ಬೈಟುಕಾಫಿ

ಕಡಿಮೆ ಆದರೂ ಅಪಾಯ, ಜಾಸ್ತಿ ಆದರೂ ತೊಂದರೆ!

ಕಡಿಮೆ ಆದರೂ ಅಪಾಯ, ಜಾಸ್ತಿ ಆದರೂ ತೊಂದರೆ!
Published On :

ಕ್ಯಾಲ್ಶಿಯಂ ಕಥೆ ಕೇಳಿದರೆ 'ಹೀಗೂ ಉಂಟಾ' ಎಂದು ಅನ್ನಿಸಬಹುದು. ಕ್ಯಾಲ್ಶಿಯಂ ಮತ್ತು ಮೂತ್ರಪಿಂಡ ಕಲ್ಲಿನ ಸಂಬಂಧ ತೀರಾ ಸಂಕೀರ್ಣವಾದದ್ದು. ನಮ್ಮಲ್ಲಿ ತಮಾಷೆಗೆ ಹೇಳುತ್ತಾರಲ್ಲ, 'ಎರಡು ತಿಂದರೆ ಕಡಿಮೆ. ಮೂರು ತಿಂದರೆ ಹೆಚ್ಚು' ಎಂದು. ಕ್ಯಾಲ್ಶಿಯಂ ಕಥೆಯೂ ಸ್ವಲ್ಪ ಅದೇರೀತಿ. ಆಹಾರದಲ್ಲಿ ಕ್ಯಾಲ್ಶಿಯಂ ಪ್ರಮಾಣ ತೀರಾ ಕಡಿಮೆ ಆದರೂ ಮೂತ್ರಪಿಂಡ ಕಲ್ಲಿನ ರಿಸ್ಕ್ ವಿಪರೀತ. ಬೇರೆ ರೀತಿಯಲ್ಲಿ ಕ್ಯಾಲ್ಶಿಯಂ ಸೇವಿಸಿದರೂ ತೊಂದರೆ. ಆಹಾರದ ಮೂಲಕವಾಗಿಯೇ ಅಧಿಕ ಕ್ಯಾಲ್ಶಿಯಂ ಸೇವಿಸಿದರೂ ಮೂತ್ರಪಿಂಡ ಕಲ್ಲಿನ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ. ಆದರೆ ಕ್ಯಾಲ್ಶಿಯಂ ಅನ್ನು ನಿಯಂತ್ರಿಸಲು ಪ್ರಯತ್ನಿಸಿದವರಲ್ಲಿ ಅಧಿಕ ಮಂದಿ ಕಲ್ಲಿನ ತೊಂದರೆಗೆ ಒಳಗಾಗಿದ್ದಾರೆ! ಇದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿರುವ ಸೋಜಿಗ ಹುಟ್ಟಿಸುವ ಸತ್ಯ.
ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು 45,619 ಪುರುಷರ ಆಹಾರ ಮತ್ತು ಮೂತ್ರಪಿಂಡ ಆರೋಗ್ಯದ ಸತತ ನಾಲ್ಕ ವರ್ಷ ನಿಗಾವಹಿಸಿದ್ದರು. ಸಹಜವಾಗಿಯೇ ಅಂದರೆ ಆಹಾರದ ಮೂಲಕವೇ ಕ್ಯಾಲ್ಶಿಯಂ ಸೇವಿಸಿದವರಲ್ಲಿ ಮೂತ್ರಪಿಂಡ ಕಲ್ಲಿನ ತೊಂದರೆ ಅಷ್ಟಾಗಿ ಬಾಧಿಸಿರಲಿಲ್ಲ. ಅವರು ಸರಾಸರಿ 600 ಮಿಲಿಗ್ರಾಂನಷ್ಟು ಕ್ಯಾಲ್ಶಿಯಂ ಅನ್ನು ಆಹಾರದ ಮೂಲಕ ಪಡೆದುಕೊಳ್ಳುತ್ತಿದ್ದರು. ಇನ್ನೂ ಕುತೂಹಲದ ಸಂಗತಿ ಎಂದರೆ ನಿತ್ಯ ಒಂದು ಗ್ಲಾಸ್ ಹಾಲು