ಆಹಾರಕ್ಕಿಂತ ಮಿಗಿಲಾದ ಪ್ರತಿರೋಧಕ ಬೇರೆ ಇಲ್ಲ

ಮೊನ್ನೆ ವಿಶ್ವ ಕ್ಯಾನ್ಸರ್ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆ ಕೆಲವು ಅಂಕಿ-ಅಂಶ ಬಿಡುಗಡೆ ಮಾಡಿದೆ. ವಿಶ್ವದಲ್ಲಿ 2012ರಲ್ಲಿ 1.4 ಕೋಟಿ ಇದ್ದ ಕ್ಯಾನ್ಸರ್ ಪೀಡಿತರ ಸಂಖ್ಯೆ 2030ರ ಹೊತ್ತಿಗೆ 2.16 ಕೋಟಿ ಆಗಲಿದೆ ಎನ್ನುವ ಕಳವಳಕಾರಿ ಸಂಗತಿ ಅದರಲ್ಲಿ ಅಡಗಿದೆ. ವಿಶ್ವಸಂಸ್ಥೆಯ ಶಾಖೆಯೊಂದು ನಡೆಸಿದ ಸಮೀಕ್ಷೆಯಿಂದ ಇದು ಬೆಳಕಿಗೆ ಬಂದಿದೆ. ಜಗತ್ತಿನ ಶೇ 60ರಷ್ಟು ಕ್ಯಾನ್ಸರ್ ಪ್ರಕರಣಗಳು ಮತ್ತು ಶೇ 70ರಷ್ಟು ಕ್ಯಾನ್ಸರ್ ಸಾವುಗಳು ಆಫ್ರಿಕಾ, ಏಷ್ಯ ಖಂಡಗಳ ದೇಶಗಳು, ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಸಂಭವಿಸುತ್ತಿವೆ ಎನ್ನುವುದನ್ನೂ ವರದಿ ಹೇಳಿದೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ ಶ್ರೀಮಂತ ದೇಶಗಳಲ್ಲಿಯೇ ಕ್ಯಾನ್ಸರ್ ಚಿಕಿತ್ಸೆ ದುಬಾರಿ ಆಗುತ್ತಿರುವಾಗ, ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಕಥೆ ಏನು ಎನ್ನುವುದು?
ಆದರೆ ಕ್ಯಾನ್ಸರ್ ವಿರುದ್ಧ ಸೆಣಸಲು ಪ್ರಬಲ ಅಸ್ತ್ರ ನಮ್ಮಲ್ಲೇ ಇದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅದು ಏನು ಗೊತ್ತಾ? ಆರೋಗ್ಯಕರ ಜೀವನಶೈಲಿ ಮತ್ತು ಆಹಾರ! ನಮ್ಮ ಆಹಾರ ಪದ್ಧತಿ ಕ್ಯಾನ್ಸರ್ನಿಂದ ನಮ್ಮನ್ನು ಹೇಗೆ ಪಾರು ಮಾಡಬಲ್ಲದು ನೋಡೋಣ.
ಯಾವುದೇ ಕ್ಯಾನ್ಸರ್ ಇರಲಿ, ಅದು ಏಕಾಏಕಿ ಗಂಭೀರ ಸ್ವರೂಪಕ್ಕೆ ತಿರುಗುವುದಿಲ್ಲ. ಅದು ಹಲವಾರು ವರ್ಷಗಳ ಪ್ರಕ್ರಿಯೆ. ಕೆಲವರಲ್ಲಿ ಸಾವಿನ ಹಂತ ತಲುಪಲು 20-30 ವರ್ಷಗಳೇ ಬೇಕು ಎನ್ನುತ್ತದೆ ವೈದ್ಯಲೋಕ. ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಕೆಲವು ಪ್ರಕರಣಗಳಲ್ಲಿ ಈ ಅವಸ್ಥೆ ತಲುಪಲು ಐದು ದಶಕ ತೆಗೆದುಕೊಂಡ ಉದಾಹರಣೆಗಳೂ ಸಿಗುತ್ತವೆ. ಕೋಶ ಅಥವಾ ವಂಶವಾಹಿ ಕ್ಯಾನ್ಸರ್ಕಾರಕವಾಗಿ ಪರಿಣಮಿಸಿ, ಅನಿಯಂತ್ರಿತ ವಿಭಜನೆಯ ಪ್ರಕ್ರಿಯೆಯಲ್ಲಿ ತೊಡಗಿ, ಗೆಡ್ಡೆಗಳನ್ನು ರೂಪಿಸುವುದು ಒಂದೆರಡು ದಿನ, ತಿಂಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ. ಆ ಗೆಡ್ಡೆ ಜೀವ ತೆಗೆದುಕೊಳ್ಳುವ ರೀತಿಯಲ್ಲಿ ಬೆಳೆಯುವುದು ಸಹ ಒಂದೆರಡು ವರ್ಷದ ಪ್ರಕ್ರಿಯೆ ಅಲ್ಲವೇ ಅಲ್ಲ. ತೀರಾ ಸಂಕೀರ್ಣ ಪ್ರಕ್ರಿಯೆ ಅದು.
ಇತ್ತೀಚಿನ ಅಧ್ಯಯನಗಳ ಪ್ರಕಾರ, ಆಹಾರವು ಕ್ಯಾನ್ಸರ್ನ ಹಲವು ಹಂತಗಳಲ್ಲಿ ನಿರೋಧಕವಾಗಿ ಮಧ್ಯಪ್ರವೇಶ ಮಾಡುತ್ತದೆ. ಕೋಶ ಕ್ಯಾನ್ಸರ್ಕಾರಕವಾಗಿ ರೂಪುಗೊಳ್ಳುವುದರಿಂದ ಮೊದಲಾಗಿ ಗೆಡ್ಡೆ ಬೆಳೆಯುವ ತನಕ, ಕೋಶ ಒಂದು ಅಂಗದಿಂದ ಮತ್ತೊಂದು ಅಂಗಕ್ಕೆ ಪ್ರಯಾಣ ಬೆಳೆಸುವ ತನಕ ಹಲವು ಹಂತಗಳಲ್ಲಿ ಆಹಾರದ ಪಾತ್ರವಿದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


