ಕಾಮನ್ ಸೈನಸ್
ಕೆಲವೊಮ್ಮೆ ನಾವೇ ವೈದ್ಯರಾಗುವುದುಂಟು! ಮಂಡಿಯಲ್ಲೊಂದು ನೋವು ಕೂತಿದೆ. 'ನನ್ಗೆ ಆರ್ಸೈಟಿಸ್ ಇರ್ಬೇಕು ನೋಡಿ ಡಾಕ್ಟ್ರೇ'...

ಕೆಲವೊಮ್ಮೆ ನಾವೇ ವೈದ್ಯರಾಗುವುದುಂಟು! ಮಂಡಿಯಲ್ಲೊಂದು ನೋವು ಕೂತಿದೆ. 'ನನ್ಗೆ ಆರ್ಸೈಟಿಸ್ ಇರ್ಬೇಕು ನೋಡಿ ಡಾಕ್ಟ್ರೇ' ಎನ್ನುತ್ತೇವೆ. ಮತ್ತೊಮ್ಮೆ 'ಇದು ಅಪೆಂಡಿಸೈಟೀಸ್ ಇರ್ಬೇಕು, ಸ್ಕ್ಯಾನಿಂಗ್ಗೆ ಬರ್ಕೊಡಿ ಡಾಕ್ಟ್ರೇ, ಆಪರೇಷನ್ ಬೇಕಾದ್ರೂ ಮಾಡ್ಬಿಡಿ...' ಎಂದೂ ಹೇಳುತ್ತೇವೆ. ಮಗದೊಮ್ಮೆ 'ಈ ಸಿಡೀತಾ ಇರೋ ತಲೆನೋವು ಮೈಗ್ರೆನೇ ಇರಬೇಕು' ಎಂದು ಹೀಗೆಲ್ಲ ಹೇಳಿ, ತಾವೇ ನಿರ್ಧಾರ ಮಾಡಿಕೊಂಡು ಬರೋ ರೋಗಿಗಳೇ ಹೆಚ್ಚು.
ನೆಗಡಿ, ತಲೆನೋವು ಶುರುವಾದೊಡನೆ ಅದು 'ಸೈನಸೈಟಿಸ್' ಅಥವಾ 'ಸೈನಸ್' ಇರಬಹುದು ಎಂಬ ಭಯವೂ ನಮ್ಮಲ್ಲಿರುವುದಿಲ್ಲ. ಇನ್ಫೆಕ್ಷನ್ ಆದಾಗಲೂ ಈ ಸೈನಸೈಟಿಸ್ ಶುರುವಾಗುತ್ತದೆ. 'ಸೈನಸೈಟಿಸ್' ಎಂದರೆ, ಮೂಗೊಳಗಿನ ಒಳಪದರ ಮತ್ತು ಮೂಗಿನ ಮೇಲ್ಭಾಗ, ಹುಬ್ಬಿನ ಎರಡೂ ಭಾಗಗಳಲ್ಲಿ, ಕಣ್ಣಿನ ಕೆಳಭಾಗದಲ್ಲಿನ ಕೆನ್ನೆಯ ಭಾಗದಲ್ಲಿರುವ ಸೈನಸ್ ಕ್ಯಾವಿಟಿಗಳಲ್ಲಿ ಇನ್ಫೆಕ್ಷನ್ ಆಗುವಂಥದ್ದು.
ಈ ಇನ್ಫೆಕ್ಷನ್ ಬ್ಯಾಕ್ಟೀರಿಯಾ, ವೈರಸ್, ಕೆಮಿಕಲ್ಗಳಿಂದಲೂ ಆಗಬಹುದು. ಮಾನವನ ಮೆದುಳನ್ನು ತಲೆಬುರುಡೆ (ಸ್ಕಲ್) ರಕ್ಷಿಸುತ್ತದೆ. ಮೂಗಿನ ಸುತ್ತಮುತ್ತ ಇರುವ ಪ್ಯಾರಾನೇಸಲ್ ಸೈನಸ್ ಕ್ಯಾವಿಟಿಗಳು, ಈ ರಕ್ಷಣಾ ಕೆಲಸಕ್ಕೆ ಸಹಾಯಕವಾಗಿ, ಶಾಕ್ ಅಬ್ಸಾರ್ಬೆಂಟ್ ಆಗಿ ಕೆಲಸ ಮಾಡುತ್ತದೆ.
ಅಂದಹಾಗೆ, ನೆಗಡಿಯಾದವರಲ್ಲೆಲ್ಲ ಸೈನಸೈಟಿಸ್ ಕಾಣಿಸದು. ಮೂಗಿನಲ್ಲಿ ಸೋರುವಿಕೆ, ತಲೆನೋವು, ಸೀನುವುದು, ಜ್ವರ ಶುರುವಾಗುವುದು ಇವೆಲ್ಲ ಸೈನಸ್ನ ಆರಂಭಿಕ ಲಕ್ಷಣಗಳು. 'ಈ ವೇಳೆ ನಾವು ನಿರ್ಲಕ್ಷ್ಯ ತೋರಿದರೆ, ಸೈನಸ್ ಕ್ಯಾವಿಟಿಗಳಿಗೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಹರಡಿ ಸೈನಸೈಟಿಸ್ಗೆ ತಿರುಗುತ್ತದೆ' ಎನ್ನುವುದು ಬೆಂಗಳೂರಿನ ರಾಮಕೃಷ್ಣ ನರ್ಸಿಂಗ್ ಹೋಂನ ಕನ್ಸಲ್ಟೆಂಟ್ ಇಎನ್ಟಿ ಸರ್ಜನ್, ಡಾ.ಕೆ.ಎಂ. ನಳಿನೇಶ್.
