ಅಡಿಕೆ ಬೆಳೆಗಾರರೊಂದಿಗೆ ದೆಹಲಿ ನೋಡಿದೆ

ಶಿವಮೊಗ್ಗ ಮಲೆನಾಡು ಸಮ್ಮೇಳನ ಸಂದರ್ಭದಲ್ಲಿ ಮಲೆನಾಡಿನ ಅನೇಕ ಅಡಿಕೆ ಬೆಳೆಗಾರರ ಪರಿಚಯವಾಯಿತು. ಅದರಲ್ಲಿಯೂ ಶಿವಮೊಗ್ಗೆಯ ಗುರುಭಕ್ತ ತಿಲಕ ಎನ್. ಶ್ರೀಕಂಠಯ್ಯ ಎಂಬುವವರು ತುಂಬಾ ಆತ್ಮೀಯರಾದರು. ಮುಂದೆ ಅವರು ಸಾಗರದ ಅನ್ನಾವರ ಅಡಿಕೆ ಕಂಪನಿಯ ವ್ಯವಸ್ಥಾಪಕರಾಗಿ ನೇಮಕವಾದರು. ಅನಂತರ ಅವರು ಆಗಾಗ್ಗೆ ನನ್ನನ್ನು ಸಾಗರಕ್ಕೆ ಕರೆಸಿಕೊಂಡು, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕುರಿತು ಮತ್ತು ಮಲೆನಾಡಿನ ಹಲವು ವಿಶಿಷ್ಟ ತೊಂದರೆಗಳನ್ನು, ಜನಜೀವನವನ್ನು ಚರ್ಚಿಸುತ್ತಿದ್ದರು. ಈ ವಿಷಯಗಳ ಮೇಲೆ ನಾನು ಸಂಜಯ ವಾರಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದ್ದೆ. ಇದರಿಂದ ಅವರಿಗೆ ತುಂಬಾ ಸಂತೋಷವಾಗಿ, ಅಡಿಕೆ ಬೆಳೆಗಾರರಿಂದ ಸಾಕಷ್ಟು ಹಣ ಕೊಡಿಸಿಕೊಟ್ಟರು. ಇಷ್ಟೇ ಅಲ್ಲ, ಅಡಿಕೆ ಆಮದನ್ನು ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರವನ್ನು (ಆಗಿನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ) ಒತ್ತಾಯಿಸಲು ದೆಹಲಿಗೆ ಒಂದು ನಿಯೋಗ ತೆಗೆದುಕೊಂಡು ಹೋಗಿದ್ದರು. ಆ ನಿಯೋಗದಲ್ಲಿ ನಾನೂ ಇದ್ದೆ. ಅಡಿಕೆ ಭವಿಷ್ಯದ ದೃಷ್ಟಿಯಿಂದ ನನ್ನ ದೆಹಲಿ ಯಾತ್ರೆ ಎಷ್ಟರ ಮಟ್ಟಿಗೆ ಪ್ರಯೋಜನಾವಾಯಿತೋ ಹೇಳಲಾರೆ. ಆದರೆ ಈ ನೆಪದಲ್ಲಿ, ದೆಹಲಿ, ಆಗ್ರಾ, ಕಾಶಿ, ಮೊದಲಾದ ಉತ್ತರ ಭಾರತದ ಯಾತ್ರಾ ಸ್ಥಳಗಳನ್ನು ನೋಡುವ ಭಾಗ್ಯ ಮಾತ್ರ ನನಗೆ ಸಿಕ್ಕಿತು.
