ಬ್ಯೂಟಿ ಬಾತ್
ನಮ್ಮ ಕಾಲೇಜಲ್ಲಿ ಮೂರು ರೌಂಡ್ ಹೊಡೆದರೆ ನೀವು ಮೂರು ಬಗೆಯ ಹುಡುಗಿಯರನ್ನ ನೋಡಬಹುದು. ಅಂದರೆ ಎಲ್ಲಾ ಹುಡುಗಿಯರೂ ಕೇವಲ ಮೂರೇ ರೀತಿಯಾಗಿ ಇದ್ದಾರೆ ...

ನಮ್ಮ ಕಾಲೇಜಲ್ಲಿ ಮೂರು ರೌಂಡ್ ಹೊಡೆದರೆ ನೀವು ಮೂರು ಬಗೆಯ ಹುಡುಗಿಯರನ್ನ ನೋಡಬಹುದು. ಅಂದರೆ ಎಲ್ಲಾ ಹುಡುಗಿಯರೂ ಕೇವಲ ಮೂರೇ ರೀತಿಯಾಗಿ ಇದ್ದಾರೆ ಅಂತಲ್ಲ. ನಮ್ಮ ಹುಡುಗಿಯರ ಡ್ರೆಸ್ಸಿಂಗ್ ಸ್ಟೆ ೈಲ್ ನೋಡಿದರೆ ಹಾಗನ್ನಿಸಬಹುದು ಅಂತಷ್ಟೇ. ತುಂಬಾ ಮಾಡರ್ನ್ ಆಗಿ ಜೀನ್ಸ್, ಟೀಶರ್ಟ್, ಮಿಡಿ ಮ್ಯಾಕ್ಸಿ ತೊಟ್ಟು ತರಾವರಿ ಹೇರ್ಸ್ಟೆ ೈಲ್ ಮಾಡಿಸಿಕೊಂಡು, ಫ್ಯಾನ್ಸಿ ಒಡವೆಗಳನ್ನು ಹಾಕ್ಕೊಂಡು ಓಲಾಡುವ ಈ ಕನ್ನಿಕೆಯರು ಇನ್ನೂ ಕೆಲ ಸಂದರ್ಭಗಳಲ್ಲಿ ನಿರಾಭರಣೆಯರಾಗಿ ಓಡಾಡುತ್ತಾರೆ. ಮಗದೊಮ್ಮೆ ಈಗಷ್ಟೇ ಪಕ್ಕದ ಬ್ಯೂಟಿ ಪಾರ್ಲರ್ನಿಂದ ಹೊರಬಂದ ರೆಡಿಮೇಡ್ ಬ್ಯೂಟಿಗಳಂತೆ ಕಾಣುತ್ತಾರೆ. ಇವರು ಪಾಠ ಕೇಳಕ್ಕೆ ಬಂದವರೋ ಇಲ್ಲಾ ಸೌಂದರ್ಯ ಸ್ಪರ್ಧೆಗೆ ರೆಡಿಯಾದವರೋ ಅನ್ನಿಸುತ್ತದೆ!
ಇವರಿಗೆ ತದ್ವಿರುದ್ಧವಾಗಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಹಣೆಗೆ ಬಿಂದಿ ಇಟ್ಟು, ಕೈಬಳೆ ತೊಟ್ಟು, ಉದ್ದನೆಯ ಜಡೆ ಹೆಣೆದು ಹೂ ಮುಡಿದು ಅಮ್ಮಂದಿರದ್ದೋ ಅಜ್ಜಿಯರದ್ದೋ ಅನ್ನಿಸುವ ಒಡವೆ ಹಾಕ್ಕೊಂಡು ಮುಗ್ಧತೆಯೇ ಮೈವೆತ್ತಂತೆ ಬರುವವರು. ಕ್ಲಾಸಿನ ಹುಡುಗರೆಲ್ಲ ರೇಗಿಸಿದರೆ ತಲೆತಗ್ಗಿಸಿ ಕಂಡೂ ಕಾಣದಂತೆ ಕಣ್ಣೊರೆಸಿಕೊಂಡು ತಮ್ಮ ಪಾಡಿಗೆ ಇದ್ದು ಬಿಡುವವರು. ಜಗಳಕ್ಕೂ ಇಲ್ಲ, ಮಾತಿಗೂ ಇಲ್ಲ. ಆದರೆ ಈ ಬಗೆಯ ಹೆಣ್ಣುಮಕ್ಕಳ ಸ್ನಿಗ್ಧ ಸೌಂದರ್ಯ ಎಂಥವರನ್ನಾದರೂ ಮೋಡಿ ಮಾಡುತ್ತದೆ. ಹಾಗೆಂದು ಇವರು ಸೀರೆ ಉಟ್ಟೋ ಲಂಗದಾವಣಿ ಹಾಕ್ಕೊಂಡೋ ಕಾಲೇಜಿಗೆ ಬರುತ್ತಾರೆ ಅಂತಲ್ಲ, ಸಾಮಾನ್ಯವಾಗಿ ಚೂಡಿದಾರ ಇವರ ಫೇವರಿಟ್ ಡ್ರೆಸ್ಸು.
