ಬೀಡಿ ಸೇದದವರಿಗೂ ಕ್ಯಾನ್ಸರ್ ಬರುವುದೇಕೆ?

ನಮ್ಮ ಊರಿನಲ್ಲಿ ಕೊರಗ ಎನ್ನುವ ಕೆಲಸದಾಳು ಇದ್ದ. ಆತನಿಗೆ ವಿಪರೀತ ಬೀಡಿ ಸೇದುವ ಹುಚ್ಚು. ಅದನ್ನು ಬಿಡಿಸುವ ಸಲುವಾಗಿ 'ತಂಬಾಕಿನಿಂದ ಕ್ಯಾನ್ಸರ್ ಬರುತ್ತದೆ' ಎಂದು ಹಳ್ಳಿಗೆ ಬರುತ್ತಿದ್ದ ಡಾಕ್ಟರರಿಂದ ಹೇಳಿಸಿದ್ದೂ ಆಯಿತು. ಆತನ ಮರುಪ್ರಶ್ನೆ ವೈದ್ಯರನ್ನು ಮಾತ್ರವಲ್ಲ, ಅಲ್ಲಿದ್ದ ಎಲ್ಲರನ್ನೂ ಚಕಿತಗೊಳಿಸಿತು. 'ಕೆಲವು ಮಹಿಳೆಯರಿಗೂ ಕ್ಯಾನ್ಸರ್ ಬರುತ್ತದೆಯಲ್ಲ. ಅವರೇನೂ ಬೀಡಿ, ಸಿಗರೇಟ್ ಸೇದುವುದಿಲ್ಲ. ತಂಬಾಕು ತಿನ್ನುವುದಿಲ್ಲ. ಆದರೂ ಅವರಿಗೆ ಕ್ಯಾನ್ಸರ್ ಬರುತ್ತದೆಯಲ್ಲ ಹೇಗೆ?' ಇದು ಕೊರಗನ ಪ್ರಶ್ನೆ. ಅದು ಮೊಂಡುವಾದ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಸಹ ಆತನ ಪ್ರಶ್ನೆಗೆ ಆ ಸಂದರ್ಭದಲ್ಲಿ ಉತ್ತರ ಇರಲಿಲ್ಲ ಎನ್ನುವುದು ನಿಜ. ಈಗೀಗ ಮಲೆನಾಡಿನ ಬಹಳಷ್ಟು ಗೃಹಿಣಿಯರು ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ ಎನ್ನುವ ಕಳವಳಕಾರಿ ಸಂಗತಿಯೂ ಇದೆ. ಈಗ ಕೊರಗನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದು ಏನೆಂದರೆ, ಕ್ಯಾನ್ಸರ್ ಅನುವಂಶೀಯವಾಗಿಯೂ ಬರುವ ಸಾಧ್ಯತೆಗಳು ಅಧಿಕ ಎನ್ನುವುದು.
ವಂಶವಾಹಿಯಲ್ಲಿನ ಸಮಸ್ಯೆ, ಹಾರ್ಮೋನುಗಳ ಏರುಪೇರು, ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾದ ತೂಕ ಇಲ್ಲದೇ ಇರುವುದು, ಅತಿಯಾದ ತೂಕ ಇವೆಲ್ಲವೂ ಕ್ಯಾನ್ಸರ್ ತರುವ ಸಂಗತಿಗಳೇ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ವಂಶವಾಹಿಗಳು ಹಾನಿಗೆ ಒಳಗಾಗುವ ಸಂಭವ ಹೆಚ್ಚು. ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಧಾನ್ಯ, ತರಕಾರಿ, ಹಣ್ಣುಗಳ ಸೇವನೆ ಬಹುಮಟ್ಟಿಗೆ ಈ ಅಪಾಯದಿಂದ ಪಾರು ಮಾಡಬಹುದು. ಆಹಾರದಲ್ಲಿರುವ ರಾಸಾಯನಿಕಗಳು ಮಾತ್ರವಲ್ಲ, ನಿತ್ಯ ಬಳಸುವ ಕೆಲವು ಬಗೆಯ ಹ್ಯಾಂಡ್ವಾಶ್, ಸೋಪುಗಳು, ಗಾರ್ಡನಿಂಗ್ಗೆ ಬಳಸುವ ರಾಸಾಯನಿಕಗಳು ಕೂಡ ಅಪಾಯಕಾರಿಯೇ. ಕೆಲವು ವೈರಸ್ಗಳೂ ಕ್ಯಾನ್ಸರ್ಗೆ ಕಾರಣವಾಗಬಹುದು, ಆದ್ದರಿಂದ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ಬಗ್ಗೆಯೂ ನಿಗಾವಹಿಸುವುದು ಅಗತ್ಯ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಧೂಮಪಾನ ಮತ್ತು ತಂಬಾಕು ಸೇವನೆ ಅಭ್ಯಾಸ ಇರುವವರಲ್ಲಿ ಕ್ಯಾನ್ಸರ್ ಅಪಾಯ ಅಧಿಕ. ಅವರು ಎಷ್ಟು ಬೇಗ ಈ ಅಭ್ಯಾಸದಿಂದ ಹೊರಬರುತ್ತಾರೊ ಕ್ಯಾನ್ಸರ್ ಸಂಭವನೀಯತೆಯಿಂದ ಅಷ್ಟರಮಟ್ಟಿಗೆ ಬಚಾವಾಗಬಹುದು. ಆರ್ಸೆನಿಕ್ಯುಕ್ತ ನೀರು ಕೂಡ ಕ್ಯಾನ್ಸರ್ ತರಬಲ್ಲದು.
ಆಹಾರದಿಂದ ಕ್ಯಾನ್ಸರ್ ಅನ್ನು ದೂರವಿಡಲು ಸಾಧ್ಯವಿದೆ. ಅದನ್ನು ಬಿಟ್ಟರೆ ಜೀವನಶೈಲಿಯಲ್ಲಿನ ಬದಲಾವಣೆ. ಇವೆರಡರ ಹೊರತಾಗಿ ಕ್ಯಾನ್ಸರ್ ತಡೆಯಬಲ್ಲ ನಿರ್ದಿಷ್ಟ ವಿಧಾನಗಳು ಇದುವರೆಗೆ ಇಲ್ಲ. ನಿಮ್ಮ ವೈದ್ಯರು ಕ್ಯಾನ್ಸರ್ ರಿಸ್ಕ್ನ ಜಾಡು ಹಿಡಿದು ಸಲಹೆ, ಸೂಚನೆಗಳನ್ನು ನೀಡಬಹುದು. ರೋಗಿ ಭಯಪಡಬಾರದು ಎಂಬ ಕಾರಣದಿಂದ ಕ್ಯಾನ್ಸರ್ ಹೆಸರು ಹೇಳದೇ ಆಹಾರ, ಜೀವನ ವಿಧಾನದಲ್ಲಿ ಬದಲಾವಣೆಗೆ ಸೂಚಿಸಬಹುದು. ಅವನ್ನು ನಿರ್ಲಕ್ಷ್ಯ ಮಾಡದೆ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಆಹಾರ ಮತ್ತು ಕ್ಯಾನ್ಸರ್ ಕುರಿತು ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