ಸಾಗರಕ್ಕೆ ಹೋದಾಗ ನಾನು ಶ್ರೀಕಂಠಯ್ಯನವರ ಅತಿಥಿಯಾಗಿ, ಅನ್ನಾವರ ಅಡಿಕೆ ಬೆಳೆಗಾರರ ಕಂಪನಿಯಲ್ಲಿ ಇಳಿದುಕೊಳ್ಳುತ್ತಿದ್ದೆ. ನನ್ನನ್ನು ನೋಡಿಕೊಳ್ಳಲು ನಾರಾಯಣ ಎಂಬ ಸೇವಕರನ್ನು ನನಗಾಗಿ ನೇಮಿಸಿದ್ದರು. ತಮ್ಮ ಕಚೇರಿಗೆ ಬರುತ್ತಿದ್ದ ಅನೇಕ ಅಡಿಕೆ ಬೆಳೆಗಾರರನ್ನು ನನಗೆ ಪರಿಚಯ ಮಾಡಿಕೊಟ್ಟು, ಹಣ ಸಹಾಯ ಮಾಡಿಸುತ್ತಿದ್ದರಲ್ಲದೆ, ವಾರಕ್ಕೆ ಒಂದೆರಡು ದಿನ ಹತ್ತಿರದ ಹಳ್ಳಿಗಳಿಗೂ ಕರೆದುಕೊಂಡು ಹೋಗಿ, ಅಡಿಕೆ ತೋಟಗಳನ್ನು ತೋರಿಸುತ್ತಿದ್ದರು. ಅಲ್ಲಿನ ಜನರ ಸ್ಥಿತಿಗತಿಗಳನ್ನು ವಿವರಿಸುತ್ತಿದ್ದರು.
ಬೇಸಾಯ ಮಾಡುವ ಬೆಳೆಗಾರ ಬಡತನದಲ್ಲಿ ಕಷ್ಟನಷ್ಟಗಳ ಮಧ್ಯೆಯೂ ಹೇಗೆ ಸಂತೋಷ ಕಾಣುತ್ತಾನೆ ಎಂಬುದನ್ನು ತಿಳಿದುಕೊಂಡೆ. ಪಕ್ಕದ ಹಳ್ಳಿಗೆ ಹೋಗಲು ರಸ್ತೆ ಇಲ್ಲದೆ, ಶಾಲೆ ಇಲ್ಲದೆ, ಮಕ್ಕಳನ್ನು ತೋಟದಲ್ಲಿಯೇ ಕೆಲಸ ಮಾಡಿಸುವ ಮತ್ತು ಕಾಯಿಲೆಯಾದಾಗ ಚಿಕಿತ್ಸೆಗಾಗಿ ನಾಲ್ಕೈದು ಮೈಲಿ ದೂರ ಎತ್ತಿನ ಗಾಡಿಯಲ್ಲಿ ಹೋಗುವ ರೈತರನ್ನು ಕಂಡೆ. ಕೇವಲ ಸಾಗರ, ಶಿವಮೊಗ್ಗಗಳಷ್ಟೇ ಅಲ್ಲದೆ, ದೂರದ ತೀರ್ಥಹಳ್ಳಿ, ಆಗುಂಬೆ, ಬಸವಾನಿ, ಹೊಸನಗರ, ಶೃಂಗೇರಿ, ಇನ್ನೂ ಅನೇಕ ಹಳ್ಳಿಗಳನ್ನು ಸಹ ಎರಡು- ಮೂರು ಸಾರಿ ಸುತ್ತಿ ಬಂದೆ. ಮಲೆನಾಡಿನ ಹವ್ಯಕ ಜನಾಂಗದವರ ಪರಿಚಯವಾಯಿತು.
