ನೀವು ಮಂಡೇಲಾನಿಗಿಂತಲೂ ನತದೃಷ್ಟವಂತರೇ?

ಗೆಲುವಿನತ್ತ ತಿರುವು
ಯಾರಾದರೂ ಒಬ್ಬ ವ್ಯಕ್ತಿ, ತಾನು ಸೋತುಹೋಗುತ್ತೇನೆ ಎಂದು ಮೊದಲೇ ನಿರ್ಧಾರ ಮಾಡಿರುವನೆಂದುಕೊಳ್ಳಿ. ಅದಕ್ಕೆ ಕಾರಣಗಳು ಸಾಮಾನ್ಯವಾಗಿ ಏನಿರುತ್ತವೆ?
ದುರಾದೃಷ್ಟ ಸದಾ ಬೆನ್ನತ್ತುತ್ತಿರುವುದೆಂಬ ಭಾವನೆಯೇನು ನಿಮ್ಮದು? 76ನೇ ವಯಸ್ಸಿನಲ್ಲಿ ಸೌತ್ ಆಫ್ರಿಕಾ ದೇಶದ ಚುಕ್ಕಾಣಿ ಹಿಡಿದು, ನೋಬೆಲ್ ಪ್ರೈಜ್ ಸಂಪಾದಿಸಿದ ಮಂಡೇಲಾ 27 ವರ್ಷಗಳ ಕಾಲ ಜೈಲಿನಲ್ಲಿ ದುರ್ಭರ ಜೀವನವನ್ನು ಅನುಭವಿಸಲಿಲ್ಲವೇ? ಆತನಿಗಿಂತ ನತದೃಷ್ಟರೇನೂ ಅಲ್ಲವಲ್ಲಾ ನಾವು?
ನಿಮಗೆ ವಯಸ್ಸಾಗಿ ಹೋಗಿದೆ ಎಂದುಕೊಂಡಿದ್ದೀರಾ? ಅದಕ್ಕೇನೀಗ? ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಮದರ್ ಥೆರೆಸ್ಸಾ ಒಬ್ಬ ಕುಷ್ಟರೋಗಿಗೆ ಸ್ನಾನ ಮಾಡಿಸುತ್ತಲೇ, ಮತ್ತೊಂದೆಡೆ ಹಾರ್ವರ್ಡ ಯೂನಿವರ್ಸಿಟಿಯಲ್ಲಿ ಭಾಷಣ ಮಾಡಲಿಲ್ಲವೇ?
ಹುಟ್ಟಿನಿಂದಲೇ ಮೂಕಿ, ಕುರುಡಿ ಆಗಿದ್ದ ಹೆಲೆನ್ ಕೆಲ್ಲರ್ ತನ್ನ ರಚನೆಗಳ ಮೂಲಕ ಪ್ರಪಂಚದಲ್ಲಿಯೇ ಖ್ಯಾತಿ ಹೊಂದಲಿಲ್ಲವೇ? 1995ರಲ್ಲಿ ಮಿಸ್ ಅಮೆರಿಕ ಆದ ಹೆದರ್ ವೈಟ್ಸ್ಟೋನ್ ಕಿವುಡಿ ಅಲ್ಲವೇ? ವಿಯೆಟ್ನಾಂ ಯುದ್ಧದಲ್ಲಿ ಎರಡೂ ಕೈಕಾಲುಗಳನ್ನು ಕಳೆದುಕೊಂಡಿದ್ದ ಮಾಕ್ಸ್, ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಮೆರಿಕದ ಅಂತಾರಾಷ್ಟ್ರೀಯ ಸಂಸ್ಥೆಗೆ ಅಧ್ಯಕ್ಷನಾಗಲಿಲ್ಲವೇ?
