ಈ ಪಾಪಿ ದುನಿಯಾ!

ಟೀನೇಜ್ ಅಂದ್ರೆ ಗೋಲ್ಡನ್ ಲೈಫ್, ಟೀನೇಜ್ ಅಂದ್ರೆ ನಮ್ಮ ಇಡಿ ಜೀವನದ ಖುಷಿಯನ್ನೆಲ್ಲ ಬೊಗಸೆಯಲ್ಲಿ ತುಂಬಿ ತುಂಬಿ ಕೊಡುತ್ತದೆ ಎಂಬ ಸುಳ್ಳೊಂದು ಮತ್ತೆ ಮತ್ತೆ ಸಿನಿಮಾ, ಟೀಚರ್, ಗೆಳೆಯರು, ಹೆತ್ತವರ ಬಾಯಲ್ಲಿ ವಿವಿಧ ವೇಷ ಧರಿಸಿ ನಮ್ಮೆದುರು ಬಂದು ಯಕ್ಷಗಾನ ಮಾಡುವಾಗ ಮನಸ್ಸು ಮಂಗಳ ಗ್ರಹದಲ್ಲಿ ಹೋಗಿ ಕುಣಿಯುವುದೊಂದು ಬಾಕಿ. ಆದರೆ ಭ್ರಾಮಕ ಜಗತ್ತಿನ ನಡುವೆಯೂ ರಿಯಾಲಿಟಿ ಚೆಕ್ ಮಾಡಿದರೆ- ನೂರೆಂಟು ಅವಮಾನಗಳು, ಕಿರಿಕಿರಿ, ಬೈಗುಳಗಳ ನಡುವೆ ನಿಂತ ನೀವು, ಸುತ್ತ ಕಟ್ಟುಪಾಡುಗಳ ಬೇಲಿ ನಿರ್ಮಿಸಿ ಪ್ಯಾಪಿಲಾನ್ನಂತೆ ತಪ್ಪಿಸಿಕೊಂಡು ಹೋಗುವ ನಿಮ್ಮ ಯತ್ನವನ್ನು ನೋಡಿ ಮಜಾ ತೆಗೆದುಕೊಳ್ಳುವ ಸಮಾಜ- ವೈಮಾನಿಕ ವೀಕ್ಷಣೆ ನಡೆಸಿದರೆ ನಮ್ಮೂರಲ್ಲಿ ನಿನಗೆ ತಿನ್ನಲು ಸಿಕ್ಕಾಪಟ್ಟೆ ಪ್ರಾಣಿಗಳುಂಟು ಎಂದು ಹೇಳಿ ಹಸಿದ ಹುಲಿಯನ್ನು ಆಸೆ ತೋರಿಸಿ ಕರೆ ತಂದು, ನಂತರ ಬೋನಿನಲ್ಲಿಟ್ಟು ಹೊರಗೆ ನೂರಾರು ದನಎಮ್ಮೆಕುರಿಗಳ ರ್ಯಾಂಪ್ ಶೋ ನಡೆಸಿದಂತೆ!
ದೇಹ- ಸಂದೇಹ
ನಿಮ್ಮ ದೇಹ ಆಕಾರ ಕಳೆದುಕೊಂಡು(ಪಡೆದುಕೊಳ್ಳಲು?) ವಿಕಾರವಾಗುತ್ತಿರಲು, ಸಿಕ್ಕವರೆಲ್ಲ ಅದನ್ನೇ ಗಮನಿಸುತ್ತಿದ್ದಾರೆಂದು ಒಳಗಿನಿಂದ ನಿಮಗೆ ಅನಿಸಿ ಕೀಳರಿಮೆ ಬೆಳೆಯುತ್ತಿರಲು, ಕಷ್ಟಪಟ್ಟು ಸಂಪಾದಿಸಿದ ರಕ್ತ ಇದ್ದಕ್ಕಿದ್ದಂತೆ ಒಂದು ದಿನ ನಿಮ್ಮ ಕೈ ಮೀರಿ ಸೋರಿ ಹೋಗುತ್ತಿರಲು, ಹೊಟ್ಟೆಯ ಒಳಗಿನ ಅಂಗವೊಂದಕ್ಕೆ ದಾರ ಕಟ್ಟಿ ಕೆಳಗಿನಿಂದ ಎಳೆಯುವಂಥ ವಿಚಿತ್ರ ನೋವೊಂದು ಬಾಧಿಸುತ್ತಿದ್ದರೂ ತೋರಿಸಿಕೊಳ್ಳದೆ ಶಾಲೆಗೆ/ ಕಾಲೇಜಿಗೆ ಹೋಗಬೇಕಾಗಿರಲು ಹಿರಿಯರಿಗೆ ಅದು ಯಾವ ಆ್ಯಂಗಲ್ನಿಂದ ಗೋಲ್ಡನ್ ಏಜ್ ಆಗಿ ಕಾಣುವುದೋ ದೇವರೇ ಬಲ್ಲ. ಇನ್ನು ಹುಡುಗರ ವಿಚಾರ, ಮೀಸೆ ಬೆಳೆದರೂ ಬೆಳೆಯದಿದ್ದರೂ ಮುಜುಗರ(ಟಿಪಿಕಲ್ ಡೈಲಾಗ್ಸ್- ಏನೋ ಇನ್ನೂ ನಿಂಗೆ ಮೀಸೆನೇ ಬಂದಿಲ್ಲ, ಏನೋ ಮೀಸೆ ಬಂದಿದೆ...