ಬೈಟುಕಾಫಿ

ತರಕಾರಿ ಅಂಗಡಿಗೆ ಹೋದಾಗ ಟೊಮೇಟೊ ಮರೆಯಬೇಡಿ

ತರಕಾರಿ ಅಂಗಡಿಗೆ ಹೋದಾಗ ಟೊಮೇಟೊ ಮರೆಯಬೇಡಿ
Published On :

ಇತ್ತೀಚೆಗೆ ಬಂಧುವೊಬ್ಬರ ಮನೆಗೆ ಹೋಗಿದ್ದೆ. ಕುಡಿಯಲು ಜ್ಯೂಸ್ ಕೊಟ್ಟರು. ಅವರ ಮನೆಯವರಿಗೆ ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆಸೆ. 'ಈ ಜ್ಯೂಸ್ ಯಾವುದರದ್ದು ಹೇಳಿ ನೋಡೋಣ?' ಎಂದು ಸವಾಲು ಹಾಕಿದರು. ಬಣ್ಣ ನೋಡಿದರೆ ಥೇಟ್ ಕಲ್ಲಂಗಡಿ ಹಣ್ಣಿನ ರಸದ ವರ್ಣ. ರುಚಿಯೂ ಸ್ವಲ್ಪ ಹಾಗೆಯೇ ಇತ್ತು. ಆದರೆ ಪುದೀನಾದ ವಾಸನೆಯೂ ಇತ್ತು. 'ಪುದೀನಾ ಹಾಕಿದ್ದೀರಿ ಅಂತಾದ ಮೇಲೆ ಇದು ಹಣ್ಣಿನ ರಸವಂತೂ ಅಲ್ಲ' ಎಂದೆ. 'ಇದು ಹಣ್ಣಿನ ರಸವೇ'ಎಂದರು ಆಕೆ. 'ಓಹ್, ಹೌದೌದು. ಟೊಮೆಟೊ ಹಣ್ಣಿನ ರಸ ತಾನೆ?' ಎಂದೆ. 'ನಿಮಗೆ ಹೇಗೆ ಗೊತ್ತಾಯಿತು' ಎಂದು ಕೇಳಿದರು. 'ಆಹಾರೋದ್ಯಮಿಯಾದ ನನಗೆ ಟೊಮೆಟೊ ವಾಸನೆ ಗ್ರಹಿಸುವುದು ಕಷ್ಟವೆ? ನಿಮ್ಮ ಈ ಪ್ರಯೋಗ ಬಿಡಬೇಡಿ. ಆಗಾಗ ಟೊಮೆಟೊ ರಸ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಜತೆಗೆ ಪುದೀನಾ ಸೇರಿಸಿದ್ದೀರಲ್ಲ, ಅದು ಇನ್ನೂ ಉತ್ತಮ. ಗ್ಯಾಸ್ಟ್ರಿಕ್ ಇತ್ಯಾದಿ ತೊಂದರೆಗಳು ಬಾರದಂತೆ ತಡೆಯುತ್ತದೆ' ಎಂದೆ.
ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗೂ ಟೊಮೆಟೊ ರಾಮಬಾಣ. ಅದರಲ್ಲಿನ ಲೈಕೋಪೀನ್ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ. ಆಹಾರ ವಿಜ್ಞಾನದಲ್ಲಿ ಲೈಕೋಪೀನ್ ಎಂದರೆ ಟೊಮೆಟೊ, ಟೊಮೆಟೊ ಎಂದರೆ ಲೈಕೋಪೀನ್. ಏಕೆಂದರೆ ಟೊಮೆಟೊದಲ್ಲಿ ಸಿಗುವಷ್ಟು ಲೈಕೋಪೀನ್ ಬೇರೆ ಯಾವ ಹಣ್ಣು, ತರಕಾರಿಗಳಲ್ಲಿಯೂ ಸಿಗುವುದಿಲ್ಲ. ಕಲ್ಲಂಗಡಿ ಹಣ್ಣಿನಲ್ಲಿಯೇ ಲೈಕೋಪೀನ್ ಹೇರಳವಾಗಿರುತ್ತದೆ. ಆದರೆ ಟೊಮೆಟೊದಷ್ಟು ಅಲ್ಲ. ಟೊಮೆಟೊ, ಕಲ್ಲಂಗಡಿ ಎರಡೂ ಸಹ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಪಾರು ಮಾಡಬಲ್ಲವು. ಯಾವ್ಯಾವುದೋ ಜ್ಯೂಸ್ ಕುಡಿಯುವುದಕ್ಕಿಂತ ಟೊಮೆಟೊ ರಸ ಮಾಡಿಕೊಂಡು ಕುಡಿದರೆ ಕ್ಯಾನ್ಸರ್‌ನಿಂದ ದೂರ ಇರಬಹುದು, ಜತೆಗೆ ಜೀರ್ಣಾಂಗಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ತಾನಾಗಿಯೇ ಪರಿಹಾರವಾಗುತ್ತವೆ. ಟೊಮೆಟೊ ಮತ್ತು ಕಲ್ಲಂಗಡಿಗಳಲ್ಲಿ ಕೆಂಪು ಬಣ್ಣ ಬರಲು ಮುಖ್ಯ ಕಾರಣವೇ ಈ ಲೈಕೋಪೀನ್. ಹಾಗಂತ ಕೆಂಪು ಬೆರ್ರಿ, ಚೆರ್ರಿ ಇತ್ಯಾದಿ ಹಣ್ಣುಗಳಲ್ಲಿಯೂ ಲೈಕೋಪೀನ್ ಸಮೃದ್ಧವಾಗಿದೆ ಎಂದುಕೊಳ್ಳಬೇಡಿ. ಅವುಗಳಿಗೆ ಆ ವರ್ಣ ಬಂದಿರುವುದು ಬೇರೆ ಕೆಲವು ರಾಸಾಯನಿಕಗಳಿಂದ.
ಟೊಮೆಟೊ ಅಥವಾ ಕಲ್ಲಂಗಡಿ ರಸದೊಂದಿಗೆ ರುಚಿಗೆ ಕೊಂಚ ಸಕ್ಕರೆ, ಉಪ್ಪು, ಪುದೀನಾ ಇತ್ಯಾದಿಗಳನ್ನು ಸೇರಿಸಿಕೊಂಡರೆ ಅದರಲ್ಲಿನ ಲೈಕೋಪೀನ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ.


(ಮುಂದುವರಿಯುವುದು)

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.