ಬೈಟುಕಾಫಿ

ವಿಪದಿಯ ಹಾದಿ!

ವಿಪದಿಯ ಹಾದಿ!
Published On :

ವಿಶ್ವದಾದ್ಯಂತ ಪ್ರತಿಕೂಲ ವಾತಾವರಣವಿರುವ ಸ್ಥಳಗಳನ್ನು ಗಣನೆಗೆ ತೆಗೆದುಕೊಂಡು ಅಲ್ಲಿನ ಯುವ ಜನತೆಗೆ ಜಾಗೃತಿ ಮೂಡಿಸುವುದು ಮತ್ತು ಪ್ರಾಕೃತಿಕ ಏರಿಳಿತ ಅರಿತು ಪೂರಕವಾದ ವ್ಯವಸ್ಥೆ ಕಲ್ಪಿಸುವುದು ಈ ಬಾರಿಯ ವಿಶ್ವ ಪರಿಸರ ದಿನದ ಗುರಿ. ಮುಖ್ಯವಾಗಿ ಕಡಲ ತೀರದ ಪ್ರದೇಶಗಳಿಗೆ ಹೆಚ್ಚಿನ ಮಾನ್ಯತೆ ಈ ಬಾರಿ ನೀಡಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ನಲುಗಿದ ಪ್ರದೇಶಗಳ ಜನತೆಯಲ್ಲಿ ಆಶಾಭಾವನೆ ಮೂಡಿಸುವುದು ಮತ್ತು ಅನಾಹುತ ಘಟಿಸದಂತೆ ಹೇಗೆ ಎಚ್ಚರ ವಹಿಸುವುದೆಂದು ತಿಳಿಸುವುದಾಗಿದೆ. ಈ ದೃಷ್ಟಿಯಲ್ಲಿ ಯುವ ಜನತೆಯಲ್ಲಿ ಪೂರಕ ಮಾಹಿತಿ ನೀಡಿದರೆ ಅನಾಹುತ ತಪ್ಪಿಸಬಹುದು ಎಂಬ ವಿಶ್ವಾಸ ಯುಎನ್‌ಇಪಿಯದ್ದಾಗಿದೆ. ಪ್ರತಿ ದಿನವೂ ಪರಿಸರ ದಿನ. ಆದರೆ ವಿಶೇಷವಾಗಿ ಪರಿಸರದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ವಿಶ್ವ ಪರಿಸರ ದಿನವನ್ನು ಆಚರಿಸುತ್ತಲೇ ಬಂದಿದೆ. ಪ್ರತಿ ವರ್ಷವೂ ಒಂದೊಂದು ಥೀಮ್ ಇರಿಸಿಕೊಂಡು ಯಶ ಸಾಧಿಸುತ್ತಾ ಬಂದಿದೆ.
ಈ ಬಾರಿ ಯುವಜನತೆಯನ್ನು ಗುರಿಯಾಗಿರಿಸಿಕೊಂಡಿರುವ ಯುಎನ್‌ಇಪಿ ಸಾಕಷ್ಟು ಕುತೂಹಲ ಉಂಟುಮಾಡಿದೆ. ಈಗಾಗಲೇ ಸ್ಮಾಲ್ ಐಲ್ಯಾಂಡ್ ಡೆವಲಪಿಂಗ್ ಸ್ಟೇಟ್ಸ್ ಯುತ್ ನೆಟ್‌ವರ್ಕ್ (SIDS Youth Network)  ವಿಶ್ವದಾದ್ಯಂತ ಸಾಕಷ್ಟು ಸಂಚಲನ ಮೂಡಿಸಿದ್ದು ಯುವ ಜನತೆಯಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಯುನೆಸ್ಕೋ, ಯುನಿಸೆಫ್, ಯುಎನ್‌ಎಫ್‌ಟಿಎ 