ಮದುವೆ ಮಾಡಲಡ್ಡಿಯಿಲ್ಲ), ತನ್ನೊಳಗೆ ಏನಾಗುತ್ತಿದೆ ಎಂಬುದು ಗೊಂದಲದ ವಿಚಾರ, ಅದರ ಬಗ್ಗೆ ಹೇಳುವುದೇ ಬೇಡ.
ಕಾಲೇಜು ಕನಸಷ್ಟೆ
ಬ್ರಿಟಿಷರ ಆಡಳಿತದಲ್ಲಿದ್ದಂತೆ ಶಾಲೆ ಕಳೆವ ನಿಮಗೆ ಕಾಲೇಜೆಂದರೆ ಕಲರ್ಫುಲ್, ಮಾಮಾ, ಮಗಾ, ಹಕ್ಕಿ, ಕಾಳು, ಬಂಕ್, ಓತ್ಲಾ, ಮಿಸ್ ಹೋಗಿ ಮ್ಯಾಮ್ ಆಗುವ ಸೆಕ್ಸಿ ಟೀಚರ್, ಲವ್ವು, ಡ್ಯಾನ್ಸು, ಹಾಡು ಎಂದೆಲ್ಲ ನಂಬಿಸಿರುವುದು ಕುಚ್ ಕುಚ್ ಹೋತಾ ಹೈ, ಖುಷಿ, ತುಂಟಾಟದಂಥ ಅನೇಕ ಚಿತ್ರಗಳು. ಆದರೆ ಓದೆಂಬುದು ನಿಮ್ಮ ಲಿಸ್ಟ್ನಲ್ಲಿ ಇರದೇ ಇರುವಾಗ ಅದೊಂದೇ ಕೊನೆಗುಳಿಯುವುದು ಮಾತ್ರ ದುರಂತ. ಹೌದು, ಯೂನಿಫಾರ್ಮ್ ಇಲ್ಲವಾದರೂ ಸಿನಿಮಾದಲ್ಲಿ ತೋರಿಸಿದಂತೆ ಕಲರ್ಫುಲ್ ಏನಲ್ಲ ಇದು. ಇಲ್ಲಿ ಪ್ರತಿ ಪೀರಿಯಡ್ನಲ್ಲೂ ಭವಿಷ್ಯದ ಹೆಸರೇಳಿ ಹೆದರಿಸುವ ಭಯೋತ್ಪಾದಕ ಲೆಕ್ಚರರ್ಗಳಿರುತ್ತಾರೆ. ಮನೆಯಲ್ಲೂ ಅಷ್ಟೆ, ಮಾತೆತ್ತಿದರೆ ನಾಳೆ ನೀನು ಎಂಜಿನಿಯರ್ ಆಗ್ತೀಯಲ್ಲಾ... ಎಂದೇ ಶುರು ಮಾಡುತ್ತಾರೆ. ಅಲ್ಲದೆ ಅದೇಕೋ ಗೊತ್ತಿಲ್ಲ, ನಿಮ್ಮ ಬ್ಯಾಚ್ನಲ್ಲಿನ ಹುಡುಗ/ಹುಡುಗಿಯರು ಮಾತ್ರ ಒಬ್ಬರೂ ಚೆನ್ನಾಗಿರುವುದಿಲ್ಲ! ಇಷ್ಟರ ನಡುವೆಯೂ ಸಿನಿಮಾ ಗುಂಗಲ್ಲೇ ಗೆಳೆಯರೆಲ್ಲ ಮಜಾ ಮಾಡುತ್ತೇವೆಂದು ಎಲ್ಲೋ ಪ್ರವಾಸ ಹೋದಿರಿ, ಊರಿನ ಕೆರೆಗಿಳಿದಿರಿ ಎಂದುಕೊಳ್ಳಿ- ಕಾಲೇಜಿನ ಬ್ಲಾಕ್ ಲಿಸ್ಟಲ್ಲಿ ಹೆಸರು ಅಚ್ಚಾಗಿ ಪ್ರತಿ ಟೆಸ್ಟ್ ಮ್ಯಾಚ್ನಲ್ಲಿಯೂ, ಅಸೈನ್ಮೆಂಟ್ನಲ್ಲಿಯೂ ಮಾರ್ಕ್ಸ್ ಕಳೆವ ಬ್ಲಾಕ್ಮೇಲ್ ಕಟ್ಟಿಟ್ಟ ಬುತ್ತಿ.