ಬ್ರಾಹ್ಮಣರಲ್ಲಿ ಹವ್ಯಕ ಜನಾಂಗ ಒಂದು ವಿಶಿಷ್ಟ ಜನಾಂಗ. ಇವರು ಮೂಲತಃ ಕಾಶ್ಮೀರಿ ಬ್ರಾಹ್ಮಣರೆಂದೂ, ದಕ್ಷಿಣ ಭಾರತಕ್ಕೆ ಬಂದು ವೇದಾಧ್ಯಯನ, ದೇವತಾ ಪೂಜೆ ಮುಂತಾದ ಕಾರ್ಯಗಳಲ್ಲಿ ನಿರತರಾಗಿ ಜನರಿಂದ ಗೌರವಿಸಲ್ಪಡುತ್ತಿದ್ದರೆಂದೂ, ಜೀವನ ನಿರ್ವಹಣೆಗಾಗಿ ಬೇಸಾಯದಲ್ಲಿ ತೊಡಗಿ, ಅಡಿಕೆ, ಬಾಳೆ, ಭತ್ತ ಮುಂತಾದುವನ್ನು ಬೆಳೆಯಲಾರಂಭಿಸಿದರೆಂದೂ ಹೇಳಲಾಗುತ್ತಿದೆ. ಅಡಿಕೆ ಮತ್ತು ಭತ್ತ ಇವರು ಕೈಗೊಂಡ ಮುಖ್ಯ ಬೆಳೆಗಳು. ಮುಖ್ಯವಾಗಿ ಈ ಜನಾಂಗದವರು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ, ಸ್ವಲ್ಪ ಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇದ್ದಾರೆ. ಇಷ್ಟೇ ಅಲ್ಲ, ಕೇರಳ ರಾಜ್ಯದಲ್ಲಿಯೂ ಹವ್ಯಕ ಜನಾಂಗದವರು ಅಡಿಕೆ ಬೆಳೆಯಲ್ಲಿ ತೊಡಗಿದ್ದಾರೆಂದು ಗೊತ್ತಾಗಿದೆ. ಹವ್ಯಕ ಜನ ಇಡೀ ಬ್ರಾಹ್ಮಣ ಸಮಾಜದಲ್ಲಿಯೇ ಅತ್ಯಂತ ಬುದ್ಧಿವಂತರೆಂದು ಹೇಳಬಹುದು. ನಾನು ದಾವಣಗೆರೆಯಲ್ಲಿ ಹೆಸರಿಗೆ ಮಾತ್ರ ಪತ್ರಕರ್ತನಾಗಿದ್ದಾಗ ಈ ಹವ್ಯಕ ಜನಾಂಗದ ಮುಖಂಡರ ನೆರವನ್ನು, ಬೆಂಬಲವನ್ನು ಸಾಕಷ್ಟು ಪಡೆದಿದ್ದೇನೆ.
ಇದೇ ಸಮಯದಲ್ಲಿ ಶೃಂಗೇರಿಯಲ್ಲಿ ಸಹಸ್ರ ಚಂಡಿಯಾಗ ನಡೆಯಿತು. ಶಿವಮೊಗ್ಗೆಯ ಸುಂದರಂ ಅಯ್ಯರ್, ಬೆಂಗಳೂರಿನ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎ.ಆರ್. ಸೋಮನಾಥ ಅಯ್ಯರ್, ನಿವೃತ್ತ ಮುಖ್ಯ ನ್ಯಾಯಾಧೀಶ ಜಿ.ಕೆ. ಗೋವಿಂದಭಟ್ಟ, ಪುತ್ತೂರಿನ ಎಂ.ಎನ್. ಭಿಡೆ ಮೊದಲಾದವವರು ಈ ಯಾಗದ ಮುಖಂಡರಾಗಿದ್ದರು. ಈ ಯಾಗಕ್ಕಾಗಿ ತಮಿಳುನಾಡು ಮತ್ತು ಕೇರಳ ರಾಜ್ಯದಿಂದಲೂ ಸಾವಿರಾರು ವೈದಿಕ ಬ್ರಾಹ್ಮಣರು ಬಂದಿದ್ದರು. ಈ ಯಾಗದ ವಿಷಯಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಮತ್ತು ಒಂದು ಸ್ಮರಣ ಸಂಚಿಕೆ ತರಲು ಪ್ರಚಾರ ಸಮಿತಿಯೊಂದನ್ನು ರಚಿಸಲಾಯಿತು. ಅದಕ್ಕೆ ನಾನು ಮತ್ತು ನ್ಯಾ. ಸೋಮನಾಥ ಅಯ್ಯರ್ ಅವರು ಜಂಟಿ ಕಾರ್ಯದರ್ಶಿಗಳಾಗಿದ್ದೆವು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಾನು 'ಸಂಜಯ' ವಾರಪತ್ರಿಕೆಯ ಎರಡು ವಿಶೇಷ ಸಂಚಿಕೆಗಳನ್ನು ಪ್ರಕಟಿಸಿದ್ದೆ. ಇವು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದರಿಂದ ಸಾಕಷ್ಟು ಹಣವೂ ಸಿಕ್ಕಿತು. ಆಮೇಲೆ ಚಂಡಿಯಾಗದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸಮಿತಿಯವರು ಸಹ ನನ್ನನ್ನು ಗೌರವಿಸಿ ಕಾಣಿಕೆ ನೀಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಚಂದ್ರಮೌಳಿರಾಯರು ನನ್ನ ಬಗ್ಗೆ ಆಡಿದ ನಾಲ್ಕು ಒಳ್ಳೆಯ ಮಾತುಗಳು ಇಂದಿಗೂ ನನ್ನ ನೆನಪಿನಲ್ಲಿವೆ.