ನೀವು ತರಗತಿಯಲ್ಲಿ ಫಸ್ಟ್ ಅಲ್ಲವೇ? ಆದೇನು ಮಹಾ? ವಿನ್ಸ್ಟನ್ ಚರ್ಚ್, ಸ್ಟೀವನ್ ಸ್ಟೀಲ್ಬರ್ಗ ಕೂಡಾ ಫಸ್ಟೇ... ಹಿಂದಿನಿಂದ. ನನ್ನ ಮಿತ್ರ ಗ್ರಂಧಿ ಮಲ್ಲಿಕಾರ್ಜುನ್ರಾವ್ ಹತ್ತನೆಯ ತರಗತಿಯಲ್ಲಿ ಫೆಯಿಲ್. ಆಗ ಅವನ ತಂದೆ ಓದಿದ್ದು ಸಾಕು. ಸ್ಕೂಲಿಗೆ ಹೋಗೋದು ನಿಲ್ಲಿಸಿ ವ್ಯಾಪಾರದಲ್ಲಿ ಸಹಾಯ ಮಾಡು ಎಂದರು. ಎರಡು ವರ್ಷಗಳ ನಂತರ ಅಮ್ಮನನ್ನು ಕಾಡಿ ಬೇಡಿ ಮತ್ತೆ ಶಾಲೆ ಸೇರಿ ಪ್ರೀ-ಯೂನಿವರ್ಸಿಟಿಯನ್ನು ಪ್ರಥಮಶ್ರೇಣಿಯಲ್ಲಿ ಪಾಸ್ ಆಗಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ತಿಮಾಡಿ, ಇಂಚಿಂಚಾಗಿ ಅಭಿವೃದ್ಧಿ ಹೊಂದಿ 1200 ಕೋಟಿ ರೂಪಾಯಿಗಳ ಖರ್ಚ್ನಲ್ಲಿ ಪ್ರಪಂಚದ ಅತ್ಯಾಧುನಿಕ
ವಿಮಾನ ನಿಲ್ದಾಣಗಳಲ್ಲಿ ಎರಡನೆಯದೆಂದು ಬಹುಮಾನ ಪಡೆದ ಹೈದ್ರಾಬಾದ್ನ ಜಿ.ಎಂ.ಆರ್. ಏರ್ಪೋರ್ಟ್ ನಿರ್ಮಿಸಿದ. ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಲು ಇದಕ್ಕಿಂತ ದೊಡ್ಡ ಉದಾಹರಣೆ
ಯಾವುದು ಬೇಕು?
ಜೀವನ ಅಂದರೆ ಗಮ್ಯದಿಂದ ಗಮ್ಯಕ್ಕೆ ಪ್ರಯಾಣ ಮಾಡಿದಾಗ, ಪ್ರಯಾಣವನ್ನು ಪ್ರೀತಿಸಬೇಕು. ಡಾಕ್ಟರ್ ಆಗಬೇಕೆಂಬುದು ಗಮ್ಯವಾದರೆ, ಪ್ರವೇಶ ಪರೀಕ್ಷೆಗೆ ಓದುವುದು ಪ್ರಯಾಣ. ಹಾಲಿಡೇ ರೆಸಾರ್ಟ್ಗೆ ಹೋಗಿ ಬರಲು ನಾಲ್ಕೈದು ದಿನಗಳು ಬೇಕಾದರೆ, ಹೋದ ಮರುಕ್ಷಣದಿಂದ ಮರಳಿ ಬರುವ ಪ್ರಯಾಣಕ್ಕೆ ತಯಾರಾಗುವ ಕೆಲಸದಲ್ಲಿ ಬಿಜಿ ಆಗಿಬಿಟ್ಟರೆ ಇನ್ನು ಅಲ್ಲಿನ ಸೌಂದರ್ಯವನ್ನು ಏನು ಆನಂದಿಸಬಲ್ಲೆವು?
