದ ಹಿಡಿದು ಜೀರ್ಣಾಂಗಗಳ ತೊಂದರೆವರೆಗೂ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಅವರು ಮೆಂತ್ಯವನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಕೆಲವು ಜಾಣ ಹೆಂಗಸರು ದೋಸೆ ಹಿಟ್ಟಿಗಾಗಿ ಅಕ್ಕಿಯನ್ನು ರುಬ್ಬುವಾಗ, ಜತೆಯಲ್ಲೇ ನೆನೆಸಿದ ಮೆಂತ್ಯವನ್ನೂ ಸೇರಿಸುತ್ತಾರೆ. ಬಹಳಷ್ಟು ಅಡುಗೆಗಳಲ್ಲಿ ಮೆಂತ್ಯ ಬಳಸುತ್ತಾರೆ. ಅಂದರೆ ಮನೆಮಂದಿಯ ಆರೋಗ್ಯವನ್ನು ಈ ಮೂಲಕ ಕಾಪಾಡುವ ವೈದ್ಯರಾಗಿಯೂ ಅವರು ಕೆಲಸ ಮಾಡುತ್ತಿರುತ್ತಾರೆ. ಕೆಲವರಿಗೆ ಮೆಂತ್ಯದ ವಾಸನೆ ಆಗಿಬರುವುದಿಲ್ಲ. ಅದಕ್ಕಾಗಿ ಇಂಥ ಉಪಾಯಗಳ ಮೂಲಕ ಎಲ್ಲರೂ ಮೆಂತ್ಯ ತಿನ್ನುವಂತೆ ಮಾಡುತ್ತಾರೆ. ಹೆಣ್ಣುಮಕ್ಕಳ ಚಾಣಾಕ್ಷತೆಗೆ ಏನು ಕೊಟ್ಟರೂ ಸಾಲದು ಬಿಡಿ. ಹಳೆಕಾಲದವರು ಹೊಟ್ಟೆ ನೋವು ಅಥವಾ ಹೊಟ್ಟೆಯಲ್ಲಿ ಏನಾದರೂ ಸಂಕಟ ಆದಾಗ ಒಂದೆರಡು ಕಾಳು ಮೆಂತ್ಯ ತಿನ್ನಲು, ಇಲ್ಲವೇ ಮಜ್ಜಿಗೆಯಲ್ಲಿ ಮೆಂತ್ಯ ಹಾಕಿಕೊಂಡು ಕುಡಿಯಲು ಹೇಳುತ್ತಿದ್ದರು. ಬಹಳ ಬೇಗ ಸಮಸ್ಯೆ ಹತೋಟಿಗೆ ಬರುತ್ತಿತ್ತು. ಭೇದಿ ನಿಲ್ಲಿಸಲು ಮೆಂತ್ಯಕ್ಕಿಂತ ಉತ್ತಮ ಮತ್ತು ಸುಲಭ ಪರಿಹಾರ ಬೇರೊಂದಿಲ್ಲ ಎಂದರೆ ಖಂಡಿತವಾಗಲೂ ತಪ್ಪಾಗಲಿಕ್ಕಿಲ್ಲ.
ಅರ್ಧ ಚಮಚ ಮೆಂತ್ಯವನ್ನು ನೀರಿನಲ್ಲಿ ಹಾಕಿಕೊಂಡು ಕುಡಿದರೆ ಆಯಿತು. ದಿನಕ್ಕೆ ಮೂರು ಸಲ ಈ ರೀತಿ ಮಾಡಿದರೆ ಭೇದಿ ಬಂದ್! ಹೊಟ್ಟೆಯಲ್ಲಿ ಆಗುವ ಸಣ್ಣಪುಟ್ಟ ಸಂಕಟಗಳೂ ನಿಂತುಹೋಗುತ್ತವೆ, ಒಂದು ತೆರನಾದ ನಿರಾಳತೆಯ ಭಾವ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ತೊಂದರೆ ಆದಾಗಲೂ ಇದೇ ರೀತಿ ಮಾಡಬಹುದು. ಪಾಶ್ಚಾತ್ಯರು ಕೂಡ ಅತಿಸಾರಕ್ಕೆ ಮೆಂತ್ಯವನ್ನು ಮದ್ದಾಗಿ ಬಳಸುತ್ತಾರೆ. ಮಜ್ಜಿಗೆ ಇಲ್ಲದಿದ್ದರೆ ಯೋಗರ್ಟ್ ಜತೆಗೂ ಬಳಸಬಹುದು. ಮೆಂತ್ಯವನ್ನು ತಿನ್ನಲು ಸಾಧ್ಯವೇ ಇಲ್ಲ ಎಂದಿಟ್ಟುಕೊಳ್ಳಿ. ಅದಕ್ಕೂ ಪರಿಹಾರವಿದೆ. ಒಂದು ಚಮಚ ಮೆಂತ್ಯವನ್ನು ಅರ್ಧ ಅಥವಾ ಒಂದು ಚಮಚ ಜೀರಿಗೆ ಪುಡಿಯೊಂದಿಗೆ ಹುರಿದು, ಪುಡಿ ಮಾಡಿಕೊಳ್ಳಿ. ಅದನ್ನು ಅನ್ನದೊಂದಿಗೆ ಕಲೆಸಿಕೊಂಡು ಸೇವಿಸಬಹುದು. ಬೇಕಿದ್ದರೆ ಮಜ್ಜಿಗೆಯನ್ನೂ ಉಪಯೋಗಿಸಬಹುದು. ಭೇದಿಯಿಂದ ಶೀಘ್ರ ಉಪಶಮನ ಬೇಕು ಅಂತಿದ್ದರೆ ಮೆಂತ್ಯ ಸೇವನೆ ಅನಿವಾರ್ಯ.
ಮೆಂತ್ಯದಲ್ಲಿ ಗೋಂದಿನಂತಹ ಪದಾರ್ಥ ಇರುತ್ತದೆ. ಇದು ನೀರನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅತಿಸಾರವನ್ನು ನಿಲ್ಲಿಸುವುದು ಇದೇ ಗೋಂದಿನಂತಹ ಪದಾರ್ಥ ಎನ್ನುವುದು ವೈದ್ಯಲೋಕದ ಭಾವನೆ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.