ರೋಹನ್ ಆರೋಹಣ

ಕೊಡಗು ಕಾಫಿಯಷ್ಟೇ ಹಾಕಿಗೂ ಪ್ರಸಿದ್ಧ. ಕಾಫಿ ತೋಟಗಳ ನಡುವೆ ಬೆಳೆದ ಈ ಹುಡುಗ ಹಾಕಿಯನ್ನೂ ಆಡುತ್ತಿದ್ದ, ಫುಟ್ಬಾಲ್ನಲ್ಲೂ ಪಳಗಿದ್ದ. ಟೆನಿಸ್ ಅನ್ನೂ ಪ್ರೀತಿಸುತ್ತಿದ್ದ. ವೃತ್ತಿಪರ ಆಟಗಾರನಾಗಿ ಮೂರರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಸಂದಿಗ್ಧ ಕಾಡಿದಾಗ ಅಪ್ಪ ನೀಡಿದ ಸಲಹೆ- 'ಸಾಂಘಿಕ ಕ್ರೀಡೆಗಳು ಬೇಡ. ವೈಯಕ್ತಿಕ ಆಟಗಳ ಬಗ್ಗೆ ಗಮನ ಕೊಡು'. ಇದು ಗೊಂದಲ ಬಗೆಹರಿಸಿತು. ಇವತ್ತು ಆತ ವಿಶ್ವ ಟೆನಿಸ್ನಲ್ಲಿ ನಂಬಿಕಸ್ಥ ಹೆಸರು.
ರೋಹನ್ ಬೋಪಣ್ಣ ಟೆನಿಸ್ ರ್ಯಾಕೆಟ್ ಹಿಡಿದಾಗ ಪ್ರಾಯ 11. ಮಹೇಶ್ ಭೂಪತಿ ತಂದೆ ಸಿ.ಜಿ. ಕೃಷ್ಣ ಭೂಪತಿ ಗರಡಿಯಲ್ಲಿ ಪಳಗಿದ ಪ್ರತಿಭೆಗೆ ಈಗ ಎಟಿಪಿ ವಿಶ್ವ ಡಬಲ್ಸ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನ. 2013ರ ಜುಲೈನಲ್ಲಿ ಈತ ಅಲಂಕರಿಸಿದ್ದು 3ನೇ ಸ್ಥಾನ!
ಭಾರತದ ಪರ ಡೇವಿಸ್ ಕಪ್ನಲ್ಲಿ ಮೊದಲ ಪಂದ್ಯ ಆಡಿದ್ದು 2002ರಲ್ಲಿ. 2010ರ ಡೇವಿಸ್ ಕಪ್ನಲ್ಲಿ ಬ್ರೆಜಿಲ್ ವಿರುದ್ಧ ಭಾರತ ಗೆದ್ದು, ವಿಶ್ವ ಗ್ರೂಪ್ನಲ್ಲಿ ಸ್ಥಾನ ಪಡೆಯುವಲ್ಲಿ ರೋಹನ್ ಪಾತ್ರ ಪ್ರಮುಖವಾದದ್ದು. ಸಿಂಗಲ್ಸ್ನಲ್ಲಿ ಯಶಸ್ಸು ಗಳಿಸಿದ್ದು ಕಡಿಮೆ. ಒಂದೇಒಂದು ಪ್ರಶಸ್ತಿ ಗೆಲ್ಲಲೂ ಸಾಧ್ಯವಾಗಿಲ್ಲ. ಡಬಲ್ಸ್ ಅಥವಾ ಮಿಶ್ರ ಡಬಲ್ಸ್ನಲ್ಲಿ ಅಡಗಿದೆ ರೋಹನ್ ತಾಕತ್ತು. ಆಡಿದ 26 ಎಟಿಪಿ ಪಂದ್ಯಾವಳಿಗಳಲ್ಲಿ 9ರಲ್ಲಿ ಗೆದ್ದು, 17ರಲ್ಲಿ ರನ್ನರ್ ಅಪ್ ಆಗಿದ್ದೇ ಅವರ ಪ್ರತಿಭೆಗೆ ಸಾಕ್ಷಿ.
2007ರಿಂದ ಪಾಕಿಸ್ತಾನದ ಐಸಾಮ್-ಉಲ್-ಹಕ್-ಖುರೇಷಿ ಇವರ ಪಾರ್ಟನರ್. 2010ರಲ್ಲಿ ಈ ಜೋಡಿಯದು ಅದ್ಭುತ ಸಾಧನೆ. ಆಡಿದ ಬಹಳಷ್ಟು ಟೂರ್ನಿಗಳಲ್ಲಿ ಫೈನಲ್ ತಲುಪಿದ ಶ್ರೇಯ. ಅವರದು ಅದ್ಭುತ ತಾಳ-ಮೇಳ. ಲಂಡನ್ ಒಲಿಪಿಂಕ್ ತಯಾರಿಗಾಗಿ 2011ರ ಲಂಡನ್ ಎಟಿಪಿ ಪಂದ್ಯಾವಳಿ ಬಳಿಕ ಬೇರ್ಪಟ್ಟಿದ್ದ 'ಇಂಡೋ ಪಾಕ್ ಎಕ್ಸ್ಪ್ರೆಸ್' ಜೋಡಿ 2014ರಲ್ಲಿ ಪುನಃ ಒಂದಾಗಿದೆ. 2013 ಒಂದೇ ವರ್ಷದಲ್ಲಿ ಬೋಪಣ್ಣ ಒಂಬತ್ತು ಮಂದಿ ಪಾರ್ಟ್ನರ್ಗಳ ಜತೆ ಆಡಬೇಕಾಯಿತು. ರೋಮ್ನಲ್ಲಿ ಮಹೇಶ್ ಭೂಪತಿ ಜತೆ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಯಶಸ್ಸು ಸಿಕ್ಕಿದ್ದು ಅಷ್ಟಕ್ಕಷ್ಟೆ. ಮತ್ತೆ ಒಂದಾದ ನಂತರ ಆರಂಭ ಭರ್ಜರಿಯಾಗಿಯೇ ಇದೆ. ಮೊನ್ನೆಮೊನ್ನೆ (ಜ.11, 2014) ನಡೆದ ಸಿಡ್ನಿ ಓಪನ್ನಲ್ಲೂ ಫೈನಲ್ ತಲುಪಿದ ಸಾಧನೆ.