2013ರಿಂದ ಸಕ್ರಿಯವಾಗಿ 'ಸೈಡ್ಸ್ ಯುತ್ ನೆಟ್‌ವರ್ಕ್‌'ನಲ್ಲಿ ಕಾರ್ಯಾಚರಿಸುತ್ತಿದೆ. ಪೆಸಿಫಿಕ್‌ನಾದ್ಯಂತ "Our SIDS, Our Future'  ಎಂಬ ಸಂಘಟನೆಯು ಪ್ರಕೃತಿ ವಿಚಾರವಾಗಿ ವಿಶೇಷವಾಗಿ ಕೆಲಸ ನಿರ್ವಹಿಸುತ್ತಿದೆ. ಆರ್ಕ್ಟಿಕ್‌ನಾದ್ಯಂತ 'ಮೆನಿ ಸ್ಟ್ರಾಂಗ್ ವಾಯ್ಸ್‌ಸ್‌' ಪ್ರಕೃತಿ ಪರ ಧ್ವನಿ ಎತ್ತಿವೆ. ಕೆರೆಬಿಯನ್ ಪ್ರದೇಶಗಳಲ್ಲಿ 'ಕೆರೆಬಿಯನ್ ಯುತ್ ಎನ್ವಿಯಾರ್ಮೆಂಟ್ ನೆಟ್‌ವರ್ಕ್‌' ಬಿರುಸಿನಿಂದ ಜನತೆಯಲ್ಲಿ ಜಾಗೃತಿ ಕಾರ್ಯದಲ್ಲಿ ತಲ್ಲೀನವಾಗಿದೆ. ಹೀಗೆ ವಿಶ್ವದ ಅನೇಕ ಭಾಗಗಳಲ್ಲಿ ಅನೇಕ ರೀತಿಯ ಪರಿಸರ ಪ್ರೀತಿಯ ಸಂಘಗಳು ಬಹಳ ಆಸಕ್ತಿಯಿಂದ ಸಾಂಘಿಕವಾಗಿ ಕೆಲಸ ಮಾಡುತ್ತಿವೆ.     
ವೆಡ್(ವರ್ಲ್ಡ್ ಎನ್ವಿಯಾರ್ಮೆಂಟ್ ಡೇ)ಅನ್ನು ಸಂಭ್ರಮದಿಂದ ಆಚರಿಸದಿದ್ದರೆ ಹೇಗೆ? ಆಚರಣೆಯ ನೆಪದಲ್ಲಿ ವಿಶ್ವವನ್ನು ಸ್ವಚ್ಛವಾಗಿ, ಹಸಿರಾಗಿ, ಪ್ರಕಾಶಮಾನವಾಗಿ ಇಡಬೇಕಾದದ್ದು ಅತ್ಯಗತ್ಯ. ಥೀಮ್ ಇರಲಿ
2011ರಲ್ಲಿ 'ವಿಪದಿ'ಯಲ್ಲಿ ಅರಣ್ಯವನ್ನೇ ಮುಖ್ಯ ಥೀಮ್ ಆಗಿ ತೆಗೆದುಕೊಳ್ಳಲಾಗಿತ್ತು. ಅರಣ್ಯಕ್ಕೆ ಸಂಬಂಧಿಸಿದ ಹಲವಾರು ಆಸಕ್ತಿದಾಯಕ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಭಾರತ ಅದರ ಆತಿಥ್ಯ ವಹಿಸಿದ್ದು ದೇಶದಲ್ಲಿ ಹೆಚ್ಚಿನ ಚಟುವಟಿಕೆ ಕೈಗೊಳ್ಳುವಂತೆ ಪ್ರೇರೇಪಿಸಿತ್ತು. ಈ ಬಾರಿ ಮೇಲೆ ಹೇಳಿರುವಂತೆ 'ಯುವ ಜನತೆ ಮತ್ತು ತೀರ ಪ್ರದೇಶ' ಥೀಮ್ ಆಗಿದೆ. ಅದಕ್ಕೆ ಸಂಬಂಧಿಸಿ ನಿಮ್ಮ ಕಾರ್ಯ ಚಟುವಟಿಕೆ ಮುಂದುವರಿಯಲಿ.
ಪರಿಸರ ಗುಂಪುಗಾರಿಕೆ ನಡೆಸಿ!
