ಸಿರಿದೇವಿಯ ನಾಚಿಕೆ

ಹಿಂದಿನ ಕನ್ಯೆಯರು ಪುರುಷರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆಗಿನ ಶಿಷ್ಟಾಚಾರವೇ ಹಾಗಿತ್ತು. ತರುಣಿಯರನ್ನು ಅಷ್ಟೊಂದು ಕಟ್ಟುನಿಟ್ಟಾಗಿ ಬೆಳಸುತ್ತಿದ್ದರು. ಅನ್ಯ ಪುರುಷರನ್ನು ಬಿಡಿ, ಭಾವಿ ಪತಿಯನ್ನು ಕೂಡ ಆಕೆ ವಿವಾಹಮಂಟಪದಲ್ಲೇ ನೋಡಬೇಕಾಗಿತ್ತು. ಅಲ್ಲೂ ನೇರವಾಗಿ ದೃಷ್ಟಿಸಲು ಭಯ, ನಾಚಿಕೆ, ಹಿಂಜರಿಕೆ. ಯಾರಾದರೂ ಗಂಡುಬೀರಿ ಅಂದರೆ? ಈ ನಾಚಿಕೆ ನಮ್ಮನ್ನು ಮಾತ್ರವಲ್ಲ, ಆದಿವಧು ಲಕ್ಷ್ಮಿಯನ್ನೂ ಬಿಟ್ಟಿಲ್ಲ.
ಉತ್ತುಂಗಸ್ತನಮಂಡಲೋಪರಿ ಲಸತ್ಪ್ರಾಲಂಬ ಮುಕ್ತಾಮಣೇಃ
ಅಂತರ್ಬಿಂಬಿತಮಿಂದ್ರನೀಲನಿಕರಚ್ಛಾಯಾನುಕಾರಿದ್ಯುತಿಃ
ಲಜ್ಜಾವ್ಯಾಜಮುಪೇತ್ಯ ನಮ್ರವದನಾ ಸ್ಪಷ್ಟಂ ಮುರಾರೇರ್ವಪುಃ
ಪಶ್ಯಂತೀ ಮುದಿತಾ ಮುದೇಸ್ತು ಭವತಾಂ ಲಕ್ಷ್ಮೀವಿವಾಹೋತ್ಸವೇ
ಸಮುದ್ರಮಥನ ಕಾಲದಲ್ಲಿ ಅಮೃತಕುಂಭದ ಜತೆಗೆ ಲಕ್ಷ್ಮಿಯೂ ಉದಿಸಿಬಂದದ್ದು ನಿಮಗೆ ಗೊತ್ತಷ್ಟೆ? ಆಗ ಸಿರಿದೇವಿಯು ತನ್ನ ವರನಾಗಿ ವಿಷ್ಣುವನ್ನೇ ಆರಿಸಿದಳು. ಸರಿ, ಶ್ರೀದೇವಿ ಮತ್ತು ಶ್ರೀಮನ್ನಾರಾಯಣರಿಗೆ ವಿವಾಹ ಮಂಗಲೋತ್ಸವ ನೆರವೇರಿಸಲು ದೇವತೆಗಳು ಸಜ್ಜಾದರು. ವೈಭವಪೂರ್ಣವಾದ ವಿವಾಹೋತ್ಸವದಲ್ಲಿ ನವವಧೂವರರನ್ನು ಸಕಲಾಲಂಕಾರಭೂಷಿತರಾಗಿ ಎದುರುಬದುರು ನಿಲ್ಲಿಸಿದರು. ನಾರಾಯಣನನ್ನು ಕಣ್ತುಂಬ ನೋಡಬೇಕೆಂಬ ಆಸೆ ಅವಳಿಗೆ. ಆದರೆ ಅಷ್ಟು ಮಂದಿಯ ಮುಂದೆ ಅದು ಹೇಗೆ ಸಾಧ್ಯ? ಆಕೆಯ ಉತ್ತುಂಗಸ್ತನಮಂಡಲದ ಮೇಲೆ ಮಣಿಹಾರ ರಾರಾಜಿಸುತ್ತಿದೆ. ಅದರಲ್ಲಿರುವ ದೊಡ್ಡ ಮುಕ್ತಕದಲ್ಲಿ ನೀಲ ಮೇಘಶ್ಯಾಮನಾದ ವಿಷ್ಣುವಿನ ಮುಖ ಪ್ರತಿಫಲನವಾಗಿದೆ. ಲಕ್ಷ್ಮಿದೇವಿ ನಾಚಿಕೆಯನ್ನು ತೋರಿಸುತ್ತ ತಲೆ ಬಗ್ಗಿಸಿ, ಆ ಮಣಿಯಲ್ಲಿ ಕಾಣುತ್ತಿರುವ ನಲ್ಲನ ಮುಖವನ್ನೇ ಕಣ್ತುಂಬಿಕೊಳ್ಳುತ್ತಿದ್ದಾಳೆ.
ನಮ್ಮ ಈಗಿನ ಹುಡುಗಿಯರು ಲಕ್ಷ್ಮಿದೇವಿಯ ಪಾಡನ್ನು ನೋಡಿ 'ಅಯ್ಯೋ ಪಾಪ' ಎನ್ನಬಹುದು.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


