ಬೈಟುಕಾಫಿ

ನಿಜ ತಿಳಿಸುವ ನಿಡಸೋಸಿ ಶ್ರೀ

ನಿಜ ತಿಳಿಸುವ ನಿಡಸೋಸಿ ಶ್ರೀ
Published On :

ತಲೆಯಲ್ಲಿ ಜಡೆ ಬೆಳೆಯುವುದು ದೈಹಿಕ ವಿಕಾರವೇ ಹೊರತು ಯಾವ ದೇವರೂ ಇದಕ್ಕೆ ಕಾರಣವಲ್ಲ. ಮುತ್ತು ಕಟ್ಟಿ ಬಳೆ ಒಡೆದು ದೇವದಾಸಿಯನ್ನಾಗಿ ಬಿಡುವುದು ಸಾಮಾಜಿಕ ವಿಕಾರವೇ ಹೊರತು ಅನಿವಾರ್ಯವಲ್ಲ. ಇಂಥ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಸಿ, ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ ನಿಡಸೋಸಿ ಹುಕ್ಕೇರಿ ತಾಲೂಕಿನ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮಿ.
ವೈಜ್ಞಾನಿಕವಾಗಿ ಕೂದಲು ಗಂಟಾಗುವುದನ್ನು  ಫೈಕಾ ಫಲಾನಿಕಾ ರೋಗವೆಂದು ವೈದ್ಯರು ಗುರುತಿಸಿದ್ದಾರೆ. ಸ್ವಚ್ಘತೆಯಿಲ್ಲದೆ ಫಂಗಸ್‌ನಿಂದ ಜಡೆಯು ಗಂಟಾಗುತ್ತದೆ. ಇದನ್ನು ಅರಿತಿರುವ ಪೂಜ್ಯರು ಜಡೆ ಬಿಟ್ಟವರಿಗೆ ತಿಳಿಹೇಳಿ ಅವರ ಒಪ್ಪಿಗೆ ಪಡೆದು ಜಡೆ ಕತ್ತರಿಸುತ್ತಾರೆ. ಸಮಾಜಕ್ಕೆ ಅನಿಷ್ಠವಾಗಿರುವ ದೇವದಾಸಿ ಪದ್ಧತಿಯನ್ನು ಹೊಡೆದೋಡಿಸಬೇಕೆಂಬುದು ಶ್ರೀಗಳ ಕನಸು. ಇವೆರಡೂ ಕಾರ್ಯಗಳನ್ನು ಚಳವಳಿಯ ಹಾಗೆ ಅವರು ಮಾಡುತ್ತ ಬಂದಿದ್ದಾರೆ.
ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ತಲೆಕೂದಲು ಜಡೆಗಟ್ಟಿ ಬಾಳು ನಿಂತ ನೀರಾಗಿದ್ದ ಹುಡುಗಿಯೊಬ್ಬಳನ್ನು ಸ್ವಚ್ಛತೆಗೆ ಒಡ್ಡಿ, ಈಗ ಆಕೆಗೆ ಮದುವೆಯಾಗಿ ಮಕ್ಕಳಾಗಿ ಸುಂದರ ಸಂಸಾರಿಯಾಗಿದ್ದಾಳೆ. ಇನ್ನೊಬ್ಬಾತ ತಿರುಪೆ ಎತ್ತುವ ಸ್ಥಿತಿಯಿಂದ ಕೃಷಿಕನಾಗಿ ಬದಲಾಗಿದ್ದಾನೆ.
ಸವದತ್ತಿ ಯಲ್ಲಮ್ಮ ದೇವಿಯ ಕ್ಷೇತ್ರದಲ್ಲಿ ಸಾವಿರಾರು ದೇವದಾಸಿಯರಿಗೆ ಬಳೆ ಹಾಕುವುದರ ಮೂಲಕ ಬಳೆ ಒಡೆಯುವ ಪದ್ಧತಿ ಬಿಡಿಸುವುದು, ದೆವ್ವ ಹಿಡಿದಿದೆ ಎಂದು ಬರುವವರನ್ನು ತಿಳಿಹೇಳಿ ಉದ್ಧರಿಸುವುದು, ಹೆಂಗಸರಿಗೆ ಕೊಳಚೆ ನೀರು ಗೊಜ್ಜುವುದು ಓಕಳಿ ಆಡುವುದನ್ನು ನಿಲ್ಲಿಸುವುದು, ಪಲ್ಲಕ್ಕಿಯಲ್ಲಿ ಮಾವಿನ ಸಸಿ ತೆಂಗಿನ ಸಸಿ ಇಟ್ಟು ಉತ್ಸವ ಮಾಡಿಸುವುದು, ಬರಡು ಗೋವುಗಳ ರಕ್ಷಣೆಗೆ ಬೃಹತ್ ಗೋಶಾಲೆ ನಿರ್ಮಿಸುವುದು, ಅಂತರ್ಜಾತಿ ವಿವಾಹ ಮಾಡಿಸುವುದು, ಸ್ವಇಚ್ಛೆಯಿಂದ ಬಂದ ಎಲ್ಲಾ ವರ್ಗದವರಿಗೂ ಲಿಂಗ ದೀಕ್ಷೆ ನೀಡುವುದು ಮುಂತಾದ ಕಲ್ಯಾಣ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.  ಅವರ ಕಾರ್ಯಗಳಿಗೆ ಬೆಳಗಾವಿಯ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ, ಮೈರಾಡ ಸಂಸ್ಥೆ ಘಟಪ್ರಭಾ,  ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಂಗಾವಲಾಗಿ ನಿಂತಿದ್ದಾರೆ.

= ರಾಚಯ್ಯ ಎಸ್.ಕಮತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.