ನೆನಪಿನ ಅರುಣೋದಯ

ರಾಷ್ಟ್ರಕವಿ ಕುವೆಂಪು ಜನಿಸಿದ್ದು ಮಲೆನಾಡಿನ ಕುಪ್ಪಳಿಯಲ್ಲಿ. ಆದರೆ ಅವರು ಜೀವಿತದ ಬಹುಕಾಲ ಕಳೆದಿದ್ದು, ಸಾಹಿತ್ಯ ಕೃಷಿ ಮಾಡಿದ್ದು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ 'ಉದಯರವಿ' ಹೆಸರಿನ ನಿವಾಸದಲ್ಲಿ. ಉದಯರವಿ ಈಗ ಸಾಹಿತ್ಯಾಸಕ್ತರ ಸ್ಫೂರ್ತಿಯ ತಾಣ.
ಕುವೆಂಪು ಅವರು ಮೈಸೂರಿನಲ್ಲಿಯೇ ಓದಿ ಮುಂದೆ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, 1956ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳೂ ಆದರು. ಮೈಸೂರಿಗೆ ಬಂದ ಅವರು, ಅಂದಿನ ಒಂಟಿಕೊಪ್ಪಲು, ಇಂದಿನ ವಾಣಿವಿಲಾಸ ಮೊಹಲ್ಲಾ 5ನೇ ಮುಖ್ಯ ರಸ್ತೆಯ 12ನೇ ಕ್ರಾಸಿನಲ್ಲಿ 100 ಬೈ 120 ಅಳತೆಯ ವಿಶಾಲ ನಿವೇಶನ ಖರೀದಿಸಿದರು. 1936ರಲ್ಲಿ ಉದಯರವಿ ಮನೆ ಕಟ್ಟಿಸಿದರು. ಈ ಮನೆ ಮೂರು ಹಂತದಲ್ಲಿ ಕಟ್ಟಲಾಗಿದೆ. ಕೆಲ ಭಾಗ ಆರ್‌ಸಿಸಿ, ಕೆಲ ಭಾಗ ಮಂಗಳೂರು ಹೆಂಚಿನಿಂದ ಕೂಡಿ ವಿಶಾಲವಾಗಿದೆ.
1936ರಿಂದ 1994ರ ನ.11ರಂದು ನಿಧನರಾಗುವ ತನಕ ಇಲ್ಲಿಯೇ ವಾಸವಿದ್ದರು. ಅವರ ನಿಧನರಾದಾಗ ಈ ಮನೆಯನ್ನು ಸ್ಮಾರಕ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಕುಪ್ಪಳಿಯಲ್ಲಿ ಪೂರ್ವಜರು ಕಟ್ಟಿಸಿದ 200 ವರ್ಷ ಹಳೆಯ ಮನೆ ನವೀಕರಿಸಿ, ಸ್ಮಾರಕ ಮಾಡಲು ತೋರಿಸಿದ ಆಸಕ್ತಿಯನ್ನು ಮೈಸೂರು ಮನೆಯ ವಿಚಾರದಲ್ಲಿ ತೋರಿಸಲಿಲ್ಲ. ಈಗ ಇಲ್ಲಿ ಕುವೆಂಪು ಪುತ್ರಿ ತಾರಿಣಿ ಹಾಗೂ ಅಳಿಯ ಡಾ.ಕೆ. ಚಿದಾನಂದಗೌಡ ವಾಸವಾಗಿದ್ದಾರೆ.
ಮಲೆನಾಡಿನಿಂದ ಬಂದ ಕುವೆಂಪುಗೆ ಹಸಿರಿನ ಮೇಲೆ ಮಮಕಾರ. ಹೀಗಾಗಿ ಮನೆ ಆವರಣದಲ್ಲಿ ನಾನಾ ಗಿಡಮರಗಳಿವೆ. ಅವುಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅವರು ಕೂರುತ್ತಿದ್ದ ಬೆತ್ತದ ಕುರ್ಚಿ, ಬರೆಯುತ್ತಿದ್ದ ಮೇಜು ಮತ್ತು ಕುರ್ಚಿ, ಮಂಚ, ಅಲ್ಮೇರಾ, ಪುಸ್ತಕಗಳನ್ನು ಅದೇ ರೀತಿ ಇರಿಸಲಾಗಿದೆ. ಸಿ.ಆರ್. ಸಿಂಹ ಅಭಿನಯದ ರಸಋಷಿ ಕುವೆಂಪು ಚಿತ್ರದ ಚಿತ್ರೀಕರಣ ಉದಯರವಿಯಲ್ಲಿ ನಡೆದಿತ್ತು.
ಉದಯರವಿ ಮನೆಯನ್ನು ಕುವೆಂಪು ಸ್ಮಾರಕ ಮಾಡಲು ಸರ್ಕಾರ ಮನಸ್ಸು ಮಾಡಲಿಲ್ಲ. ನಾವು ಮತ್ತೆ ಕೇಳಲು ಹೋಗಲಿಲ್ಲ. ಆದರೆ ಸಾಹಿತ್ಯಾಸಕ್ತರು ಆಗಾಗ ಬರುತ್ತಿರುತ್ತಾರೆ. ಕೆಲವರು ಹೊರಗಿನಿಂದಲೇ ಮನೆಯನ್ನು ವೀಕ್ಷಿಸಿ ಹೋದರೆ ಮತ್ತೆ ಕೆಲವರು ಒಳಬಂದು, ಕುವೆಂಪು ಬಳಸುತ್ತಿದ್ದ ವಸ್ತುಗಳನ್ನು ವೀಕ್ಷಿಸಿ, ಮಾಹಿತಿ ಪಡೆದು ಹೋಗುತ್ತಾರೆ. ಸಾಕಷ್ಟು ಮಹಿಳೆಯರು ಬರುತ್ತಾರೆ. ತಾರಿಣಿ ಅವರೊಂದಿಗೆ ನೆನಪಿನ ಬುತ್ತಿ ಹಂಚಿಕೊಳ್ಳುತ್ತಾರೆ.
- ಡಾ.ಕೆ. ಚಿದಾನಂದಗೌಡ,
ಕುವೆಂಪು ಅಳಿಯ, ಕುವೆಂಪು ವಿವಿ ನಿವೃತ್ತ ಕುಲಪತಿ
- ಅಂಶಿ ಪ್ರಸನ್ನಕುಮಾರ್
ಚಿತ್ರ: ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


