ಕರೆಂಟ್ ಸಾಕ್ಷಿ
ಅಪರಾಧ ನಡೆದ ನಂತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಅನುಸರಿಸುವ ಮಾರ್ಗಗಳು ವಿಭಿನ್ನ. ಪಳಗಿದ ದಕ್ಷ ಪೊಲೀಸ್ ಅಧಿಕಾರಿಗಳು...

ಅಪರಾಧ ನಡೆದ ನಂತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಅನುಸರಿಸುವ ಮಾರ್ಗಗಳು ವಿಭಿನ್ನ. ಪಳಗಿದ ದಕ್ಷ ಪೊಲೀಸ್ ಅಧಿಕಾರಿಗಳು ಅಪರಾಧ ನಡೆದ ಸ್ಥಳದಲ್ಲಿ ಆರೋಪಿ ತನಗೆ ಅರಿವಿಲ್ಲದೆ ಬಿಟ್ಟಿರುವ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಯಾವುದೇ ಕೊಲೆ ನಡೆದಾಗ, ಅದರ ತನಿಖಾಧಿಕಾರಿಯಾಗಿ ಆ ವ್ಯಾಪ್ತಿಯ ಸರ್ಕಲ್ ಇನ್ಸ್ಪೆಕ್ಟರ್ ಕಾರ್ಯನಿರ್ವಹಿಸುತ್ತಾರೆ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ತಯಾರಿಸಬೇಕು. ಆದರೆ ಕೆಲವು ಅಧಿಕಾರಿಗಳು ಇದನ್ನು ಮಾಡುವುದಿಲ್ಲ. ತನ್ನ ಕೆಳಗಿನ ಸಬ್ ಇನ್ಸ್ಪೆಕ್ಟರ್ರನ್ನು ಸ್ಥಳಕ್ಕೆ ಕಳುಹಿಸಿ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಎಫ್ಐಆರ್ ತಯಾರಿಸುತ್ತಾರೆ. ಇದರಲ್ಲಿ ತಪ್ಪೇನಿದೆ ಅಂತೀರಾ? ಇಲ್ಲೇ ಸ್ವಾಮಿ ಇರೋದು.
ಯಾವುದೇ ಪ್ರಕರಣ ಭೇದಿಸಿದಾಗ ಅದರ ಅಷ್ಟೂ ಗೌರವ ಲಭಿಸುವುದು ತನಿಖಾಧಿಕಾರಿಗೆ, ಅಂದರೆ ಸರ್ಕಲ್ ಇನ್ಸ್ಪೆಕ್ಟರ್ಗೆ. ಆದರೆ ಇಡೀ ಪ್ರಕರಣ ಭೇದಿಸಲು ಶ್ರಮ ವಹಿಸುವುದು ಸಬ್ ಇನ್ಸ್ಪೆಕ್ಟರ್ ಮತ್ತು ಅವರ ಕೆಳಗಿನ ಪೇದೆಗಳು. ಇವರೆಲ್ಲ ಕಷ್ಟಪಟ್ಟು ಆರೋಪಿಗಳನ್ನು ಸೆರೆ ಹಿಡಿದರೆ ಹಿರಿಯ ಅಧಿಕಾರಿಗಳು ನಿಂತು ಫೋಟೋ ತೆಗೆಸಿಕೊಂಡು ಗೌರವ ಲಪಟಾಯಿಸುತ್ತಾರೆ. ಕೆಲವು ಅಧಿಕಾರಿಗಳಾದರೆ ಕಿರಿಯ ಅಧಿಕಾರಿಗಳ ಶ್ರಮವನ್ನು ಮಾಧ್ಯಮ ಸೇರಿದಂತೆ ಹಿರಿಯ ಅಧಿಕಾರಿಗಳ ಎದುರು ಹೊರಗೆ ಹೇಳುತ್ತಾರೆ. ಆದರೆ ಕೆಲವು ಸ್ವಾರ್ಥಿ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಶ್ರಮವನ್ನೂ ಸೇರಿಸಿ ಎಲ್ಲಾ ಗೌರವ ತಾವೇ ಹೊಡೆದುಕೊಳ್ಳುತ್ತಾರೆ. ಇದನ್ನು ಅರಿತಿರುವ ಎಸ್ಐ ಮತ್ತು ಅವರ ಕೆಳಗಿನ ಅಧಿಕಾರಿಗಳು ತಾವು ಶ್ರಮ ವಹಿಸಿ ಹಿರಿಯರಿಗೆ ಯಾಕೆ ಗೌರವ ತಂದುಕೊಡಬೇಕು ಎಂಬ ಮನೋಭಾವಕ್ಕೆ ತುತ್ತಾಗುತ್ತಾರೆ. ಅದೇ ಕಾರಣಕ್ಕೆ ಕೊಲೆ ನಡೆದ ಪ್ರದೇಶದಲ್ಲಿ ಕಾಟಾಚಾರಕ್ಕೆ ಸ್ಥಳ ಪರಿಶೀಲನೆ ಮಾಡಿ ಬೇಜವಾಬ್ದಾರಿ ವರದಿ ನೀಡುತ್ತಾರೆ. ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪರಿಣಾಮ ಅಪರಾಧ ಎಸಗಿದವರು ಸಮಾಜದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರೆ ಬಾಧಿತರು ನ್ಯಾಯ ದೇವತೆಗೆ ಕಣ್ಣಿಲ್ಲ ಎಂದು ಹತಾಶರಾಗುತ್ತಾರೆ.