ನಿಮ್ಮ ಪ್ರದೇಶದಲ್ಲಿ ಪರಿಸರಕ್ಕೆ ಸಂಬಂಧಿಸಿ ಏನಾದರೂ ಚಟುವಟಿಕೆ ಹಮ್ಮಿಕೊಂಡಿದ್ದರೆ ಸೇರಿಕೊಂಡುಬಿಡಿ. ಇಂದು ನಿಮ್ಮ ಭವಿಷ್ಯದ ಪ್ರಕೃತಿ ಸೇವೆಗೆ ಮಹೂರ್ತವಾಗಬೇಕು. ಇಂದು ಒಂದು ದಿನ ಆಚರಿಸಿ ಕೈಬಿಡುವುದರಲ್ಲಿ ಅರ್ಥವಿಲ್ಲ. ಗುಂಪುಗಳ ಮೂಲಕ ಕಾರ್ಯಚರಿಸಿದರೆ ಹೆಚ್ಚು ಮಹತ್ವಯುತ. ತ್ವರಿತಗತಿಯಲ್ಲಿ ಹಾಗೂ ಹೆಚ್ಚಿನ ಸಮೃದ್ಧಿಯಲ್ಲಿ ಕೆಲಸ ಸಾಗುತ್ತದೆ.
'ವಿಪದಿ'ಯ ಸಾಲು!
ವಿಪದಿಯ ಸಲುವಾಗಿ ಒಂದಿಷ್ಟು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿ. ದಿನಕ್ಕೊಂದು ಸಸಿ ನೆಡುತ್ತೇನೆ, ದಿನದಲ್ಲಿ ಇಷ್ಟು ಗಿಡಗಳಿಗೆ ನೀರು ಹಾಕುತ್ತೇನೆ, ದಿನದಲ್ಲಿ ಇಷ್ಟು ತ್ಯಾಜ್ಯವನ್ನು ಕಸದ ರಾಶಿಗೆ ಹಾಕುತ್ತೇನೆ ಎಂಬಿತ್ಯಾಗಿಯಾಗಿ ಒಂದಷ್ಟು ಅಂಶಗಳನ್ನು ಬರೆದಿಟ್ಟುಕೊಳ್ಳಿ. ಇಂದಿನ ದಿನದಿಂದಲೇ ಚಾಚೂ ತಪ್ಪದೆ ಪಾಲಿಸುತ್ತ ಹೋಗಿ. ಕಲಾವಿದನಾಗಿದ್ದರೆ ತಿಂಗಳಲ್ಲಿ ಇಷ್ಟು ಚಿತ್ರಗಳನ್ನು ಪರಿಸರದ ಮೇಲೆ ಚಿತ್ರಿಸುತ್ತೇನೆ ಎಂದು ಪಣ ತೊಡಿ. ನಾಟಕಕಾರನಾಗಿದ್ದರೆ ನಾಟಕದ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯತಂತ್ರ ಹೆಣೆದುಕೊಳ್ಳಿ. ತಮ್ಮ ಕ್ಷೇತ್ರದಲ್ಲಿದ್ದುಕೊಂಡೇ ಪರಿಸರಕ್ಕೇ ಏನು ನೀಡಲು ಸಾಧ್ಯ ಎಂಬದುದನ್ನು ಅರಿತು ಮುಂದುವರೆಯಿರಿ. ದಿನಕ್ಕೊಂದು ಸಸಿ ನೆಟ್ಟು ಉಪಚರಿಸಿದರೆ ದಶಕದಲ್ಲಿ ಒಂದು ಅರಣ್ಯದ ಒಡೆಯ ನೀವಾಗಿರುತ್ತೀರಿ.
