ಮ್ಯಾಕ್ಸ್ ವೆಲ್ ಸೀಕ್ರೆಟ್ ಏನು?

ಕಳೆದ ಬಾರಿಯ ಐಪಿಎಲ್ನಲ್ಲಿ 'ಗೇಲ್' ಚಂಡಮಾರುತ ಬೀಸಿತ್ತು. ಈ ಬಾರಿ 'ಗ್ಲೆನ್' ಚಂಡಮಾರುತ ಬೀಸುತ್ತಿದೆ! ಅದೂ ಪಂಜಾಬ್ ಕಡೆಯಿಂದ!
ಗ್ಲೆನ್ ಮ್ಯಾಕ್ಸ್ವೆಲ್! ಐಪಿಎಲ್ನ ಏಳನೇ ಆವೃತ್ತಿಯಲ್ಲಿ ಈತನ ಅಬ್ಬರದ್ದೇ ಸುದ್ದಿ. ಸೆಂಚುರಿ ಮಾಡೋದಿಲ್ಲ ಅಂತ ಬಿಟ್ಟರೆ, ಮೈದಾನದಲ್ಲಿ ಒಂದಿಷ್ಟು ಚಪ್ಪಾಳೆಗೇನೂ ಕಮ್ಮಿ ಮಾಡೋದಿಲ್ಲ ಈತ. ಆಕಾಶದ ಜೊತೆಗೇನೋ ಅಗ್ರೀಮೆಂಟ್ ಆದವನ ರೀತಿ ಸಿಕ್ಸರ್ ಬಾರಿಸುತ್ತಾನೆ. ಈತನ ಇಷ್ಟೆಲ್ಲ ಯಶಸ್ಸಿನ ಹಿಂದೊಬ್ಬಳು ಸ್ತ್ರೀ ಇದ್ದಾಳೆ ಅನ್ನೋದು ನಿಮಗೆ ಗೊತ್ತಾ? ಮ್ಯಾಕ್ಸ್ವೆಲ್ನ ಬ್ಯಾಟಿಂಗ್ ಪ್ರಾಬಲ್ಯದ ಹಿಂದಿರುವ ಪ್ರೇರಕ ಮತ್ತು ಚುಂಬಕ ಶಕ್ತಿ ಪ್ರೀತಿ ಜಿಂಟಾ! ಪ್ರೀತಿ ಜಿಂಟಾ ಎಂದಷ್ಟೇ ಹೇಳಿದರೆ ಸಾಲದು. ಪ್ರೀತಿಯ ಅಪ್ಪುಗೆ ಎಂದರಷ್ಟೇ ಸ್ಪಷ್ಟತೆ ಸಿಗುತ್ತದೆ.
ಪಂಜಾಬ್ ತಂಡದ ಫ್ರಾಂಚೈಸಿ ಆಗಿರುವ ಪ್ರೀತಿ ಜಿಂಟಾಗೆ ತನ್ನ ಆಟಗಾರರನ್ನು ಹೇಗೆ ಹುರಿದುಂಬಿಸಬೇಕೆಂಬುದು ಚೆನ್ನಾಗಿ ಗೊತ್ತು. ಆಟಗಾರರನ್ನು ಆತ್ಮೀಯತೆಯಿಂದ ಅಪ್ಪಿಕೊಳ್ಳುತ್ತಾ ಏನೋ ಶಕ್ತಿ ವರ್ಗಾಯಿಸುತ್ತಾಳೆ. ಪ್ರೀತಿಯನ್ನು ಹಾಗೆ ಆಲಂಗಿಸಿಕೊಂಡವರೆಲ್ಲ ಆ ಐಪಿಎಲ್ನಲ್ಲಿ ಆರ್ಭಟಿಸಿದ್ದಾರೆ. ಹಾಗಾದರೆ, ಪ್ರೀತಿಯ ಅಪ್ಪುಗೆಯಲ್ಲಿ ಏನಿದೆ?