ಇಷ್ಟೆಲ್ಲಾ ಮರ್ಮ ಹೇಳಲು ಕಾರಣ ಇಂದಿನ ಕತೆ. ಎಸ್ಐ ತಯಾರಿಸಿದ್ದ ವರದಿ ಸರಿಯಿಲ್ಲವೆಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಸೂಕ್ಷ್ಮವಾದ ಪುರಾವೆಗಳಿಂದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಿ ಇಡೀ ಇಲಾಖೆಯೇ ಹುಬ್ಬೇರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಅದು ಕಳ್ಳಂಬೆಳ್ಳ ಪೊಲೀಸ್ ಠಾಣೆ. ಬೆಳಗ್ಗೆ ಠಾಣೆಗೆ ಬಂದ ಇನ್ಸ್ಪೆಕ್ಟರ್ ಫಾಲಾಕ್ಷಯ್ಯನವರಿಗೆ ಕುತೂಹಲ ಹೆಚ್ಚಾಯಿತು. ಕಾರಣ ಠಾಣೆಯ ಮುಂದೆ ನೂರಾರು ಜನ ಜಮಾಯಿಸಿದ್ದಾರೆ. ಯಾವುದೇ ಪೊಲೀಸ್ ಠಾಣೆಯ ಮುಂದೆ ಜನರಿದ್ದಾರೆ ಎಂದರೆ ಎಲ್ಲಿಯೋ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿದೆ ಎಂದೇ ಅರ್ಥ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದು ಬರುವುದು ಆ ಠಾಣೆಯ ಇನ್ಸ್ಪೆಕ್ಟರ್ ತಲೆಗೆ. ಅದೇ ಕಾರಣಕ್ಕೆ ಫಾಲಾಕ್ಷಯ್ಯ ತಲೆ ಬಿಸಿ ಮಾಡಿಕೊಂಡೇ ಠಾಣೆಯ ಒಳಗೆ ಹೆಜ್ಜೆ ಹಾಕಿದರು.
ಒಳಗೆ ಹೋಗುತ್ತಿದ್ದಂತೆ ಸಬ್ಇನ್ಸ್ಪೆಕ್ಟರ್ ಬಂದು ಸೆಲ್ಯೂಟ್ ಹೊಡೆದು, ಸರ್ ಇಂಥ ಹಳ್ಳಿಯಲ್ಲಿ ರಾತ್ರಿ ಒಂದು ಕೊಲೆ ನಡೆದಿದೆ. ಅದೇ ಕಾರಣಕ್ಕೆ ಕಂಪ್ಲೆಂಟ್ ನೀಡಲು ಜನ ಬಂದಿದ್ದಾರೆ ಎಂದು ಹೇಳಿದರು. ದೂರು ನೀಡಲು ಬಂದಿದ್ದವರನ್ನು ಕರೆಸಿ ಏನು ನಡೆಯಿತು ಎಂದು ವಿಚಾರಿಸುವ ಮುನ್ನ ಸಬ್ಇನ್ಸ್ಪೆಕ್ಟರ್ರನ್ನು ಕರೆದು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ, ಸ್ಥಳಪರಿಶೀಲನೆ ಮಾಡಿ ವಿವರ ಕಲೆಹಾಕುವಂತೆ ಸೂಚಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಎಸ್ಐ ನಾಲ್ಕು ಜನ ಪೇದೆಗಳೊಂದಿಗೆ ಸ್ಥಳಕ್ಕೆ ಹೊರಟರು.
