ಬೈಟುಕಾಫಿ

ಕೇಳದೆ ನಿಮಗೀಗ?

ಈ ಬಾರಿ ಮೋದಿ ಅಲೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಲಿದೆ ಎಂಬುದು ಬಿಜೆಪಿಗರ ಮಂತ್ರ. ಹೌದು, 'ಮೋದಿ ರಾಗಾ' ...

ಕೇಳದೆ ನಿಮಗೀಗ?
Published On :

ಈ ಬಾರಿ ಮೋದಿ ಅಲೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಲಿದೆ ಎಂಬುದು ಬಿಜೆಪಿಗರ ಮಂತ್ರ. ಹೌದು, 'ಮೋದಿ ರಾಗಾ' ಈಗಾಗಲೇ ಎಲ್ಲ ಬಾರಿ ಕೇಳಿಬರುತ್ತಿದ್ದ ಆಶ್ವಾಸನೆಗಳನ್ನು ಕೊಚ್ಚಿಕೊಂಡು ಹೋಗಿದೆ. ದೇಶದ ಸಮಸ್ಯೆಗಳು ಹಾಗೂ ಪರಿಹಾರಗಳು ಪಕ್ಷಗಳೆರಡರ ನಡುವೆ ವಾಕ್ಸಮರ ಹುಟ್ಟುಹಾಕಿ, ಆಶ್ವಾಸನೆಯ ರೂಪ ತಾಳುತ್ತಿಲ್ಲ. ಬದಲಿಗೆ ಪ್ರಮುಖ ಪಕ್ಷವಾದ ಬಿಜೆಪಿ ಮೋದಿಯೇ ಅಂತಿಮ ಪರಿಹಾರ, ಕುಟುಂಬ ರಾಜಕಾರಣದ ಅಂತ್ಯವೇ ದೇಶದ ಅಭಿವೃದ್ಧಿ ಎನ್ನುತ್ತಿದ್ದರೆ, ಕಾಂಗ್ರೆಸ್ ಕೋಮುವಾದಿ ಮೋದಿಯಿಂದ ದೇಶ ಅಧೋಗತಿಗೆ ಎಂಬ ಆರೋಪಕ್ಕೇ ಪ್ರಸ್ತುತ ಚುನಾವಣಾ ಕಣವನ್ನು ಸೀಮಿತವಾಗಿಸಿವೆ. ಮೀಡಿಯಾಗಳೂ 'ಮೋದಿ' 'ರಾಗಾ' ಹಾಡುವುದನ್ನು ಹೊರತುಪಡಿಸಿ ಕೇಳಿಬರುವ ಇನ್ನಾವುದೇ ಧ್ವನಿಗಳಿಗೆ ಜಾಗ ನೀಡುತ್ತಿಲ್ಲ. ಹೀಗೆ ಈ ಸಲ ಕಳೆದುಹೋದ ಅದೆಷ್ಟೋ ಜನಪ್ರಿಯ ಹಾಗೂ ಅವಶ್ಯಕ ವಿಷಯಗಳು ಇಲ್ಲಿವೆ.
ಬೆಲೆಏರಿಕೆ
ಕಳೆದ ಬಾರಿ ಬಡತನ ನಿರ್ಮೂಲನೆಯನ್ನೇ ಅಜೆಂಡಾದಂತೆ ಸಾರಿದ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಒಲೆ ಹಚ್ಚಲಾರದೆ ಬಡವ ಇನ್ನಷ್ಟು ಬಡವಾದ. ಏರಿದ ಗ್ಯಾಸ್ ದರ, ತಿಂಗಳಿಗೆರಡು ಬಾರಿ ಪೇಪರ್‌ನ ಮೊದಲ ಪುಟದ ತಲೆಬರಹವಾಗಿ ಮಧ್ಯಮವರ್ಗಕ್ಕೆ ತಲೆನೋವು ತಂದ ಪೆಟ್ರೋಲ್, ಡೀಸೆಲ್ ದರ, ತಿಂಗಳ ಸಂಬಳವನ್ನೆಲ್ಲ ಕಬಳಿಸಿದ ದಿನಬಳಕೆಯ ವಸ್ತುಗಳು ಅದೇಕೋ ಈ ಬಾರಿ ಯಾವ ರಾಜಕಾರಣಿಯ ಬಾಯಿಚಪಲಕ್ಕೂ ಬಲಿಯಾಗುತ್ತಿಲ್ಲ. ಭರವಸೆಯ ಕೂಸಾಗಿ ಹುಟ್ಟುತ್ತಲೂ ಇಲ್ಲ. ವಸ್ತುಗಳು ದುಬಾರಿಯಾದಂತೆಲ್ಲ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದವರ ಕಾವು ಇಳಿದುಹೋದದ್ದೆಲ್ಲೋ ತಿಳಿಯುತ್ತಿಲ್ಲ.
