ನಾವು ದಡ್ಡರಲ್ಲ!

ಗುಲ್ಜಾರ್ಸಿಂಗ್ ರಾಣಿಕೆ
ಪಂಜಾಬ್ ಸರ್ಕಾರದ ಸಚಿವ. ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳನ್ನು ನಿರ್ವಹಿಸುತ್ತಿದ್ದಾರೆ. ಇವರು ಓದಿದ್ದು ಕೇವಲ ಏಳನೇ ತರಗತಿಯಷ್ಟೇ. ಅಟ್ಟಾರಿ ಕ್ಷೇತ್ರದಿಂದ ಆಯ್ಕೆಯಾದ ಅಕಾಲಿದಳ ಪಕ್ಷದ ಮೊದಲ ಶಾಸಕ ಇವರು. ಗಡಿಭಾಗಕ್ಕೆ ಸಂಬಂಧಿಸಿದ ಹಗರಣದಲ್ಲಿ ಸಿಲುಕಿ, ಒಮ್ಮೆ ಸಂಪುಟದಿಂದ ಹೊರಬಿದ್ದರೂ, ಸಂಪುಟ ಪುನರಚನೆಯಲ್ಲಿ ಮತ್ತೆ ಸ್ಥಾನ ಪಡೆದರು. ಅಂದಹಾಗೆ, ಗುಲ್ಜಾರ್ ಸಿಂಗ್ ತಂದೆ ಗುರುಮುಖ ಸಿಂಗ್ ರಾಣಿಕೆ ಕೂಡ ಅಕಾಲಿಕ ದಳದ ಮುಖಂಡರೇ ಆಗಿದ್ದರು. ಮಗನನ್ನು ಹೆಚ್ಚು ಓದಿಸದೇ ನೇರವಾಗಿ ರಾಜಕೀಯದ ಶಾಲೆಗೆ ಸೇರಿಸಿದರು.
ಫೂಲನ್ದೇವಿ
ಈ ಡಕಾಯಿತೆಯ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಸರ್ಕಾರಕ್ಕೆ ಶರಣಾಗಿ, ಮುಖ್ಯವಾಹಿನಿಯನ್ನು ಸೇರಿಕೊಂಡ ಫೂಲನ್ಗೆ ಉತ್ತರ ಪ್ರದೇಶದ ಮಿರ್ಜಾಪುರದ ಜನತೆ ರಾಜಕೀಯಕ್ಕೆ ಸೇರುವಂತೆ ಒತ್ತಾಯಿಸಿದರು. ಫೂಲನ್ ಮೊದಮೊದಲು ತಾನು ಅನಕ್ಷರಸ್ಥೆ ಅಂತಲೇ ಹಿಂದೇಟು ಹಾಕಿದಳು. ಶಾಲೆಗೆ ಸೇರುವ ವಯಸ್ಸಲ್ಲಿ ಮದುವೆಯಾದ ಕಾರಣಕ್ಕಾಗಿ ಫೂಲನ್ ಫುಲ್ಟೈಮ್ ಅನಕ್ಷರಸ್ಥೆಯಾಗಿಯೇ ಬಾಳಬೇಕಾಯಿತು. ಆ ಅನಕ್ಷರಭಾವವೇ ಆಕೆಯನ್ನು ಡಕಾಯಿತೆಯನ್ನಾಗಿಸಿತು. ಅದೇನೇ ಇರಲಿ, 1998ರ 11ನೇ ಲೋಕಸಭಾ ಎಲೆಕ್ಷನ್ನಿನಲ್ಲಿ ಆಕೆ ಸಮಾಜವಾದಿ ಪಕ್ಷದಿಂದ ಗೆದ್ದು ಪಾರ್ಲಿಮೆಂಟ್ ಸೇರಿದಳು. ಮರುವರ್ಷ ನಡೆದ ಚುನಾವಣೆಯಲ್ಲಿ ಫೂಲನ್ ಸೋಲೊಪ್ಪಿಕೊಳ್ಳಬೇಕಾಯಿತು.
ಜಯಲಲಿತಾ
ಇವರ ಬಗ್ಗೆ ಹೆಚ್ಚು ವ್ಯಾಖ್ಯಾನದ ಅಗತ್ಯವಿಲ್ಲ. ತಮಿಳುನಾಡಿನ ಈ ಮುಖ್ಯಮಂತ್ರಿ 'ಅಮ್ಮ' ಓದಿದ್ದು ಕೇವಲ 10ನೇ ತರಗತಿ. ಸ್ಕಾಲರ್ಶಿಪ್ ಸಿಕ್ಕಾಗ ಹೆಚ್ಚು ಓದಬೇಕೆಂದಿದ್ದ ಜಯಲಲಿತಾಗೆ ನಟನೆಯ ಹುಚ್ಚು ಅಡ್ಡಿಯಾಯಿತು. ರಾಜ್ಯದ ಸಮಸ್ತ ಲೆಕ್ಕಾಚಾರಗಳನ್ನು ಬಾಯಿಯಲ್ಲೇ ಇಟ್ಟುಕೊಂಡಿರುವ ಅಮ್ಮನಿಗೆ ಇವತ್ತು ಕ್ಯಾಲ್ಕುಲೇಟರ್ ಬೇಡವಂತೆ. ಯಾವುದರ ಬಗ್ಗೆಯೂ ಆತುರ ನಿರ್ಧಾರ ತಾಳದೆ, ಕೂಲ್ ಆಗಿ ಯೋಚಿಸುವುದು ಇವರ ಮುಖ್ಯ ಗುಣ. ಈ ತಾಳ್ಮೆಯೇ ಇವರನ್ನು ರಾಜಕೀಯದಲ್ಲಿ ಎತ್ತರದ ಸ್ಥಾನಕ್ಕೊಯ್ದಿದೆ.
ವಿಜಯಕಾಂತ್
ತಮಿಳು ಸಿನಿಮಾರಂಗದಲ್ಲಿ ವಿಜಯಕಾಂತ್ರದ್ದು ದೊಡ್ಡ ಹೆಸರು. ಡಿಎಂಡಿಕೆ ಪಕ್ಷದಿಂದ 2011ರಲ್ಲಿ ಸಂಸತ್ತಿಗೆ ಕಾಲಿಟ್ಟರು. ಸಂಘಟನಾ ಚಾತುರ್ಯದಿಂದಲೇ ಹೆಸರಾಗಿರುವ ವಿಜಯಕಾಂತ್ ಓದಿದ್ದು ಕೇವಲ ಸೆಕೆಂಡ್ ಪಿಯುಸಿ ವರೆಗೆ. ನಂತರ ಸಿನಿಮಾದ ಆಕರ್ಷಣೆಗೆ ಸಿಲುಕಿ, ವಿದ್ಯಾಭ್ಯಾಸವನ್ನೇ ಕೈಬಿಟ್ಟರು. 'ನೀವು ಹೆಚ್ಚು ಓದಬೇಕಿತ್ತು' ಎಂಬ ಪತ್ನಿ ಪ್ರೇಮಲತಾ ಅವರ ಸಲಹೆಗೆ, 'ನಾನು ಅಷ್ಟೆಲ್ಲ ಓದಿದ್ದಿದ್ದರೆ ಎಲ್ಲೋ ಕ್ಲರ್ಕ್ ಆಗಿರುತ್ತಿದ್ದೆ' ಎಂದು ಹಾಸ್ಯದುತ್ತರ ಕೊಡುತ್ತಾರಂತೆ ವಿಜಯಕಾಂತ್.