ಇತ್ತ ಠಾಣೆಗೆ ಬಂದಿದ್ದ ಜನರಲ್ಲಿ ಹಲವರು ಎಸ್ಐ ಜೊತೆ ತೆರಳಿದರೆ ಇನ್ನು ಹಲವು ಪ್ರಮುಖರು ಇನ್ಸ್ಪೆಕ್ಟರ್ ಮುಂದೆ ಕುಳಿತು ನಡೆದ ಘಟನೆಯನ್ನು ವಿವರಿಸಿದರು. ಎಲ್ಲವನ್ನೂ ಸಾವಧಾನವಾಗಿ ಕೇಳಿಸಿಕೊಂಡ ಇನ್ಸ್ಪೆಕ್ಟರ್, ಅವರು ಹೇಳುತ್ತಿರುವುದು ಪರಿಪೂರ್ಣವಲ್ಲ ಎಂಬ ನಿರ್ಧಾರಕ್ಕೆ ಬಂದರು. ಎಸ್ಐ ವರದಿಗೆ ಕಾದರೆ ಇಂತಹದ್ದೇ ಅಸಮರ್ಪಕ ವರದಿ ದೊರೆಯುತ್ತದೆ ಎಂಬ ತೀರ್ಮಾನಕ್ಕೆ ಬಂದು ಕೂಡಲೇ ಸ್ಥಳಕ್ಕೆ ಹೊರಟರು.
ಅದೊಂದು ತೋಟ. ಅಲ್ಲಿಯೇ ಒಂದು ಹುಲ್ಲಿನ ಮನೆ ನಿರ್ಮಿಸಿಕೊಂಡು ವಾಸವಿದೆ ಕೃಷ್ಣೇಗೌಡರ ಕುಟುಂಬ. ಕೃಷ್ಣೇಗೌಡ ಮತ್ತು ಅದೇ ಗ್ರಾಮದ ನಾರಾಯಣಪ್ಪ ಎಂಬವರ ಮಧ್ಯೆ ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಮನಸ್ತಾಪಗಳಿತ್ತು. ಅದೇ ಕಾರಣಕ್ಕೆ ಕೃಷ್ಣೇಗೌಡ ಒಂದು ಗುಂಪನ್ನು ರಾಜಕೀಯವಾಗಿ ಬೆಂಬಲಿಸಿದರೆ ನಾರಾಯಣಪ್ಪ ಮತ್ತೊಂದು ಗುಂಪನ್ನು ಬೆಂಬಲಿಸುತ್ತಿದ್ದ. ಹಾಗಾಗಿ ಜಮೀನು ಮಾತ್ರವಲ್ಲದೆ ರಾಜಕೀಯವಾಗಿಯೂ ಈ ಎರಡೂ ಗುಂಪುಗಳ ಮಧ್ಯೆ ವೈಷಮ್ಯವಿತ್ತು.
ಘಟನೆ ನಡೆದ ದಿನ ರಾತ್ರಿ ಐದಾರು ಅಪರಿಚಿತರು ಕೃಷ್ಣೇಗೌಡನ ಹುಲ್ಲಿನ ಮನೆಯ ಮೇಲೆ ಧಾಳಿ ನಡೆಸಿ ಮಚ್ಚು, ದೊಣ್ಣೆಗಳಿಂದ ಮನೆಯಲ್ಲಿ ಮಲಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಪರಿಣಾಮ ಮಾರಣಾಂತಿಕವಾಗಿ ಗಾಯಗೊಂಡ ಕೃಷ್ಣೇಗೌಡ ಸ್ಥಳದಲ್ಲಿಯೇ ಮೃತಪಟ್ಟರೆ ಆತನ ಹೆಂಡತಿ ಗೌರಮ್ಮ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿದ್ದರು. ಕೃಷ್ಣೇಗೌಡನ ಇಬ್ಬರು ಗಂಡು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಆದರೆ ಹಲ್ಲೆ ನಡೆಸಿದವರು ಯಾರು ಎಂಬ ಪೊಲೀಸರ ಪ್ರಶ್ನೆಗೆ ಕೃಷ್ಣೇಗೌಡನ ಕುಟುಂಬ ನಿರುತ್ತರವಾಗಿತ್ತು. ಕಾರಣ ಅಲ್ಲಿ ಕತ್ತಲಿತ್ತು. ಕತ್ತಲಿನಲ್ಲಿ ದಾಳಿ ನಡೆಸಿದವರನ್ನು ನಾವು ಕಾಣಲಿಲ್ಲ ಎಂದು ಹೇಳಿದರು. ಪರಿಣಾಮವಾಗಿ ಒಂದು ಕೊಲೆ ಪ್ರಕರಣ ಮುಚ್ಚಿಹೋಗುತ್ತದೆ ಎಂಬುದು ಇನ್ಸ್ಪೆಕ್ಟರ್ಗೆ ಅರಿವಾಗಿತ್ತು.