ಭಯೋತ್ಪಾದನೆ
ಭಾರತದ ಗಡಿಯೊಳಗೆ ಬಂದ ಪಾಕಿಸ್ತಾನದ ಸೈನಿಕರು ನಮ್ಮ ಸೈನಿಕರ 'ತಲೆದಂಡ' ಪಡೆದರೂ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿ ತನ್ನ ಕರ್ತವ್ಯ ಮುಗಿಸಿತು! ಮೋದಿ ಭಾಷಣದಲ್ಲಿ ಇದು ಬಿಂಬಿತವಾದರೂ, ಉಳಿದ ಬಿಜೆಪಿ ಪ್ರಮುಖರು ಇದಕ್ಕೆಲ್ಲ ಮೋದಿ ಪರಿಹಾರ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಬೇರೆ ಪಕ್ಷಗಳ ಪುಢಾರಿಗಳಿಗೆ ಈ ಬಗ್ಗೆ ಭರವಸೆ ಕೊಡುವ ಧೈರ್ಯವೂ ಇಲ್ಲ.
ಶಿಕ್ಷಣ
2011ರ ಗಣತಿಯ ಪ್ರಕಾರ ಅಕ್ಷರಸ್ಥರ ಸಂಖ್ಯೆ ಶೇ.74.04 ಕ್ಕೇರಿದ್ದರೂ ಉಳಿದ ಶೇ.36 ಕಡಿಮೆಯೇನಲ್ಲ. ಒಂದು ದೇಶದ ಪ್ರಗತಿಯನ್ನು ಅಲ್ಲಿನ ಶಿಕ್ಷಿತರ ಸಂಖ್ಯೆಯಿಂದಲೇ ಲೆಕ್ಕ ಹಾಕಿ ಬಿಡಬಹುದು. ಅಂಥದ್ದರಲ್ಲಿ ಎಲ್ಲ ಪಕ್ಷಗಳ ಪ್ರಮುಖ ಅಜೆಂಡಾ ಆಗಬೇಕಾದ ಶಿಕ್ಷಣ ಕೂಡಾ ಸದ್ದು ಮಾಡದಿರುವುದು ಪಕ್ಷಗಳ ಬೇಜವಾಬ್ದಾರಿಯನ್ನು ತೋರುತ್ತದೆ.
ಬಡತನ ಮತ್ತು ಅಪೌಷ್ಟಿಕತೆ
ಭಾರತವನ್ನು ಕಿತ್ತು ತಿನ್ನುತ್ತಿರುವ ಬಡತನ ಮತ್ತು ಅಪೌಷ್ಟಿಕತೆಯ ದಾರಿದ್ರ್ಯ ಈ ಬಾರಿ ಯಾವ ಪುಢಾರಿಗಳ ಭಾಷಣಕ್ಕೂ, ಆಶ್ವಾಸನೆಗೂ ವಿಷಯ ಒದಗಿಸಿಲ್ಲ. 2010ರ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ.32.7 ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ.68 ಮಂದಿ ದಿನಕ್ಕೆ 2 ಡಾಲರ್‌ಗಿಂತಲೂ ಕಡಿಮೆ ವೆಚ್ಚದಲ್ಲಿ ಜೀವನ ನಡೆಸುತ್ತಿದ್ದಾರೆ. 2011ರ ಸಮೀಕ್ಷೆ ಈ ಮಟ್ಟ ಹೆಚ್ಚಾಗಿರುವುದನ್ನು ಖಾತ್ರಿಪಡಿಸಿದೆ. ಅಪೌಷ್ಟಿಕತೆಯಲ್ಲಿ ನಾವು ಆಫ್ರಿಕಾವನ್ನೂ ಮೀರಿಸಿ ನಂ.1 ಪಟ್ಟ ಪಡೆದ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
ರೈತರ ಬೆಳೆಗೆ ಬೆಲೆ
