ಜಗಳ ಕಾಯ್ತಾಳೆ!

ಕಲಹದಿಂದ ಅಂತರಂಗ ಕಲಕಲ್ಪಟ್ಟವಳೇ 'ಕಲಹಾಂತರಿತೆ'. ಇಲ್ಲಿ ಕಲಹವನ್ನು ಆರಂಭಿಸುವವಳು ಹೆಚ್ಚಾಗಿ ಆಕೆಯೇ. ಕೆಲವೊಮ್ಮೆ ಆತನೂ ಅದಕ್ಕೆ ಕಾರಣವಿರಬಹುದು. ಮಧುಮಂಚದಲ್ಲಿ ಸವಿಯಾದ ಸಮಯವನ್ನು ಕಳೆಯಬೇಕಾದ ಹೊತ್ತಿನಲ್ಲಿ ಇಬ್ಬರೂ ಕಚ್ಚಾಡಿಕೊಂಡು ಬೇರೆ ಬೇರೆಯಾಗುತ್ತಾರೆ. ಅಥವಾ ಆಕೆಯ ಕಟುನುಡಿಗಳಿಂದ ನಲ್ಲ ಬೇಸರಿಸಿಕೊಂಡು ದೂರ ತೆರಳುತ್ತಾನೆ. ಆಗ ಆಕೆ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುವುದುಂಟು. ಈಕೆಯನ್ನು 'ಅಭಿಸಂಧಿತಾ' ಎಂದೂ ಕರೆದಿದ್ದಾರೆ. ಜಯದೇವನ 'ಗೀತಗೋವಿಂದ'ದಲ್ಲಿ ಕೆಲವೊಮ್ಮೆ ಕಲಹಾಂತರಿತೆಯ ಪಾತ್ರವನ್ನೂ ರಾಧೆ ನಿರ್ವಹಿಸಿದ್ದಿದೆ.
ಅಂಗುಲ್ಯಗ್ರನಖೇನ ಬಾಷ್ಪಸಲಿಲಂ ವಿಕ್ಷಿಪ್ಯ ವಿಕ್ಷಿಪ್ಯ ಕಿಂ
ತೂಷ್ಣೀಂ ರೋದಿಷಿ ಕೋಪನೇ ಬಹುತರಂ ಫೂತ್ಕೃತ್ಯ ರೋದಿಷ್ಯಸಿ
ಯಸ್ಯಾಸ್ತೇ ಪಿಶುನೋಪದೇಶವಚನೈರ್ಮಾನೇತಿಭೂಮಿಂ ಗತೇ
ನಿರ್ವಿಣ್ಣೋನುನಯಂಪ್ರತಿ ಪ್ರಿಯತಮೋ ಮಧ್ಯಸ್ಥತಾಮೇಷ್ಯತಿ
ಕೋಪಗೊಂಡಿರುವ ನಾಯಿಕೆಗೆ ಸಖಿಯ ಉಪದೇಶವಿದು: ಕೋಪಿಷ್ಠೆ! ಉಗುರಿನಿಂದ ನಿನ್ನ ಕಣ್ಣೀರಿನ ಹನಿಗಳನ್ನು ಪುನಃ ಪುನಃ ತೊಡೆಯುತ್ತ ರೋಷಭೀಷಣ ಕ್ಷೀಣಸ್ವರದಿಂದ ಬಿಕ್ಕುತ್ತಿರುವೆಯೇಕೆ? ಯಾರೋ ದುರಾತ್ಮರು ನಿನ್ನ ಕಿವಿಯೂದಿ ನೀನು ನಲ್ಲನಲ್ಲಿ ಕೋಪಗೊಳ್ಳುವಂತೆ ಮಾಡಿದ್ದಾರೆ. ನಿನ್ನ ಕೋಪದ ರೋಷಾವೇಷವನ್ನು ನೋಡಿ ಅಪ್ರತಿಭನಾದ ಪ್ರಿಯಕರನು ನಿನ್ನನ್ನು ಸಮಾಧಾನ ಮಾಡಲೂ ಬರದೆ ಹೋದರೇನು ಮಾಡುವೆ?
ಪ್ರೇಮಕಲಹಗಳಲ್ಲಿ, ಕೋಪಕ್ಕೊಳಗಾದವರೇ ಅದನ್ನು ಶಮನಗೊಳಿಸುವವರೂ ಆದರೆ ಸೊಗಸು. ಆದರೆ ಈ ಮೂರ್ಖ ನಾಯಿಕೆ ಆ ಸಾಧ್ಯತೆಯನ್ನೇ ದೂರವಿಡುತ್ತಿದ್ದಾಳೆ.
ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