ಆದರೆ ಯಾಗ ಸಮಾಪ್ತಿಯಾದ ಕೆಲವೇ ದಿನಗಳಲ್ಲಿ ಒಂದು ದುರಂತ ಸಂಭವಿಸಿ ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿತು. ಹಿರಿಯ ಸ್ವಾಮಿಗಳಾದ ಚಂದ್ರಶೇಖರ ಭಾರತಿ ಸ್ವಾಮಿಗಳು ಒಂದು ದಿನ ಬೆಳಗ್ಗೆ ತುಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಆಕಸ್ಮಾತ್ ಜಲಸಮಾಧಿ ಹೊಂದಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿ, ಲಕ್ಷಾಂತರ ಶಿಷ್ಯರು ಶೃಂಗೇರಿಗೆ ಬರಲಾರಂಭಿಸಿದರು. ನಾನೂ ಸಹ ಅತ್ಯಂತ ಭಾರವಾದ ಹೃದಯದಿಂದ ದಾವಣಗೆರೆಗೆ ಹಿಂತಿರುಗಿದೆ. ಸ್ಮರಣ ಸಂಚಿಕೆಗಳ ಮಾರಾಟದಿಂದ ಸಾಕಷ್ಟು ಹಣ ಬಂದಿತ್ತು. ಆದ್ದರಿಂದ ಭಾರವಾದ ಹೃದಯವೂ ಆಗಾಗ್ಗೆ ಹಗುರವಾಗುತ್ತಿತ್ತು.
ಕೆಳದಿ ಮತ್ತು ಕಾಗೋಡು
ದಾವಣಗೆರೆಯು ನನ್ನ ವಾಸಸ್ಥಳವಾಗಿದ್ದರೂ ಮಲೆನಾಡು, ಅದರಲ್ಲಿಯೂ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆ ನನ್ನ ಕರ್ಮಭೂಮಿಯಾಗಿತ್ತೆಂದು ಹೇಳಿದರೆ ತಪ್ಪಾಗದು. ಆ ಜಿಲ್ಲೆಯಲ್ಲಿ ಏನೇ ಘಟನೆ ನಡೆಯಲಿ, ಸಭೆ, ಸಮಾರಂಭಗಳಾಗಲಿ, ಸಮ್ಮೇಳನಗಳಾಗಲಿ ನನಗೆ ಆಮಂತ್ರಣವಿರುತ್ತಿತ್ತು. ಏಕೆಂದರೆ ಜಿಲ್ಲೆಯ ಜನ ಹೊರಗಿನ ಮುಖಂಡರನ್ನು, ಕಾರ್ಯಕರ್ತರನ್ನು, ಪತ್ರಕರ್ತರನ್ನು ಕರೆಸಿ, ಸತ್ಕರಿಸಿ, ಸನ್ಮಾನ ಮಾಡುವುದರಲ್ಲಿ ನಿಸ್ಸೀಮರು. ತಮ್ಮ ಮನೆಯಲ್ಲಿ ಅಥವಾ ಊರಿನಲ್ಲೇ ಏನೇ ಸಮಾರಂಭ ನಡೆಯಲಿ, ಸಭೆ, ಸಮಾರಂಭಗಳಾಗಲಿ, ಹೊರಗಿನವರನ್ನು, ಅದರಲ್ಲಿಯೂ ತಮಗೆ ಬೇಕಾದವರನ್ನು ಅತಿಥಿಗಳಾಗಿ ಕರೆಸಿ, ಸತ್ಕರಿಸುವುದು ಅವರ ಸಂಪ್ರದಾಯ. 1942ರಲ್ಲಿ ಚಳವಳಿ ನಡೆಯುತ್ತಿದ್ದಾಗ, ಈಸೂರಿನಲ್ಲಿ ಗಲಭೆಯಾದಾಗ, ಅಲ್ಲಿಗೆ ಹೋಗಿ, ಜೈಲಿನಲ್ಲಿ ಗಲ್ಲಿಗೇರಿಸಿದ ನಾಲ್ವರು ಸ್ವಾತಂತ್ರ್ಯ ಯೋಧರ ಹೋರಾಟದ ವಿವರಗಳನ್ನು ಫೋಟೋ ಸಹಿತವಾಗಿ ವರದಿ ಮಾಡಿದ್ದೆ. ಈ ವರದಿಯ ಪ್ರಕಟಣೆಯ ನಂತರ, ಸಂಜಯ ವಾರಪತ್ರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ಬಹಳ ಜನಪ್ರಿಯವಾಯಿತು. ಆ ಕಾಲದಲ್ಲಿ ರಾಷ್ಟ್ರೀಯ ಮುಖಂಡರಾಗಿದ್ದ ಗಾಂಧಿವಾದಿ ಬಸವಾನಿ ರಾಮಶರ್ಮರು ನನಗೊಂದು ಪತ್ರ ಬರೆದು ನನ್ನನ್ನು ಅಭಿನಂದಿಸಿದ್ದರು. ಆ ಪತ್ರ ಈಗಲೂ ನನ್ನ ಬಳಿ ಇದೆ.
ನಗರ ಪ್ರಾಂತ್ಯದ ಪಾಳೆಯಗಾರ ಶಿವಪ್ಪನಾಯಕ ರಾಜಧಾನಿ ನಗರವನ್ನು ನೋಡಬೇಕೆಂಬ ಆಸೆ ನನಗೆ ಬಹಳ ಇತ್ತು. ಈ ಊರಿನ ಶ್ರೀಮಂತರಾಗಿದ್ದ ಶ್ರೀನಿವಾಸರಾಯರು ಶಿವಮೊಗ್ಗದಲ್ಲಿಯೇ ವಾಸಿಸುತ್ತಿದ್ದರು. ಅವರು ಭಾರಿ ಉದ್ಯಮಿಗಳು. ಕೆನರಾ ಬ್ಯಾಂಕಿನ ಡೈರೆಕ್ಟರರೂ ಆಗಿದ್ದರು. ದೀಪಾವಳಿ ಸಮಯದಲ್ಲಿ ನಗರದಲ್ಲಿ ನಡೆಯುವ ದೀಪೋತ್ಸವ ಆ ಭಾಗದಲ್ಲಿ ಬಹಳ ಪ್ರಸಿದ್ಧಿ. ಅದನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಜನರು ಬರುತ್ತಾರೆ. ಒಮ್ಮೆ ಶ್ರೀನಿವಾಸರಾಯರು ಈ ಉತ್ಸವಕ್ಕೆ ಬರಲು ನನಗೂ ಆಮಂತ್ರಣ ಕೊಟ್ಟಿದ್ದರು. ಎರಡು ದಿನ ಅಲ್ಲಿದ್ದು, ಅಲ್ಲಿನ ಜನರ ಉತ್ಸಾಹ ಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಹಾಗೂ ಶಿವಪ್ಪನಾಯಕನ ಅರಮನೆ, ಕೋಟೆ ಸ್ಥಳಗಳನ್ನು ನೋಡಿ ಬಂದೆ. ಶ್ರೀನಿವಾಸರಾಯರು ಶಿವಪ್ಪನಾಯಕನ ಬಗ್ಗೆ ಅನೇಕ ಅಮೂಲ್ಯ ವಿಷಯಗಳನ್ನು ನನಗೆ ತಿಳಿಸಿದ್ದರು. ಶಿವಪ್ಪ ನಾಯಕನ ಶಿಸ್ತಿನ ಬಗ್ಗೆ ಮತ್ತು ಹೈದರಾಲಿಯ ವಿರುದ್ಧ ಅವನು ಮಾಡಿದ ಯುದ್ಧದ ಬಗ್ಗೆ ಅವರು ತಿಳಿಸಿದ ವಿಷಯಗಳು ಅಮೂಲ್ಯವಾಗಿದ್ದವು. ಅವನ ಅರಮನೆಯ ಒಂದು ಚಿತ್ರವನ್ನು ಬರೆದುಕೊಟ್ಟಿದ್ದರು. ಆದರೆ ದುರ್ದೈವದಿಂದ ಈಗ ನಾನು ಅದನ್ನು ಕಳೆದುಕೊಂಡಿದ್ದೇನೆ.
