ಜೈ ಹೋ ಸಂಗಮೇಶ

ತಂದೆ ಮದ್ಯವ್ಯಸನಿ, ತಾಯಿ ಸಂಸಾರ ರಥ ಎಳೆಯುವುದೇ ಕಷ್ಟ ಎಂದು ನರಳುವಾಕೆ, ಮನೆ ಇರೋದು ಕೊಳೆಗೇರಿಯಲ್ಲಿ... ಇಂಥ ಪರಿಸರದಲ್ಲಿರೋರ ಭವಿಷ್ಯ ಏನಾದೀತು?
ಆದರೆ ನಮ್ಮ ಈ ಸ್ಟೋರಿಯ ಯುವಕ ಸಂಗಮೇಶ ಅದೃಷ್ಟವಂತ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳಿಯ ಬಾಲಕಾರ್ಮಿಕ ಮಕ್ಕಳ ಸಮೀಕ್ಷಾ ಕಾರ್ಯದ ಸಂದರ್ಭ ಪತ್ತೆಯಾಗಿಬಿಟ್ಟ.
ಗುಲ್ಬರ್ಗದಲ್ಲಿ ಸಮೀಕ್ಷೆಗೆಂದು ಹೋಗಿದ್ದ ಶೋಭಾ ರಂಜೋಳಕರ್, ಇಂದಿರಾ ಮಾನ್ವೀಕರ್, ಸಂಧ್ಯಾ ಹೊನಗುಂಟಿಕರ್ ಇವರಿಗೆ ಸಂಗಮೇಶ ಎದುರಾದ ಘಳಿಗೆ ಅದೇನಿತ್ತೋ ಏನೋ, ಅಲ್ಲಿಂದ ಈ ಬಾಲಕನ ಸ್ಟಾರ್ ಬದಲಾಯ್ತು.
ಮನೆ, ಬಡಾವಣೆ ವಾತಾವರಣದಿಂದಲೇ ಕಂಗೆಟ್ಟು, ಸಂಗದೋಷದಿಂದ 5ನೇ ತರಗತಿಯಲ್ಲೇ ಶಾಲೆ ಬಿಟ್ಟು ಹೋಟೆಲ್ ಕೆಲಸಕ್ಕೆ ಸೇರಿದ್ದ ಸಂಗಮೇಶ ಕೈಮೇಲೆ ಬಿಸಿನೀರು ಬಿದ್ದು ಬೊಬ್ಬೆ ಬಂದ ಸ್ಥಿತಿಯಲ್ಲೇ ತಂಡಕ್ಕೆ ಎದುರಾಗಿದ್ದ. ಬಾಲಕಾರ್ಮಿಕ ಪುನರ್ವಸತಿ ಯೋಜನೆಯಡಿ ಸಂಗಮೇಶ್ವರ ಮಹಿಳಾ ಮಂಡಳಿ ನಡೆಸುತ್ತಿದ್ದ 'ಹಗಲು ಕಾಳಜಿ' ಕೇಂದ್ರಕ್ಕೆ ಸಂಗಮೇಶನನ್ನು ಕರೆತರಲಾಯ್ತು. ಅಲ್ಲಿ ಈತನೊಂದಿಗೆ ಆತ್ಮೀಯ ಸಮಾಲೋಚನೆ ಮಾಡಿದವರು ಶೋಭಾ ರಂಜೋಳಕರ್, ಸಂಧ್ಯಾ ಹೊನಗುಂಟಿಕರ್. ಶಾಲೆ ಬಿಟ್ಟಿದ್ದ ಸಂಗಮೇಶನನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನಕ್ಕೆ ಕೊನೆಗೂ ಯಶ. ಆತನಲ್ಲಿ ಓದುವ ಹವ್ಯಾಸ ಜಾಗೃತವಾಯ್ತು. ನೂತನ ವಿದ್ಯಾಲಯಕ್ಕೆ ಕರೆದೊಯ್ಯಲಾಯಿತು. ಸಾಹಿತಿ ಡಾ. ಸ್ವಾಮೀರಾವ ಕುಲಕರ್ಣಿ ಓದಿನ ಜವಾಬ್ದಾರಿ ಹೊತ್ತರು. ಈಗ ಸಂಗಮೇಶ ಬಿಕಾಂ ಫೈನಲ್.
ಸ್ವದೇಶಿ ಆಂದೋಲನ
ಸಂಗಮೇಶ ತಾನಷ್ಟೇ ಓದಿ ಜಾಣನಾಗುತ್ತಿಲ್ಲ, ಬಡಾವಣೆಯ ವಾತಾವರಣ ಬದಲಿಸಲು ಮುಂದಾಗಿದ್ದಾನೆ. ಸ್ವದೇಶಿ ಆಂದೋಲನಕ್ಕೆ ಚಾಲನೆ ನೀಡಿದ್ದಾನೆ. ಮಕ್ಕಳಿಗೆ ಪಾಠ ಹೇಳಿ ಕೊಡಲು ಸಂಜೆ ಶಾಲೆ ಶುರು ಮಾಡಿದ್ದಾನೆ. 'ಸಮಾಜ ನನಗೆ ಇಷ್ಟೆಲ್ಲ ಕೊಟ್ಟಿರುವಾಗ ನಾನೂ ಅದಕ್ಕೆ ಏನಾದರೂ ಕೊಡುಗೆ ಕೊಡಬೇಡವೇ' ಎಂಬುದು ಸಂಗಮೇಶನ ಚಿಂತನೆ. ಈಚೆಗೆ 'ಚರಂಡಿ ಸಮಸ್ಯೆಗೆ ಪರಿಹಾರ' ಯೋಜನೆ ರೂಪಿಸಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರದರ್ಶಿಸಿ 'ಯುವ ಸಮೂಹದ ಆಶಾಕಿರಣ' ಪುರಸ್ಕಾರಕ್ಕೆ ಭಾಜನನಾದ. ಯೋಜನೆಗೆ ಸ್ಥಳೀಯ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 5 ಲಕ್ಷ ಮಂಜೂರು ಮಾಡಿಸಿ ಪಾಲಿಕೆ ನೆರವಿನಿಂದ ಅನುಷ್ಠಾನಕ್ಕೂ ಮುಂದಾಗಿದ್ದಾನೆ. ಸಂಗಮೇಶನ ಕ್ರಿಯಾಶೀಲತೆಗೆ ಎಲ್ಲರೂ ಜೈ ಹೋ ಎನ್ನಬೇಕು. ಹಾಗೇ, ಕಳೆದುಹೋಗಬಹುದಾಗಿದ್ದ ವ್ಯಕ್ತಿಗೆ ಹೊಸರೂಪ ನೀಡಿದ ಇಂದಿರಾ ಮಾನ್ವೀಕರ್ ತಂಡ (ಮೊ. 994816 37663)ಕ್ಕೂ ಕೂಡ.
= ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


