ಅಪೆಕ್ಸ್ ನೂರು ಅಪೇಕ್ಷೆ ನೂರಾರು

ಕೆ.ಆರ್. ಮಾರುಕಟ್ಟೆ ದಾಟಿ ಚಾಮರಾಜಪೇಟೆ ಕಡೆಗೆ ಹೋಗುವ ಮಾರ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮಿಂಟೋ ಆಸ್ಪತ್ರೆಗಳಿಗೆ ಮಾರುದೂರದಲ್ಲಿ ಬೃಹದಾಕಾರದ ಕಟ್ಟಡವೊಂದು ಗೋಚರಿಸುತ್ತದೆ. ಕಟ್ಟಡದ ಮುಂದೆ ಅಪೆಕ್ಸ್ಬ್ಯಾಂಕ್ ಎಂಬ ಬೋರ್ಡ್ ಕೂಡ ಕಾಣುತ್ತದೆ. ಬ್ಯಾಂಕ್ ಹೆಸರಿಗೂ ಕಟ್ಟಡದ ಬೃಹದಾಕಾರಕ್ಕೂ ತಾಳೆಯಾಗದೆ ಗೊಂದಲಕ್ಕೆ ಬೀಳುತ್ತೀರಿ. ರಾಷ್ಟ್ರೀಕೃತ ಅಥವಾ ಮಲ್ಟಿನ್ಯಾಷನಲ್ ಬ್ಯಾಂಕೊಂದರ ಕಟ್ಟಡ ದೊಡ್ಡದಿದ್ದರೆ ಒಪ್ಪಬಹುದು. ಅಪೆಕ್ಸ್ಬ್ಯಾಂಕ್ ಎಂಬ ಬ್ಯಾಂಕು ಇಷ್ಟು ದೊಡ್ಡದೇ ಎಂದು ಹುಬ್ಬೇರಿಸುವಂತಾಗದಿದ್ದರೆ ಹೇಳಿ. ಆದರೆ ಬರೀ ಕಟ್ಟಡ ನೋಡಿ ಹುಬ್ಬೇರಿಸಿಕೊಂಡ ನೀವು ಅಪೆಕ್ಸ್ಬ್ಯಾಂಕ್ನ ಸಾಧನೆಗಳನ್ನು ಪೂರ್ತಿಯಾಗಿ ಕೇಳಿದರೆ, ಸುಧಾರಿಸಿಕೊಳ್ಳಲು ಸುಮಾರು ಸಮಯವೇ ಬೇಕಾಗುತ್ತದೆ. ಅಂದ ಹಾಗೆ ಅಪೆಕ್ಸ್ಬ್ಯಾಂಕ್ ಈ ವರ್ಷ ನವೆಂಬರ್ ಹತ್ತಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
ಸಹಕಾರಿ ಬ್ಯಾಂಕ್ ಅಂದರೆ ಹಾಗೊಂದು ಭ್ರಮೆ ಇತ್ತು. ಇದು ಚಿಟ್ಫಂಡ್ ಅಥವಾ ಖಾಸಗಿ ಚೀಟಿ ವ್ಯವಹಾರಕ್ಕಿಂತ ಬೆಟರ್. ಆದರೆ ರಾಷ್ಟ್ರೀಕೃತ ಬ್ಯಾಂಕ್, ಪೋಸ್ಟ್ ಆಫೀಸ್, ಎಲ್ಲೈಸಿ ಇವುಗಳಿಗಿಂತ ಅಭದ್ರ ಅಂತ! ಸಹಕಾರಿ ಬ್ಯಾಂಕ್ಗಳು ಸಾಲ ನೀಡುವುದಕ್ಕಷ್ಟೇ ಲಾಯಕ್ಕು, ಠೇವಣಿ ಇಡೋದಕ್ಕಲ್ಲ. ಇದು ಯಾವಾಗ ಮುಚ್ಚಿಕೊಂಡು ಹೋಗುತ್ತೋ ಏನೋ, ಅಷ್ಟರಲ್ಲಿ ಸಾಧ್ಯವಾದರೆ ಒಂದಷ್ಟು ಸಾಲ ತೆಗೆದುಕೊಂಡು ಕೈಯೆತ್ತಿಬಿಡಬೇಕು ಎಂಬೆಲ್ಲ ಮಾತುಗಳು ಸಾಮಾನ್ಯವಾಗಿದ್ದವು. ಸಹಕಾರಿ ಬ್ಯಾಂಕ್ಗೆ ಅತ್ತ ಸರಕಾರದ ಸಹಕಾರವೂ ಇಲ್ಲ, ಇತ್ತ ಜನತೆಯ ಸಹಕಾರವೂ ಇಲ್ಲ ಎಂಬ ಪರಿಸ್ಥಿತಿ ಕೂಡ ಇತ್ತು. ಆದರೆ ಅಂಥ ಗ್ರಹಿಕೆ, ತೊಡಕು, ಅಸಹಕಾರ ಎಲ್ಲವನ್ನೂ ಮೀರಿ ಅಪೆಕ್ಸ್ಬ್ಯಾಂಕ್ ಬೆಳೆದು ನಿಂತಿದೆ. ಯಶಸ್ವೀ ನೂರು ವರ್ಷಗಳನ್ನು ಪೂರೈಸಿದೆ.