ಸಾಗರ ತಾಲ್ಲೂಕು ಮತ್ತಿಕೊಪ್ಪ ಎಂಬ ಗ್ರಾಮದಲ್ಲಿ ಲಕ್ಷ್ಮೀನಾರಾಯಣಪ್ಪ ಎಂಬುವರಿದ್ದರು. ಅವರು ಸಾಗರದ ಅನ್ನಾವರ ಅಡಿಕೆ ಮಂಡಿಯ ಅಧ್ಯಕ್ಷರಾಗಿದ್ದರು. ನಾನು ಅನ್ನಾವರ ಅಡಿಕೆ ಮಂಡಿಯಲ್ಲಿಯೇ ಇರುತ್ತಿದ್ದುದರಿಂದ, ನನಗೂ ಅವರಿಗೂ ತುಂಬಾ ಸ್ನೇಹವಾಯಿತು. ಲಕ್ಷ್ಮೀನಾರಾಯಣಪ್ಪನವರು ಅಡಿಕೆ ಬೆಳೆಗಾರರಷ್ಟೇ ಅಲ್ಲ, ಬೆಳೆಗಾರರ ಮುಖಂಡರೂ ಆಗಿದ್ದರು. ಅಗರ್ಭ ಶ್ರೀಮಂತರಾಗಿದ್ದರೂ ನಿಗರ್ವಿಗಳು. ತುಂಬಾ ಸ್ನೇಹಪರರು. ಒಂದೆರಡು ಬಾರಿ ನನ್ನನ್ನು ಮತ್ತಿಕೊಪ್ಪಕ್ಕೆ ಕರೆದುಕೊಂಡು ಹೋಗಿ, ತಮ್ಮ ಅಡಿಕೆ ತೋಟವನ್ನು ತೋರಿಸಿ ತಾವು ಮಾಡಿದ್ದ ಸಹಾಯವನ್ನು ವಿವರಿಸಿದ್ದರು. ಆಗ ಅವರು ತಮ್ಮ ಮನೆಯ ಮುಂದಿರುವ ಸುಮಾರು 100 ಎಕರೆ ಖಾಲಿ ಜಾಗ ತೋರಿಸಿ, ಇದನ್ನು ತಮಗೆ ಕೊಡಿಸಿದರೆ, ಅನಾನಸ್ ಬೆಳೆಯುವುದಾಗಿಯೂ, ಸಾಧ್ಯವಾದರೆ ಒಂದು ಫ್ಯಾಕ್ಟರಿ ಸಹ ತೆರೆಯುವುದಾಗಿಯು ಹೇಳಿದರು. ಆಗ ಕೋಲಾರದ ನಾರಾಯಣ ಗೌಡರು ಕೃಷಿ ಮಂತ್ರಿಯಾಗಿದ್ದರು. ಬಿ.ಡಿ. ಜತ್ತಿಯವರು ಮುಖ್ಯಮಂತ್ರಿಯಾಗಿದ್ದರು. ಅವರಿಬ್ಬರೂ ನನಗೆ ತುಂಬಾ ಬೇಕಾದವರಾಗಿದ್ದರು. ಅದ್ದರಿಂದ ಲಕ್ಷ್ಮೀನಾರಾಯಣಪ್ಪನವರು ಈ ವಿಚಾರ ತಿಳಿಸಿದಾಗ ಕೂಡಲೇ ಒಪ್ಪಿ ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ಕೊಟ್ಟೆ. ಅರ್ಜಿ ಕೊಟ್ಟರು. ಒಂದೇ ತಿಂಗಳಲ್ಲಿ ಮಂಜೂರು ಮಾಡಿಸಿಕೊಟ್ಟೆ. ಇದರಿಂದ ಲಕ್ಷ್ಮೀನಾರಾಯಣಪ್ಪನವರ ಸ್ನೇಹ ಮತ್ತಷ್ಟು ಗಾಢವಾಯಿತು. ಕೆಲವು