ಇನ್ನುಳಿದ ವರ್ಗವೆಂದರೆ ಇವೆರಡರ ಸಮ್ಮಿಶ್ರಣ. ಕೆಲವೊಮ್ಮೆ ಪಕ್ಕಾ ಹಳ್ಳಿ ಹುಡುಗಿಯರಂತೆ ಇನ್ನೂ ಕೆಲವೊಮ್ಮೆ ಅಚ್ಚ ಪಟ್ಟಣದವರಂತೆ, ಹೇಗೆಂದರೆ ಹಾಗೆ ಬದಲಾಗಬಲ್ಲವರು. ಇಂದು ಮಾಡರ್ನ್ ಆಗಿ ಬಂದರೆ ನಾಳೆ ಲಂಗ ರವಕೆ ತೊಟ್ಟು ಬರಬಲ್ಲವರು. ಎರಡು ಬಗೆಯ ವಾತಾವರಣದಲ್ಲೂ ಇವರು ಸೈ ಅನ್ನಿಸಿಕೊಳ್ಳಬಲ್ಲವರು.
ಕೆಲ ಸಲ ಉಡುಪುಗಳು ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತವೆ. ಇನ್ನೂ ಕೆಲವೊಮ್ಮೆ ಎಲ್ಲರೂ ನಮ್ಮ ಬಗ್ಗೆಯೇ ಆಡಿಕೊಳ್ಳುತ್ತಾರೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ಅದಕ್ಕೆ ಸರಿಯಾಗಿ ನಮ್ಮ ಮಾಡರ್ನ್ ದೃಷ್ಟಿಯ ಹೆಣ್ಣುಮಕ್ಕಳಿಗೆ ಸಾಂಪ್ರದಾಯಿಕ ಉಡುಗೆ ಇಷ್ಟವಾಗುವುದಿಲ್ಲ. ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕು ಹಳ್ಳಿ ಗಮಾರ ಅಂದುಕೊಳ್ಳುತ್ತಾರೆ. ಇವರ ಪ್ರಕಾರ ಹಬ್ಬ ಹರಿದಿನಗಳಲ್ಲಿ ಅಥವಾ ದೇವಸ್ಥಾನಕ್ಕೆ ಹೋಗುವಾಗ ಇಲ್ಲವೇ ಮದುವೆ ಸಮಾರಂಭಗಳಿಗೆ ಮಾತ್ರ ಟ್ರಡಿಶನಲ್ ಡ್ರೆಸ್ ಓಕೆ, ಮಿಕ್ಕ ಸಮಯದಲ್ಲಿ ಅದು ಅನಾಗರಿಕತೆ. ಅಷ್ಟೇ ಅಲ್ಲ, ಇವರ ಪ್ರಕಾರ ಹಳ್ಳಿ ಹುಡುಗಿಯರು ಅಥವಾ ಸಾಂಪ್ರದಾಯಿಕ ಉಡುಗೆ ತೊಟ್ಟವರು ನಮ್ಮಷ್ಟು ಫ್ರೀ ಫಾರ್ವರ್ಡ್ ಅಲ್ಲ, ಇವರಿಗೆ ಪ್ರಪಂಚ ಜ್ಞಾನ ಇಲ್ಲ ಎಂಬ ಭಾವನೆ. ಸಾಂಪ್ರದಾಯಿಕ ಹಿನ್ನೆಲೆಯಿಂದ ಬಂದ ಹುಡುಗಿಯರು ತರಗತಿಯಲ್ಲಿ ಬುದ್ಧಿಸಾಮರ್ಥ್ಯ ಅಭಿವ್ಯಕ್ತಿಸಲು ಹೋದರೆ ವ್ಯಂಗ್ಯ ನಗೆ ಬೀರಿ ಬಿಗುಮಾನ ತೋರಿಸುತ್ತಾರೆ. ಇದು ಇವರ ನೇಚರ್.
