ಕನ್ನಡರಂಗ

ಅದೇನ್ ಗಂಟೆಗಟ್ಲೆ ಓದ್ತೀರಪ್ಪಾ... ಫಾರ್ ಎ ಚೇಂಜ್ ನಾಟ್ಕಾ ನೋಡ್ರಿ, ಊರಾಗ ನಾಟಕ ಮಾಡೋ ತಂಡ ಬಂದದ, ಹೋಗಿ ನಾಟ್ಕ ನೋಡ್ರಿ, ನಿಮ್ಮ ಪರೀಕ್ಷಾಗೂ ಅನುಕೂಲಾಗ್ತದಂತ... ಚಾಲೀಸ್ (40) ಮಾರ್ಕು (ಅಂಕ) ಪಡೀರಿ.. ನಡ್ರಿ..!
ಉತ್ತರ ಕರ್ನಾಟಕದಲ್ಲಿ ಈ ವಾಯ್ಸ್ ಜೋರಾಗ್ತಿದೆ. ಕನ್ನಡ ಭಾಷೆಯನ್ನು ಐಚ್ಛಿಕವಾಗಿಸಿಕೊಂಡ ಪಿಯು ವಿದ್ಯಾರ್ಥಿಗಳಿಗೆ ಪಾಲಕರು, ಶಿಕ್ಷಕರು ಹೀಗೆ ಹೇಳುವಂತಾಗಿದೆ. ಬಿಜಾಪುರ ಮೂಲದ ರಂಗ ಶ್ರೀರಂಗ ಹಾಗೂ ಅಯನ ಮಕ್ಕಳ ಅಕಾಡೆಮಿ ಜಂಟಿಯಾಗಿ ನಡೆಸುತ್ತಿರುವ ರಂಗಯಾತ್ರೆಯೇ ಇದಕ್ಕೆ ಕಾರಣ. ಇದರಿಂದ ವಿಜ್ಞಾನ, ವಾಣಿಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಸುಲಿದ ಬಾಳೆಹಣ್ಣು. ಮೂಲ (ಕೋರ್) ವಿಷಯಗಳನ್ನೇ ಅಭ್ಯಸಿಸುತ್ತ ಭಾಷೆಯನ್ನು ಅಲಕ್ಷಿಸುವ ಮಕ್ಕಳಿಗಾಗಿಯೇ ಭಾಷಾ ಪಠ್ಯವನ್ನೇ ರಂಗಕ್ಕೆ ಅಳವಡಿಸಿದೆ. ವಿದ್ಯಾರ್ಥಿಗಳೆಲ್ಲ ನಾಟಕಕ್ಕೆ ಬರುತ್ತಿದ್ದಾರೆ. ನಾಟಕ ನೋಡುವುದರ ಜೊತೆಗೇ ಕನ್ನಡ ಪಠ್ಯವನ್ನು ಅಧ್ಯಯನಿಸುತ್ತಾ ಹಗುರಾಗುತ್ತಿದ್ದಾರೆ.