ಸೈನಸ್ ಬಗ್ಗೆ ನಮ್ಮಲ್ಲೇ ಒಂದಿಷ್ಟು ಒಳಪ್ರಶ್ನೆಗಳಿವೆ. ಅವುಗಳಿಗೆ ಇಲ್ಲಿ ಉತ್ತರಿಸಿದ್ದಾರೆ ಡಾ. ನಳಿನೇಶ್ (ಮೊ. 9448087989).
ಸೈನಸೈಟಿಸ್ ಅನುವಂಶೀಯವಾದುದಾ?
ಖಂಡಿತಾ ಇಲ್ಲ. ಹವಾಮಾನದ ವ್ಯತ್ಯಯದಿಂದ ಆಗಬಹುದು. ಮೂಗಿನ ಅಲರ್ಜಿಯೂ ಕಾರಣವಾಗಬಹುದು.
ಗಂಡು/ ಹೆಣ್ಣು ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಗಂಡು, ಹೆಣ್ಣು ಬೇಧವಿಲ್ಲದೇ ಎಲ್ಲರೂ ಸೈನಸ್ನಿಂದ ಬಳಲುವುದುಂಟು. ಆದರೆ, ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು.
ಸಾಮಾನ್ಯ ನೆಗಡಿಗೂ ಸೈನಸೈಟಿಸ್ಗೂ ಇರುವ ವ್ಯತ್ಯಾಸವೇನು?
ಸಾಮಾನ್ಯ ನೆಗಡಿಗೆ ವೈರಲ್ ಇನ್ಫೆಕ್ಷನ್ ಕಾರಣ. 5-6 ದಿನ ಇರುತ್ತೆ. ತಲೆ ನೋವು, ತಲೆ ಭಾರ, ಜ್ವರ, ಮೈ ಕೈ ನೋವು, ಮೂಗು ಕಟ್ಟುವುದು, ಸೋರುವುದು. ಇದು ತಾನಾಗಿಯೇ ವಾಸಿಯಾಗುತ್ತದೆ. ಸೈನಸ್ ಇದ್ದರೆ ತಡೆಯಲಾಗದ ತಲೆನೋವು, ಸೀನುವುದು, ಮೂಗು ಸೋರುವುದು/ ಕಟ್ಟುವುದು, ಮುಂದಕ್ಕೆ ಬಗ್ಗಿದ್ದರೆ ತಲೆ ಸಿಡಿತ, ತಲೆಭಾರ ಹೆಚ್ಚುವುದು, ಒಮ್ಮೊಮ್ಮೆ ಮೂಗಿನಿಂದ ರಕ್ತ ಸೋರುವುದುಂಟು.
ಕೆಲವು ಸತ್ಯ ಮಿಥ್ಯಗಳು
ಮಿಥ್ಯ : ತಲೆ ನೋವಿದ್ದರೆ ಅದು ಸೈನಸೈಟಿಸ್.
ಸತ್ಯ : ಶೇ.60 ತಲೆನೋವು ಮೈಗ್ರೇನ್ ಇರಬಹುದು. ಸೈನಸೈಟಿಸ್ನಿಂದ ತಲೆನೋವೆನ್ನುವುದು ಸುಳ್ಳು.
ಮಿಥ್ಯ : ಸೈನಸೈಟಿಸ್ಗೆ ಚಿಕಿತ್ಸೆ ಇಲ್ಲ.
ಸತ್ಯ : ಖಂಡಿತ ಗುಣಪಡಿಸಬಹುದು. ಔಷಧಿ ಮತ್ತು ಸರ್ಜರಿಯಿಂದ.
ಮಿಥ್ಯ : ಸೈನಸೈಟಿಸ್ ಅನುವಂಶೀಯವಾದುದು.
ಸತ್ಯ : ಖಂಡಿತವಾಗಿಯೂ ಇಲ್ಲ.
ಟ್ರೀಟ್ಮೆಂಟ್ ಏನು?
ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲೇ ಖಚಿತಗೊಂಡರೆ, ಔಷಧಗಳಿಂದಲೇ ಗುಣಪಡಿಸಬಹುದು. ಆದರೆ, ಪದೇಪದೆ ಕಾಣಿಸಿಕೊಂಡರೆ ಶಸ್ತ್ರ ಚಿಕಿತ್ಸೆ ಅತ್ಯಗತ್ಯ. ತೀವ್ರ ಸೈನಸ್ ಇದ್ದಲ್ಲಿ, ಇಎನ್ಟಿ ಸ್ಪೆಷಲಿಸ್ಟ್ ಅನ್ನು ಕಾಣುವುದು ಅತ್ಯವಶ್ಯ. ಸ್ಟೀಮ್ ಇನ್ ಹೆಲೇಷನ್, ನೋವು ನಿವಾರಕ ಮಾತ್ರೆಗಳೂ ಪೂರಕ ನಿವಾರಕಗಳಾಗಿ ಕೆಲಸ ಮಾಡಬಹುದು.
ಸೈನಸ್ ಅನ್ನು ದೂರವಿಡಲು...
- ನೆಗಡಿಯಾದವರ ಸಂಪರ್ಕ ತಡೆಯಿರಿ.
- ನೆಗಡಿಯಾದರೆ ತಕ್ಷಣ ಚಿಕಿತ್ಸೆ ಪಡೆದು ಸೈನಸ್ಗೆ ತಿರುಗುವುದನ್ನು ತಡೆಯಿರಿ.
- ಒಳ್ಳೆಯ ಆಹಾರ ಕ್ರಮ, ಫಿಟ್ನೆಸ್ ಪ್ರೋಗ್ರಾಂ, ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ.
- ಆದಷ್ಟು ಶೀಘ್ರವಾಗಿ ಇಎನ್ಟಿ ತಜ್ಞರನ್ನು ಕಾಣಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