ತನ್ನ ಸಾಮರ್ಥ್ಯ ಇರುವುದು ಡಬಲ್ಸ್ನಲ್ಲಿ ಎನ್ನುವುದು ಅರಿವಾದ ನಂತರ ಆ ಬಗ್ಗೆಯೇ ಒತ್ತು ಕೊಡಲು ಆರಂಭಿಸಿದ ವೃತ್ತಿಪರತೆ ರೋಹನ್ದು. ಬೆಂಗಳೂರಿನಲ್ಲಿ ಗೆಳೆಯರೊಂದಿಗೆ ಹೋಟೆಲ್ ಪಾಲುದಾರರಾಗಿರುವ ರೋಹನ್ ಮೂಲತಃ ನಾಚಿಕೆ ಸ್ವಭಾವದ ವ್ಯಕ್ತಿ. ಮಾತು ಕಡಿಮೆ. 'ಸೈಕಾಲಜಿಸ್ಟ್ ಸುಪ್ರಿಯಾಳನ್ನು ಮದುವೆಯಾದ ಬಳಿಕ ಎಲ್ಲರೊಂದಿಗೂ ಬೆರೆಯುವುದನ್ನು ಕಲಿತಿದ್ದೇನೆ' ಎನ್ನುವುದು ಈ ವಿಶ್ವಶ್ರೇಷ್ಠ ಡಬಲ್ಸ್ ಆಟಗಾರನ ಪ್ರೀತಿಯ ನುಡಿ. ಕಾಫಿ ನಾಡಿನ ಹುಡುಗನನ್ನು 'ಬೈಟು ಕಾಫಿ' ಮಾತಿಗೆ ಎಳೆದಾಗ-
* ವರ್ಷದಲ್ಲಿ 25-30 ವಾರ ಪ್ರವಾಸದಲ್ಲೇ ಕಳೆದು ಹೋಗುತ್ತದೆ. ಸಾಮಾನ್ಯವಾಗಿ ಟೂರ್ನಿಗಳ ನಡುವೆ ಎರಡು ವಾರ ಅಂತರ ಇರುತ್ತದೆ. ಆಗ ಜಿಮ್ನಲ್ಲಿ ಬೆವರಿಳಿಸುವುದು, ಈಜಾಡುವುದಕ್ಕೆ ಆದ್ಯತೆ. ಫಿಟ್ನೆಸ್ ಗುಟ್ಟು ಕೂಡ ಇದೇ.
* ಬಾಲಿವುಡ್ ಸಿನಿಮಾ ಇಷ್ಟ. ಬಿಡುವಿನ ವೇಳೆ ಹಿಂದಿ ಚಿತ್ರಗಳನ್ನು ನೋಡುತ್ತೇನೆ. ಆಮೀರ್ ಖಾನ್ ನೆಚ್ಚಿನ ನಟ. ನಟಿಯರ ಪೈಕಿ ಕರೀನಾ ಕಪೂರ್ ಮತ್ತು ಕತ್ರಿನಾ ಕೈಫ್.
* ಗಾಲ್ಫ್, ಸಾಹಸಮಯ ಕ್ರೀಡೆ ಅಚ್ಚುಮೆಚ್ಚು.
* ಬೆಂಗಳೂರಿನಲ್ಲಿ ಬಹಳ ಗೆಳೆಯರಿದ್ದಾರೆ. 30 ವರ್ಷಗಳ ಸ್ನೇಹಿತರಿದ್ದಾರೆ. ಅವರೊಂದಿಗೆ ಸುತ್ತಾಡಲು ಹೋಗುವುದುಂಟು.
* ಕ್ರೀಡೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಹವ್ಯಾಸವಿದೆ.
* ಕೊಡವರ ಆಹಾರ ಪದ್ಧತಿಯೇ ಇಷ್ಟ. ಥಾಯ್ಲೆಂಡ್ನ ಕೊಹ್ ಸಮುಯ್ ಇಷ್ಟಪಡುವ ಪ್ರವಾಸಿ ತಾಣ.
* ಕೂರ್ಗ್ನಲ್ಲಿರುವ ಅಪರ್ಚುನಿಟಿ ಸ್ಕೂಲ್ನ ವಿಕಲಚೇತನ ಮಕ್ಕಳಿಗಾಗಿ ನಿಧಿ ಸಂಗ್ರಹ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದೇನೆ.
-ರಾಜೇಶ್ ಮುಂಡಿಗೇಸರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


