ಸಕಲ ಚೇತನ

ಬೆಳ್ಳಂಬೆಳಗ್ಗೆ ಹಾಗೂ ಸಂಜೆ ಹೋಗಿಬರುವ ಬೆಂಗಳೂರು-ಮೈಸೂರು ರೈಲಲ್ಲಿ ಓಡಾಡುವುದು ಕಣ್ಣಿದ್ದವರಿಗೂ ಕಷ್ಟ. ಅಂಥದರಲ್ಲಿ, ಕಣ್ಣಿಲ್ಲದವರೊಬ್ಬರು ನಿತ್ಯ ಬೆಳಿಗ್ಗೆ ರೈಲಿನಲ್ಲಿ ಹೋಗಿ ರಾತ್ರಿ ರೈಲಿನಲ್ಲಿ ಮರಳಿ ಮನೆ ಸೇರುವ ಬಗೆ ಎಲ್ಲರನ್ನೂ ಅಚ್ಚರಿಗೊಳಿಸುವಂತಿದೆ.
ಇಂತಹ ವಿಶೇಷ ಚೇತನ ನೌಕರರೊಬ್ಬರನ್ನು ನೋಡುವ ಬಯಕೆಯಿದ್ದರೆ ಬೆಳಿಗ್ಗೆ 6 ಗಂಟೆ 20 ನಿಮಿಷಕ್ಕೆ ಬೆಂಗಳೂರಿನ ಕೆಂಗೇರಿ ರೈಲು ನಿಲ್ದಾಣದಲ್ಲಿ ಕಾಯಬಹುದು. ಇವರು ನಂದಿನಿ ಲೇ ಔಟ್ನಲ್ಲಿರುವ ಮನೆಯಿಂದ ನಸುಕಿನಲ್ಲಿ ಎದ್ದು ತಯಾರಾಗಿ ಬಸ್ಸ್ಟಾಪ್ಗೆ ಬಂದು ಬಸ್ಸು ಹಿಡಿದು ಆರು ಗಂಟೆಗೆ ಕೆಂಗೇರಿ ಬಸ್ ನಿಲ್ದಾಣದಲ್ಲಿ ಇಳಿದು 6.20ರೊಳಗೆ ರೈಲು ನಿಲ್ದಾಣದ ಮೂರನೆ ಪ್ಲಾಟ್ಫಾರಂನಲ್ಲಿ ರೈಲಿಗಾಗಿ ಕಾಯುತ್ತಾರೆ.
ಹೆಸರು ನಾಗರಾಜ್. ಮೈಸೂರಿನಲ್ಲಿರುವ ರೈಲ್ವೇ ವಿಭಾಗೀಯ ಕಚೇರಿಯಲ್ಲಿ ಸೇವೆ. ಇಚ್ಛಾಶಕ್ತಿ ಮತ್ತು ಊರುಗೋಲಿನ ಸಹಾಯದಿಂದ ಒಬ್ಬಂಟಿಯಾಗಿ ರೈಲು ಪಯಣ ಸಾಗಿಸುವವರಾಗಿದ್ದರೂ, ಬಾಳ ಪಯಣದಲ್ಲಿ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ನಸುಕಿನಲ್ಲೇ ರೊಟ್ಟಿ, ದೋಸೆ, ಚಪಾತಿ ಇತ್ಯಾದಿ ತಿಂಡಿ ಮಾಡಿ ಡಬ್ಬಿಗೆ ಹಾಕಿ ನಸುನಗುತ್ತಾ ಕಳಿಸಿಕೊಡುವ ಹೆಂಡತಿ ಅನ್ನಪೂರ್ಣಳಿಗೆ ತಾನು ರೈಲು ಡಬ್ಬಿಯಲ್ಲಿ ಕುಳಿತುಕೊಂಡ ಬಗ್ಗೆ ಮೊಬೈಲ್ನಲ್ಲಿ ಮಾಹಿತಿ ಕೊಡುತ್ತಾರೆ. ಮಾರ್ಗ ಮಧ್ಯ ಬರುವ ರೈಲ್ವೇ ಸ್ಟೇಷನ್, ಕ್ರಾಸಿಂಗ್ಗಳ ಬಗ್ಗೆಯೂ ಸಹ ಪ್ರಯಾಣಿಕರ ಜೊತೆ ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಆಗಾಗ ತಮ್ಮ ಬ್ರೈಲಿ ಗಡಿಯಾರ ನೋಡಿಕೊಳ್ಳುತ್ತಾ, ಎಂಟು ಗಂಟೆಯ ವೇಳೆಗೆ ಸೀಟಿನಿಂದ ಎದ್ದು ವಾಶ್ಬೇಸಿನ್ನಲ್ಲಿ ಕೈತೊಳೆದು ತಿಂಡಿ ಡಬ್ಬಿ ತೆಗೆದು ತಿಂದು, ಡಬ್ಬಿ ತೊಳೆದು ಬ್ಯಾಗ್ನಲ್ಲಿಟ್ಟುಕೊಳ್ಳುತ್ತಾರೆ.
