ಸಂಗೀತ ಸುಘಮ
ರಾಜಧಾನಿಯಲ್ಲಿ ನಾಳೆಯಿಂದ (ಫೆ.7) ಮೂರು ದಿನ ಸುಗಮ ಸಂಗೀತದ ಗುಂಗು.

ನಾಳೆಯಿಂದ ನಾಡಿನ ಧ್ವನಿ
ರಾಜಧಾನಿಯಲ್ಲಿ ನಾಳೆಯಿಂದ (ಫೆ.7) ಮೂರು ದಿನ ಸುಗಮ ಸಂಗೀತದ ಗುಂಗು. ಈ ಗೀತಗಾಯನ ಪ್ರಕಾರ ನಾಡಿನಲ್ಲಿ ಭದ್ರಗೊಂಡಿದ್ದು ಹೇಗೆ?
ಮೂವತ್ತೈದು ವರ್ಷ ಹಿಂದೆ. ಇಡೀ ಕರ್ನಾಟಕದಲ್ಲಿದ್ದ ಸುಗಮ ಸಂಗೀತ ಗಾಯಕರ ಸಂಖ್ಯೆ ಕೇವಲ ಇಪ್ಪತ್ತು. ಈಗ ನಾಡಿನ ಮೂಲೆಮೂಲೆಯಲ್ಲೂ ಸುಗಮ ಸಂಗೀತದ ಕಂಪು. ಗಲ್ಲಿಗಲ್ಲಿಗಳಲ್ಲಿ ಗಾಯಕ, ಗಾಯಕಿಯರಿದ್ದಾರೆ. ಈ ಸಂಗೀತ ಪ್ರಕಾರವನ್ನು ಕಟ್ಟಿ ಬೆಳಸಲು ಅಂದು ಹೆಣಗಾಡಿದ ಹಿರಿ ಜೀವಗಳ ಮುಖದಲ್ಲಿ ಈಗ ಸಾರ್ಥಕ್ಯ ಭಾವವೂ ಇದೆ, ಭವಿಷ್ಯದಲ್ಲಿನ ಅಪಾಯದ ಎಚ್ಚರಿಕೆಯೂ ಕಾಣುತ್ತಿದೆ.
ಸುಗಮ ಸಂಗೀತಕ್ಕೆ ಸಾಂಘಿಕ ರೂಪ ಬಂದದ್ದು 1991ರಲ್ಲಿ. ಕವಿಗಳು, ಗಾಯಕರು, ವಾದ್ಯಗಾರರನ್ನೆಲ್ಲ ಒಂದೆಡೆ ಸೇರಿಸಬೇಕು ಎನ್ನುವ ಕನಸು ಕಂಡವರು ದಿ. ಸಿ.ಅಶ್ವತ್ಥ್ ಅವರು. ಒತ್ತಾಸೆಯಾಗಿ ನಿಂತವರು ಗಾಯಕ ವೈ.ಕೆ.ಮುದ್ದುಕೃಷ್ಣ, ಕವಿ ಎಚ್.ಎಸ್.ವೆಂಕಟೇಶಮೂರ್ತಿ. ಆ ವರ್ಷದ ಡಿಸೆಂಬರ್ 20ರಂದು ಬೆಂಗಳೂರಿನಲ್ಲಿ 'ಧ್ವನಿ' ಸಂಸ್ಥೆ ಅಸ್ತಿತ್ವಕ್ಕೆ ಬರಲು ವಿವಿಧ ಕ್ಷೇತ್ರಗಳ ಗಣ್ಯರ ಬೆಂಬಲವೂ ಇತ್ತು. 12 ವರ್ಷ 'ಧ್ವನಿ' ತಂಡ ರಾಜ್ಯದುದ್ದಕ್ಕೂ ಸಂಚರಿಸಿತು. ಸುಗಮ ಸಂಗೀತದ ಬೀಜಗಳನ್ನು ಬಿತ್ತಿತು. 1993ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರು ದಸರಾದಲ್ಲಿ ಸುಗಮ ಸಂಗೀತಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಈ ಸಂಸ್ಥೆಯ ಹೆಗ್ಗಳಿಕೆ. 2003ರಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಸ್ವಿತ್ವಕ್ಕೆ ಬಂದ ನಂತರ ಅದೇ 'ಧ್ವನಿ' ಆಯಿತು. ಪರಿಷತ್ತಿನ ಅಧಿಕೃತ ಸದಸ್ಯರ ಸಂಖ್ಯೆ ಈಗ 700 ದಾಟಿದೆ. ಆರಂಭದಲ್ಲಿ 50 ಸಾವಿರ ರುಪಾಯಿ ಅನುದಾನ ನೀಡುತ್ತಿದ್ದ ರಾಜ್ಯ ಸರ್ಕಾರ, ಈಗ 20 ಲಕ್ಷದವರೆಗೂ ಕೊಡುತ್ತಿದೆ. ಸ್ಥಾಪಕ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅವರೇ ಈಗಲೂ ಪರಿಷತ್ತಿನ ಅಧ್ಯಕ್ಷರು.