ಒಬ್ಬ ವ್ಯಕ್ತಿ ಎವರೆಸ್ಟ್ ಮೇಲೆ ಬಾವುಟ ಹಾರಿಸಲು ಹೋದನೆಂದುಕೊಳ್ಳೋಣ. ಮೇಲೆ ಹತ್ತಲು ಮೂರು ತಿಂಗಳು, ಇಳಿಯಲು ಎರಡು ತಿಂಗಳು, ಬಾವುಟ ನೆಡಲು ಐದು ಸೆಕೆಂಡುಗಳು ಹಿಡಿಯಿತೆಂದುಕೊಳ್ಳೋಣ. ಬಾವುಟ ನೆಡುವ ಐದು ಸೆಕೆಂಡುಗಳೂ ಅವನು ಅಮಿತವಾದ ಸಂತೋಷದಿಂದ ಇರುತ್ತಾನೆ. ಆದರೆ ಹತ್ತುವಾಗಲೂ, ಇಳಿಯುವಾಗಲೂ ತನ್ನನ್ನು ತಾನು ಬೈದುಕೊಂಡು ಪ್ರಯಾಣ ಸಾಗಿಸಿದನೆಂದುಕೊಳ್ಳೋಣ. ನಿಜ ಹೇಳಬೇಕೆಂದರೆ ಬಾವುಟ ಏಕೆ ನೆಡಬೇಕು? ಅಷ್ಟು ನೋವೇಕೆ ಅನುಭವಿಸಬೇಕು?
ಧ್ವಜವನ್ನು ನೆಡುವ ಸಮಯದಲ್ಲಿ ಮಾತ್ರವೇ ಆನಂದಿಸಿದರೆ, ಐದು ಸೆಕಂಡುಗಳ ಸಂತೋಷಕ್ಕಾಗಿ ಐದು ತಿಂಗಳು ಶ್ರಮ ಪಡುತ್ತಾನೆಂದಾಯ್ತು. ಪಾಠಗಳನ್ನು ಹೇಳುವ ಟೀಚರು, ಕೇವಲ ಸಂಬಳದ ದಿನಕ್ಕಾಗಿ 29 ದಿನಗಳು ತಾವು ಹೇಳುವ ಬೋಧನೆಗಳನ್ನೇ ಆನಂದಿಸದೇ ಆಳುತ್ತಾ ಜೀವಿಸಿದರೆ, ಇದಕ್ಕಿಂತ ದೀನಸ್ಥಿತಿ ಮತ್ತೊಂದು ಇರುತ್ತದೆಯೇ?
ಧ್ವಜ ನೆಡುವುದರಲ್ಲಿರುವ ಆನಂದಕ್ಕಾಗಿ ಐದು ತಿಂಗಳು ತೊಂದರೆ ಪಟ್ಟರೆ ಏನು ತಪ್ಪು? ಬಾವುಟ ನೆಡುವುದು ಒಂದು ಹೊಣೆಗಾರಿಕೆ ಅಲ್ಲವೇ? ಎಂದು ಕೆಲವರು ವಾದಿಸಬಹುದು. ಆದರೆ ಒಂದು ಧ್ವಜ ಪಾತಿಯಲ್ಲಿ ಇಳಿದೊಡನೆ ಮತ್ತೊಂದು ಎದುರಿಗೆ ಇರುತ್ತದೆ. ಓದು ಮುಗಿದ ಮೇಲೆ ಉದ್ಯೋಗ, ಉದ್ಯೋಗ ಸಿಕ್ಕಿದ ಮೇಲೆ ಮಕ್ಕಳ ವಿದ್ಯಾಭ್ಯಾಸ... ಹೀಗೆ ಎಲ್ಲಾ ಪರ್ವತಗಳೇ. ಮತ್ತೆ ಇದಕ್ಕೆ ಪರಿಹಾರ ಏನು? ಪ್ರಯಾಣವನ್ನು ಕೂಡಾ ಆನಂದಿಸುವುದು. ಆಗ ಪ್ರಯಾಣವೂ ಚೆನ್ನಾಗಿರುತ್ತದೆ. ಧ್ವಜ ನೆಡುವಿಕೆ ಕೂಡಾ ಚೆನ್ನಾಗಿರುತ್ತದೆ.