ಬರಗಾಲ, ಬೆಲೆಯೇರಿಕೆಯಿಂದ ಮೊದಲೇ ಬಸವಳಿದಿರುವ ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಹೀಗಾಗಿ ರೈತರ ಮಕ್ಕಳ ದಾರಿ ಕವಲೊಡೆಯುತ್ತಿದೆ. ಕೃಷಿಯಿಂದ ಹಲವರು ವಿಮುಖರಾಗುತ್ತಿದ್ದಾರೆ. ಭವಿಷ್ಯದಲ್ಲಿ ಆಹಾರ ಬರ ಕಾಣಬಹುದಾದ ಸ್ಪಷ್ಟ ಮುನ್ಸೂಚನೆಗಳು 120 ಕೋಟಿ ಹೊಟ್ಟೆ ಹೊರೆಯುತ್ತಿರುವ ದೇಶದ ನಾಯಕರ ನಿದ್ದೆ ಕೆಡಿಸುತ್ತಿಲ್ಲ, ಅದರ ಗಂಭೀರತೆ ಚರ್ಚೆಯಾಗುತ್ತಿಲ್ಲ. ಮತ ಕೇಳುವ ಮೊದಲು ಅನ್ನದಾತನಿಗೆ ನ್ಯಾಯ ಒದಗಿಸುವ ಭರವಸೆಯೂ ದೊರೆಯುತ್ತಿಲ್ಲ.
ಉದ್ಯೋಗಾವಕಾಶ
ಭಾರತದ ಜನಸಂಖ್ಯೆಯ ಶೇ.66 ಭಾಗ 35 ವರ್ಷದೊಳಗಿನ ಯುವಕರೇ ಇದ್ದರೂ ಭಾರತದಲ್ಲಿ 2013ರ ಗಣತಿಯ ಪ್ರಕಾರ ಶೇ.8.8 ಮಂದಿ ನಿರುದ್ಯೋಗಿಗಳಾಗಿದ್ದಾರೆ. ಈ ಸಮಸ್ಯೆ ಸಾಮಾಜಿಕ ಅನ್ಯಾಯ, ಅನಾಚಾರಗಳಿಗೆ ಎಡೆ ಮಾಡುತ್ತಿದೆ. ಹಾಗಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕೊಡಬೇಕಾದ ಜವಾಬ್ದಾರಿ ಸರ್ಕಾರಗಳದ್ದು. ಆದರೆ ಸರ್ಕಾರ ಕಟ್ಟುವ ಕೈಗಳಾವುವೂ ಈ ಬಗ್ಗೆ ಮಾತನಾಡುತ್ತಿಲ್ಲ. ಪರಿಹಾರ ಚಿಂತನೆ ಮಾಡುತ್ತಿಲ್ಲ. ವಿದೇಶಗಳಲ್ಲಿರುವ ಕಪ್ಪುಹಣ, ಭ್ರಷ್ಟಾಚಾರ, ಅಭಿವೃದ್ಧಿಯ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ. ಆದರೆ ಉಳಿದ ಬಿಜೆಪಿಗರೆಲ್ಲ ಮೋದಿ ಗೆಲ್ಲಿಸಿ ಎಂಬ ಒಂದೇ ಅಂಬೋಣಕ್ಕೆ ಜೋತು ಬಿದ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಮಹಿಳೆಯರ ಶಿಕ್ಷಣ ಹೊರತುಪಡಿಸಿದರೆ ಮೋದಿ ತೆಗಳಲಷ್ಟೇ ಸೀಮಿತವಾಗಿದ್ದಾರೆ. ಇತ್ತೀಚೆಗೆ ಹೊರಬಿದ್ದಿರುವ ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಗಳು ಕೆಲ ವಿಚಾರಗಳನ್ನು ಎತ್ತಿವೆಯಾದರೂ, ಅವನ್ನು ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿರುವ ನಾಯಕರು ಕಡಿಮೆ.


- ರೇಶ್ಮಾರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.