ಅದೇ ಕಾರಣಕ್ಕೆ ಅವರು ಎಸ್ಐ ವರದಿಗೆ ಕಾಯದೆ ಸ್ವತಃ ಬಂದಿದ್ದರು. ಮೃತನ ಕುಟುಂಬದವರು ಎಲ್ಲರೂ ತೀವ್ರವಾಗಿ ಗಾಯಗೊಂಡು, ಕುಟುಂಬದ ಯಜಮಾನ ಸಾವನ್ನಪ್ಪಿದ್ದರೂ ದಾಳಿ ಮಾಡಿದ ಆರೋಪಿಗಳನ್ನು ತಾವು ಕತ್ತಲಿನಲ್ಲಿ ನೋಡಲಿಲ್ಲ ಎಂದೇ ವಾದಿಸುತ್ತಿದ್ದರು. ಇದರಿಂದ ಇನ್ಸ್ಪೆಕ್ಟರ್ ತನಿಖಾ ಬುದ್ಧಿ ಚುರುಕುಗೊಂಡಿತು.
ಇವರು ಉದ್ದೇಶಪೂರ್ವಕವಾಗಿಯೇ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂಬ ಅನುಮಾನ ಬಂದಿದ್ದೇ ತಡ, ಘಟನಾ ಸ್ಥಳದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಲು ಆರಂಭಿಸಿದರು. ಅದೇ ಸಮಯಕ್ಕೆ ತೋಟದಲ್ಲಿ ತೋಡಿದ್ದ ಬಾವಿಗೆ ಮತ್ತು ಅಲ್ಲಿ ನಿರ್ಮಿಸಿಕೊಂಡಿದ್ದ ಹುಲ್ಲಿನ ಮನೆಗೆ ಮೇಲೆ ಹಾದುಹೋಗಿರುವ ವಿದ್ಯುತ್ ಲೈನ್ನಿಂದ ಸಂಪರ್ಕ ಪಡೆದಿರುವುದು ಕಂಡುಬಂತು. ಇಲ್ಲಿ ವಿದ್ಯುತ್ ಸಂಪರ್ಕವಿದ್ದರೂ ಅದು ಹೇಗೆ ಕತ್ತಲಿತ್ತು? ಜನ ಬಂದು ಗಲಾಟೆ ಮಾಡುವಾಗ ವಿದ್ಯುತ್ ದೀಪದ ಬೆಳಕು ಇರಲಿಲ್ಲವೆ ಎಂಬ ಇನ್ಸ್ಪೆಕ್ಟರ್ ಪ್ರಶ್ನೆಗೆ ಮೃತನ ಕುಟುಂಬದವರು ಆಗ ವಿದ್ಯುತ್ ಇರಲಿಲ್ಲ ಎಂದರು. ಕೂಡಲೇ ಅಲ್ಲಿಂದ ಇನ್ಸ್ಪೆಕ್ಟರ್ ಜಾಗ ಖಾಲಿ ಮಾಡಿ ನೇರವಾಗಿ ಕೆಇಬಿ ಕಚೇರಿಗೆ ಹೊರಟರು.
ಮೃತನ ಕುಟುಂಬದವರು ಮನೆಗೆ ಮತ್ತು ಬಾವಿಯ ಪಂಪ್ಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆಯೇ ಎಂದು ಕೆಇಬಿ ಅಧಿಕಾರಿಗಳ ಬಳಿ ಪರಿಶೀಲಿಸಿದರು. ಇಲ್ಲ ಎಂಬ ಉತ್ತರ ಅವರಿಂದ ಬಂತು. ಇದರ ಜತೆಗೆ ದೂರಿನಲ್ಲಿ ದಾಖಲಾಗಿದ್ದ ಸಮಯಕ್ಕೆ ಸರಿಯಾಗಿ ಕೊಲೆ ನಡೆದ ಪ್ರದೇಶದಲ್ಲಿ ವಿದ್ಯುತ್ ತೆಗೆಯಲಾಗಿತ್ತೇ ಎಂಬುದನ್ನು ಪರಿಶೀಲಿಸಿದಾಗ ಆ ಸಮಯದಲ್ಲಿ ವಿದ್ಯುತ್ ಇತ್ತೆಂದು ಕೆಇಬಿಯವರು ಖಚಿತಪಡಿಸಿದರು. ಈ ಎರಡೂ ಮಾಹಿತಿಯನ್ನು ಲಿಖಿತವಾಗಿ ಕೆಇಬಿ ಅಧಿಕಾರಿಗಳಿಂದ ಪಡೆದ ಇನ್ಸ್ಪೆಕ್ಟರ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು.
