ಬೈಟುಕಾಫಿ

ಜೀವರಸದ ದೂರಯಾನ

ಜೀವರಸದ ದೂರಯಾನ
Published On :

ಸರಿಯಾಗಿ 92 ವರ್ಷದ ಹಿಂದೆ ಇದೇ ದಿನ, ಟೊರಾಂಟೋ ಆಸ್ಪತ್ರೆಯಲ್ಲಿ ಲಿಯೊನಾರ್ಡ್ ಥಾಂಪ್ಸನ್ ಎಂಬ ತರುಣ ನರಳುತ್ತ ಸಾಯಲು ಬಿದ್ದಿದ್ದ. ಅವನನ್ನು ಕಾಡುತ್ತಿದ್ದ ಮಧುಮೇಹ ಉಲ್ಬಣ ಸ್ಥಿತಿಗೆ ಹೋಗಿತ್ತು. ಈತ ಬದುಕುವುದಿಲ್ಲ ಎಂದು ವೈದ್ಯರು ಶರಾ ಬರೆದಿದ್ದರು. ಆದರೆ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್ ಎಂಬಿಬ್ಬರು ವಿಜ್ಞಾನಿಗಳ ಬಳಿ ಒಂದು ಔಷಧವಿತ್ತು. ಅದನ್ನು ಆತನಿಗೆ ಚುಚ್ಚುವ ಕ್ಷಣದಲ್ಲಿ, ತಾವು ಮನುಕುಲಕ್ಕೆ ಮಹಾ ಕೊಡುಗೆ ಕೊಡುತ್ತಿದ್ದೇವೆ ಎಂಬ ಸುಳಿವೂ ಅವರಿಗಿರಲಿಲ್ಲ. ಹಾಗೆ ಇಂಜೆಕ್ಷನ್ ಚುಚ್ಚಿಸಿಕೊಂಡ ತರುಣ, ವೈದ್ಯವೃಂದಕ್ಕೆ ಅಚ್ಚರಿಯಾಗುವಂತೆ ಬದುಕುಳಿದ.
ಆ ಮದ್ದಿನ ಹೆಸರು ಇನ್ಸುಲಿನ್.
ಇನ್ಸುಲಿನ್, ಈ ಶತಮಾನದ ಅತ್ಯುತ್ಕೃಷ್ಟ ವೈಜ್ಞಾನಿಕ ಶೋಧಗಳಲ್ಲೊಂದು. ಇದನ್ನು ಯಾರೂ ಶೋಧಿಸದೆ ಇದ್ದಿದ್ದರೆ ಏನಾಗುತ್ತಿತ್ತು? ಮಧುಮೇಹದಿಂದ ಪ್ರತಿನಿತ್ಯ ಸಾವಿರಾರು ಜನ ಸಾವಿಗೀಡಾಗುತ್ತಿದ್ದರು. ಹುಟ್ಟುವಾಗಲೇ ದೇಹದಲ್ಲಿ ಸಕ್ಕರೆ ತುಂಬಿಕೊಂಡ ಕಂದಮ್ಮಗಳು ನೀಲಿಗಟ್ಟಿ ಚಡಪಡಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು. ದೇವರು ಕೆಲವೊಮ್ಮೆ ಔಷಧದ ರೂಪದಲ್ಲೂ ಬರುತ್ತಾನೆ- ಹೆಚ್ಚಾಗಿ ಇನ್ಸುಲಿನ್ ರೂಪದಲ್ಲಿ. ಈ ದೇವರು ಇದುವರೆಗೆ ಉಳಿಸಿದ ಜೀವಗಳ ಲೆಕ್ಕ ಯಾರಿಟ್ಟಿದ್ದಾರೆ?
ಡಯಾಬಿಟಿಸ್ ಇಂದು ನಿನ್ನೆಯದಲ್ಲ. ಅದು ಮನುಷ್ಯನಿಗೆ 3,500 ವರ್ಷಗಳ ಹಿಂದಿನಿಂದಲೂ ಗೊತ್ತು. 19ನೇ ಶತಮಾನದ ಆರಂಭದಲ್ಲಿ, ಈ ರೋಗಕ್ಕೆ ಕಾರಣ ಮೆದೋಜೀರಕ ಗ್ರಂಥಿಯೇ ಇರಬಹುದು ಎಂಬ ಅನುಮಾನ ಮೂಡಿತ್ತು. ಅದಕ್ಕೆ ಹಿಂದೆ ಮಧುಮೇಹ ಬಂದವರು, ಅನ್ನ ಮತ್ತು ಸಕ್ಕರೆ ತಿನ್ನದಿದ್ದರೆ ಹೇಗೋ ಬದುಕುತ್ತಿದ್ದರು. ಇಲ್ಲವಾದವರು ಸಾಯುತ್ತಿದ್ದರು. 1889ರಲ್ಲೇ, ಪ್ಯಾಂಕ್ರಿಯಾಸ್ ಕಿತ್ತುಹಾಕಿದರೆ ನಾಯಿಗಳು ಹಳದಿಗಟ್ಟಿ ಸಾಯುವುದನ್ನು ಯುರೋಪಿನವರು ಶೋಧಿಸಿದ್ದರು. ಸೋ, ಮಧುಮೇಹಕ್ಕೆ ಕಾರಣ ಅಲ್ಲಿದೆ, ಸಕ್ಕರೆಯ ಚಯಾಪಚಯ ಕ್ರಿಯೆ ನಡೆಯೋದು ಅಲ್ಲಿ ಅನ್ನೋದು ಗೊತ್ತಾಯ್ತು.  