ಹೇಳಿಕೇಳಿ ಕಾಲೇಜಿನ ವಯಸ್ಸು ಅಂದರೆ ಕುಂತಲ್ಲಿ ನಿಂತಲ್ಲಿ ಕವನದ ಸಾಲುಗಳು ಅರಳಿ ನಿಲ್ಲುತ್ತವೆ. ಎಷ್ಟೋ ಸಲ ನಮ್ಮ ಕ್ಲಾಸಿನ ತರ್ಲೆ ಹುಡುಗರು ಅವರ ಕನಸಿನ ಹುಡುಗಿಯ ಬಗ್ಗೆ ಬರೆಯುವಾಗೆಲ್ಲ ಉಡುಪುಗಳ ಕುರಿತೂ ಕೆಲ ಸಾಲುಗಳು ಸೇರಿಕೊಳ್ಳುತ್ತವೆ. ಹಿಂದೆಲ್ಲಾ ಹುಡುಗಿಯರ ತುಂಬು ಉಡುಗೆ, ಹಿತಮಿತ ಒಡವೆ ಮೋಡದ ಮರೆಯ ಚಂದ್ರನಂತೆ ಕಾಣುವ ಹಿತಮಿತ ದೇಹ ಸೌಂದರ್ಯ ಕಲ್ಪನೆಯನ್ನು ಅರಳಿಸುವಂತಿದ್ದು ಮೃದುಲ ಸಾಹಿತ್ಯ ರಚನೆಯಾಗುತ್ತಿತ್ತು. ಇಂದಿನ ಬಿರುಸು ನಡೆ ನುಡಿ, ದೇಹಾಕಾರ ಎತ್ತಿ ತೋರಿಸುವ ಉಡುಗೆ ಬೇರೆ ರೀತಿಯ ಸಾಹಿತ್ಯ ಸೃಷ್ಟಿಗೆ ಎಡೆಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಅಲಂಕಾರ ತನ್ನಿಚ್ಛೆ; ನೋಟ ಪರರಿಚ್ಛೆ ಅಲ್ಲವೇ?
ಫ್ಯಾಷನ್ ಪ್ರಭಾವದಿಂದ ದೇಸೀ ಉಡುಗೆ ತೊಡುಗೆಯೇ ಮಾಸಿಹೋಗುತ್ತಿದೆ. ಕೇವಲ ಹಬ್ಬ ಹರಿದಿನಕ್ಕೆ ಸೀಮಿತವಾಗಿರುವ ಸಾಂಪ್ರದಾಯಿಕ ಅಲಂಕಾರ ಶೈಲಿ ಮುಂದಿನ ದಿನಗಳಲ್ಲಿ ಕಣ್ಮರೆಯಾದರೂ ಅಚ್ಚರಿಯೇನಿಲ್ಲ. ಈಗಾಗಲೇ ಹಬ್ಬದ ದಿನದಂದು ಲೆಗಿನ್ಸ್, ಟೀಶರ್ಟು ಹಾಕಿ ಬಿಚ್ಚಿದ ತಲೆಯಲ್ಲಿ ದೇವರಿಗೆ ಆರತಿ ಬೆಳಗುವ ಪ್ರವೃತ್ತಿ ನಮ್ಮಲ್ಲಿ ಬೆಳೆಯುತ್ತಿದೆ. ಇಲ್ಲವೇ ಸೀರೆ ಉಡುವುದಾದರೂ ಅದಕ್ಕೆ ಸೆಕ್ಸೀ ಲುಕ್ ಕೊಟ್ಟು ಉಡುವುದು ಈಗಿನ ಟ್ರೆಂಡ್. ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಹೆಣ್ಣುಮಕ್ಕಳನ್ನು ಆಕರ್ಷಕ ವಸ್ತುಗಳಂತೆ ಬಿಂಬಿಸಲಾಗುತ್ತದೆ ಎಂದು ಬೊಬ್ಬಿರಿಯುವ ನಾವುಗಳು ಅನುಸರಿಸುವುದು ಮತ್ತದೇ ಸೆಕ್ಸೀ ಅಪ್ಪಿಯರೆನ್ಸ್ ಅನ್ನು. ಇದು ನಮ್ಮ ನಡುವಿನ ವೈಪರೀತ್ಯ.