ವರ್ಷಗಳ ನಂತರ ನಾನು ಮತ್ತೀಕೊಪ್ಪಕ್ಕೆ ಹೋಗಿದ್ದಾಗ, ಆ ನೂರು ಎಕರೆ ಜಮೀನಿನಲ್ಲಿ ಅನಾನಸ್ ಬೆಳೆದಿರುವುದನ್ನೂ, ಪಕ್ಕದಲ್ಲಿ ಫ್ಯಾಕ್ಟರಿ ಸಹ ಸ್ಥಾಪಿಸಿರುವುದನ್ನೂ ಕಂಡು ಸಂತೋಷಪಟ್ಟಿದ್ದೆ. ಆದರೆ ಇತ್ತೀಚೆಗೆ ಆ ಅನಾನಸ್ ತೋಟ ನಾಶವಾಗಿರುವುದಾಗಿಯೂ, ಫ್ಯಾಕ್ಟರಿ ಸಹ ಈಗ ಇಲ್ಲವೆಂದೂ ತಿಳಿದು ತುಂಬಾ ನೋವಾಯಿತು. ತೋಟ ಇದ್ದ ಸ್ಥಳದಲ್ಲಿ ಲಕ್ಷ್ಮೀನಾರಾಯಣಪ್ಪನವರ ಮಗ ಭವ್ಯ ಬಂಗಲೆ ಕಟ್ಟಿಸಿರುವುದನ್ನೂ ನಾನು ನೋಡಿ ಬಂದೆ.
ಮತ್ತಿಕೊಪ್ಪದ ಲಕ್ಷ್ಮೀನಾರಾಯಣಪ್ಪನವರು ಎಷ್ಟು ಸ್ನೇಹಜೀವಿಗಳೋ ಅಷ್ಟೇ ಛಲವಾದಿಗಳು. ಒಮ್ಮೆ ಯಾವುದಾದರೊಂದು ನಿರ್ಧಾರ ತೆಗೆದುಕೊಂಡರೆ, ಅದನ್ನು ಯಾವ ಕಾರಣಕ್ಕೂ ಬದಲಾಯಿಸುವವರಲ್ಲ.
ಸಾಗರ ಮತ್ತು ಮತ್ತಿಕೊಪ್ಪದ ಮಧ್ಯೆ ಕೆಳದಿ ಎಂಬ ಗ್ರಾಮವಿದೆ. ಇದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಒಂದು ವೀರಶೈವ ಮಠವಿದೆ. ಈ ಮಠಕ್ಕೆ ನೂರಾರು ಎಕರೆ ಅಡಿಕೆ ತೋಟ, ಭತ್ತದ ಗದ್ದೆಗಳು ಮತ್ತು ಇನ್ನಿತರ ಆಸ್ತಿಗಳಿದ್ದವು. ಈ ಆಸ್ತಿ ವಿಷಯದಲ್ಲಿ ವಿವಾದಗಳಿದ್ದವು. ಇಲ್ಲಿನ ಮಠದ ಸ್ವಾಮಿಯ ವಿಷಯದಲ್ಲಿಯೂ ಅನೇಕ ದೂರುಗಳಿದ್ದವು. ಈ ಸ್ವಾಮಿಯನ್ನು ಕೆಳಗಿಳಿಸಿ, ಬೇರೆಯವರನ್ನು ಪೀಠಾಧಿಪತಿಯನ್ನಾಗಿ ಮಾಡಬೇಕೆಂದು ಸಾಗರದ ವೀರಶೈವ ಪ್ರಮುಖರನೇಕರು ಅಭಿಪ್ರಾಯ ಪಡುತ್ತಿದ್ದರು.
(ಮುಂದುವರಿಯುವುದು)
-ಕೆ. ಶಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


