ದೇವರ ನಾಡಿನಲ್ಲಿ ಜಾತಿಯೇ ದೇವರು
ಸ್ವಾಮಿ ವಿವೇಕಾನಂದರು 'ದೇವರನಾಡು' ಎಂದೇ ಹೆಸರಾದ ಕೇರಳದ ಕೊಚ್ಚಿಗೆ ಹೋಗುವ ಮಾರ್ಗದಲ್ಲಿ ಕ್ರಂಗನೂರು ಎಂಬಲ್ಲಿ ವಿಶ್ರಾಂತಿಗಾಗಿ ಉಳಿದರು. ಅಲ್ಲಿದ್ದ ಪ್ರಸಿದ್ಧ ಕಾಳಿ ದೇವಾಲಯದ ದರ್ಶನ ಪಡೆಯಲಿಚ್ಛಿಸಿ, ದೇವಸ್ಥಾನದೊಳಗೆ ಪ್ರವೇಶಿಸಲು ಹೋದರು. ಆದರೆ ಕಾವಲುಗಾರರು ಅವರನ್ನು ಒಳಗೆ ಬಿಡಲಿಲ್ಲ. ಬೇಸರಿಸಿಕೊಳ್ಳದ ಸ್ವಾಮೀಜಿ ಹೊರಗಿನಿಂದಲೇ ಜಗನ್ಮಾತೆಗೆ ನಮಸ್ಕರಿಸಿ, ದೇವಸ್ಥಾನದ ಬಳಿಯಿದ್ದ ಆಲದ ಮರದಡಿ ಬಂದು ಕುಳಿತರು.
ಅಲ್ಲಿಗೆ ಬಂದ ರಾಜಕುಮಾರರಿಬ್ಬರು ಮರದಡಿ ಧ್ಯಾನಮುದ್ರೆಯಲ್ಲಿದ್ದ ಸನ್ಯಾಸಿಯ ಬಗ್ಗೆ ಭಕ್ತರಿಂದ ತಿಳಿದು ಮರದ ಬಳಿ ಬಂದರು. ಆಗ ಸ್ವಾಮೀಜಿ ಅವರಲ್ಲಿ ತಮ್ಮನ್ನು ದೇವಸ್ಥಾನದೊಳಕ್ಕೆ ಬಿಡದಿರಲು ಕಾರಣ ಕೇಳಿದರು. ಅದಕ್ಕವರು, 'ಸ್ವಾಮೀಜಿ, ಅಪರಿಚಿತ, ಅದರಲ್ಲೂ ಕೇರಳದ ಹೊರಗಿನಿಂದ ಬಂದವರ ಜಾತಿಯನ್ನು ತಿಳಿದುಕೊಳ್ಳುವುದು ಕಷ್ಟ. ಆದ್ದರಿಂದಲೇ ಈ ಕಟ್ಟುಪಾಡು' ಎಂದರು. ಈ ವಿಷಯವಾಗಿ ಅವರ ಮಧ್ಯೆ ವಾಗ್ವಾದ ನಡೆಯಿತು. ಸ್ವಾಮೀಜಿಯ ಅಸಾಧಾರಣ ವಿದ್ವತ್ತಿನ ಅರಿವಾದ ಮೇಲೆ ರಾಜಕುಮಾರರು ದೇವಸ್ಥಾನ ಪ್ರವೇಶಿಸಲು ವಿಶೇಷ ಅನುಮತಿ ನೀಡಿದರು. ಆದರೆ ಸ್ವಾಮೀಜಿ ಅದನ್ನು ನಿರಾಕರಿಸಿದರು.
ಸ್ವಾಮೀಜಿ ವ್ಯಕ್ತಿತ್ವದಿಂದ ವಿಶೇಷ ಆಕರ್ಷಣೆಗೆ ಒಳಗಾದ ರಾಜಕುಮಾರರು ನಂತರದ ಎರಡು ದಿನ ಸ್ವಾಮೀಜಿಯೊಂದಿಗೆ ಶಾಸ್ತ್ರಗಳ ಸಂಬಂಧವಾಗಿ ವಾದ ಮಾಡಿ ಕೊನೆಗೆ ಸೋಲೊಪ್ಪಿಕೊಂಡರು. ರಾಜ ಮನೆತನದ ಅನೇಕ ಸ್ತ್ರೀಯರು ಸ್ವಾಮೀಜಿಯನ್ನು ಭೇಟಿ ಮಾಡಿ ಅವರೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿದರು. ಸ್ತ್ರೀಯರು ಸಂಸ್ಕೃತದಲ್ಲಿ ಇಷ್ಟೊಂದು ನಿರರ್ಗಳವಾಗಿ ಮಾತನಾಡುವುದನ್ನು ಅವರು ಭಾರತದ ಬೇರೆಲ್ಲೂ ಕಂಡಿರಲಿಲ್ಲ!
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

