ಲೈಫ್ ಆಫ್ ಪೈ
'ನಾನು ಸಾವಿಗೆ ಹೆದರಲ್ಲ ಆದರೆ ನೋವಿಗೆ ಹೆದರ್ತೀನಿ' ಹೀಗೆಂದವರು ಕ್ಯಾನ್ಸರನ್ನೇ ಗೆದ್ದುಬಂದ ಲತಾ ಪೈ (9886016438)...

'ನಾನು ಸಾವಿಗೆ ಹೆದರಲ್ಲ ಆದರೆ ನೋವಿಗೆ ಹೆದರ್ತೀನಿ' ಹೀಗೆಂದವರು ಕ್ಯಾನ್ಸರನ್ನೇ ಗೆದ್ದುಬಂದ ಲತಾ ಪೈ (9886016438).
ಲತಾ ಅವರು ಕ್ಯಾನ್ಸರ್ ಮಣಿಸಿದ ಕಥೆ ಎಂಥವರಿಗಾದರೂ ಬದುಕಿನ ಬಗ್ಗೆ ಆಸೆ, ಪ್ರೀತಿ ಮೂಡಿಸುತ್ತದೆ. ಎಷ್ಟೋ ಕ್ಯಾನ್ಸರ್ ರೋಗಿಗಳ ವಿಷಯದಲ್ಲಿ ಕ್ಯಾನ್ಸರ್ ಕೊಲ್ಲುವುದಕ್ಕಿಂತ, ಆ ರೋಗದೆಡೆಗಿನ ಭಯ, ಅದಕ್ಕೆ ನೀಡುವ ಚಿಕಿತ್ಸೆ ಬಗೆಗಿನ ತಪ್ಪು ಕಲ್ಪನೆಗಳೇ ಸಾಯಿಸಿಬಿಡುತ್ತದೆ. ಸರಿಯಾದ ಚಿಕಿತ್ಸೆಯೊಂದಿಗೆ ಗಟ್ಟಿಯಾದ ಮನೋಬಲ ಹೊಂದಿದ್ದರೆ ಅದನ್ನು ಜಯಿಸುವುದು ಕಷ್ಟವೇನಲ್ಲ. ಅದಕ್ಕೆ ಉದಾಹರಣೆ ಲತಾ ಪೈ. ಕ್ಯಾನ್ಸರ್ ಇದೆ ಎಂದಾಕ್ಷಣ ಅವರು ಕುಸಿದುಹೋಗಲಿಲ್ಲ, ಹೊಸ ಬದುಕು ಶುರುವಾಯ್ತು ಅಂದುಕೊಂಡರು.
'ಮೂರು ವರ್ಷ ಹಿಂದೆ ನನಗೆ ಶ್ವಾಸಕೋಶದ ಕ್ಯಾನ್ಸರ್ ಎಂದು ವೈದ್ಯರು ತಿಳಿಸಿದಾಗ ಸ್ವಲ್ಪ ಕಂಗಾಲಾಗಿದ್ದು ನಿಜ. ಹತ್ತಿರದಲ್ಲೇ ಇರುವ ಸಾವಿಗಿಂತ ರೋಗದ ಚಿಕಿತ್ಸೆಯ ನೋವನ್ನು ನೆನೆದು ಹೆದರಿದ್ದೆ. ಏಕೆಂದರೆ ನೋವಿಗೆ ಹೆದರ್ತೀನಿ. ಆದರೆ ವೈದ್ಯರ ಹಾಗೂ ಕುಟುಂಬದವರ ಧೈರ್ಯ, ಸಾಂತ್ವನ ಎದೆಗುಂದದಂತೆ ಮಾಡಿತು. ಅಂದಿನಿಂದ ನನ್ನ ಚಿಂತನೆಯನ್ನೇ ಬದಲಿಸಿಕೊಂಡೆ. ಜೀವನದ ಬಗ್ಗೆ ವಿಭಿನ್ನವಾಗಿ ಯೋಚಿಸಲಾರಂಭಿಸಿದೆ. ಕ್ಯಾನ್ಸರ್ ನನ್ನೊಳಗೆ ಇಲ್ಲವೆಂದೇ ಭಾವಿಸಲಾರಂಭಿಸಿದೆ. ಇರುವ ಸಮಸ್ಯೆಯನ್ನು ಇಲ್ಲವೆಂದು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟವಾಯ್ತು. ಮನೋಬಲದಿಂದ ಮಾತ್ರ ಕ್ಯಾನ್ಸರ್ ಕಣಗಳ ಜತೆ ಹೋರಾಡಬಹುದು, ಅಂಥ ಹೋರಾಟ ಮಾತ್ರ ಗೆಲುವಿನ ದಡಕ್ಕೆ ತಂದು ನಿಲ್ಲಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡೆ. ಆಗ ನನ್ನಲ್ಲಿ ಬೇಸರ, ಅಸಹನೆ, ವಿಷಾದ, ಕೊರಗು, ನೋವು, ಹಳಹಳಿಕೆ ಮಾಯವಾಗುತ್ತಾ ಹೋದವು. ಈಗ ವೈದ್ಯರಿಗೇ ಅಚ್ಚರಿಯೆನಿಸುವಂತೆ ಕ್ಯಾನ್ಸರ್ ನನ್ನ ದೇಹದಿಂದ ಕಾಲ್ಕಿತ್ತಿದೆ! ಮನೋಬಲವೊಂದಿದ್ದರೆ ಕ್ಯಾನ್ಸರ್ ಯಾವ ಮಹಾ?!' ಎಂದು ಕ್ಯಾನ್ಸರ್ ಗೆದ್ದ ಖುಷಿಯಲ್ಲಿ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಲತಾ.
