ಸುವರ್ಣಾಕ್ಷತೆ

79ನೇ ಅಟಾಮಿಕ್ ನಂಬರ್, ಮಿನರಲ್, ಕೆಮಿಕಲ್ ಎಂದೆಲ್ಲ ಕ್ಲಾಸ್ರೂಂನಲ್ಲಿ ಕೂರಿಸಿ ಕೊರೆದರೆ ನಮಗೆ ಬೋರಾಗಬಹುದು. ಅದೇ ಅಚ್ಚಕನ್ನಡದಲ್ಲಿ ಬಂಗಾರ ಎನ್ನಲಿ, ಭಾರತೀಯರಾದ ನಮ್ಮೆಲ್ಲರ ಭಾವಕೋಶ ಎಚ್ಚೆತ್ತುಕೊಳ್ಳುತ್ತದೆ.
ಮನಃಶಾಸ್ತ್ರದಲ್ಲಿ ಮಾನಸಿಕ ಅಸ್ವಸ್ಥರ ಮನಸ್ಸನ್ನು ಬಿಡಿಸಿ ನೋಡಲು ಒಂದು ತಂತ್ರ ಇದೆ. ಅದರಂತೆ ಒಂದು ಪದ ಕೇಳಿದರೆ ಯೋಚಿಸದೆ ಬಾಯಿಗೆ ಬರುವ ಇನ್ನೊಂದು ಪದ ಹೇಳಬೇಕು. ರೋಗಿಯ ಉತ್ತರದ ಅನಾಲಿಸಿಸ್ ಮೂಲಕ ಆತನ ಮನಸ್ಸನ್ನು ಶೋಧಿಸಲಾಗುತ್ತದೆ. ಹಾಗೇ ಭಾರತೀಯರ ಬಳಿ 'ಚಿನ್ನ'ವೆಂದರೆ ಮದುವೆ, ಹುಡುಗಿ, ಆಡಂಬರ, ಆಸ್ತಿ, ಹೆಮ್ಮೆ, ರಾಜರಾಣಿ, ಚೆಲುವು, ಪ್ರೀತಿ, ಸೌಂದರ್ಯ, ಬದುಕು, ದುಡಿಮೆ- ಹೀಗೆ ಹಲವಾರು ಪದಗಳು ಹೊರಬರಬಹುದು.
ಏಕೆಂದರೆ ನಮ್ಮ ನಡುವೆ ಆಕೆಯಿದ್ದಾಳೆ, ಕರಿಮಣಿ ಧರಿಸಿದ ಕೊರಳಿಗೆ ಚಿನ್ನದ ತಾಳಿಯೊಂದನ್ನು ಮಾಡಿಸಿ ತೊಡಿಸಿಕೊಳ್ಳುವುದೊಂದೇ ಆಕೆಯ ಜೀವನದ ಏಕೈಕ ಕನಸು. ಅಕ್ಕಪಕ್ಕದ ಮನೆಯವರ ಕೊರಳನ್ನು ನೋಡುವಾಗ ಕಣ್ಗಳಲ್ಲಿ ಆಸೆ ಹುಟ್ಟುತ್ತದೆ, ಅಸೂಯೆ ಇಣುಕುತ್ತದೆ. ಅವನಿದ್ದಾನೆ, ಜೀವನದ ಕೊನೆಯ ಉಸಿರಿನವರೆಗೂ ಹೆಂಡತಿಗೆ ಚಿನ್ನದ ಓಲೆಯೊಂದನ್ನು ಮಾಡಿಸಲೋಸುಗವೇ ದುಡಿದು ಕೊನೆಗೂ ಕೈಚೆಲ್ಲಿದವ. ಮತ್ತೊಬ್ಬಳು ಬಡ್ಡಿ ಬಂಗಾರಮ್ಮ, ಮೈ ತುಂಬಾ ಬಂಗಾರ ಹೇರಿಕೊಂಡು ದರ್ಪ ಮೆರೆವವಳು, ಅವಳ ಬಂಗಾರ ಇಡೀ ಊರೊಂದರ ಮಾತಿಗೆ, ಶಾಪಕ್ಕೆ, ಭಯಕ್ಕೆ, ಸಾಲದ ಬದುಕಿಗೆ, ದುರಂತಕ್ಕೆ ಅನಾಯಾಸವಾಗಿ ಕಾರಣವಾಗಿ ಬಿಡುತ್ತದೆ.
