ಮೆದುಳಿನ ಶಕ್ತಿ ಇರುವುದು ಆಹಾರದಲ್ಲಿ!

ಮೆದುಳು ಎಷ್ಟು ಆರೋಗ್ಯಕರವಾಗಿರುತ್ತದೆ ಎನ್ನುವುದು ನೀವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ. ಇದು ಆಧುನಿಕ ಕಾಲದ ಸಂಶೋಧನೆಗಳಿಂದ ನಿರೂಪಿತವಾಗಿರುವ ಸಂಗತಿ. ನೀವು ಏನು ಸೇವಿಸುತ್ತೀರಿ ಎನ್ನುವುದು ನಿಮ್ಮ ಜ್ಞಾಪಕಶಕ್ತಿ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ನಿಮ್ಮ ಆಹಾರ ನೀವು ಯಾವ ರೀತಿ ಅಲರ್ಟ್ ಆಗಿರುತ್ತೀರಿ (ಜಾಗೃತಾವಸ್ಥೆಯಲ್ಲಿರುತ್ತೀರಿ) ಎಂಬುದನ್ನು ಹೇಳುತ್ತದೆ. ನೀವು ಖಿನ್ನತೆ, ಒತ್ತಡಗಳಿಗೆ ಒಳಗಾಗಿದ್ದರೆ; ಆಕ್ರಮಣಕಾರಿ ಮನೋಭಾವವನ್ನು ಆಗಾಗ ತೋರ್ಪಡಿಸುತ್ತಿದ್ದರೆ; ನಿಮ್ಮ ಮೆದುಳು ಅಬ್ನಾರ್ಮಲ್ ಆಗಿದ್ದರೆ; ನಿಮ್ಮ ಮಾನಸಿಕ ಆರೋಗ್ಯದಲ್ಲಿ ಆಗಾಗ ಏರುಪೇರು ಉಂಟಾಗುತ್ತಿದ್ದರೆ ಅದಕ್ಕೆಲ್ಲ ಕಾರಣ ನೀವು ನಿತ್ಯ ಸೇವಿಸುವ ಆಹಾರ. ಕೆಲವು ಸಲ ನರ ಸಂಬಂಧಿ ತೊಂದರೆಗಳಿಗೂ ಆಹಾರವೇ ಕಾರಣ ಎನ್ನುವುದು ಸಂಶೋಧಕರ ಅಭಿಮತ. ಅದರಲ್ಲೂ ಪ್ರೊಟೀನ್, ಕಾರ್ಬೊಹೈಡ್ರೇಟ್, ಕೊಬ್ಬು, ಕೆಫಿನ್ ಇವು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುವ ಪ್ರಮುಖ ಅಂಶಗಳು. ಇತ್ತೀಚಿನ ಸಂಶೋಧನೆಗಳಂತೂ ಇವಿಷ್ಟೇ ಅಲ್ಲದೆ ಆಹಾರದಲ್ಲಿನ ಇನ್ನೂ ಕೆಲವು ಅಗೋಚರ ಸಂಗತಿಗಳು ಮೆದುಳಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿವೆ. ಆಹಾರ ಎಂದರೆ ಕೇವಲ ದೈಹಿಕ ಆರೋಗ್ಯ, ದೈಹಿಕ ಬೆಳವಣಿಗೆಗೆ ಸಂಬಂಧಿಸಿದ್ದು ಎನ್ನುವ ಭಾವನೆಗಳನ್ನು ಈ ಸಂಶೋಧನೆಗಳು ಸುಳ್ಳಾಗಿಸಿವೆ ಎಂದು ನಿಶ್ಚಿತವಾಗಿಯೂ ಹೇಳಬಹುದು. ಹೀಗಾಗಿ ನಮ್ಮ ಮಾನಸಿಕ ಆರೋಗ್ಯವನ್ನು ನಾವು ಆಹಾರದ ಮೂಲಕವೇ ನಿಯಂತ್ರಿಸಿಕೊಳ್ಳುವುದು ಸಾಧ್ಯವಿದೆ ಎಂದಾಯಿತು.
ಆಹಾರಕ್ಕೂ, ಮೆದುಳಿಗೂ ಇರುವ ಸಂಬಂಧದ ರಹಸ್ಯ ಅಡಗಿರುವುದು ನ್ಯೂರೊ ಟ್ರಾನ್ಸ್ಮೀಟರ್ಗಳಲ್ಲಿ. ಇವು ಆಹಾರದಲ್ಲಿನ ರಾಸಾಯನಿಕಗಳ ಮೂಲಕ ಕೋಶಗಳ ನೆರವಿನಿಂದ ಮೆದುಳಿಗೆ ಮಾಹಿತಿ ರವಾನಿಸುತ್ತವೆ. ನರಗಳಲ್ಲಿನ ಕೋಶಗಳೇ ಆಹಾರದಲ್ಲಿನ ಕೆಲವು ನಿರ್ದಿಷ್ಟ ಪದಾರ್ಥಗಳನ್ನು ಕಚ್ಛಾ ಸಾಮಗ್ರಿ ರೂಪದಲ್ಲಿ ಬಳಸಿಕೊಂಡು ನ್ಯೂರೊಟ್ರಾನ್ಸರ್ಮೀಟರ್ಗಳನ್ನು ಸೃಷ್ಟಿಸಿಕೊಳ್ಳುತ್ತವೆ. ಇಂಥ ಕಚ್ಛಾ ಸಾಮಗ್ರಿಗಳಲ್ಲಿ ಮುನ್ಸೂಚಕ (ಪ್ರೀ ಕರ್ಸರ್) ಗುಣ ಇರುತ್ತದೆ ಎನ್ನುವುದೂ ವೈಜ್ಞಾನಿಕ ಆವಿಷ್ಕಾರವೇ. ಆಹಾರದ ಮೂಲಕ ಯಾವ ರೀತಿಯ ಕಚ್ಛಾ ಸಾಮಗ್ರಿ ಸಿಗುತ್ತದೆಯೋ ಅದನ್ನು ಆಧರಿಸಿ ನರಕೋಶಗಳು ಭಿನ್ನ ರೀತಿಯ ನ್ಯೂರೋಟ್ರಾನ್ಸ್ಮೀಟರ್ಗಳನ್ನು ಸೃಷ್ಟಿಸಿಕೊಳ್ಳುತ್ತವೆ.
ಮೆದುಳಿನ ಆರೋಗ್ಯ ಮತ್ತು ಆಹಾರದ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಆದರೆ ಇಂಥ ಸಂಶೋಧನೆಗಳ ಪಿತಾಮಹ ಎಂದು ಕೇಬ್ರಿಡ್ಜ್ನ ನ್ಯೂರೊ ಎಂಡೊಕ್ರಿನಾಲಜಿಸ್ಟ್ ರಿಚರ್ಡ್ ವರ್ತ್ಮನ್ ಅವರನ್ನು ಹೆಸರಿಸಬಹುದು. ಈ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