1910ರಲ್ಲಿ ಎಡಿನ್‌ಬರ್ಗ್ ಶಾರ್ಪೇ ಶೆಫರ್ ಎಂಬಾತ, ಮಧುಮೇಹಿಗಳಲ್ಲಿ, ಮೆದೋಜೀರಕ ಸ್ರವಿಸುವ ಒಂದು ರಸದ ಕೊರತೆಯಿದೆ ಎಂದು ತೋರಿಸಿದ. ಅದಕ್ಕೆ 'ಇನ್ಸುಲಿನ್‌' ಎಂದು ಹೆಸರಿಟ್ಟ. ಅಮೆರಿಕದ ಇ.ಎಲ್.ಸ್ಕಾಟ್, ರೊಮೇನಿಯದ ಆರ್.ಸಿ. ಪೌಲೆಸ್ಕೋ ಇನ್ಸುಲಿನ್ ಅನ್ನು ಹೊರತೆಗೆದು ಶೇಖರಿಸಿದರು. 1922ರ ಜನವರಿಯಲ್ಲಿ ಟೊರಾಂಟೋ ಆಸ್ಪತ್ರೆಯ ಮೊದಲ ಪ್ರಯೋಗ ನಡೆಯಿತು. ಅದಕ್ಕಾಗಿ ಇಬ್ಬರಿಗೂ ಮುಂದಿನ ವರ್ಷದ ನೊಬೆಲ್ ಪ್ರಶಸ್ತಿ ಕೂಡ ಬಂತು.  ತದನಂತರ ಇದನ್ನು ಮಧುಮೇಹಿಗಳು ಕ್ರಿಟಿಕಲ್ ಪರಿಸ್ಥಿತಿಗೆ ಹೋದಾಗ ಬಳಸತೊಡಗಿದರು. ಅದೂ, ಪ್ರಾಣಿಗಳಿಂದ ಹೊರತೆಗೆದ ಮದ್ದನ್ನು. ಪ್ರಯೋಗಾಲಯದಲ್ಲಿ ಪೂರ್ಣಪ್ರಮಾಣದ ಇನ್ಸುಲಿನ್ ಉತ್ಪಾದನೆಗೆ 1978ರವರೆಗೆ ಕಾಯಬೇಕಾಯ್ತು.
ಇಂದು, ವಿಜ್ಞಾನ ಮನುಕುಲಕ್ಕೆ ಮಾಡಿದ ಮಹಾ ಒಳಿತುಗಳ ಪಟ್ಟಿಯಲ್ಲಿ ಇನ್ಸುಲಿನ್ ಹೆಸರು ಮೊದಲಿಗಿದೆ. ಇಂದು ಸಾಮಾನ್ಯವಾಗಿ ಎಲ್ಲ ಮನೆಯಲ್ಲೂ ಮಧುಮೇಹಿಗಳಿರುವುದರಿಂದ ಇನ್ಸುಲಿನ್‌ನ ಪರಿಚಯ ಎಲ್ಲರಿಗೂ ಇದೆ. ಆದರೂ, ಮಧುಮೇಹ ನಿಯಂತ್ರಿಸಲಾಗದಂತಹ ಸ್ಥಿತಿ ಬಂದಾಗ ರೋಗಿಗಳಿಗೆ ಇಂಜೆಕ್ಷನ್ ಚುಚ್ಚುವುದನ್ನು ನೋಡುವುದೇ ಒಂದು ಯಾತನೆ. ಕನಿಷ್ಠ, ಅದಾದರೂ ಇದೆಯಲ್ಲ ಎಂಬ ಸಮಾಧಾನ.
ಇನ್ನೆರಡು ವರ್ಷದಲ್ಲಿ ಇನ್ಸುಲಿನ್ ಮಾತ್ರೆ
'ಇಂಜೆಕ್ಷನ್ ತೆಗೆದುಕೊಳ್ಳುವ ರೋಗಿಗಳ ಯಾತನೆ ನೋಡಲಾಗದೆ ಇನ್ಸುಲಿನ್ ಮಾತ್ರೆಯ ಸಂಶೋಧನೆಗೆ ನಿರ್ಧರಿಸಿದೆ' ಅನ್ನುವ ಸನ್ಯೋಗ್ ಜೈನ್, ನ್ಯಾನೋ ವೈದ್ಯಕೀಯ ಉತ್ಪನ್ನಗಳ ತಯಾರಿಯಲ್ಲಿ ಮಗ್ನರಾಗಿರುವ ಭಾರತೀಯ ವೈದ್ಯವಿಜ್ಞಾನಿ. ಅವರ ಸಂಶೋಧನೆ ಮುಂದುವರಿದಿದೆ, ಇನ್ನೊಂದೆರಡು ವರ್ಷದಲ್ಲಿ ಇನ್ಸುಲಿನ್ ಗುಳಿಗೆ ರೋಗಿಗಳ ಕೈಯಲ್ಲಿರುತ್ತದೆ. ಅವರ ಜತೆಗಿನ ಮಾತುಕತೆಯ ಆಯ್ದ ಭಾಗ.
ನಿಮ್ಮ ಗುಳಿಗೆ ಮಧುಮೇಹದ ಭವಿಷ್ಯವನ್ನು ಬದಲಾಯಿಸುತ್ತಾ?
ಖಂಡಿತ. ಈಗ ನೋಡಿ, ಭಾರತ ಹಾಗೂ ಚೀನಾ ಮಧುಮೇಹದ ರಾಜಧಾನಿಗಳೆನಿಸಿವೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ. ಈಗಿರುವ ಚಿಕಿತ್ಸಾ ವಿಧಾನದಲ್ಲಿ ನೋವಿನ ಪ್ರಮಾಣ ಹೆಚ್ಚು. ಹೀಗಾಗಿ ಗುಳಿಗೆ ಮುಂದಿನ ದಿನಗಳಲ್ಲಿ ಎಲ್ಲರಿಗೆ ಬೇಕೆನಿಸಲಿದೆ.