ಈ ಎಲ್ಲ ಸಾಧನೆಗಳ ಹಿಂದೆ ಅಪೆಕ್ಸ್ಬ್ಯಾಂಕ್ ಅಧ್ಯಕ್ಷರ ನಿರಂತರ ಶ್ರಮವಿದೆ. 1915ರಿಂದ ಇಂದಿನ ತನಕ ರಾಜಕೀಯ ಧುರೀಣರಿಂದ ಮೊದಲುಗೊಂಡು ಹಲವು ಸಮಾಜ ಸೇವಕರು ಬ್ಯಾಂಕ್ನ ಅಧ್ಯಕ್ಷತೆ ವಹಿಸಿ ಮುತುವರ್ಜಿಯಿಂದ ದುಡಿದಿದ್ದಾರೆ. ಹಾಲಿ ಅಧ್ಯಕ್ಷ ಮಂಜುನಾಥ ಗೌಡರ ಕಳೆದ ನಾಲ್ಕು ವರ್ಷಗಳ ಮುಂದಾಳತ್ವದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಅಭಿವೃದ್ಧಿ ಮತ್ತು ಸಾಧನೆ ಕಂಡುಬರುತ್ತಿವೆ. ಈ ಬಗ್ಗೆ ಮಂಜುನಾಥ್ ಗೌಡರನ್ನು ಕೇಳಿದರೆ, ತುಂಬಾ ವಿನಮ್ರವಾಗಿ, 'ಹಳಬರು ಹಾಕಿಕೊಟ್ಟ ಹಾದಿಯಲ್ಲಿ ನಡೆದಿದ್ದೇನೆ. ಅವರ ಮಾರ್ಗದರ್ಶನ ನನ್ನಲ್ಲಿ ಈ ಮಟ್ಟದ ಎನರ್ಜಿ ತುಂಬಿದೆ ಹಾಗಾಗಿ ಹತ್ತು ವರ್ಷದಲ್ಲಿ ಆಗಬಹುದಾದ ಸಾಧನೆಗಳು ನಾಲ್ಕೇ ವರ್ಷದಲ್ಲಿ ಕಾಣುತ್ತಿದೆ. ಇದರಲ್ಲಿ ಸಿಬ್ಬಂದಿಗಳ, ಗ್ರಾಹಕರ ಹಾಗೂ ಸರ್ಕಾರದ ಕಾಣಿಕೆಗಳು ದೊಡ್ಡದಿವೆ' ಅಂತಾರೆ.
ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕವೇ ನಂಬರ್ ಒನ್. ಇದರಲ್ಲಿ ಅಪೆಕ್ಸ್ ಬ್ಯಾಂಕ್ನ ಕೊಡುಗೆ ಶೇಕಡಾ ನೂರರಷ್ಟು ಅಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಮಂಜುನಾಥ ಗೌಡರ ಕನಸಿನಂತೆ ಈಗಾಗಲೇ ಡಿಸಿಸಿ ಬ್ಯಾಂಕ್ ಸಾವಿರ ಕೋಟಿ ಬಂಡವಾಳ ಹೊಂದಿ ದೇಶದ ನಂಬರ್ ಒನ್ಬ್ಯಾಂಕ್ ಆಗಿದೆ. ಪ್ರಪ್ರಥಮ ಕಿಸಾನ್ ಕ್ರೆಡಿಟ್ ಸಾಲ ನೀಡಿದ ಹೆಗ್ಗಳಿಕೆ ಕೂಡ ಈ ಬ್ಯಾಂಕಿನದ್ದೆ. ಅಪೆಕ್ಸ್ ಬ್ಯಾಂಕ್ನ ಶತಮಾನೋತ್ಸವ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿ, ಉದ್ಯಮ ಬೃಹತ್ತಾಗಿ ಬೆಳೆಯಲಿ ಎಂಬುದು ಶುಭಾಶಯ.
ಅಪೆಕ್ಸ್ ಬ್ಯಾಂಕ್ ಹಾದಿ
1915ನವೆಂಬರ್ 10ರಂದು ವರದರಾಜ ಅಯ್ಯಂಗಾರ್ ಅಧ್ಯಕ್ಷತೆಯಲ್ಲಿ ಆರಂಭ.