ಹವ್ಯಾಸಿ ಕಲಾವಿದರ ಕಸರತ್ತು
ಸುಪ್ರಸಿದ್ಧ ನಾಟಕಕಾರ ಅಗರಖೇಡ ಶ್ರೀರಂಗಾಚಾರ್ಯರ ಸ್ಮರಣೆಯಲ್ಲಿ ಹುಟ್ಟಿಕೊಂಡ ರಂಗ ಶ್ರೀರಂಗ ತಂಡ ಹಾಗೂ ನಿನಾಸಂ ಕಲಾವಿದ ರಾಮು ಅವರ ಅಯನ ಮಕ್ಕಳ ಅಕಾಡೆಮಿ ಇವರ ಸಂಯುಕ್ತ ಪ್ರಯತ್ನವೇ ಪಿಯು ಕನ್ನಡ ಪಠ್ಯದ ರಂಗರೂಪಾಂತರ. 10 ವರ್ಷಗಳಿಂದ ಕನ್ನಡ ಪಠ್ಯದ ರಂಗಾಭಿನಯ ಸಾಗಿದೆ. ಈ ಶಿಕ್ಷಣ ರಂಗಯಾತ್ರೆ ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲ್ಬರ್ಗ ಜಿಲ್ಲೆಗಳಲ್ಲಿ ಜನಜನಿತ. ಈ ರಂಗಯಾತ್ರೆಯ ಕಾರ್ಯದರ್ಶಿ ವಿಶ್ವನಾಥ ಕುಲ್ಕರ್ಣಿ. ಪ್ರಥಮ ಪಿಯು ಪಠ್ಯ, ಡಾ. ಚಂದ್ರಶೇಖರ ಕಂಬಾರರ 'ಬೆಪ್ಪುತಕ್ಕಡಿ ಬೋಳೆ ಶಂಕರ' ಹಾಗೂ ದ್ವಿತೀಯ ಪಿಯುವಿನ 'ಏಕಲವ್ಯ' ನಾಟಕಗಳನ್ನು ರಂಗಕ್ಕೆ ತರುವಲ್ಲಿ ಈ ತಂಡದ 40ಕ್ಕೂ ಹೆಚ್ಚು ಮಂದಿ ಶ್ರಮಿಸುತ್ತಿದ್ದಾರೆ. ಮುಂಚೆ ಇದೇ ತಂಡ 'ಕಾಲಜ್ಞಾನಿ ಕನಕ' ನಾಟಕವನ್ನೂ ಅಮೋಘವಾಗಿ ಅಭಿನಯಿಸಿತ್ತು.
ನೂರಾರು ಪ್ರಯೋಗ ಯಶಸ್ವಿ
ಕಳೆದೊಂದು ದಶಕದಲ್ಲಿ 100ಕ್ಕೂ ಹೆಚ್ಚು ಪ್ರಯೋಗಗಗಳನ್ನು ಮಾಡಲಾಗಿದೆ. 'ಏಕಲವ್ಯ' ನಾಟಕವನ್ನು 70 ಸಾವಿರ ವಿದ್ಯಾರ್ಥಿಗಳು ನೋಡಿದ್ದಾರೆ. 'ಕಾಲಜ್ಞಾನಿ ಕನಕ' 30ಕ್ಕೂ ಹೆಚ್ಚು ಪ್ರಯೋಗಗಳ ಮೂಲಕ 25 ಸಾವಿರ ಮಕ್ಕಳನ್ನು ತಲುಪಿದೆ. 'ಬೆಪ್ಪುತಕ್ಕಡಿ- ಬೋಳೆಶಂಕರ' ನಾಟಕ 40 ಪ್ರಯೋಗಗಳ ಮೂಲಕ 40 ಸಾವಿರ ವಿದ್ಯಾರ್ಥಿಗಳ ಮೆದುಳಲ್ಲಿ ನೆಲೆಯಾಗಿದೆ.
2 ತಿಂಗಳು ತಿರುಗಾಟ
ಅಯನ ಟ್ರಸ್ಟ್ನ ರಾಮು, ವಿಜಾಪುರದ ಖೇಡ ವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಮೇತ್ರಿ, ಚಿದಂಬರ ಕುಲಕರ್ಣಿ, ವಿಶ್ವನಾಥ ಜೋಶಿ, ಎಂ.ಸಿ. ರಾಮು, ಕಾಖಂಡಕಿ ಈ ರಂಗಯಾತ್ರೆಯ ಬೆನ್ನೆಲುಬಾಗಿದ್ದಾರೆ. ಈ ತಂಡ ವರ್ಷದಲ್ಲಿ 1 ತಿಂಗಳು ರಂಗ ತಾಲೀಮು, 2 ತಿಂಗಳು ತಿರುಗಾಟ ನಡೆಸುತ್ತದೆ. ಮೈಸೂರು, ಬೆಂಗಳೂರು, ತುಮಕೂರು, ಮರೆಮ್ಮನಹಳ್ಳಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ಚಿಕ್ಕಮಗಳೂರು, ಸಕಲೇಶಪುರ, ಕುಷ್ಟಗಿ, ಗಂಗಾವತಿಯ ನುರಿತ ಕಲಾವಿದರು ತಂಡದಲ್ಲಿದ್ದಾರೆ.
- ಚಿತ್ರ- ಲೇಖನ: ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