ಕೆಲವರು ಗಮ್ಯವನ್ನು ಊಹಿಸಿಕೊಳ್ಳುತ್ತಾ ಆನಂದಿಸುವರೇ ಹೊರತು, ಅದನ್ನು ಸಾಕಾರಗೊಳಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಯುವತಿ ಯುವಕರನ್ನು ನಿಮ್ಮ ಕೋರಿಕೆಗಳೇನು ಎಂದು ಕೇಳಿದರೆ ಒಂದು ಅನಾಥಾಶ್ರಮ ಇಡಬೇಕು ಎಂದೋ, ಇಬ್ಬರು ಮೂವರು ಮಕ್ಕಳನ್ನು ಉಚಿತವಾಗಿ ಓದಿಸಬೇಕು ಎಂದೋ ಹೇಳುತ್ತಿರುತ್ತಾರೆ. ಈ ರೀತಿಯ ಕೋರಿಕೆಗಳು ಚೆನ್ನಾಗಿಯೇ ಇರುತ್ತವೆಯಾದರೂ ವಯಸ್ಸು ಹೆಚ್ಚುತ್ತಿದ್ದಂತೆ ಆ ಕೋರಿಕೆಗಳು ಕಡಿಮೆಯಾಗಿಬಿಡುತ್ತವೆ. ನನ್ನ ಮಿತ್ರನೊಬ್ಬ, ನನ್ನ ಜೀವನದ ಗುರಿ ನೂರು ಕೋಟಿ ಸಂಪಾದಿಸಿ ಅದರಲ್ಲಿ ಇಪ್ಪತ್ತು ಕೋಟಿ ಬಡವರಿಗೆ ಹಂಚಿಬಿಡುವುದು ಎಂದು ಹೇಳುತ್ತಿರುತ್ತಾನೆ. ಈ ಮಾತನ್ನು ಅವನು ಇಪ್ಪತ್ತು ವರ್ಷಗಳಿಂದ ಹೇಳುತ್ತಲೇ ಇದ್ದಾನೆ. ಈಗ ಅವನು ಐದು ಕೋಟಿಗಳಿಗೆ ಅಧಿಪತಿ. ಕನಿಷ್ಠಪಕ್ಷ ಒಂದು ಲಕ್ಷ ರೂಪಾಯಿಯನ್ನೂ ದಾನ ಮಾಡುವುದಿಲ್ಲ. ಆ ವಿಷಯವನ್ನು ನೆನಪಿಸಿದರೆ ಮೊದಲು ಬೇಸಿಕ್ ನೀಡ್ಸ್ ತೀರಬೇಕಲ್ಲವೇ? ಆ ನಂತರ ದಾನಧರ್ಮಗಳು. ನೂರು ಕೋಟಿ ಸಂಪಾದಿಸಿದಾಗ ಕೂಡಾ ಅವನ ಅಗತ್ಯಗಳು ತೀರುವುದಿಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದಿದೆ.
ಕರಾಟೆ ಕಿಡ್ ಎನ್ನುವ ಸಿನಿಮಾದಲ್ಲಿ ಜಾಕೀಛಾನ್ ಸದಾ
ಆಟಿಟ್ಯೂಡ್ ಎಂಬ ಒಂದು ಮಾತು ಹೇಳುತ್ತಾ ಇರುತ್ತಾನೆ. ಆ ದೃಷ್ಟಿಕೋನವೇ ಮನುಷ್ಯರನ್ನು ತಮ್ಮ ಗಮ್ಯದತ್ತ ನಡೆಸುತ್ತಾ ಇರುತ್ತದೆ. ಒಬ್ಬರೇ ತಾಯ್ತಂದೆಯರಿಗೆ ಹುಟ್ಟಿದ ಇಬ್ಬರು ವ್ಯಕ್ತಿಗಳು, ಒಂದೇ ಸೌಕರ್ಯವನ್ನು ಆನಂದಿಸುತ್ತಾ, ಒಂದೇ ಕಾಲೇಜಿನಲ್ಲಿ ಓದಿದರೂ ಕೂಡ ಯಾಕೆ ಒಂದೇ ರೀತಿಯಲ್ಲಿ ತಮ್ಮ ಗಮ್ಯವನ್ನೇಕೆ ಸೇರಿಕೊಳ್ಳುವುದಿಲ್ಲ? ಇದಕ್ಕೆ ಕಾರಣ ಜೀವನ ವಿಧಾನ. ಸ್ಕೂಲು, ಕಾಲೇಜುಗಳಲ್ಲಿ ಸಹಪಾಠಿಗಳ ಸಾಹಚರ್ಯ.