ಬರಿಗೈ ದಾಸರು
ಅಂದಿನ ದಿನಗಳು ಹೇಗಿದ್ದವು? ಮುದ್ದುಕೃಷ್ಣ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ, 'ಧ್ವನಿ' ಹುಟ್ಟಿಕೊಂಡಾಗ ಎರಡು ಟೆಂಪೊಗಳನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದೆವು. ಒಂದರಲ್ಲಿ ವಾದ್ಯವೃಂದ. ಇನ್ನೊಂದರಲ್ಲಿ ಗಾಯಕ, ಗಾಯಕಿಯರು ಮತ್ತು ಎಚ್ಚೆಸ್ವಿ, ಜಿಎಸ್ಎಸ್ ಮತ್ತಿತರ ಕವಿಗಳು. ಯಾವುದಾದರೂ ಊರಿಗೆ ಹೋಗುವುದು, ಅಲ್ಲಿನ ಸಂಘಟನೆಗಳ ಪ್ರಮುಖರನ್ನು ಸಂಪರ್ಕಿಸಿ ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡುವುದು. ಹೇಗೂ ಮೈಕ್ ಸೆಟ್ ನಮ್ಮದೇ ಇರುತ್ತಿತ್ತು. ಎರಡು ಗಂಟೆ ಕಾರ್ಯಕ್ರಮ. ಗಾಯಕ, ಗಾಯಕಿಯರೆಲ್ಲ ಪುಕ್ಕಟೆಯಾಗಿ ಹಾಡುತ್ತಿದ್ದರು. ಕೆಲವು ಕಡೆ ಎರಡು, ಮೂರೋ ಸಾವಿರ ಕೊಡುತ್ತಿದ್ದರು. ವಾಹನ ಬಾಡಿಗೆ, ವಾದ್ಯವೃಂದದವರ ಸಂಭಾವನೆಗೆ ಸರಿ ಹೋಗುತ್ತಿತ್ತು. ಎಷ್ಟೋ ಸಲ ನಮ್ಮ ಕೈಯ್ಯಿಂದಲೇ ಹಣ ಹಾಕಿದ್ದೂ ಇದೆ'.
ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮಾ, ಬಿ.ಆರ್.ಛಾಯಾ, ಕಸ್ತೂರಿ ಶಂಕರ್, ಬಿ.ಕೆ.ಸುಮಿತ್ರಾ, ಎಚ್.ಆರ್.ಲೀಲಾವತಿ, ಅನುರಾಧಾ ಧಾರೇಶ್ವರ, ಸಂಗೀತಾ ಕಟ್ಟಿ, ಮುದ್ದುಕೃಷ್ಣ, ಪುತ್ತೂರು ನರಸಿಂಹ ನಾಯಕ, ನಗರ ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ಎಚ್.ಕೆ.ನಾರಾಯಣ, ಸಿ.ಅಶ್ವತ್ಥ್, ಯಶವಂತ ಹಳಿಬಂಡಿ, ಜಿ.ವಿ.ಅತ್ರಿ, ರಾಜು ಅನಂತಸ್ವಾಮಿ; ವಾದ್ಯಗಾರರಾದ ಎನ್.ಎಸ್.ಪ್ರಸಾದ್, ಬಿ.ವಿ.ಶ್ರೀನಿವಾಸ್, ಎನ್.ಎಸ್.ಮುರಳಿ, ಬಾಲಿ, ದೇವಂಬು ಇವರೆಲ್ಲ ಶುರುವಿನಿಂದಲೂ ಪರಿಷತ್ತಿಗೆ 'ಧ್ವನಿ'ಯಾದವರು. ಕವಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಎಚ್ಚೆಸ್ವಿ, ಬಿ.ಆರ್.ಲಕ್ಷ್ಮಣರಾವ್, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ದೊಡ್ಡರಂಗೇಗೌಡ ಮೊದಲಾದವರ ಬೆಂಬಲವನ್ನೂ ಮರೆಯುವಂತಿಲ್ಲ.
ಒಂದು ದಶಕದಲ್ಲಿ ಪರಿಷತ್ತು ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ನಡೆಸಿದ 150 ತರಬೇತಿ ಶಿಬಿರಗಳಲ್ಲಿ 6,000 ಯುವ ಪ್ರತಿಭೆಗಳು ತರಬೇತಿ ಪಡೆದಿವೆ. ಕಿರುತೆರೆಗಳಲ್ಲಿ ರಿಯಾಲಿಟಿ ಶೋಗಳ ಪರಿಣಾಮವಾಗಿಯೂ ಸುಗಮ ಸಂಗೀತದ ಬೇರುಗಳು ಬಲಗೊಂಡಿವೆ. ಒಳ್ಳೆಯ ಗೀತೆಗಳನ್ನು ಗಾಯನದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿನ ಪ್ರಾಮಾಣಿಕ ಮನೋಭಾವಕ್ಕೆ ಮನ್ನಣೆ ಸಿಕ್ಕಿದೆ. ಶುರುವಿನಲ್ಲಿ 'ಸುಗಮ ಸಂಗೀತದಿಂದ ಶಾಸ್ತ್ರೀಯ ಸಂಗೀತಕ್ಕೆ ಅಪಾಯ ಕಾದಿದೆ' ಎನ್ನುವ ಟೀಕೆಗಳು ಬಂದರೂ, ಅದು ಸುಳ್ಳೆಂಬುದು ಸಾಬೀತಾಗಿದೆ.
ಈ ಸಂಗೀತ ಪ್ರಕಾರಕ್ಕೆ ಈಗ ಸಾಂಘಿಕ, ಸಾಂಸ್ಥಿಕ ನೆಲೆಗಟ್ಟು ಸಿಕ್ಕಿದೆ. ಭದ್ರವಾಗಿ ಬೇರೂರುತ್ತಿದೆ ಎನ್ನುವ ಹಂತದಲ್ಲಿ ಸುಗಮ ಸಂಗೀತ ವಾಣಿಜ್ಯೀಕರಣಗೊಳ್ಳುತ್ತಿದೆ ಎನ್ನುವ ಅಪಾಯವನ್ನು ಹಿರಿಯ ಕಲಾವಿದರು ಗ್ರಹಿಸಿದ್ದಾರೆ. 'ಸುಗಮ ಸಂಗೀತ ಜನಪ್ರಿಯತೆ ಗಳಿಸಿಕೊಂಡಿದೆ, ಆದರೆ ಶಾಸ್ತ್ರೀಯ ಸಂಗೀತ ಶ್ರೇಷ್ಠತೆ ಕಾಪಾಡಿಕೊಂಡಿದೆ. ಸುಗಮ ಸಂಗೀತವೂ ಜನಪ್ರಿಯತೆಯೊಂದಿಗೆ ಘನತೆಯನ್ನೂ ಕಾಪಾಡಿಕೊಳ್ಳುವಂತಾಗಬೇಕು' ಎನ್ನುವುದೇ ಪರಿಷತ್ತಿನ, ಮುಖ್ಯವಾಗಿ ಸುಗಮ ಸಂಗೀತಕ್ಕೆ ಭದ್ರ ನೆಲೆ ಕಲ್ಪಿಸಿಕೊಟ್ಟ ಹಿರಿಯ ಕಲಾವಿದರ ಆಶಯ.