1956ರಲ್ಲಿ ಕೊ-ಆಪರೇಟಿವ್ ಆ್ಯಕ್ಟ್ಜಾರಿಗೆ ಬಂದ ನಂತರ ಸಹಕಾರ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ. ಕೃಷಿ ಸಾಲ, ಬೆಲೆ ಸಾಲದಿಂದ ಶುರು ಮಾಡಿ ಕುರಿ ಸಾಕಾಣಿಕೆ, ಮೀನುಗಾರಿಕೆ, ನೇಯ್ಗೆಗೆ ಸಾಲ ನೀಡಿಕೆ. ವೈಯಕ್ತಿಕ ಮಟ್ಟದಲ್ಲಿ ಗೃಹ ಸಾಲ, ವಾಹನ ಸಾಲ, ಅಡಮಾನ ಸಾಲ, ಚಿನ್ನಾಭರಣ ಸಾಲ, ಓ.ಡಿ ಸೌಲಭ್ಯ ಹಾಗೂ ಕೈಗಾರಿಕಾ ಮತ್ತು ಯೋಜನಾ ಸಾಲಗಳು ಕೂಡ ಲಭ್ಯ.
ಬೆಂಗಳೂರು ನಗರದಲ್ಲಿ 42 ಶಾಖೆಗಳು.
ಜಿಲ್ಲಾ ಮಟ್ಟದಲ್ಲಿ ಇಪ್ಪತ್ತೊಂದು ಸಹಕಾರ ಬ್ಯಾಂಕುಗಳು, ಒಟ್ಟು 634 ಶಾಖೆಗಳು.
ಗ್ರಾಮೀಣ ಮಟ್ಟದಲ್ಲಿ ಒಟ್ಟು 5099 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ರಾಷ್ಟ್ರೀಕೃತ ಮತ್ತು ವಿದೇಶಿ ಬ್ಯಾಂಕ್ಗಳ ಹಾಗೆ, ತ್ವರಿತ ಹಣ ವರ್ಗಾವಣೆಗೆ ಆರ್ಟಿ ಜಿಎಸ್ ಮತ್ತು ಎನ್ಇ ಎಫ್ಟಿ ಸೌಲಭ್ಯ.
ಎಲ್ಲ ಶಾಖೆಗಳು ಸಿಬಿಎಸ್(ಸೆಂಟ್ರಲೈಸ್ಡ್ ಬ್ಯಾಂಕಿಂಗ್ ಸಿಸ್ಟಂ) ಅಡಿಯಲ್ಲಿ ಜೋಡಣೆ.
ಸಾಲ ವಸೂಲಿಗಾಗಿ ವಿಶೇಷ ವ್ಯವಸ್ಥೆ.
ಸ್ವಸಹಾಯ ಗುಂಪುಗಳ ರಚನೆ ಮತ್ತು ಬ್ಯಾಂಕ್ ಸಾಲ ಜೋಡಣೆ ಕಾರ್ಯಕ್ರಮ.
ಬ್ಯಾಂಕಿಂಗ್ ವ್ಯವಸ್ಥೆಗೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ. <
ವಿದೇಶಿ ಬ್ಯಾಂಕ್ಗಳಿಗೆ ಸರಿಸಮ
ಇಷ್ಟೆಲ್ಲಾ ದೊಡ್ಡ ಬ್ಯಾಂಕ್ಗಳು ಇರುವಾಗ ಜನ ಸಹಕಾರಿ ಬ್ಯಾಂಕ್ ಮೇಲೆ ನಂಬಿಕೆ ಇಡ್ತಾರಾ?
ನಂಬಿಕೆ ಇಟ್ಟಿರೋದಕ್ಕೇ ಅಲ್ವೇ ಇದೀಗ ಇಷ್ಟೊಂದು ಗ್ರಾಹಕರೊಂದಿಗೆ, ಸಾವಿರಾರು ಶಾಖೆಗಳನ್ನು ನಡೆಸುತ್ತಾ ಶತಮಾನೋತ್ಸವ ವರ್ಷದಲ್ಲಿರೋದು?
ಹೆಜ್ಜೆಗೊಂದು ಎಟಿಎಂ, ಇಬ್ಯಾಂಕ್ ಸೌಲಭ್ಯ, ಮನೆಗೆ ಬಂದು ಸಾಲ ಕೊಡುವ ಬೇರೆ ಬ್ಯಾಂಕ್ಗಳಿರುವಾಗ ಸಹಕಾರಿ ಬ್ಯಾಂಕ್ ಇನ್ನೂ ಹಿಂದುಳಿದಿದೆ ಅನಿಸೋಲ್ವೆ ?