ಇವರು ಹುಟ್ಟು ಕುರುಡರು. ಕುಣಿಗಲ್ ತಾಲೂಕಿನ ಹಚ್ಚೇನಹಳ್ಳಿ ಮೂಲ ಊರು. ಒಂದರಿಂದ ಎಂಟನೆ ತರಗತಿಯವರೆಗೆ ಸಿದ್ದಗಂಗಾ ಅಂಧರ ಶಾಲೆಯಲ್ಲಿ ಕಲಿಕೆ. ನಂತರ ಬಿಜಿಎಸ್ ಅಂಧರ ಶಾಲೆಯಲ್ಲಿ ಪಿಯುಸಿ. ಎಂಟು ವರುಷ ಬೆಂಗಳೂರಿನ ಎಚ್ಎಎಲ್ ಬಳಿ ಎಸ್ಟಿಡಿ ಬೂತ್ ನಡೆಸಿದರು. ಎಸ್ಟಿಡಿ ಬೂತ್ ಬೇಡಿಕೆ ಕಡಿಮೆಯಾದ ನಂತರ ಜೆ.ಪಿ.ನಗರದ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್ ಅವರು ತಯಾರಿಸುತ್ತಿದ್ದ ಬ್ಯಾಗ್ಗಳನ್ನು ಬೆಂಗಳೂರು, ಶಿವಮೊಗ್ಗ, ತುಮಕೂರುಗಳಿಗೆ ಹೋಗಿ ಮಾರಿ ಸಂಪಾದಿಸುತ್ತಿದ್ದರು. ಈಗ ರೈಲ್ವೇ ಇಲಾಖೆಯಲ್ಲಿ ಸೇವೆ.
ಬೆಂಗಳೂರಿನಲ್ಲೇ ಸೇವೆ ಸಲ್ಲಿಸಬಾರದಿತ್ತೆ? ವಿಕಲಚೇತನ ಕೋಟಾದಡಿ ಬೆಂಗಳೂರಿನಲ್ಲಿ ಒಂದು ಖಾಲಿ ಹುದ್ದೆ ಮತ್ತು ಮೈಸೂರಿನಲ್ಲಿ ಒಂದು ಖಾಲಿ ಹುದ್ದೆ ಇತ್ತು. ಬೆಂಗಳೂರಿನ ಇವರು ಮತ್ತು ದೊಡ್ಡಗುಬ್ಬಿಯ ಇನ್ನೊಬ್ಬ ವಿಶೇಷ ಚೇತನರು ಆಯ್ಕೆಯಾಗಿದ್ದರು. ದೊಡ್ಡಗುಬ್ಬಿಯಿಂದ ನಿತ್ಯ ಮೈಸೂರಿನವರೆಗೆ ತಿರುಗಾಡುವುದು ಅವರಿಗೆ ಕಷ್ಟವಾಗುತ್ತದೆ ಎಂದು ನಾನೇ ಬೆಂಗಳೂರು-ಮೈಸೂರು ತಿರುಗಾಡುವ ನಿರ್ಧಾರಕ್ಕೆ ಬಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ರೈಲು ಬೋಗಿಯಲ್ಲಿರುವಾಗ ತಮ್ಮಂತಿರುವ ಹಲವು ಮಿತ್ರರಿಗೆ ಕಂಪ್ಯೂಟರ್ ಕಲಿಕೆ, ತರಬೇತಿ ಇತ್ಯಾದಿ ಮಾಹಿತಿ, ಅದಕ್ಕೆ ಎಲ್ಲಿಗೆ ಹೋಗಬೇಕೆಂಬುದನ್ನೂ ಮಾರ್ಗ ಸಮೇತ ಹೇಳುತ್ತಾರೆ! ರೈಲು ತಪ್ಪಿದರೆ ಹತ್ತಿರದಲ್ಲಿಯೇ ಇರುವ ಕೆಂಗೇರಿ ಬಸ್ಸು ನಿಲ್ದಾಣದವರೆಗೆ ನಡೆದು ಹೋಗಿ ಮೈಸೂರಿನ ಬಸ್ ಹತ್ತಿ ಹೋಗುತ್ತಾರೆ. ಹೆತ್ತವರು ವಿಕಲ ಚೇತನರನ್ನು ಕಡೆಗಣಿಸದೆ ಹೋದರೆ, ಅವರೂ ಸಕಲ ಚೇತನರಾಗಬಲ್ಲರು ಎನ್ನುವ ಸ್ವಾನುಭವ ಹೊಂದಿದ್ದಾರೆ. ಶುಭಾಶಯ ಹೇಳಲು: 9945603452.
-ಬಿ.ಎಸ್.ವೆಂಕಟಾಚಲ ಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