ರಾಬ್ಡಿ ದೇವಿ
ಪತಿಯೋಗದಿಂದ ಬಿಹಾರದಲ್ಲಿ ಸಿಎಂ ಕುರ್ಚಿ ಹಿಡಿದ ರಾಬ್ಡಿದೇವಿ ಅವರಿಗೆ ಇವತ್ತಿಗೂ ನೆಟ್ಟಗೆ ಸಹಿ ಹಾಕಲು ಬರುವುದಿಲ್ಲ. ಇವರು ಪ್ರಾಥಮಿಕ ಶಾಲೆಯ ತನಕವಷ್ಟೇ ಓದಿದವರು. ಲಾಲೂ ಸಿಎಂ ಆದಮೇಲೆ ಮುಜುಗರದ ಪ್ರಶ್ನೆ ಎದುರಾಗಿ, ರಾಬ್ಡಿದೇವಿ ಹೆಚ್ಚುವರಿ ಓದಲು ಮನಸ್ಸು ಮಾಡಿದರು. ಆಗ ತಲೆಗೆ ಹತ್ತಲಿಲ್ಲ. ಆದರೂ, ಮೂರು ಸಲ ಸಿಎಂ ಆಗುವ ಮೂಲಕ ರಾಷ್ಟ್ರದ ಅಚ್ಚರಿಗೆ ಕಾರಣರಾದರು.
ಜಾಫರ್ ಷರೀಪ್
ಕರ್ನಾಟಕ ಕಂಡ ಚಾಣಾಕ್ಷ ರಾಜಕಾರಣಿಗಳಲ್ಲಿ ಷರೀಫರೂ ಒಬ್ಬರು. ಬೆಂಗಳೂರು ಉತ್ತರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ಒಮ್ಮೆ ರೇಲ್ವೆ ಖಾತೆಯನ್ನೂ ಹಿಡಿದು ಮೆರೆದ ಷರೀಫರು ಓದಿದ್ದು ಕೇವಲ ಮೆಟ್ರಿಕ್ಯುಲೇಶನ್ವರೆಗೆ. ಕಾಂಗ್ರೆಸ್ನ ಮುಖಂಡ ನಿಜಲಿಂಗಪ್ಪ ಅವರ ಕೈಕೆಳಗೆ ಬೆಳೆದು, ದೇಶದ ರೇಲ್ವೆಯ ಲೆಕ್ಕಾಚಾರ ಮಂಡಿಸಿದ ಜಾಫರ್ ಇವತ್ತಿಗೂ ಗಣಿತದಲ್ಲಿ ಸ್ಟ್ರಾಂಗು. ಕಾಂಗ್ರೆಸ್ ತೊರೆದ ಜಾಫರ್, ಜೆಡಿಎಸ್ ಸೇರಿ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಲೆಕ್ಕಾಚಾರವಿತ್ತು. ಆದರೆ, ಜಾಫರ್ ಸ್ಪರ್ಧಿಸಲಿಲ್ಲ. ನಮ್ಮ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು.
ಕರುಣಾನಿಧಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಸದಾ 'ಕೂಲ್'ಮಾಸ್ಟರ್ ಕರುಣಾನಿಧಿ ಅವರೂ ಹೆಚ್ಚೇನು ಓದದೇ ಸಿಎಂ ಗದ್ದುಗೆ ಏರಿದವರು. ಮೆಟ್ರಿಕ್ಯುಲೇಶನ್ ಅಷ್ಟೇ ಪೂರೈಸಿರುವ ಕರುಣಾನಿಧಿಗೆ ಆಗಲೇ ಸಿನಿಮಾ ಸಾಹಿತ್ಯದ ಮೇಲೆ ಹುಚ್ಚು ಬೆಳೆಯಿತು. ತರಗತಿಗೆ ಚಕ್ಕರ್ ಹೊಡೆದು, ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆದ ಆಸಾಮಿ ಇವರು. ಆ ಕಾಲದಲ್ಲಿ ಇವರು ಬರೆದ ಅನೇಕ ಕವನಗಳು, ಇವತ್ತಿಗೂ ತಮಿಳರ ನಾಲಗೆ ಮೇಲೆ ನಲಿಯುತ್ತಿವೆ. ಆಡಳಿತ, ಅಭಿವೃದ್ಧಿ ವಿಚಾರದಲ್ಲೂ ಅಷ್ಟೇ... ಕರುಣಾನಿಧಿ ದಡ್ಡರು ಅಂತ ಯಾರಿಗೂ ಅನ್ನಿಸುವುದಿಲ್ಲ. ಇದು ಡಿಎಂಕೆ ಪಕ್ಷದ ಮಾಸ್ಟರ್ಮೈಂಡ್.