ಚಿಕ್ಕಂದಿನಲ್ಲಿ ನಮ್ಮ ತಾಯ್ತಂದೆಯರು ನಮ್ಮ ಜೀವನವನ್ನು ಸಂಘಟಿಸಲು ಪ್ರಯತ್ನಿಸಿದರೂ, ಕ್ರಮೇಣ ಅದನ್ನು ನಮ್ಮ ಅಧೀನಕ್ಕೆ ತಂದುಕೊಳ್ಳುತ್ತೇವೆ. ನಮ್ಮ ಸ್ವಂತ ನಿಧರ್ಾರಗಳು, ಸಕಾರಾತ್ಮಕ ಆಲೋಚನೆಗಳು, ನಕಾರಾತ್ಮಕ ಅಭಿಪ್ರಾಯಗಳು, ಸೋಮಾರಿತನ, ಬುದ್ಧಿವಂತಿಕೆ, ದೂರದೃಷ್ಟಿ, ಸ್ನೇಹಿತರ ಸಾಹಚರ್ಯ, ನಮ್ಮ ಮಾರ್ಗವನ್ನು ನಿದರ್ೇಶಿಸುತ್ತವೆ.
ಮನುಷ್ಯರು ಸಾಧಾರಣವಾಗಿ ನಾಲ್ಕು ರೀತಿಯ ಕೆಲಸಗಳಲ್ಲಿ ಮಗ್ನರಾಗಿರುತ್ತಾರ.
ಒಂದು: ಓದು, ಉದ್ಯೋಗ, ಆಟಗಳು, ಸಂಗೀತ ಮೊದಲಾದ ವಿಷಯಗಳಲ್ಲಿ ಮಾಡುತ್ತಿರುವ ಕೆಲಸವನ್ನು ಆನಂದಿಸುತ್ತಾ, ಉತ್ಸಾಹದಿಂದ.
ಎರಡು: ಓದು, ಉದ್ಯೋಗ ಮೊದಲಾದ ಮುಖ್ಯವಾದ
ಕೆಲಸಗಳಲ್ಲಿ ಒಂದಿಷ್ಟೂ ಉತ್ಸಾಹವಿಲ್ಲದೇ, ಕೇವಲ ಹೊಣೆಯಾಗಿ.
ಮೂರು: ಮದುವೆಗಳು, ಸಮಾರಂಭಗಳು, ಮೀಟಿಂಗು ಗಳು ಮೊದಲಾದ ಜವಾಬ್ದಾರಿಗಳು ಉಪ ಯೋಗ ವಿರದಿದ್ದರೂ ವಿಧಿಯಿಲ್ಲದೇ ಪಾಲ್ಗೊಳ್ಳುವುದು.
ನಾಲ್ಕು: ಟಿವಿ, ಗಾಸಿಪ್, ಸಿನಿಮಾಗಳಂತಹ ಉಪ ಯೋಗವಿಲ್ಲದ ಮಹಾನ್ ಉತ್ಸಾಹಕರ ವಿಷಯಗಳು.