ಚಟ ಚಾವುಟಿ
ಎಲ್ಲರ ಗೆಳೆಯರ ಗುಂಪಿನಲ್ಲೊಬ್ಬ ಇರುತ್ತಾನೆ ಬಿಯರನ್ನು ಆಲ್ಕೋಹಾಲ್ ಅಲ್ಲವೇ ಅಲ್ಲ ಎನ್ನುವವನು. ಗೆಳೆಯನೆಂದ ಮೇಲೆ ಒಮ್ಮೆಯಾದರೂ ನಂಬಬೇಡವೇ?! ಅದೂ ಒಂದು ಸಲ ಟೇಸ್ಟ್ ನೋಡಿದರೆ ತಪ್ಪೇನು? ನಂಬಿ ಅವನೊಂದಿಗೆ ಹೋಗಿ ಬಿಯರ್ ಕುಡಿಯುತ್ತೀರಿ. ಅದೇನು ಅಂಥ ರುಚಿಕರವಾಗಿರುವುದಿಲ್ಲ. ಆದರೆ ನಿಮ್ಮ ಈ ಉತ್ತರ ಈ ವಿಷಯದಲ್ಲಿ ಸೀನಿಯರ್ ಆಗಿರುವ ನಿಮ್ಮ ಗೆಳೆಯನಿಗೆ ಅವಮಾನವೆನಿಸಿಬಿಡುವುದು. ಆತ ನಿಮಗೆ ಆರೆಂಜ್ ಫ್ಲೇವರ್ನ ಬ್ರೀಜರ್ ಕುಡಿಸುತ್ತಾನೆ. ಯಮ್ಮೀ, ಇನ್ನು ಲೆಮನ್, ಬ್ಲಾಕ್ಬೆರ್ರಿಯದ್ದೂ ಒಮ್ಮೆಯಾದರೂ ರುಚಿ ನೋಡಬೇಡವೇ? ಅಂತೂ ಒಂದು ದಿನ ಮನೆಗೆ ಯಾರೋ ರಿಕ್ಷಾದಲ್ಲಿ ಹಾಕಿಕೊಂಡು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಸಿಗರೇಟಿನ ಹೊಗೆಯೂ ಅದು ಹೇಗೋ ಒಂದು ದಿನ ನಿಮ್ಮ ಮನೆ ತನಕ ಹೋಗಿಬಿಡುತ್ತದೆ. ಮುಂದಿನದೆಲ್ಲ ಹಿರಿಯರ ವಿಚಾರ. ಹೇಳಲು ನಾ ಶಕ್ತಳಲ್ಲ!