ವಾಟಾಳ್ ನಾಗರಾಜ್
ಕನ್ನಡನಾಡಿನ ಅಪ್ರತಿಮ ಹೋರಾಟಗಾರ. ಕನ್ನಡ ಚಳುವಳಿ ಪಾಟಾಳ್ ಪಕ್ಷದ ಅಧ್ಯಕ್ಷ. ಅಲ್ಲದೆ, ಮಾಜಿ ಶಾಸಕ. ರಾಜ್ಯದ ಅಷ್ಟೂ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾಗಿ ವಿಚಾರ ಮಂಡಿಸುವ ವಾಟಾಳ್, ವಾಸ್ತವದಲ್ಲಿ 10ನೇ ತರಗತಿ ಫೇಲ್! ಆದರೆ, ಇವರು ಕನ್ನಡ ಪ್ರೊಫೆಸರ್ಗೂ ಮಿಗಿಲಾಗಿ ಕನ್ನಡ ಇತಿಹಾಸ- ಸಂಸ್ಕೃತಿಯನ್ನು ಬಲ್ಲವರು. ರಾಜಕೀಯಕ್ಕೆ ಹೆಚ್ಚು ಓದು ಬೇಡ, ಪ್ರಜ್ಞಾವಂತಿಕೆ ಸಾಕೆಂಬ ನೀತಿಯುಳ್ಳವರು.
ಕೆ. ಕಾಮರಾಜ್
ಇವರೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ. ಸ್ವಾತಂತ್ರ್ಯ ಹೋರಾಟಗಾರರಾಗಿ ನಂತರ ರಾಜಕೀಯ ಸೇರಿಕೊಂಡವರು. ಕಾಮರಾಜ್ ಯಾವತ್ತೂ ಶಾಲೆಯ ಮೆಟ್ಟಿಲನ್ನೇರಲಿಲ್ಲ. ತೀರಾ ಬಡಕುಟುಂಬದಲ್ಲಿ ಹುಟ್ಟಿದ ಕಾರಣಕ್ಕಾಗಿ ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ ಅಂತ ಅವರೇ ಹೇಳಿಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ಬಂಧನಕ್ಕೊಳಗಾದಾಗ, ಜೈಲಲ್ಲೇ ಇಂಗ್ಲಿಷ್ ಕಲಿತ ಅಕ್ಷರ ಸಾಹಸಿ ಇವರು. 1954ರಲ್ಲಿ ಸಿಎಂ ಆಗಿ, 60ರ ದಶಕದಲ್ಲಿ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನವನ್ನೂ ಪಡೆದುಕೊಂಡರು.
ಗೊಲ್ಮಾ ದೇವಿ
ಬಹುಶಃ ಇವರ ಪರಿಚಯ ನಿಮಗಿರಲಿಕ್ಕಿಲ್ಲ. ರಾಜಸ್ಥಾನದ ಮಾಜಿ ಶಾಸಕಿ. ಗೊಲ್ಮಾ ಕೂಡ ಶಾಲೆಗೆ ಹೋದವರಲ್ಲ. ಈಕೆಯ ಗಂಡ ಡಾ. ಕಿರೋರಿ ಲಾಲ್ ಮೀನಾ ಸಂಸದರಾದಾಗ ಪತ್ನಿಗೆ ಅಕ್ಷರಾಭ್ಯಾಸಕ್ಕಾಗಿ ವಿಶೇಷ ಶಿಕ್ಷಕರನ್ನು ನೇಮಿಸಿದರಂತೆ. ಗೊಲ್ಮಾ ಅಲ್ಪಸ್ವಲ್ಪ ಕಲಿತರಷ್ಟೇ. 2008ರಲ್ಲಿ ಬಿಜೆಪಿ ತೊರೆದ ಕಿರೋರಿ, ಸದ್ಯ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಸದಸ್ಯ. ಆದರೆ, ಗೊಲ್ಮಾದೇವಿ ಈಗ ರಾಜಕಾರಣದಿಂದ ದೂರವಿದ್ದಾರೆ. <
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


