ಜಂಗಲ್ ಜೋಗ
'ನಮ್ಮ ಸರ್ಕಾರ ಟೂರಿಸಂಗೆ ಸಾಕಷ್ಟು ಆದ್ಯತೆ ಕೊಡ್ತಾ ಇಲ್ಲಾರಿ... ಜೋಗದ ಸುತ್ತಮುತ್ತ ಎಷ್ಟೊಂದು ಸುಂದರ ಪ್ರಕೃತಿ ...

'ನಮ್ಮ ಸರ್ಕಾರ ಟೂರಿಸಂಗೆ ಸಾಕಷ್ಟು ಆದ್ಯತೆ ಕೊಡ್ತಾ ಇಲ್ಲಾರಿ... ಜೋಗದ ಸುತ್ತಮುತ್ತ ಎಷ್ಟೊಂದು ಸುಂದರ ಪ್ರಕೃತಿ ಇದೆ, ಶರಾವತಿ ನದಿ ಹರಿಯುತ್ತೆ, ಆದರೂ ಟ್ರೆಕ್ಕಿಂಗ್, ಬೋಟಿಂಗ್, ಬೈಕ್ ರೈಡಿಂಗ್, ಜಲಕ್ರೀಡೆ ಥರದವೇನೂ ಇಲ್ಲ...'
ಇದು ಜೋಗ ನೋಡಿದ ಬಹಳಷ್ಟು ಪ್ರವಾಸಿಗರ ಅಳಲು. ಅದರಲ್ಲಿ ಸತ್ಯವೂ ಇತ್ತು. ಇನ್ನು ಈ ರೀತಿಯ ಕೊರತೆ ಇದೆ ಎಂದು ಚಿಂತೆಪಡಬೇಕಿಲ್ಲ. ಯಾಕೆ ಅಂತೀರಾ?
ಜೋಗದ ಸನಿಹದಲ್ಲೇ ರಾಜ್ಯ ಸರ್ಕಾರದ ಜಂಗಲ್ ಲಾಡ್ಜ್ ರೆಸಾರ್ಟ್ನ 'ಶರಾವತಿ ಅಡ್ವೆಂಚರ್ ಕ್ಯಾಂಪ್' ಶುರುವಾಗಿದೆ. ಅಲ್ಲಿ ಪ್ರವಾಸಿಗರಿಗೆ ಆದರದ ಆತಿಥ್ಯ, ಮನರಂಜನೆ ಸಿಗುತ್ತಿದೆ. ನೀವು ಜೋಗಕ್ಕೆ ಭೇಟಿ ನೀಡಿದಾಗ 'ಶರಾವತಿ ಅಡ್ವೆಂಚರ್ ಕ್ಯಾಂಪ್' ಸಂದರ್ಶಿಸಿದರೆ ನಿಮ್ಮ ಪ್ರವಾಸ ಅರ್ಥಪೂರ್ಣವಾಗುವುದರಲ್ಲಿ ಸಂಶಯ ಇಲ್ಲ.
ಏನಿದು 'ಶರಾವತಿ ಅಡ್ವೆಂಚರ್'?
ಜಂಗಲ್ ಲಾಡ್ಜ್ ರೆಸಾರ್ಟ್ ರಾಜ್ಯದ 16 ಕಡೆ ತನ್ನ ಶಾಖೆಗಳನ್ನು ಹೊಂದಿದೆ. ಜೋಗದ ಬಳಿಯೂ ಇದರ ಅಗತ್ಯ ಮನಗಂಡು 28 ಎಕರೆ ವಿಶಾಲ ಜಾಗದಲ್ಲಿ ಅಂದಾಜು 6 ಕೋಟಿ ವೆಚ್ಚದಲ್ಲಿ ಸುಂದರ 'ಶರಾವತಿ ಅಡ್ವೆಂಚರ್ ಕ್ಯಾಂಪ್' ಕಟ್ಟಲಾಗಿದೆ. ಸ್ಥಳೀಯವಾಗಿಯೇ ಸಿಗುವ ಗ್ರಾನೈಟ್ ಕಲ್ಲು, ಕಟ್ಟಿಗೆ ಬಳಸಿ ಕಟ್ಟಲಾಗಿದೆ. ನೋಡಲು ಹಳ್ಳಿಯ ಮನೆಯಂತೆ ಕಾಣುತ್ತದೆ. ಒಳಹೊಕ್ಕರೆ ಐಷಾರಾಮಿ ಅನುಭವ. ಸುತ್ತ ಸುಂದರ ಪ್ರಕೃತಿ, ಶರಾವತಿ ನದಿ, ಪಕ್ಷಿಗಳ ಕಲರವ ಇವೆಲ್ಲಾ ಪ್ರವಾಸಿಗರನ್ನು ಬೇರೆ ಲೋಕಕ್ಕೆ ಕರೆದೊಯ್ದರೆ ಅಚ್ಚರಿಪಡಬೇಕಿಲ್ಲ. ಇಲ್ಲಿ ವಾಸ್ತವ್ಯ ಹೂಡಲು ಶುಲ್ಕವೂ ತೀರಾ ಕಮ್ಮಿ. 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಶೇ. 50 ರಿಯಾಯಿತಿ. 5 ವರ್ಷದೊಳಗಿನ ಮಕ್ಕಳಿಗೆ ಶುಲ್ಕವಿಲ್ಲ.
