ಚಾರು ಕೇಶಿ
ಇಲ್ಲೊಬ್ಬ ಗೃಹಿಣಿ ತನ್ನ ನಿತ್ಯ ಬದುಕಿನ ಜಂಜಡದ ನಡುವೆಯೂ ತಲೆಕೂದಲನ್ನೇ ಲಿಮ್ಕಾ ದಾಖಲೆಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಇಲ್ಲೊಬ್ಬ ಗೃಹಿಣಿ ತನ್ನ ನಿತ್ಯ ಬದುಕಿನ ಜಂಜಡದ ನಡುವೆಯೂ ತಲೆಕೂದಲನ್ನೇ ಲಿಮ್ಕಾ ದಾಖಲೆಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕೇವಲ ನಾಲ್ಕು ಸೆಕೆಂಡುಗಳಲ್ಲೇ ಕನ್ನಡಿಯ ಸಹಾಯ ಇಲ್ಲದೆ ತನ್ನ ಹೇರ್ಸ್ಟೈಲ್ ತಾನೇ ಮಾಡಿಕೊಳ್ಳುವ ಇವರ ಹೆಸರು ಗಾಯತ್ರಿ ಅಶೋಕ್. ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು.
40ಕ್ಕೂ ಹೆಚ್ಚು ವೈವಿಧ್ಯದ ಕೇಶಶೈಲಿಗಳನ್ನು ಮಾಡಬಲ್ಲ ಈಕೆಗೆ ಕೇಶಾಲಂಕಾರ ಎಂದರೆ ನೀರು ಕುಡಿದಷ್ಟೇ ಸಲೀಸು. 2009ರ ಫೆಬ್ರವರಿಯಲ್ಲಿ ಬೆಂಗಳೂರಿನ ಕನ್ನಡ ಭವನದಲ್ಲಿ ಈಕೆ ಸೆಕೆಂಡುಗಳಲ್ಲಿ ಹತ್ತಾರು ಹೇರ್ಸ್ಟೈಲ್ಗಳನ್ನು ಚಕಚಕನೆ ಮಾಡಿತೋರಿಸಿದಾಗ ನೋಡುಗರು ದಂಗಾಗಿ ಹೋಗಿದ್ದರು. ಲಿಮ್ಕಾ ದಾಖಲೆಗಾಗಿ ಮಾಡಿದ ಈ ಪ್ರದರ್ಶನದಲ್ಲಿ ಈಕೆ ಸಿಂಗಲ್ ಫ್ರೆಂಚ್ ಹೇರ್ಸ್ಟೈಲ್ಗೆ 4.12 ಸೆಕೆಂಡ್, ಬನ್ ಹೇರ್ಸ್ಟೈಲ್ಗೆ 8.10 ಸೆಕೆಂಡ್, ತಾನೇ ಕಂಡುಹಿಡಿದ ಗಾಯತ್ರಿ ಹೇರ್ಸ್ಟೈಲ್ಗೆ 8.10 ಸೆಕೆಂಡ್, ಮದುಮಗಳ ಮಗ್ಗಿಜಡೆ ಮತ್ತು ಮೇಕಪ್ಗೆ 56.20 ಸೆಕೆಂಡ್ ತೆಗೆದುಕೊಂಡಿದ್ದರು. ಈ ನಾಲ್ಕು ಶೈಲಿಗಳು ಈಗ 2010ರ ಲಿಮ್ಕಾ ರೆಕಾರ್ಡ್ ಬುಕ್ ಸೇರಿವೆ.
ಗಾಯತ್ರಿ ಅವರ ಪತಿ ಅಶೋಕ್, ತಂದೆ ಬೇಲಿಗೌಡರ ಸೋಮಶೇಖರ, ತಾಯಿ ಅನಸೂಯ ಇವರ ಸಾಧನೆಗೆ ಸ್ಫೂರ್ತಿ. ಬಿ.ಎ.ವರೆಗೆ ವಿದ್ಯಾಭ್ಯಾಸ. ಕಾಲೇಜ್ ದಿನಗಳಲ್ಲಿ ಖೋಖೋ, ಬಾಲ್ಬ್ಯಾಡ್ಮಿಂಟನ್, ಹೈಜಂಪ್, ಲಾಂಗ್ಜಂಪ್ನಲ್ಲಿ ಗುಲ್ಬರ್ಗಾ ವಿವಿ ಮಟ್ಟಕ್ಕೆ ಆಯ್ಕೆಯಾಗಿದ್ದರು. ಕ್ರೀಡೆಗಳಲ್ಲಿ ಗಾಯತ್ರಿಗೆ ಬಂದ ಮೆಡಲ್ ಸಾಕಷ್ಟು. ತಮ್ಮ ಮನೆಯಲ್ಲೇ ಬ್ಯೂಟಿ ಪಾರ್ಲರ್ ನಡೆಸಿ ಮನೆಯ ಖರ್ಚು ನಿಭಾಯಿಸಿಕೊಳ್ಳುತ್ತಾರೆ. ಮಹಿಳೆಯರಿಗೆ ತರಬೇತಿ ಕೊಡುತ್ತಾರೆ. ಕೇಶವಿನ್ಯಾಸದಲ್ಲಿ ಸಾಧನೆಯ ಹಂಬಲ. ಗಿನ್ನೆಸ್ ದಾಖಲೆ ಸಾಧಿಸುವ ಕನಸು.
ಬೆಂಗಳೂರಿನಂತಹ ಮಹಾನಗರಗಳಲ್ಲಿದ್ದರೆ ಲಕ್ಷಗಟ್ಟಲೆ ಹಣ ಸಂಪಾದಿಸಬಹುದಾಗಿದ್ದ ಈ ಮಹಿಳೆ ಹಳ್ಳಿಗಾಡಿನಲ್ಲಿದ್ದಾರೆ ಎಂಬ ಕಾರಣಕ್ಕೇ ಅವಕಾಶಗಳಿಂದ ವಂಚಿತರಾಗಿದ್ದಾರೆ ಎನ್ನಬಹುದು. ಸಂಪರ್ಕ: 8123435969.
- ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


