ಬದುಕು ಜಿಗಿದಾಗ...
ನದಿಯೊಂದು ಕಡಲು ಸೇರುವ ಕ್ಷಣ. ಅಲ್ಲಿ ಪ್ರವಾಸಿಗನ ಹರ್ಷಕ್ಕೆ ಅದೆಷ್ಟೋ ರೆಕ್ಕೆಪುಕ್ಕ ಅಂಟಿಕೊಳ್ಳುತ್ತದೆ. ದಡ ಕಾಣುವ...

ನದಿಯೊಂದು ಕಡಲು ಸೇರುವ ಕ್ಷಣ. ಅಲ್ಲಿ ಪ್ರವಾಸಿಗನ ಹರ್ಷಕ್ಕೆ ಅದೆಷ್ಟೋ ರೆಕ್ಕೆಪುಕ್ಕ ಅಂಟಿಕೊಳ್ಳುತ್ತದೆ. ದಡ ಕಾಣುವ ಹಂಬಲದಲ್ಲಿ ಕಣ್ಣು ಸೋಲುತ್ತಿದ್ದರೂ, ಮನದ ಒಳಗಣ್ಣು ತಣಿಯುತ್ತದೆ. ಹೇಳತೀರದೆ ಕುಣಿಯುತ್ತದೆ. ಅಲ್ಲಿ ಸೃಷ್ಟಿಯಾಗುವ ಮಾಯಾಜಗತ್ತನ್ನು ಒಂದೇ ಸೆಕೆಂಡಿನಲ್ಲಿ ಬಾಚುವ ಕ್ಯಾಮೆರಾಕ್ಕೆ ಸ್ವರ್ಗವೇ ಸೆರೆ ಆಯಿತಲ್ಲ ಎಂಬ ಭ್ರಮೆ. ನೀರ ಮೈಯ್ಯನ್ನು ತಟ್ಟುತ್ತ ಯಾವುದೋ ದಿಕ್ಕಿನಿಂದ ಬೀಸಿ ಬಂದ ಗಾಳಿ ಕೂದಲನ್ನು ತೀಡಿದಾಗಲೂ ಮನದ ಭಾರವೆಲ್ಲ ನಾಲ್ಕು ಗ್ರಾಮಿಗೆ ಇಳಿದಷ್ಟು ಹಗುರ.
ಇದು ಹಿನ್ನೀರನ್ನು ಕಂಡು ನಮ್ಮಲ್ಲಿ ಕಡಲಾದ ಸಂಭ್ರಮ. ಆದರೆ, ಅದೇ ಹಿನ್ನೀರ ತಳದಲ್ಲಿ ನಡೆಯುವ ಯುದ್ಧ ನಮಗೆ ಕಾಣದು. ಅಲ್ಲೊಂದು ಮೀನು ಹೋರಾಟ ಶುರುಮಾಡಿಕೊಂಡಿದೆ. ಇಷ್ಟು ದಿನ ನದಿಯ ಸಿಹಿನೀರಿಗೆ ಮೈ ಒದ್ದೆ ಮಾಡಿಕೊಂಡ ಅದಕ್ಕೆ ತಕ್ಷಣ ಉಪ್ಪು ನೀರಿನ ಸ್ನಾನವಾದಾಗ ಉಸಿರಾಟದಲ್ಲೇ ಏರುಪೇರಾಗಿದೆ. ಎಲ್ಲಿ ನೋಡಿದರೂ ಸಾವೇ ಕಾಣಿಸುತ್ತಿದೆಯಲ್ಲ ಎಂಬ ಆತಂಕ ಶುರುವಾಗಿದೆ. ಅಂಥ ಆತಂಕ ಅದಕ್ಕೆ ಕೆಲವೇ ಕೆಲವು ದಿನ ಇರುತ್ತದಷ್ಟೇ. 'ಯಾವುದೀ ಉಪ್ಪು ನೀರಿನ ಲೋಕ?' ಎಂಬ ಪ್ರಶ್ನೆಯನ್ನು ತನ್ನೊಳಗೆ ಬಿಟ್ಟುಕೊಂಡು, ತಳದಲ್ಲಿ ತನ್ಮಯವಾಗಿ ಯೋಚಿಸುತ್ತದೆ. ಅಪರೂಪಕ್ಕೊಮ್ಮೆ ಮುಂದೆ ಸಾಗುವ ಧೈರ್ಯ ತೋರುತ್ತದೆ. ಕೊನೆಗೂ ಆ ಉಪ್ಪು ನೀರು ಅದರ ಕಣ್ಣಿಗೆ ಸಿಹಿನೀರಂತಲೇ ಕಾಣುತ್ತದೆ.
ಬದುಕೂ ಅಷ್ಟೇ. ಒಂದು ವಾತಾವರಣದಿಂದ ಇನ್ನೊಂದು ಕಡೆಗೆ ಜಿಗಿದಾಗ, ಅಲ್ಲೂ ಪುಟ್ಟ ಸಂಘರ್ಷದ ಅನುಭವವಾಗುತ್ತದೆ. ಅಲ್ಲಿನ ಮಾತುಗಳಿಗೆ, ಕೆಲಸಗಳಿಗೆ ಒಗ್ಗಿಕೊಂಡು ಸಾಗುವ ಧೈರ್ಯ ತೋರಿದರೆ ಯಾವ ಹೊಸ ಗ್ರಹವೂ ಭೂಮಿಯಷ್ಟೇ ನಿರ್ಭಯತೆಯನ್ನು ದಯಪಾಲಿಸುತ್ತದೆ. ಯಾವುದಕ್ಕೂ ಅರ್ಪಿಸಿಕೊಳ್ಳುವುದು ಮುಖ್ಯ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