ಇದರಲ್ಲಿ ಯಾವ ವ್ಯಕ್ತಿ ಕೊನೆಯ ಎರಡು ವಿಷಯಗಳನ್ನು ಕಡಿಮೆ ಮಾಡಿ ಮೊದಲ ವಿಷಯದಲ್ಲಿ ಹೆಚ್ಚು ಅಸಕ್ತಿಯಿಂದಿರುತ್ತಾನೋ ಅವನನ್ನು ವಿಜಯಲಕ್ಷ್ಮಿ ವರಿಸುತ್ತಾಳೆ. ಮೇಲೆ ಹೇಳಿದ ಮೂರನೆಯ ವಿಷಯದ ಬಗ್ಗೆ ಒಂದು ಸಾರಿ ಆಲೋಚಿಸಿರಿ. ನೀವು ನಿಜವಾಗಿಯೂ ಸಮಯವಿಲ್ಲದೇ ಒಂದು ಮದುವೆಗೆ ಹೋಗಲಾಗಲಿಲ್ಲವೆಂದುಕೊಳ್ಳಿ. ಕೆಲಸವಿತ್ತು, ಅದಕ್ಕೇ ಬರಲಿಲ್ಲವೆಂದುಕೊಳ್ಳುತ್ತಾರೆ. ನೀವು ಆಲೋಚಿಸಿದಷ್ಟು ಅವರು ಒಂದು ಕ್ಷಣ ಕೂಡಾ ಯೋಚಿಸುವುದಿಲ್ಲ. ನಾಲ್ಕೈದು ಫಂಕ್ಷನ್ಗಳಿಗೆ ಹೋಗದಿದ್ದರೆ, ಇವನು ಹೀಗೆಯೇ ಎಂದುಕೊಂಡುಬಿಡುತ್ತಾರೆ.
ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ. ಬಿದ್ದ ಸ್ಥಾನವನ್ನು ಆಧರಿಸಿ, ನೀರಿನ ಬಿಂದುವಿನ ಭವಿಷ್ಯತ್ ಅವಲಂಬಿಸಿರುತ್ತದೆ ಎಂದು ಇದು ಹೇಳುತ್ತದೆ. ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣದಲ್ಲಿ ಆವಿಯಾಗಿಬಿಡುತ್ತದೆ. ಮೋಸಗಾರರೊಂದಿಗೆ ಸೇರಿದರೆ ವಿದ್ಯಾರ್ಥಿಯ ಜೀವನ ಹಾಗೆಯೇ ಕೆಲಸಕ್ಕೆ ಬಾರದ ಹಾಗಾಗಿಬಿಡುತ್ತದೆ. ಅದೇ ನೀರಿನ ಹನಿ ತಾವರೆಯ ಎಲೆಯ ಮೇಲೆ ಬಿದ್ದರೆ, ಮೋಟರ್ಬೈಕ್ಗಳ ಮೇಲೆ, ಬೀರ್ ಟಿನ್ಗಳ ಮೇಲೆ ಬಿದ್ದರೆ, ಫಳಫಳ ಹೊಳೆದು ಸಂಜೆಯ ವೇಳೆಗೆ ಆವಿಯಾಗಿಬಿಡುತ್ತದೆ. ಅಂತಹ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹೀರೋ, ಹೀರೋಯಿನ್ಗಳಾಗಿ ಮೆರೆದು, ಕಾಲೇಜಿನಿಂದ ಹೊರಬಂದೊಡನೆ ಕಾಲಗರ್ಭದಲ್ಲಿ ಸೇರಿಹೋಗು ತ್ತಾರೆ. ಅದೇ ಬಿಂದು ಮುತ್ತಿನ ಚಿಪ್ಪಿನಲ್ಲಿ ಬಿದ್ದದ್ದೇ ಆದರೆ ಮುತ್ತಾಗಿ ಮಾರ್ಪಾಡಾಗುತ್ತದೆ. ತಾನು ಎಲ್ಲಿ ಬೀಳಬೇಕೋ ಎಂಬುದು ನೀರಿನ ಬಿಂದುವಿನ ಕೈಯಲ್ಲಿಲ್ಲ. ಅದನ್ನು ವಿಧಿ ನಿರ್ಣಯಿಸುತ್ತದೆ. ಆದರೆ ಆ ಶಕ್ತಿ, ಯುಕ್ತಿ ನಮಗೆ ಇದೆ.
(ಮುಂದುವರಿಯುವುದು)
ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ ಯತಿರಾಜ್ ವೀರಾಂಬುಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