ಕುಡಿಯುತ್ತಿದ್ದವರಿಗೆ ಹೋಲಿಸಿದರೆ ಎರಡು ಗ್ಲಾಸ್‌ನಷ್ಟು ಹಾಲು ಕುಡಿಯುತ್ತಿದ್ದವರಲ್ಲಿ ಈ ತೊಂದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ಅಪರೂಪಕ್ಕೆ ಯೋಗರ್ಟ್, ಗಿಣ್ಣು ಇತ್ಯಾದಿಗಳನ್ನು ಸೇವಿಸುತ್ತಿದ್ದವರಿಗೆ ಹೋಲಿಸಿದರೆ, ಅವನ್ನೇ ಆಹಾರಪದ್ಧತಿಯ ಭಾಗ ಆಗಿಸಿಕೊಂಡವರಲ್ಲಿಯೂ ಮೂತ್ರಪಿಂಡ ಕಲ್ಲಿನ ತೊಂದರೆ ಅಷ್ಟಾಗಿ ಇರಲಿಲ್ಲ.
ಆಹಾರದಲ್ಲಿರುವ ಆಕ್ಸಲೇಟ್‌ಗಳು ಮತ್ತು ಕ್ಯಾಲ್ಶಿಯಂಗಳ ಮಧ್ಯೆ ಕರುಳಿನಲ್ಲಿಯೇ ಮೈತ್ರಿ ಏರ್ಪಟ್ಟು, ಅವು ರಕ್ತನಾಳ ಸೇರುವ ಬದಲಾಗಿ ಜತೆಯಾಗಿ ಮೂತ್ರಪಿಂಡದತ್ತ ಪ್ರಯಾಣ ಬೆಳೆಸುತ್ತವೆ ಎನ್ನುವ ವಿಶ್ಲೇಷಣೆಯೂ ಇದೆ. ಕ್ಯಾಲ್ಶಿಯಂ ಆಹಾರಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರೆ ಅದರಿಂದ ಆಕ್ಸಲೇಟ್‌ಗಳ ಪ್ರಮಾಣ ಹೆಚ್ಚಿ ಇನ್ನಷ್ಟು ತೊಂದರೆಯಾಗುವ ಸಾಧ್ಯತೆಗಳೂ ಇವೆ. ಆದ್ದರಿಂದಲೇ ಕ್ಯಾಲ್ಶಿಯಂ ಕಲ್ಲು ಬೆಳೆದಿದ್ದವರು ಅಧಿಕ ಕ್ಯಾಲ್ಶಿಯಂ ಇರುವ ಆಹಾರಗಳನ್ನು ಕಡಿಮೆ ಮಾಡದೇ ಇರುವುದು ಉತ್ತಮ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಎಲ್ಲರೂ ಹೇಳುವ ಕಿವಿಮಾತು ಎಂದರೆ ಕ್ಯಾಲ್ಶಿಯಂ ಆಹಾರದ ಭಾಗವಾಗಿ ದೇಹ ಸೇರಬೇಕೇ ವಿನಾ ಹೆಚ್ಚುವರಿ ರೂಪದಲ್ಲಿ ಎನ್ನುವುದು.
ಪ್ರತಿ 100 ಪುರುಷರಲ್ಲಿ 13 ಮಂದಿ, ಪ್ರತಿ 100 ಮಹಿಳೆಯರಲ್ಲಿ 7 ಜನ ಜೀವಮಾನದಲ್ಲಿ ಒಮ್ಮೆಯಾದರೂ ಮೂತ್ರಪಿಂಡ ಕಲ್ಲಿನ ಬಾಧೆಗೆ ತುತ್ತಾಗುತ್ತಾರೆ. ಪ್ರತಿ 10ರಲ್ಲಿ ಎಂಟು ಜನರಲ್ಲಿ ಕಂಡುಬರುವುದು ಕ್ಯಾಲ್ಶಿಯಂ ಕಲ್ಲು ಎನ್ನುತ್ತವೆ ಸಂಶೋಧನಾ ವರದಿಗಳು.



-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.