ಶೋ ಅಥವಾ ಹಣ ಮಾಡುವ ಉದ್ದೇಶದಿಂದ ಸುಗಮ ಸಂಗೀತ ಪರಿಷತ್ತು ಸಂಗೀತೋತ್ಸವಗಳನ್ನು ಆಯೋಜಿಸುತ್ತಿಲ್ಲ. ನಮ್ಮ ಗುರಿ ಆಸಕ್ತ ಶ್ರೋತ್ರುಗಳನ್ನು ಹುಟ್ಟುಹಾಕುವುದು ಮತ್ತು ಸುಗಮ ಸಂಗೀತಕ್ಕೆ ಘನತೆ, ಸಾಂಘಿಕ ನೆಲೆಗಟ್ಟು ತಂದುಕೊಡುವುದು. ಸುಗಮ ಸಂಗೀತ ಕಲಾವಿದರೂ ಸಂಗೀತೋತ್ಸವಗಳನ್ನು ತಮ್ಮ ಮನೆಯ ಹಬ್ಬ ಎಂದು ಭಾವಿಸಿಕೊಳ್ಳಬೇಕು.
- ವೈ.ಕೆ.ಮುದ್ದುಕೃಷ್ಣ, ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್ತು
ಸಂಗೀತೋತ್ಸವ
ಕರ್ನಾಟಕ ಸುಗಮ ಸಂಗೀತ ಪರಿಷತ್ತು 2003ರಿಂದ ಪ್ರತಿವರ್ಷ 'ಸಂಗೀತೋತ್ಸವ' ನಡೆಸಿಕೊಂಡು ಬರುತ್ತಿದೆ. ಇದು ರಾಜ್ಯದ ಎಲ್ಲ ಭಾಗಗಳ ಸುಗಮ ಸಂಗೀತ ಕಲಾವಿದರು, ವಾದ್ಯವೃಂದದವರು, ಕವಿಗಳನ್ನು ಒಂದೆಡೆ ಸೇರಿಸುವ ಹಬ್ಬ. ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಹಾಸನ, ಮಂಗಳೂರು, ತುಮಕೂರು, ಮೈಸೂರು, ದಾವಣಗೆರೆ, ಧಾರವಾಡಗಳಲ್ಲಿ ಈವರೆಗೆ ಸಮ್ಮೇಳನಗಳು ನಡೆದಿವೆ. ಎಲ್ಲೆಡೆ ನಿತ್ಯವೂ ಏನಿಲ್ಲವೆಂದರೂ 25-30 ಸಾವಿರ ಶ್ರೋತ್ರುಗಳು ಸೇರುತ್ತಿದ್ದರು ಎನ್ನುವುದು ಹೆಗ್ಗಳಿಕೆ. 11ನೇ ಸಮ್ಮೇಳನ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ರತ್ನಮಾಲಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಇದೇ 7ರಿಂದ ಮೂರು ದಿನ ನಡೆಯುತ್ತಿದೆ. ಬೆಳಗ್ಗೆ 9ರಿಂದ ರಾತ್ರಿ10ರವೆರೆಗೆ ನಿರಂತರ ಸಂಗೀತ ಧಾರೆ. ಉಚಿತ ಪ್ರವೇಶ.
-ರಾಜೇಶ ಮುಂಡಿಗೇಸರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


