ಟ್ಯಾಬ್ಲೆಟ್ ರಾಜಕಾರಣ: ನಾಯಕರ ಹೆಸರಿನಲ್ಲಿ ಮಾತ್ರೆ!
ದಿನವೂ ಚುನಾವಣಾ ಸುದ್ದಿ. ಟಿವಿ ನೋಡಿದರೂ ಎಲೆಕ್ಷನ್, ಪತ್ರಿಕೆ ತೆರೆದರೂ ಎಲೆಕ್ಷನ್, ಅಂತರ್ಜಾಲಕ್ಕೆ ಹೋದರು ಎಲೆಕ್ಷನ್! ಹಾಳಾಗಲಿ, ಫೇಸ್ಬುಕ್ನಲ್ಲಾದ್ರೂ ಹರಟೋಣ ಅಂದ್ರೆ ಅಲ್ಲೂ ಚುನಾವಣೆಯ ಚರ್ಚೆ. ಹೊರಗೆ ಎಲ್ಲಾದ್ರೂ ಸುತ್ತಾಡೋಕೆ ಹೋದ್ರೆ ಅಲ್ಲೂ 'ನಿಮ್ಮ ಕಡೆ ಎಲೆಕ್ಷನ್ ಜೋರಾ?' ಅಂತ ಚರ್ಚೆಗೆ ಬರುವ ವಾಚಾಳಿಗಳೇ ಹೆಚ್ಚು! ಪರಿಸ್ಥಿತಿ ಹೀಗಿರುವಾಗ ಜ್ವರ, ತಲೆನೋವು, ಆಯಾಸ ಬರದೆ ಇರುತ್ತದಾ?
'ಪರಿಹಾರವೇ ಇಲ್ವಾ?' ಅಂತ ತಲೆ ಕೆಡಿಸ್ಕೋಬೇಡಿ. ಪರಿಹಾರ ಇದೆ. ಚುನಾವಣಾ ರೋಗಕ್ಕೆ ಚುನಾವಣಾ ರೀತಿಯಲ್ಲೇ ಮದ್ದು ಬಂದಿದೆ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತಾರಲ್ಲಾ ಹಾಗೆ! ಜ್ವರ, ತಲೆ ನೋವು ಹೋಗಲಾಡಿಸಲು 'ನಮೋ ಟ್ಯಾಬ್ಲೆಟ್ಸ್'. ಆಯಾಸ ಪರಿಹರಿಸಲು 'ರಾಗಾ ಫ್ಲೇಮ್'. ಭಾರತದ ಎರಡು ಪ್ರಬಲ ಪಕ್ಷಗಳ ಮುಂಚೂಣಿ ನಾಯಕರ ಹೆಸರಿನಲ್ಲೇ ಮಾತ್ರೆಗಳು ಹೊರಬಂದಿರುವುದು ಔಷಧಿ ವ್ಯಾಪಾರಸ್ಥರ 'ಮಾರ್ಕೆಟಿಂಗ್' ಬುದ್ಧಿಯೂ ಹೌದು.
'ನಮೋ ಟ್ಯಾಬ್ಲೆಟ್ಸ್' ನಿಮುಸ್ಲೈಡ್ ಮತ್ತು ಪ್ಯಾರಾಸಿಟಮೊಲ್ ಒಳಗೊಂಡಿದ್ದು ಜ್ವರ ಮತ್ತು ತಲೆನೋವನ್ನು ಹೋಗಲಾಡಿಸುತ್ತದೆ. 'ರಾಗಾಫ್ಲೇಮ್' ಮಾತ್ರೆಯಲ್ಲಿ ಡಿಕ್ಲೋಫೆನಾಕ್ ಹಾಗೂ ಪ್ಯಾರಾಸಿಟಮೊಲ್ ಅಂಶವಿದ್ದು ಆಯಾಸವನ್ನು ಪರಿಹರಿಸುವ ಗುಣ ಹೊಂದಿದೆ. ಕಳೆದ ಕೆಲವು ವಾರಗಳಲ್ಲಿ 20 ಲಕ್ಷ ಟ್ಯಾಬ್ಲೆಟ್ಗಳು ಮಾರಾಟವಾಗಿವೆ! ಹಾಗಿದ್ದರೆ ಊಹಿಸಿ, ಎಷ್ಟರಮಟ್ಟಿಗೆ ನಮೋ ಮತ್ತು ರಾಗಾ ಎಫೆಕ್ಟ್ ಜನತೆಯಲ್ಲಿ ಹಬ್ಬಿರಬಹುದೆಂದು.
ಗುರ್ಗಾಂವ್ ಆಧಾರಿತ ಐಸಿಐ ಹೆಲ್ತ್ಕೇರ್ನ ನಿರ್ದೇಶಕ ನವೀನ್ ಜೈನ್ ಹೇಳುವಂತೆ ಔಷಧಗಳಿಗೆ ಇಬ್ಬರು ಮುಖ್ಯ ರಾಜಕಾರಣಿಗಳ ಹೆಸರನ್ನು ನೀಡಿ ಅವರ ಬ್ರ್ಯಾಂಡ್ ವ್ಯಾಲ್ಯೂ ಬಳಕೆ ಮಾಡುವ ಉದ್ದೇಶ ಹೊಂದಿದೆ. ಪಂಜಾಬ್, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಅಸ್ಸಾಂಗಳಲ್ಲಿ ವ್ಯಾಪಕವಾಗಿ ನಮೋ ಮತ್ತು ರಾಗಾಫ್ಲೇಮ್ ಟ್ಯಾಬ್ಲೆಟ್ಗಳು ಖರೀದಿಯಾಗುತ್ತಿವೆ.
ಇಬ್ಬರು ಪ್ರಮುಖ ರಾಜಕಾರಣಿಗಳ ಬ್ರ್ಯಾಂಡ್ನೇಮ್ನ ಟ್ಯಾಬ್ಲೆಟ್ಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಯನ್ನಾಧರಿಸಿ ಪೆನೆಸಿಯಾ ಔಷಧಿಗೆ 'ನಮೋನಿಜೆಲ್' ಎಂದು ಮರುನಾಮಕರಣ ಮಾಡಿದೆ. 'ರಾಹುಲ್ ಮತ್ತು ಮೋದಿ ದೇಶದ ರೋಗಗಳನ್ನು ನಿವಾರಣೆ ಮಾಡಿದರೆ ಸಾಕು. ನಂತರ ನಮ್ಮ ರೋಗಗಳು ತಾನಾಗೇ ನಿವಾರಣೆ ಆಗುತ್ತವೆ' ಎನ್ನುತ್ತಿದ್ದಾರೆ ಮತದಾರ ಬಂಧುಗಳು.
ಹೀಗೆ ಮುಂದುವರಿದರೆ ಕರ್ನಾಟಕದಲ್ಲೂ ಸಿದ್ದು ಫ್ಲೇವರ್, ಕುಮ್ಮಿ ಸಿರಪ್, ಯಡ್ಡಿ ಟ್ಯಾಬ್ಲೇಟ್ ಅಂತ ಶುರುವಾದರೂ ಅಚ್ಚರಿಯಿಲ್ಲ.
-ಮಂಜುನಾಥ್ ಎಲ್. ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