ಸ್ವಲ್ಪ ಹಿಂದಕ್ಕೆ ಹೋಗಿ. ಮೊದಲ ಐಪಿಎಲ್ನಲ್ಲಿ ಪಂಜಾಬ್ ಟೀಂನಲ್ಲಿದ್ದ ಯುವರಾಜ್ ಸಿಂಗ್ ಸ್ಫೋಟಿಸಲಿಲ್ಲವೇ? ಟಿ-20 ವಿಶ್ವಕಪ್ನಲ್ಲಿ ಒಂದು ಓವರ್ನ ಆರೂ ಚೆಂಡುಗಳನ್ನು ಸಿಕ್ಸರ್ಗಟ್ಟಿದ ಕರಾಮತ್ತನ್ನು ಅಲ್ಲೂ ತುಸುಮಟ್ಟಿಗೆ ಉಳಿಸಿಕೊಂಡಿದ್ದರು ಯುವರಾಜ್. ಆಡಿದ 15 ಐಪಿಎಲ್ ಪಂದ್ಯಗಳಲ್ಲಿ 19 ಸಿಕ್ಸರ್ ಬಾರಿಸಿ ಮಿಂಚಿದ್ದರು. ಆ ಅಮಾನುಷ ಶಕ್ತಿಯ ಹಿಂದೆ ಇದ್ದಿದ್ದು 'ಪ್ರೀತಿ'ಯ ಆಲಿಂಗನ! ಹೆಚ್ಚಾದರೆ ಅಮೃತವೂ ವಿಷ ಎನ್ನುವಂತಾಗಿದ್ದು ಬೇರೆಮಾತು! 'ಪ್ರೀತಿ ಮತ್ತು ಯುವರಾಜ್ ಕ್ರೀಡಾಂಗಣದ ಹೊರಗೇನು ಮಾಡುತ್ತಿದ್ದಾರೆ?' ಎಂಬ ಪ್ರಶ್ನೆಯ ಆಧಾರದಲ್ಲಿ ಪುಟಗಟ್ಟಲೆ ಲೇಖನಗಳೂ ಬಂದವು. ವಾಹಿನಿಗಳೂ ಟಿಆರ್ಪಿ ಹೆಚ್ಚಿಸಿಕೊಂಡವು. ವಿಪರ್ಯಾಸ ನೋಡಿ, ಪ್ರೀತಿ ದೂರವಾದಂತೆ ಯುವರಾಜನ ಆರ್ಭಟವೂ ಕ್ಷೀಣಿಸುತ್ತಾ ಬಂತು! ಸದ್ಯ ಬೆಂಗಳೂರು ಪರವಾಗಿ ಆಡುತ್ತಿರುವ ಯುವರಾಜ್ ಅಂಥ ಪ್ರದರ್ಶವನ್ನೇನೂ ನೀಡುತ್ತಿಲ್ಲ. ಫ್ರಾಂಚೈಸಿ ವಿಜಯ್ ಮಲ್ಯನಿಗೆ ಮಗನಿರುವ ಕಾರಣಕ್ಕೋ ಏನೋ?