ಏನು ವಿಶೇಷ?
'ಶರಾವತಿ ಅಡ್ವೆಂಚರ್ ಕ್ಯಾಂಪ್' ಸನಿಹದಲ್ಲೇ ವನ್ಯಜೀವಿ ಅಭಯಾರಣ್ಯವಿದೆ. ಅದರಲ್ಲಿ ಟ್ರೆಕ್ಕಿಂಗ್ ಮಾಡಲು ಅವಕಾಶವಿದೆ. ಈ ಭಾಗದಲ್ಲಿ ಹಲವು ಅಪರೂಪದ ಪಕ್ಷಿಗಳಿವೆ. ಹಾಗಾಗಿ ಕ್ಯಾಂಪ್ನ ಸುತ್ತ ಪಕ್ಷಿ ವೀಕ್ಷಣೆಗೆ ಪ್ರದಕ್ಷಿಣೆ ಹಾಕಬಹುದು. ನೀವು ಸಾಹಸ ಇಷ್ಟಪಡುವವರಾಗಿದ್ದರೆ ಬೈಕ್ ರೈಡಿಂಗ್, ಬೋಟಿಂಗ್ ಮೂಲಕ ಸಂತಸಪಡಬಹುದು. ರುಚಿಯಾದ ಊಟ, ತಿಂಡಿ ಸಿಗುತ್ತದೆ. ಆದರದ ಆತಿಥ್ಯ ನೀಡಲು ಸಾಕಷ್ಟು ಸಿಬ್ಬಂದಿ ಕಾಯುತ್ತಿರುತ್ತಾರೆ.
ರಿವರ್ಸ್ ಟರ್ನ್ ಲಾಡ್ಜ್
ಜಂಗಲ್ ಲಾಡ್ಜ್ ರೆಸಾರ್ಟ್ನ ಮತ್ತೊಂದು ವಿಹಾರಧಾಮವೇ ರಿವರ್ಸ್ ಟರ್ನ್ ಲಾಡ್ಜ್. ಇದು ಶಿವಮೊಗ್ಗದಿಂದ 38 ಕಿಮೀ. ದೂರದಲ್ಲಿದೆ. ಲಾಡ್ಜ್ನ ಪಕ್ಕ ಭದ್ರೆ ಹರಿಯುತ್ತಾಳೆ. ಸುತ್ತಲೂ ಸುಂದರ ಹಸಿರು ಪರಿಸರ. ಸಫಾರಿ, ಎಲಿಫೆಂಟ್ ರೈಡರ್ಸ್, ಬೋಟಿಂಗ್, ಜಲಕ್ರೀಡೆಯನ್ನೂ ಮಾಡಬಹುದು. ಸಮಯ ಸಿಕ್ಕರೆ ಇಲ್ಲಿಗೂ ಭೇಟಿ ನೀಡಬಹುದು.
ಮತ್ತೇನು ನೋಡಬಹುದು?
ಜೋಗದ ಆಸುಪಾಸಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ತಲಕಲಳ್ಳಿ ಆಣೆಕಟ್ಟಿನ ಹಿನ್ನೀರು ದೃಶ್ಯ ಬಲು ಆಕರ್ಷಕ. ಲಿಂಗನಮಕ್ಕಿ ಆಣೆಕಟ್ಟು, ಉಂಚಳ್ಳಿ ಜಲಪಾತ, ಬುರುಡೆ ಜೋಗ ಫಾಲ್ಸ್ ನೋಡಬಹುದು. ಸಿಗಂದೂರು ದೇವಸ್ಥಾನ ಸೇರಿದಂತೆ ಹಲವು ತಾಣಗಳನ್ನು ಸಂದರ್ಶಿಸಬಹುದು.
ಎಲ್ಲಿದೆ?
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬ್ರಾಹ್ಮಣನ ಇಲಕಳೆಲೆ ಗ್ರಾಮದ ಕಾರಗಲ್ ಜೋಗ ಜಲಪಾತದ ಸಮೀಪ 'ಶರಾವತಿ ಅಡ್ವೆಂಚರ್ ಕ್ಯಾಂಪ್' ಇದೆ. ಜೋಗದಿಂದ 8 ಕಿಮೀ ಅಂತರ, ತಾಳಗುಪ್ಪ ರೈಲು ನಿಲ್ದಾಣದಿಂದ 20 ಕಿಮೀ ದೂರದಲ್ಲಿದೆ. ಸಂಪರ್ಕ: ಪಂಪಾಪತಿ (9449599784/ 080- 40554055) ಅಥವಾ www.junglelodges.comಗೆ ಭೇಟಿ ನೀಡಬಹುದು.
ಮಲೆನಾಡಿನಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ, ಬಹಳಷ್ಟು ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಇದರಿಂದ ಎಷ್ಟೋ ಪ್ರವಾಸಿಗರು ಇಂಥ ಸ್ಥಳದಿಂದ ದೂರ ಉಳಿಯುತ್ತಾರೆ. ಹಾಗಾಗಿ ಸಂಬಂಧಪಟ್ಟವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲ.
- ಪ್ರತಿಮಾ, ಪ್ರವಾಸಿ
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