ಬಳಸಿ, ಮರುಬಳಸಿ
ಕಾಗದವನ್ನು ಒಂದೇ ಬದಿ ಬರೆದು ಬಿಸುಡುವುದು ನ್ಯಾಯವಲ್ಲ. ಎರಡೂ ಬದಿ ಬಳಸಬಹುದು. ನೀರು ಚೆಲ್ಲಬೇಕಾದಲ್ಲಿ ಎರಡು ಸಲ ಯೋಚಿಸಿ. ಹತ್ತಿರದ ಸ್ಥಳಗಳಿಗೆ ನಡೆದೇ ಹೋಗಿ. ವಿದ್ಯುತ್ ಉಳಿಸುವ ಪರಿಣಾಮಕಾರಿ ವಿಧಾನಗಳನ್ನು ಮನೆಯಲ್ಲಿ, ಕಚೇರಿಯಲ್ಲಿ ಅಳವಡಿಸಿ. ತ್ಯಾಜ್ಯವಸ್ತುಗಳನ್ನು ರಿಸೈಕಲ್ ಮಾಡಲು ಸಾಧ್ಯವಾ ನೋಡಿ. ಪರಿಸರಸ್ನೇಹಿ ಉತ್ಪಾದಕರನ್ನು ಪ್ರೋತ್ಸಾಹಿಸಿ.

ಪರಿಸರದ ಅಂತರ್ಜಾಲ
ಕ್ರಿಯಾಶೀಲತೆಯಿಂದ ಪರಿಸರ ದಿನವನ್ನು ಆಚರಿಸುವ ಇಚ್ಛೆ ಇದ್ದರೆ 'ವಿಪದಿ'ಯ ವೆಬ್‌ಸೈಟ್(http://www.unep.org/wed/) ಹೊಕ್ಕರೆ ಒಂದಷ್ಟು ಸ್ಪೂರ್ತಿ ನೀಡುವ ಚಟುವಟಿಗಳ ಮಾಹಿತಿ ಸಿಗುತ್ತದೆ. ಶಾಲೆ, ಕಾಲೇಜು, ಮನೆ, ಕಚೇರಿಗಳ ಸುತ್ತ ಪರಿಸರಕ್ಕೆ ಸಂಬಂಧಿಸಿ ನಡೆಸಿದ ಚಟುವಟಿಕೆಯನ್ನು ಅಲ್ಲಿ ನಮೂದಿಸಬಹುದು. ನೀವು ಮಾಡಿದ ಕ್ರಿಯಾಶೀಲ ಕೆಲಸವನ್ನು ನಮೂದಿಸುವುದರಿಂದ ಬೇರೆಯವರಿಗೆ ಸ್ಪೂರ್ತಿ ನೀಡಿದಂತಾಗುತ್ತದೆ. ಅಲ್ಲಿ ವೆಡ್ ಚಾಲೆಂಜ್ ಅನ್ನು ಸ್ವೀಕರಿಸಬಹುದು. 'ಟ್ರೀ ಅ ಡೇ' ಎಂಬ ಬರಹದ ಮೇಲೆ ಕಣ್ಣಾಡಿಸುವುದರಿಂದ ವಿಶ್ವದಾದ್ಯಂತ ಇರುವ ಮರಗಳ ಕುರಿತಾಗಿ ಅರಿವು ಮೂಡುತ್ತದೆ. ಮರಗಳಿಂದ ಪರಿಸರಕ್ಕೆ ಆಗುವ ಉಪಕಾರ, ಪರಿಸರ ಕುರಿತಾಗಿ ಆಪ್ಯಾಯಮಾನತೆ ಹುಟ್ಟಿಸುವಂತ ಅಪೂರ್ವ ಬರಹಗಳು ಅಲ್ಲಿವೆ.


ಹಾನಿಕಾರಕಗಳನ್ನು ದೂರವಿರಿಸಿ
ಪ್ರಕೃತಿಗೆ ಯಾವುದರಿಂದ ಹಾನಿ ಇದೆ ಎಂಬುದನ್ನು ಪಟ್ಟಿ ಮಾಡುತ್ತಾ ಹೋಗಿ. ಯಾವುದನ್ನು ಬಳಸುವುದರಿಂದ ಪ್ರಕೃತಿಗೆ ಹಾನಿಯಾಗುವುದಿಲ್ಲ ಎಂಬದನ್ನು ಕಂಡುಕೊಳ್ಳಬೇಕು. ಉದಾಹರಣೆಗೆ ಹತ್ತಿ ಬಟ್ಟೆ ಬಳಸುವುದು ಸೂಕ್ತ. ಏಕೆಂದರೆ ಹತ್ತಿ ಬಟ್ಟೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂಬುದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ ಎನಿಸುತ್ತದೆ.

= ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.