ಬೈಟುಕಾಫಿ

ಶ್ವಾಸಕೋಶಗಳಿಗೆ ಆಗಾಗ ನೀಡುತ್ತಿರಿ ಕೆಮಿಕಲ್

ಶ್ವಾಸಕೋಶಗಳಿಗೆ ಆಗಾಗ ನೀಡುತ್ತಿರಿ ಕೆಮಿಕಲ್
Published On :

ನಿಮ್ಮ ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು ಅಂತಾದರೆ ಅವುಗಳಿಗೆ ಸ್ವಲ್ಪ ರಾಸಾಯನಿಕಗಳನ್ನು ನೀಡುವ ಅಗತ್ಯವಿದೆ. ಫೋಲಿಕ್ ಆಸಿಡ್ ಅಥವಾ ಫೋಲಿಟ್ ಮತ್ತು ವಿಟಮಿನ್ 'ಬಿ'ಗಳು ಶ್ವಾಸಕೋಶಗಳನ್ನು ಆರೋಗ್ಯವಾಗಿ ಇರಿಸುತ್ತವೆ. ಹಾಗಂತ ಔಷಧ ಅಂಗಡಿಗಳಲ್ಲಿ ಸಿಗುವ ಫೋಲಿಕ್ ಆಸಿಡ್ ಮಾತ್ರೆಗಳನ್ನೋ ವಿಟಮಿನ್ 'ಬಿ' ಗುಳಿಗೆಗಳನ್ನೋ ತಂದು ತಿನ್ನುವುದಲ್ಲ. ನಿಮ್ಮ ಆಹಾರದ ಮೂಲಕವಾಗಿಯೇ ಈ ರಾಸಾಯನಿಕಗಳು ಶರೀರವನ್ನು ಸೇರಬೇಕು. ಹೀಗೆ ನೈಸರ್ಗಿಕವಾಗಿ ಸಿಗುವ ಫೋಲಿಕ್ ಆಸಿಡ್, ವಿಟಮಿನ್ 'ಬಿ'ಗಳಿಂದಲೇ ಶ್ವಾಸಕೋಶಗಳು ಬಲಗೊಳ್ಳಬೇಕು. ಆಗ ಮಾತ್ರವೇ ಅವುಗಳಿಗೆ ಕ್ಯಾನ್ಸರ್‌ಕಾರಕ ಕೋಶಗಳನ್ನು ಎದುರಿಸುವ ತಾಕತ್ತು ಬರುತ್ತದೆ ಮತ್ತು ಅಂಥ ಬಲ ದೀರ್ಘಕಾಲ ಉಳಿಯುತ್ತದೆ. ತೀರಾ ಅನಿವಾರ್ಯವಾದಾಗ ವೈದ್ಯರೂ ಒಮ್ಮೊಮ್ಮೆ ಫೋಲಿಕ್ ಆಸಿಡ್, ವಿಟಮಿನ್ 'ಬಿ' ಇರುವ ಔಷಧಗಳನ್ನು ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ಶಿಫಾರಸ್ಸು ಮಾಡಬಹುದು. ಅದು ರೋಗದ ತೀವ್ರತೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ದಟ್ಟ ಹಸಿರು ತರಕಾರಿಗಳು, ಹಸಿರು ಸೊಪ್ಪುಗಳಲ್ಲಿ ಫೋಲಿಕ್ ಆಸಿಡ್ ಅಧಿಕವಾಗಿರುತ್ತದೆ. ಗರ್ಭಿಣಿಯರಿಗೆ ಇಂಥ ತರಕಾರಿ, ಸೊಪ್ಪುಗಳನ್ನು ಜಾಸ್ತಿ ಸೇವಿಸುವಂತೆ ವೈದ್ಯರು ಸಲಹೆ ಮಾಡುವುದು ಇದೇ ಕಾರಣಕ್ಕೆ. ಏಕೆಂದರೆ ಅವರಿಗೆ ಫೋಲಿಕ್ ಆಸಿಡ್ ಅಗತ್ಯ ಬಹಳ ಇರುತ್ತದೆ.
ಕ್ಯಾನ್ಸರ್ ಇರುವ ಮತ್ತು ಇಲ್ಲದಿರುವ ವ್ಯಕ್ತಿಗಳ ರಕ್ತದಲ್ಲಿ ಫೋಲಿಕ್ ಆಸಿಡ್ ಪ್ರಮಾಣ ತುಲನೆ ಮಾಡಿದಾಗ, ಯಾರಲ್ಲಿ ಫೋಲಿಕ್ ಆಸಿಡ್ ಅಂಶ ಕಡಿಮೆ ಇದೆಯೋ ಅಂತಹವರೇ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿರುವುದು ಕಂಡುಬಂದಿದೆ. ಅದೂ ಅಲ್ಲದೇ ಧೂಮಪಾನಿಗಳು, ತಂಬಾಕು ಜಗಿಯುವವರಲ್ಲಿಯೂ ಫೋಲಿಕ್ ಆಸಿಡ್ ಬಹಳ ಕಡಿಮೆ ಇರುವುದು ಪತ್ತೆಯಾಗಿದೆ. ಫೋಲಿಕ್ ಆಸಿಡ್ ಹೀರಿಕೊಳ್ಳುವ ಗುಣದಿಂದಾಗಿಯೇ ತಂಬಾಕು ಸೇವಿಸುವವರೇ ಹೆಚ್ಚಾಗಿ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎನ್ನುವ ವಾದಗಳಲ್ಲಿ ನಿಜ ಇರಲೂಬಹುದು.
ಇನ್ನು ವಿಟಮಿನ್ 'ಬಿ' ಕೊರತೆ ಕಾಣಿಸಿಕೊಂಡರೆ ಕೋಶಗಳು ಹಾನಿಗೆ ಒಳಗಾಗುವ ಸಂಭವ ಹೆಚ್ಚು. ಅದರಲ್ಲೂ ಕ್ರೋಮೋಜೋಮ್‌ಗಳು ಛಿದ್ರಗೊಂಡು, ಕೋಶಗಳು ಗಡ್ಡೆಗಳಾಗಿ ಮಾರ್ಪಡುವ ಸಾಧ್ಯತೆಗಳು ಅಧಿಕವಾಗಿವೆ. ಅಲ್ಲದೆ ಇಂಥ ಕೋಶಗಳು ಬಹು ಬೇಗ ಗಡ್ಡೆಗಳಾಗಿ ರೂಪಾಂತರ ಹೊಂದಬಲ್ಲವು. ಹೀಗಾಗಿ ಆಹಾರದಲ್ಲಿ ಸಾಧ್ಯವಾದಷ್ಟು ಫೋಲಿಕ್ ಆಸಿಡ್, ವಿಟಮಿನ್ 'ಬಿ' ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ವೈವಿಧ್ಯಮಯ ತರಕಾರಿ, ಹಣ್ಣು, ಸೊಪ್ಪುಗಳ ಬಳಕೆಯಿಂದ ಶರೀರಕ್ಕೆ ಅಗತ್ಯವಿರುವ ಎಲ್ಲ ಶಕ್ತಿಯುತ ಪದಾರ್ಥಗಳೂ ನೈಸರ್ಗಿಕವಾಗಿಯೇ ಲಭಿಸುತ್ತವೆ.ಟಿ

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.