ಒಂದೊಮ್ಮೆ ಇರ್ಫಾನ್ ಪಠಾಣ್ ಐಪಿಎಲ್ನ ಜಬರ್ದಸ್ತ್ ಬೌಲರ್. ಕರಾರುವಾಕ್ ಬೌಲಿಂಗ್, ಪಿಂಚ್ ಹಿಟರ್ ಾಗಿಬಂದು ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಪಂಜಾಬ್ಗೆ ಹಲವು ಗೆಲುವುಗಳನ್ನು ತಂದಿದ್ದರು. ಪ್ರೀತಿ ಜಿಂಟಾರ ಅಪ್ಪುಗೆ ಇರ್ಫಾನ್ ಬೌಲಿಂಗ್ ವೇಗವನ್ನೂ ಹೆಚ್ಚಿಸಿತ್ತು. ಮತ್ತಷ್ಟು ಆಲಿಂಗನದ ಸುಖಕ್ಕಾಗಿ ಅವಿರತ ಪ್ರಯತ್ನ ನಡೆಸಿದ್ದರು ಪಠಾಣ್. ಸ್ಪಿನ್ ಮಾಂತ್ರಿಕ ಪಿಯೂಶ್ ಚಾವ್ಲಾ, ಪ್ರೀತಿಯ ಅಪ್ಪುಗೆ ಪಡೆಯುವಂಥ ಆಟವನ್ನೇ ಆಡಿದ್ದರು. 'ಪಂಜಾಬ್ನವರು ಐಪಿಎಲ್ ಗೆಲ್ಲದಿದ್ದರೂ ಸರಿ, ಪ್ರೀತಿಯನ್ನು ಅಪ್ಪಿಕೊಳ್ಳಲೇಬೇಕೆಂಬ ಬರದಲ್ಲಿ ಆಡುತ್ತಿದ್ದಾರೆ' ಎಂಬ ಅನುಮಾನ ಕಾಡದೆ ಇರದು. ಆಸೀಸ್ನ ಆ್ಯಡಂ ಗಿಲ್ಕ್ರಿಸ್ಟ್ರನ್ನು ಜಿಂಟಾ ಬರಸೆಳೆದು ಅಪ್ಪಿಕೊಂಡಾಗ ಉಳಿದ ತಂಡದ ಆಟಗಾರರು 'ಆಡಿದರೆ ಪಂಜಾಬ್ ತಂಡದ ಪರ ಆಡಬೇಕು!' ಎಂದು ಮನಸ್ಸಲ್ಲೇ ಕರುಬಿದ್ದರು.
ಪ್ರೀತಿ ಜಿಂಟಾ ತನ್ನ ತಂಡದ ಆಟಗಾರರನ್ನು ಅಪ್ಪಿಕೊಳ್ಳುತ್ತ 'ಹಗ್ಗಿಂಗ್ ಜಮಾನ' ಸೃಷ್ಟಿಸಿ ಹುರಿದುಂಬಿಸುತ್ತಿದ್ದ ಪರಿಗೆ ಬೆರಗಾಗಿದ್ದು ಶಿಲ್ಪಾ ಶೆಟ್ಟಿ. ತಾನೇನು ಕಮ್ಮಿ ಎಂಬಂತೆ ರಾಯಲ್ಸ್ ಆಟಗಾರಿಗೆ ಶಿಲ್ಪ ತನ್ನ 'ಬಾಹುಸುಖ' ನೀಡಲಾರಂಭಿಸಿದಳು. ಆಟಗಾರರನ್ನು ಬಾಚಿ ಬಾಚಿ ಅಪ್ಪಿಕೊಳ್ಳುತ್ತಿದ್ದರೆ ಇತ್ತ ರಾಜ್ ಕುಂದ್ರಾ ಹ್ಯಾಪ್ ಮೋರೆ ಹಾಕಿಕೊಂಡು ಕೈಕುಲುಕುವುದು ಕಾಣಿಸುತ್ತದೆ. ಸಾವಿರ ಹುಡುಗಿಯರನ್ನು ಅನುಭವಿಸಿದ ಶೇನ್ವಾರ್ನ್ನನ್ನು ಶಿಲ್ಪಾ ತಬ್ಬಿಕೊಂಡಾಗ, ರಾಜ್ ಕುಂದ್ರಾ ತಬ್ಬಿಬ್ಬಾಗಿದ್ದು ಸುಳ್ಳಲ್ಲ!