ಇನ್ನು ಆಕೆ ಮದುವೆಯಾಗುವ ಯುವಕನ ವಿದ್ಯೆ, ಗುಣ, ರೂಪ, ಶ್ರೀಮಂತಿಕೆ ಎಲ್ಲವನ್ನೂ ಹುಡುಗಿ ಮನೆಯವರು ಕೊಡುವ, ಹಾಕುವ ಚಿನ್ನದ ಆಧಾರದ ಮೇಲೆ ಊಹಿಸಿಬಿಡಬಹುದು. ಅವಳು ತವರಿನಿಂದ ತಾರದ ಚಿನ್ನ ಅವಳ ಬದುಕನ್ನೇ ಬಲಿ ತೆಗೆದುಕೊಂಡುಬಿಡುತ್ತದೆ. ಅದೆಷ್ಟೋ ಮಂದಿಯನ್ನು ಕಳ್ಳರಾಗಿಸಿ ಜೈಲಿಗೆ ತಳ್ಳುತ್ತದೆ. ಭೂಮಿಯಲ್ಲಿ ಸಿಗುವ ನಿಧಿ ಚಿನ್ನವೇ ಆಗಿರುತ್ತದೆ ಮತ್ತು ಅದನ್ನು ಸರ್ಪವೊಂದು ಕಾಯುತ್ತಿರುತ್ತದೆ ಎಂಬ ನಂಬಿಕೆ ನಮ್ಮ ಆಸೆಗಳ ಮೇಲೆ ನಿಯಂತ್ರಣ ಹೇರುತ್ತದೆ. ದುರಂತಗಳೇನೇ ಇರಲಿ, ರಸ್ತೆಬದಿ ಕುಳಿತು ಸೇರುಗಳಲ್ಲಿ ಚಿನ್ನ ಮಾರಿದವರ ಮುಂದುವರಿದ ಪೀಳಿಗೆಯವರಾದ ನಮಗೆ ಚಿನ್ನ ಎಂದೆಂದಿಗೂ ಚೆನ್ನ. ನಮ್ಮ ರಕ್ತದಲ್ಲೇ ಮಿಳಿತವಾಗಿರುವ ಚಿನ್ನದ ಆಕಾಂಕ್ಷೆ ಎಂದಿಗೂ ನಿಲ್ಲದು. ಕೆಲವೊಂದು ಹೀಗಿದ್ದರೇ ಚೆನ್ನ ಎನ್ನುವ ಪಟ್ಟಿಯಲ್ಲಿ ಚಿನ್ನ ಕೂಡಾ ಒಂದು.
ಅವಳ ಸೌಂದರ್ಯದ ಮೆರುಗನ್ನು ಚಿನ್ನ ದ್ವಿಗುಣಗೊಳಿಸುವಂತೆ ಚಿನ್ನದ ಬಣ್ಣದಲ್ಲೇ ಇರುವ ಆರ್ಟಿಫಿಶಿಯಲ್ ಸರವೊಂದು ಮಾಡಲಾರದು! 'ನನ್ನ ಬಂಗಾರಾ' ಎಂದು ನಲ್ಲನೊಬ್ಬ ಕರೆದರೆ ಮದುವೆಯೇ ಆದೀತು. ಅದೇ ಆತ ಆರ್ಟಿಫಿಶಿಯಲ್ ಆಭರಣಗಳೂ ಚೆನ್ನಾಗಿರುತ್ತವೆಂದು ಪ್ರೀತಿಯಿಂದಲೇ 'ನನ್ನ ಕಾಗೆ ಬಂಗಾರಾ' ಎನ್ನಲಿ. ಮುಂದಿನ ದಿನಗಳಲ್ಲಿ ಗಡ್ಡ ಬಿಟ್ಟು, ಕೈಯ್ಯಲ್ಲಿ ಬಾಟಲಿ ಹಿಡಿದು ಬೀದಿಬೀದಿಯಲ್ಲಿ ಅಲೆಯಬೇಕಾದೀತಷ್ಟೆ! ಆಕೆ ಇಲ್ಲವೇ ಆತ ತೊಡುವ ಚಿನ್ನ ಅವರ ಸಿರಿವಂತಿಕೆಯನ್ನು ಮಾತಿಲ್ಲದೆ ಜಗತ್ತಿಗೆ ಸಾರುತ್ತದೆ. 'ಚಿನ್ನದಂತವನು', ಇಲ್ಲವೇ '24 ಕ್ಯಾರೆಟ್' ಎಂದರೆ ಸಾಕು, ಆತನ ವ್ಯಕ್ತಿತ್ವದ ಹೊಳಪು, ಗಟ್ಟಿತನ, ಚೆಲುವು ಎದುರಿದ್ದವರಿಗೆ ಅರ್ಥವಾದೀತು. ಇನ್ನು ಅಪ್ಪಅಮ್ಮ ಮಾಡಿಸಿಕೊಟ್ಟ ಚಿನ್ನ ಅದೆಷ್ಟೋ ಅನಿರೀಕ್ಷಿತ ಸಂದರ್ಭದಲ್ಲಿ ಗಂಡನ ಮಾನ ಉಳಿಸಿದೆ. ದುಡ್ಡಿನ ರೂಪಕ್ಕಿಂತ ಚಿನ್ನದ ರೂಪದ ಉಳಿತಾಯ ಅತ್ಯುತ್ತಮ ಸೇವಿಂಗ್ಸ್ ಆಗಬಲ್ಲದು. ಮಾತು ಬೆಳ್ಳಿ, ಮೌನ ಬಂಗಾರ ಎಂಬಂಥ ಹಲವು ಗಾದೆಗಳ ಮೂಲಕವೂ ಚಿನ್ನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಲ್ಲದೆ ಅದು ಬಂಗಾರದ ಸ್ಥಾನಮಾನವನ್ನೂ ಸೂಚಿಸುತ್ತದೆ.