ಖಂಡಿತ ನಾವು ಹಿಂದುಳಿದಿಲ್ಲ. ನಮ್ಮ ಬ್ಯಾಂಕ್ ಯಾವ ರೀತಿಯಲ್ಲೂ ಕಮ್ಮಿ ಇಲ್ಲ. ಎಟಿಎಂ, ಇಬ್ಯಾಂಕ್ ಸೌಲಭ್ಯ, ಆಕರ್ಷಕ ಬಡ್ಡಿದರ, ಸುರಕ್ಷೆ ಎಲ್ಲದರಲ್ಲೂ ನಾವು ಈಗ ವಿದೇಶಿ ಬ್ಯಾಂಕ್ ಸರಿಸಮ ನಿಂತಿದ್ದೇವೆ.
ನಿಮ್ಮ ಅಧಿಕಾರಾವಧಿಯಲ್ಲಿ ಡಿಸಿಸಿ ಬ್ಯಾಂಕ್ಗಳ ಕಡೆಗೆ ಹೆಚ್ಚಿನ ಗಮನ ಸಿಕ್ಕಿದೆಯೇ?
ಹೌದು. ಮುಳುಗುವ ಸ್ಥಿತಿಯಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಸುಗಮ ಸ್ಥಿತಿಗೆ ಬಂದಿದೆ. ಆರು ಜಿಲ್ಲೆಗಳ ಬ್ಯಾಂಕ್ಗಳು ಲಾಭದಲ್ಲಿವೆ. ಇನ್ನೂ ಇಪ್ಪತ್ತು ಬ್ಯಾಂಕ್ಗಳು ನವೀಕೃತವಾಗುತ್ತಿವೆ.
ಸ್ವಸಹಾಯ ಗುಂಪುಗಳ ಬಗ್ಗೆ ಹೇಳಿ.
ಎರಡು ಲಕ್ಷ ಸ್ವಸಹಾಯ ಗುಂಪುಗಳ ರಚನೆ ಮಾಡಿ ಶೇಕಡಾ 4ರ ಬಡ್ಡಿದರದಲ್ಲಿ 2650 ಕೋಟಿ ಕೃಷಿ ಸಾಲ ನೀಡಿದ್ದೇವೆ. ಈ ವರ್ಷಾಂತ್ಯದ ಒಳಗೆ 5000 ಕೋಟಿ ಸಾಲ ನೀಡುವ ಯೋಜನೆಯಿದೆ.
ಅಪೆಕ್ಸ್ ಮಹಿಳಾ ಅಭಿವೃದ್ಧಿ ವಿಭಾಗದ ವ್ಯಾಪ್ತಿ ಏನು?
ಇದು ಕಳೆದ ವರ್ಷ ಆರಂಭಿಸಿದ್ದು. ಮಹಿಳೆಯರನ್ನು ಕೈಗಾರಿಕಾ ಸ್ಥಾಪನೆಗೆ ಪ್ರೋತ್ಸಾಹಿಸಿ ಮಹಿಳಾ ಸ್ಯಯಂಸೇವಕ ಗುಂಪುಗಳಿಗೆ ಸಾಲಯೋಜನೆ ಮಾಡಿದ್ದೇವೆ.
ಶತಮಾನೋತ್ಸವದ ಸಂಭ್ರಮಕ್ಕೆ ಯಾವ ರೀತಿ ತಯಾರಿ ನಡೆದಿದೆ?
ಸಂಭ್ರಮ ಅಂದರೆ ಮತ್ತಷ್ಟು ಜನಸ್ನೇಹಿ ಯೋಜನೆಗಳ ಜಾರಿ ಅಷ್ಟೇ. ಗ್ರಾಹಕ ಸ್ನೇಹಿ ಆಗುವುದು ಮತ್ತು ಬ್ಯಾಂಕನ್ನು ಸುಭದ್ರಗೊಳಿಸುವುದು ನಿರಂತರ ಆದ್ಯತೆ. ಪ್ರತಿ ಜಿಲ್ಲೆಯಲ್ಲೂ ಡಿಸಿಸಿ ಬ್ಯಾಂಕ್ ಮತ್ತು ಸೊಸೈಟಿಗಳನ್ನೂ ಸನ್ಮಾನಿಸುವುದು, ಇತರೆ ದೇಶಗಳ ಸಹಕಾರಿ ಬ್ಯಾಂಕುಗಳ ಮುಖ್ಯಸ್ಥರನ್ನು ಆಹ್ವಾನಿಸಿ ಅವರ ಸಲಹೆ ಪಡೆಯುವುದು, ಸಹಕಾರಿ ಬ್ಯಾಂಕ್ ಸೃಷ್ಟಿ ಮತ್ತು ಏಳಿಗೆಗೆ ಕಾರಣರಾದ ಹಿರಿಯ ಚೇತನಗಳಿಗೆ ಗೌರವ ಇತ್ಯಾದಿ ಯೋಜನೆಗಳು ಪಟ್ಟಿಯಲ್ಲಿವೆ.
= ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