ಟ್ರಿಪ್ ಟ್ರ್ಯಾಪ್
ಒಂದು ದಿನ ನೀವು ದೊಡ್ಡವರಾದದ್ದನ್ನು ಹೆತ್ತವರು ಒಪ್ಪಿಕೊಂಡು ನಿಮ್ಮನ್ನು ಗೆಳೆಯರೊಂದಿಗೆ ಪ್ರವಾಸ ಹೋಗಲು ಕಳಿಸುತ್ತಾರೆ. ಅವರು ಒಪ್ಪಿಕೊಳ್ಳದಿದ್ದರೂ ನೀವು ಎಜುಕೇಶನ್ ಟೂರ್ ಎಂದು ಸುಳ್ಳು ಹೇಳುವುದು ಕಷ್ಟವೇನಲ್ಲ. ಅಂತೂ ಪಾಕೆಟ್ ಮನಿಯನ್ನೆಲ್ಲ ಒಗ್ಗೂಡಿಸಿ ಹೋಗುತ್ತೀರಿ. ಅದೇನು ಮಜಾ ಅಂತೀರಾ?! ಹೋಟೆಲ್ನಲ್ಲಿ ತಿಂಡಿ ತಿಂದರೆ ಉಳಿಯೋಕೆ ದುಡ್ಡು ಸಾಲಲ್ಲ, ಕೊನೆಗೊಂದು ಡಾರ್ಮೆಟ್ರಿ ಬುಕ್ ಮಾಡಿಕೊಂಡು 10-12 ಜನ ನುಸುಳಿಕೊಂಡು ಹೇಗೋ ಬಿದ್ದುಕೊಳ್ಳುತ್ತೀರಿ. ಕ್ಲೀನ್ ಎಂಬ ಪದ ರೂಂನಲ್ಲಿರಲ್ಲ- ಅದೇ ಮಜಾ ಮಗಾ ಎನ್ನುತ್ತಾನೆ ಗೆಳೆಯನೊಬ್ಬ. ನೀವೂ ನಂಬುತ್ತೀರಿ. ಇನ್ನು ಸ್ಥಳಗಳನ್ನು ನೋಡುವುದಕ್ಕಿಂತ ದುಡ್ಡು ಮಿಗಿಸುವುದರಲ್ಲೇ ತಿರುಗಿ ಬಂದಿರುತ್ತೀರಿ! ಈ ಎಲ್ಲ ಸಮಯದಲ್ಲಿ ಅಮ್ಮ, ಅಮ್ಮನ ಅಡುಗೆ ಬಿಟ್ಟೂ ಬಿಡದೆ ಕಾಡುತ್ತದೆ.
ಎಡಬಿಡಂಗಿ
ಏನೇ ಕೆಲಸ, ಸಾಹಸ ಮಾಡಹೊರಡಿ ನಿಂಗಾಗಲ್ಲ ಎನ್ನುವವರೇ ಎಲ್ಲ. ಅಷ್ಟು ಸಾಲದು ಎಂದು ಕೆಲಸ ಮಾಡಲು ಹೋದರೂ ರಿಜೆಕ್ಟೆಡ್, ಪ್ರಪೋಸ್ ಮಾಡಲು ಹೋದರೂ ರಿಜೆಕ್ಟೆಡ್, ಸಾಲ ಕೇಳಲು ಹೋದರೂ ರಿಜೆಕ್ಟೆಡ್... ಎಲ್ಲದಕ್ಕೂ ಬೇಡ, ಹಾಗೆ ಮಾಡಬೇಡ, ಅಲ್ಲಿ ಹೋಗಬೇಡ, ರಾತ್ರಿ ಲೇಟ್ ಬೇಡ - ಬೇಡವೆನ್ನುವ ಪದದ ಮೇಲೆ ಬೇಸರ ಬಂದು ರೂಲ್ಸ್ ಇರೋದೇ ಬ್ರೇಕ್ ಮಾಡೋಕೆ ಎಂಬ ಥಿಯರಿ ಹೇಳಿಕೊಳ್ಳದೆ ವಿಧಿಯಿಲ್ಲವಾಗುತ್ತದೆ. ಅತ್ತ ದೊಡ್ಡವರ ಗುಂಪಿಗೂ ಸೇರಿಸಿಕೊಳ್ಳಲ್ಲ, ಚಿಕ್ಕವರ ಗುಂಪಿಗೂ ಇಲ್ಲ. ನಕ್ಕರೂ ತಪ್ಪು, ಸಿಟ್ಟು ಮಾಡಿದರೂ ತಪ್ಪು, ಹಟ ಮಾಡಿದರೆ ನೀನೀಗ ದೊಡ್ಡವಳಾಗಿದ್ದಿ, ಸರಿಯಾಗಿ ವರ್ತಿಸಲು ಕಲಿ ಎನ್ನುತ್ತಾರೆ. ಫಿಲ್ಮ್ಗೆ ಹೋಗ್ತೀನಿ ಎಂದರೆ ನೀನಿನ್ನೂ ಚಿಕ್ಕವಳು ಎನ್ನುತ್ತಾರೆ. ಒಟ್ಟಿನಲ್ಲಿ ಕನ್ಫ್ಯೂಷನ್ ಈಸ್ ಹ್ಯಾಪಿನೆಸ್ ಅಂತ ಯೋಗರಾಜ ಭಟ್ಟರೆಂದದ್ದನ್ನು ನಂಬದೆ ವಿಧಿಯಿಲ್ಲ. ಇಷ್ಟೆಲ್ಲ ಆದ ಮೇಲೂ ಟೀನೇಜ್ ಗೋಲ್ಡನ್ ಲೈಫಾ? ನೀವೇ ಯೋಚಿಸಿ!