ಕುಮಾರ ಸಂಗಕ್ಕಾರನೂ ಪ್ರೀತಿ ಅಪ್ಪುಗೆಯ ಸಂಗ ಪಡೆದ ಆಟಗಾರರಲ್ಲಿ ಒಬ್ಬ. ಅಂದಹಾಗೆ, ಬೇರೆಲ್ಲ ದೇಶಕ್ಕಿಂತ ಆಸ್ಟ್ರೇಲಿಯಾ ಆಟಗಾರರರೇ ಹೆಚ್ಚಾಗಿ ಪ್ರೀತಿಯನ್ನು ಆಲಂಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬ್ರೆಟ್ ಲೀ, ಶಾನ್ ಮಾರ್ಶ್ ಪ್ರೀತಿ ಆಲಿಂಗನದಲ್ಲಿ ತೇಲಿ ಮಿಂಚಿದವರು. ಹೀಗೆ ತಂಡದ ಸದಸ್ಯರನ್ನು ತಬ್ಬಿಕೊಳ್ಳುತ್ತ ಸ್ಫೋಟಕ ಆಟಕ್ಕೆ ಸ್ಫೂರ್ತಿಯಾಗಿ ನಿಂತಿರುವ ಪ್ರೀತಿ ಜಿಂಟಾ, ಈ ಬಾರಿ ಮ್ಯಾಕ್ಸ್ವೆಲ್ನತ್ತ ಮುಖಮಾಡಿದ್ದಾಳೆ. ಪ್ರೀತಿಯ ದೇಹ ಸ್ಪರ್ಶಕ್ಕಾಗಿಯೇ ಗ್ಲೆನ್ ಮ್ಯಾಕ್ಸ್ವೆಲ್ ಬಿರುಸಿನ ಆಟ ಆಡುತ್ತಿದ್ದಾನೆ ಎಂದು ಆತನಿಂದ ಚಚ್ಚಿಸಿಕೊಂಡ ಬೌಲರ್ಗಳು ಆಡಿಕೊಳ್ಳುತ್ತಿದ್ದಾರಂತೆ.
ವಿಜಯ್ ಮಲ್ಯ ತಂಡದ ಸದಸ್ಯನಾಗಿರುವ ವಿರಾಟ್ ಕೋಹ್ಲಿ 'ಬಿರುಸಿನಿಂದ ಸಿಕ್ಸರ್ ಹೊಡೆದು ನಾನ್ಯಾರನ್ನು ತಬ್ಬಿಕೊಳ್ಳಲಿ?' ಎನ್ನುತ್ತ ವ್ಯಥೆಯಿಂದ ಯುವರಾಜ್ನನ್ನೇ ತಬ್ಬಿಕೊಳ್ಳುತ್ತಿದ್ದಾರಂತೆ! ಸ್ವಾರಸ್ಯಕರ ವಿಚಾರವೆಂದರೆ, ಪ್ರೀತಿ ಜಿಂಟಾ ತಬ್ಬಿಕೊಂಡ ಹೆಚ್ಚಿನ ಆಟಗಾರರು ಕೆಲ ಕಾಲ ಮಿಂಚುತ್ತಾರೆ. ನಂತರ ಪಂಜಾಬ್ನಿಂದ ಹೊರ ಬೀಳುತ್ತಾರೆ! ಜಿಂಟಾ ಆಟಗಾರರನ್ನು ಬಾಚಿ ಬಾಚಿ ಅಪ್ಪಿಕೊಳ್ಳುತ್ತಿದ್ದಂತೆ ನೆಸ್ ವಾಡಿಯಾ ಮುಖ ಕಿವುಚಿಕೊಳ್ಳುತ್ತಿದ್ದಾರೆ. ಹೆಸರಿಗೆ ಮಾಜಿ ಪ್ರೇಯಸಿ ಎಂದಾದರೂ ಪ್ರೀತಿಸಿದ ಮನಸ್ಸು ಕೇಳಬೇಕಲ್ಲ ಸಾರ್...
-ಮಂಜುನಾಥ ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