ಕೊಲೆಯಾದ ಕೃಷ್ಣೇಗೌಡ ಆತನ ಬಾವಿ ಮತ್ತು ಮನೆಗೆ ತನ್ನ ಭೂಮಿಯಲ್ಲಿ ಹಾದುಹೋಗಿದ್ದ ಮುಖ್ಯ ವಿದ್ಯುತ್ ಲೈನ್ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ದೊಡ್ಡ ಅಪರಾಧ ಎಂಬ ಭೀತಿ ಆಗ ರೈತರ ಮನದಲ್ಲಿ ಬಲವಾಗಿ ಬೇರೂರಿತ್ತು. ರಾತ್ರಿ ಲೈಟ್ ಇತ್ತು ಎಂದು ಹೇಳಿದರೆ ಸಂಪರ್ಕ ಎಲ್ಲಿಂದ ಪಡೆದಿದ್ದೀರಿ ಎಂಬ ಪ್ರಶ್ನೆ ಎದುರಾಗುತ್ತದೆ. ತಮ್ಮ ಅಕ್ರಮ ಸಂಪರ್ಕದ ಪ್ರಕರಣ ಬಯಲಾಗಿ ಅದೊಂದು ಸಮಸ್ಯೆ ಎದುರಾಗುತ್ತದೆ ಎಂಬ ಭೀತಿ ಅವರನ್ನು ಆವರಿಸಿತ್ತು. ಸತ್ತವರು ಹೇಗೂ ಸತ್ತರು, ಇರುವವರು ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿದ ಕೃಷ್ಣೇಗೌಡನ ಕುಟುಂಬ ಕೊಲೆಯ ಆರೋಪಿಗಳನ್ನು ಕತ್ತಲಾದ ಕಾರಣ ನೋಡಲಿಲ್ಲ ಎಂದು ಸುಳ್ಳು ಹೇಳಿತ್ತು.
ಅವರಿಗೆ ಕೆಇಬಿಯಿಂದ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ನಂತರ, ಅವರಿಂದ ಸತ್ಯ ಹೊರಬಂದಿತ್ತು. ಅಂದು ರಾತ್ರಿ ದಾಳಿ ನಡೆಸಿದ ಅಷ್ಟೂ ಆರೋಪಿಗಳ ಹೆಸರುಗಳನ್ನು ಅವರು ಬಾಯಿ ಬಿಟ್ಟರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೊಲೆಗೆ ಬಳಸಲಾಗಿದ್ದ ಆಯುಧಗಳನ್ನು ವಶಪಡಿಸಿಕೊಂಡರು. ಕೊಲೆ ಮಾಡಿರುವುದು ನ್ಯಾಯಾಲಯದಲ್ಲಿ ಸಾಬೀತಾಯಿತು. ಪರಿಣಾಮ ಐದು ಜನ ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆಯಾಯಿತು.
=
ಪೊಲೀಸ್ ಅಧಿಕಾರಿಯೊಬ್ಬರ ಸೂಕ್ಷ್ಮಬುದ್ಧಿ ಹೀಗೆ ಒಂದು ಕೊಲೆ ಪ್ರಕರಣ ಭೇದಿಸಿದ್ದು ಮಾತ್ರವಲ್ಲದೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಯಿತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಲು ಕೆಇಬಿಯವರು ನೀಡಿದ್ದ ಲಿಖಿತ ಮಾಹಿತಿ ಪ್ರಮುಖ ಕಾರಣವಾಗಿದ್ದರಿಂದ ಪೊಲೀಸ್ ಅಧಿಕಾರಿಯ ಸೂಕ್ಷ್ಮ ಪ್ರಜ್ಞೆ ಬಗ್ಗೆ ನ್ಯಾಯಾಧೀಶರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದರು ಎಂಬುದು ಗಮನಾರ್ಹ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