ಸಾವು ಎದುರಿಗಿದೆ ಎಂದಾಗ ಎಂಥವರಿಗಾದರೂ ಶಾಕ್ ಆಗುವುದು ಸಹಜ. ಚಿಂತೆ, ಹೆದರಿಕೆಯ ಕೈಗೆ ಮನಸ್ಸು ಕೊಡದೆ, ಮನೋಬಲ ಹೆಚ್ಚಿಸಿಕೊಂಡರೆ ಕ್ಯಾನ್ಸರ್ ಹಿಮ್ಮೆಟ್ಟಿಸಬಹುದು. ಅಂತಹ ಧಾರಣಶಕ್ತಿಯಿಂದಲೇ ಆರೋಗ್ಯವನ್ನು ಮರುಪಡೆದ ಲತಾ ಪೈ ಅವರಿಗೀಗ 65 ವರ್ಷ. ದೂರದರ್ಶನದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಲತಾ ಅವರೀಗ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದಾರೆ. ಎಂಟು ಕಂತುಗಳ ಈ ಕಾರ್ಯಕ್ರಮ ದೂರದರ್ಶನ ಚಂದನದಲ್ಲಿ ಪ್ರಸಾರವಾಗುತ್ತಿದೆ.
ಯಾವ ವಯಸ್ಸಿನಲ್ಲಿ ಯಾರಿಗೆ ಬೇಕಾದರೂ ಬರಬಹುದಾದಂಥ ಈ ಕಾಯಿಲೆ ಬಂದಾಗ ಯಾವ ಯಾವ ಹಂತಗಳಲ್ಲಿ, ಯಾವ ಯಾವ ಚಿಕಿತ್ಸೆ ಪಡೆದುಕೊಳ್ಳಬೇಕು? ಅದಕ್ಕೆ ಚಿಕಿತ್ಸೆ ಯಾವ ರೀತಿಯದು? ಎಲ್ಲೆಲ್ಲಿ ಚಿಕಿತ್ಸೆಯ ಸೌಲಭ್ಯವಿದೆ? ತಗಲುವ ವೆಚ್ಚವೆಷ್ಟು? ಸರ್ಕಾರದಿಂದ ಸಿಗುವ ಸಹಾಯ, ಮಾನಸಿಕ ಸಿದ್ಧತೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ವಿವರವಾಗಿ ತಿಳಿಸಿಕೊಡಲಾಗಿದೆ.
ಪ್ರತಿ ಕಂತಿನಲ್ಲೂ ಒಂದೊಂದು ಬಗೆಯ ಕ್ಯಾನ್ಸರ್ ಬಗ್ಗೆ ಮಾಹಿತಿ, ಸಲಹೆ, ಚಿಕಿತ್ಸೆ ಹೇಳಲಾಗಿದೆ. ಕ್ಯಾನ್ಸರ್ ಗೆದ್ದುಬಂದವರೇ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಜತೆಗೆ ತಜ್ಞ ವೈದ್ಯರು ಮಾತನಾಡಿ ಸಲಹೆ, ಸೂಚನೆ, ಚಿಕಿತ್ಸೆಯ ಬಗ್ಗೆ ವಿವರ ನೀಡಿದ್ದಾರೆ.