ಇದನ್ನು ಶೋಧಿಸುವಾಗ ಎದುರಾದ ಸವಾಲುಗಳೇನು?
ಮೊದಲನೆಯದಾಗಿ, ಇನ್ಸುಲಿನ್ ಎಂಬುದೇ ಜಠರದಲ್ಲಿ ಜೀರ್ಣವಾಗಬಹುದಾದ ಪ್ರೊಟೀನ್. ಅನ್ನನಾಳದ ಮೂಲಕ ಹೋದದ್ದನ್ನು ನೇರವಾಗಿ ರಕ್ತ ಸಂಚಾರಕ್ಕೆ ಸೇರಿಸುವುದು ಹೇಗೆ ಎಂಬುದೇ ಸಮಸ್ಯೆಯಾಗಿತ್ತು. ಹೀಗೆ ಜೀರ್ಣವಾಗದೆ, ಕರುಳಿನ ಗೋಡೆಯನ್ನು ದಾಟಿ ರಕ್ತವನ್ನು ಸೇರುವಂತಹ ಸ್ವರೂಪ ಕೊಡುವಲ್ಲಿ ಯಶಸ್ವಿಯಾದೆವು.

ಈ ಸಂಶೋಧನೆ ಮಹತ್ವದ್ದೆನಿಸುತ್ತದಾ? ಹೇಗೆ?
ಇದು ಈಗಿನ ಚಿಕಿತ್ಸಾ ವಿಧಾನದಲ್ಲಿಯೇ ಕ್ರಾಂತಿ ತರಬಹುದು. ಇಂಜೆಕ್ಷನ್ ತೆಗೆದುಕೊಳ್ಳಲು ಮರೆತುಬಿಡುವ, ಹತ್ತಾರು ಇಂಜೆಕ್ಷನ್ ಚುಚ್ಚಿಸಿಕೊಂಡು ಯಾತನೆಪಡುವ ಪ್ರಸಕ್ತಿ ಇಲ್ಲವಾಗಲಿದೆ. ಡಯಾಬಿಟಿಸ್‌ನ ಶಾಕ್, ಕೋಮಾ, ಸಾವುಗಳು ಗಣನೀಯವಾಗಿ ತಪ್ಪಬಹುದು.  

ಭಾರತದಲ್ಲಿ ಯಾವಾಗ ಮಾರುಕಟ್ಟೆಗೆ ಬರುತ್ತೆ? ಬೆಲೆಯೇನು?
ಅವೆಲ್ಲ ಔಷಧ ತಯಾರಿಕಾ ಕಂಪನಿಗಳ ಕೈಯಲ್ಲಿದೆ. ಎಲ್ಲ ಸರಿಹೋದರೆ, ಇನ್ನೆರಡು ವರ್ಷಗಳಲ್ಲಿ ಬರಬಹುದು.

= ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.