ಮೊದಲ ಕ್ರಷ್
ನಿಮ್ಮ ಕನಸುಗಳಿಗೊಬ್ಬ/ಳು ಆಗ ತಾನೇ ದಾಂಗುಡಿ ಇಡತೊಡಗಿರುತ್ತಾರೆ. ನೀವು ಮನಸೊಳಗೇ ಮಂಡಿಗೆ ತಿನ್ನುತ್ತಾ 'ಕಣ್ಣೂ ಕಣ್ಣೂ ಕಲೆತಾಗ...' ಉಯ್ಯಾಲೆಯಾಡುತ್ತಿರುತ್ತೀರಿ. ಆದರೆ ಈ ನಿಮ್ಮ ಬದುಕಿನ ಅತ್ಯಂತ ದೊಡ್ಡ ಸೀಕ್ರೆಟ್ ಅನ್ನು ನಿಮ್ಮ ನೋಟ್ ಪುಸ್ತಕದ ಕೊನೆಯ ಪುಟ ಒಂದು ದಿನ ಗೆಳೆಯರೆದುರು ಹರಾಜು ಹಾಕಿಬಿಡುತ್ತದೆ. ಅಷ್ಟಕ್ಕೇ ಮುಜುಗರದಲ್ಲಿ ಮುದ್ದೆಯಾಗಿರುತ್ತೀರಿ. ಆದರೂ ಗೆಳೆಯರು ಅವಳು/ನು ಪಕ್ಕದಲ್ಲಿ ಹಾದು ಹೋಗುತ್ತಿದ್ದಂತೆ ನಿಮ್ಮನ್ನು ಅವರೆಡೆಗೆ ತಳ್ಳತೊಡಗುತ್ತಾರೆ. ಕೆಲವೇ ದಿನಗಳಲ್ಲಿ ಪವಿತ್ರ ರಹಸ್ಯವೊಂದು ಜಗಜ್ಜಾಹೀರಾಗಿ ಟೀಚರ್ ಕ್ಲಾಸಿಗೆ ಬಂದಾಗಲೆಲ್ಲ ನಿಮ್ಮಿಬ್ಬರೆಡೆ ಮೊದಲ ನೋಟ ಹಾಯಿಸಿ ಭಯದ ಛಳಕೊಂದನ್ನು ನಿಮ್ಮೊಳಗೆ ಹರಿಸುತ್ತಾರೆ. ಅದು ಆ ನಿಮ್ಮೊಲವಿಗೆ ತಿಳಿಯಲು ಹೆಚ್ಚೇನು ಸಮಯ ಬೇಕಿಲ್ಲ. ಅವರೂ ಸರಿಯೋ ತಪ್ಪೋ ಎಂಬ ಕನ್ಫ್ಯೂಷನ್ನಲ್ಲಿ ನಿಮ್ಮ ಬಳಿ ಒಮ್ಮೆ ಚೆನ್ನಾಗಿ ಮಾತಾಡಿದರೆ ಮಾರನೆ ದಿನ ಮುಖ ತಿರುಗಿಸಿ ಹೋಗುತ್ತಾರೆ. ಹೆಚ್ಚಿನ ಬಾರಿ ಈ ಕ್ರಶ್ಗಳು ಕೇವಲ ನಿಮ್ಮ 'ಫಸ್ಟ್ ಕ್ರಶ್'ಗಳಾಗಿ ಉಳಿದುಬಿಡುತ್ತಾವಷ್ಟೆ.
-ರೇಶ್ಮಾ ರಾವ್ ಸೊನ್ಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