ಮಣ್ಣಿನಿಂದ ಚಿನ್ನ ತೆಗೆಯುವುದು ಅದೆಷ್ಟು ಕಷ್ಟದ ಕೆಲಸ! ಅಷ್ಟೇ ಕಷ್ಟ ಚಿನ್ನದ ಮೇಲೆ ಸಣ್ಣ ಕುಸುರಿ ಕೆಲಸ ಮಾಡಿ ಆಭರಣ ತಯಾರಿಸುವುದು. ಚಿನ್ನದ ಆಭರಣವೊಂದು ನೀವು ಪೀಳಿಗೆಗಳಿಂದ ಪೀಳಿಗೆಗೆ ದಾಟಿಸುತ್ತ ಬಂದರೂ ತನ್ನ ಗಟ್ಟಿತನ, ಚೆಲುವು, ಬೆಲೆ ಕಳೆದುಕೊಳ್ಳಲಾರದು, ಹಾಳಾಗಲಾರದು. ಹೀಗಾಗಿ ಚಿನ್ನಕ್ಕೆ ಹೆಚ್ಚು ಬೆಲೆ ತರುವುದು ನಿಜವಾಗಿಯೂ ಹೆಚ್ಚೇನಲ್ಲ. ನಿಮ್ಮ ಜೀವಮಾನದ ಗಳಿಕೆಯಾಗಿ, ಹೆಮ್ಮೆಯಾಗಿ ಅದು ನಿಮ್ಮೊಂದಿಗಿರುತ್ತದೆ.
ಮತ್ತೊಂದು ಅಕ್ಷಯ ತದಿಗೆ ಬಂದಿದೆ. ಈ ದಿನ ಏನೇ ಖರೀದಿಸಿದರೂ ಅದು ದ್ವಿಗುಣಗೊಳ್ಳುತ್ತದಂತೆ. ಮೂಢನಂಬಿಕೆಯಲ್ಲ, ನಾವು ಬದುಕುವುದೇ ಇಂಥ ನಂಬಿಕೆಗಳ ಮೇಲೆ. ಎಲ್ಲದಕ್ಕಿಂತ ಎಂದಿಗೂ ಗುಣಮಟ್ಟ ಮತ್ತು ಬೆಲೆ ಕಳೆದುಕೊಳ್ಳದ ಚಿನ್ನವೇ ನಮ್ಮ ಆಯ್ಕೆಯಾಗುತ್ತದೆ. ಏಕೆಂದರೆ ಚಿನ್ನ ದ್ವಿಗುಣಗೊಂಡರೆ ಮಕ್ಕಳಿಗೆ ಭವಿಷ್ಯ ನೀಡೀತು, ಹೆಂಡತಿಗೆ ಬದುಕಿನ ಖುಷಿ ನೀಡೀತು, ಯಜಮಾನನಿಗೆ ಕೊಟ್ಟ ದುಡ್ಡೂ ರೂಪಾಂತರ ಹೊಂದಿದರೂ ಮನೆಯ ಆಸ್ತಿಯಾಗೇ ಉಳಿಯಿತು.
- ರೇಶ್ಮಾರಾವ್ ಸೊನ್ಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