ಯಾರೂ ಯಾರ ಉಡುಪನ್ನೂ ಉಪದೇಶದ ಮೂಲಕ ಬದಲಾಯಿಸಲು ಸಾಧ್ಯವಿಲ್ಲ. ಅವರವರಿಗೆ ಸೂಕ್ತವಾದ ಬಟ್ಟೆಬರೆಯನ್ನು ಅವರವರು ತೊಡುತ್ತಾರೆ. ನಮ್ಮ ಉಡುಪು ನಮ್ಮ ಮನಸ್ಸನ್ನು ಬಿಂಬಿಸುತ್ತದೆಯಂತೆ. ಅಂದರೆ ನಮ್ಮ ಉಡುಪು ಭಾವಗಳನ್ನು ಕೆರಳಿಸುವ ಬದಲು ಅರಳಿಸುವಂತಿರಬೇಕು. ಸರಳವಾಗಿರುವುದರಿಂದ ನಮಗೂ ಒಳ್ಳೆಯದು, ನಮ್ಮ ಸುತ್ತಲು ಇರುವವರಿಗೂ ಒಳ್ಳೆಯದು. ಸಂಪ್ರದಾಯವೆಂದು ಕೈ ತುಂಬಾ ಬಳೆ ಹಾಕಿಕೊಂಡು ಬಂದರೆ ತರಗತಿಯೆಲ್ಲ ಬಳೆಗಳದ್ದೇ ಕಲರವವಾಗಿ ಬಿಡಬಹುದು!
ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶವಿದೆ. ನಮ್ಮ ಹುಡುಗರಿಗೆ ಜತೆಯಲ್ಲಿ ತಿರುಗಾಡಲು ಸ್ನೇಹ ಬೆಳಸಲು ಮಾಡರ್ನ್ ಹುಡುಗಿ ಬೇಕು. ಮದುವೆಗೆ ಮಾತ್ರ ಸಂಪ್ರದಾಯ, ಸಂಸ್ಕೃತಿ ಅನುಸರಿಸುವ ಹುಡುಗಿ ಬೇಕು! ಮಾಡರ್ನ್ ಹುಡುಗಿಯನ್ನು ಮದುವೆ ಆದರೂ ನಂತರ ಬಲವಂತವಾಗಿ ಸಂಪ್ರದಾಯ ಉಡುಗೆ ತೊಡುಗೆಗೆ ಹೊಂದಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಇಲ್ಲಿ ಪುರುಷ ಪ್ರಧಾನ ಬಯಕೆಗಳೇನೇ ಇರಲಿ, ಅವರ ಉಡುಗೆ ಹೇಗೇ ಇರಲಿ, ಆಂತರಿಕವಾಗಿ ಇವರು ಬೆಲೆ ಕೊಡುವುದು ಯಾವುದಕ್ಕೆ ಎಂಬುದು ಈ ಪುಟ್ಟ ಉದಾಹರಣೆಯಲ್ಲೇ ಗೊತ್ತಾಗುತ್ತದೆ. ಒಟ್ಟಿನಲ್ಲಿ ಅಂತರ್ಗತ ಮನಸಿನ ಬಹುಮತ ಫ್ಯಾಷನ್ನಿಗೊ ಸಂಸ್ಕೃತಿಗೊ ಎಂಬುದು ಇದರಿಂದ ಅರಿವಾಗುತ್ತದೆ. ಹೆಣ್ಣು ಹೇಗೆ ಅಲಂಕಾರ ಮಾಡಿದರೂ ಆಂತರಿಕವಾಗಿ ಒಳ್ಳೆಯ ಭಾವನೆ, ಗುಣ, ಸನ್ನಡತೆ ಆಕೆಯ ನಿಜವಾದ ಸೌಂದರ್ಯ ಎಂಬುದು ಸಾರ್ವಕಾಲಿಕ ಸತ್ಯ.
- ಶಿಲ್ಪಶ್ರೀ ಯು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