ಕ್ಯಾನ್ಸರ್ಮುಕ್ತರಾದ ನಂತರ ಲತಾ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡಿ ಕ್ಯಾನ್ಸರ್ ಬಾಧಿತರನ್ನು ಭೇಟಿಯಾಗಿ ಅವರಿಗೆ ಧೈರ್ಯ, ತಿಳಿವಳಿಕೆ, ಸಹಾಯ, ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ತಮ ಜೀವನಶೈಲಿ
ಕ್ಯಾನ್ಸರ್ ರೋಗಿಗಳಿಗೆ ಔಷಧ, ಚಿಕಿತ್ಸೆ, ಆಹಾರ ಪದ್ಧತಿ ಜತೆಗೆ ದೈನಂದಿನ ವ್ಯಾಯಾಮ ನಿತ್ಯದ ಬದುಕಿನ ಭಾಗವಾಗಬೇಕು. ನಮ್ಮ ದೇಹವನ್ನು ಪ್ರೀತಿಸಬೇಕು, ಸಂತೈಸಬೇಕು. ಮನೆಯವರ ಧೈರ್ಯ, ಪ್ರೀತಿ ಕೂಡ ಅಷ್ಟೇ ಮಹತ್ವದ್ದು. ಕ್ಯಾನ್ಸರ್ ಪತ್ತೆಯಾದ ತಕ್ಷಣ 'ಕ್ಯಾನ್ಸರ್ ಇದೆಯಂತೆ, ಬದುಕುವ ಸಾಧ್ಯತೆ ಇನ್ನು ಕಡಿಮೆ' ಎಂಬ ಅವೈಜ್ಞಾನಿಕ ಯೋಚನೆಯನ್ನು ಬಿಡಬೇಕು. ಕ್ಯಾನ್ಸರ್ ಕೂಡ ಗುಣಪಡಿಸಬಲ್ಲ ಕಾಯಿಲೆ ಎಂಬ ಬಗ್ಗೆ ರೋಗಿಗಳಿಗೆ ಮನವರಿಕೆ ಮಾಡಿಕೊಡಿ, ಧೈರ್ಯ ನೀಡಿ ಎನ್ನುತ್ತಾರೆ ಲತಾ.
ಕಿವಿಮಾತು
ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಆರಂಭಿಕ ಹಂತದಲ್ಲೇ ರೋಗಪತ್ತೆ ಮಾಡುವುದು ಕೂಡ ಅತ್ಯಂತ ಅವಶ್ಯಕ. ನಮ್ಮಲ್ಲಿ ಹೆಚ್ಚಿನ ಕ್ಯಾನ್ಸರ್ ಪತ್ತೆಯಾಗುವುದೇ 3-4ನೇ ಹಂತಗಳಲ್ಲಿ. ಹಾಗಾಗಿ ವೈದ್ಯರನ್ನು ಮುಖತಃ ಭೇಟಿಯಾಗಿ ಚರ್ಚಿಸಿ. ಸ್ಥಳೀಯವಾಗಿ ಲಭ್ಯವಿರುವ ಔಷಧಗಳು ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲದು ಎಂಬುದು ತಪ್ಪು ತಿಳಿವಳಿಕೆ. ರೋಗ ಪತ್ತೆಯಾದಾಗ ಕೇವಲ ಆಯುರ್ವೇದ ಅಥವಾ ಹೋಮಿಯೋಪಥಿ ಅವಲಂಬಿಸುವುದು ತರವಲ್ಲ. ಯಾರ್ಯಾರದೋ ಮಾತು ಕೇಳಿ ಸ್ವಯಂ ವೈದ್ಯ ಬೇಡ ಎಂಬ ಕಿವಿಮಾತು ಹೇಳುತ್ತಾರೆ.
ಈಗ ವೈದ್ಯವಿಜ್ಞಾನ ತುಂಬಾ ಮುಂದುವರಿದಿದೆ. ಅತ್ಯಾಧುನಿಕ ಸೌಲಭ್ಯ, ಔಷಧ ಹೊಸ ಚಿಕಿತ್ಸಾ ತಂತ್ರಜ್ಞಾನಗಳು ಲಭ್ಯವಿವೆ. ನಾನು ಆರು ಬಾರಿ ಕಿಮೋಥೆರಪಿ ತೆಗೆದುಕೊಂಡಿದ್ದೇನೆ. ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ನನಗೆ ತಲೆಯ ಕೂದಲು ಉದುರುವುದಾಗಲೀ, ಅಸಿಡಿಟಿಯಂಥ ಅಡ್ಡ ಪರಿಣಾಮಗಳಾಗಲಿ ಆಗಲೇಇಲ್ಲ. ದೈಹಿಕವಾಗಿ-ಮಾನಸಿಕವಾಗಿ ಕಿಂಚಿತ್ತೂ ನೋವಾಗಲಿಲ್ಲ.
- ಲತಾ ಪೈ
ಪ್ರಣತಿ
'ಕ್ಯಾನ್ಸರ್, ಹೆದರಬೇಕಿಲ್ಲ ಬಿಡಿ' ಎಂಬ ಧ್ಯೇಯವಾಕ್ಯದೊಂದಿಗೆ ದೂರದರ್ಶನ ಚಂದನದಲ್ಲಿ 'ಪ್ರಣತಿ' ಕಾರ್ಯಕ್ರಮ ಪ್ರತಿ ಶುಕ್ರವಾರ ಪ್ರಸಾರವಾಗುತ್ತಿದೆ. ಎಂಟು ಕಂತುಗಳ ಈ ಕಾರ್ಯಕ್ರಮದ ಕೊನೆಯ ಕಂತು ಏಪ್ರಿಲ್ 25ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
-ಶಶಿರೇಖಾ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


