ಬೈಟುಕಾಫಿ

ಆಪರೇಶನ್ ದಂತ

ಆಪರೇಶನ್ ದಂತ
Published On :

ಅರೆ, ಇದ್ಯಾವ ಯುದ್ಧ ಎನ್ನುತ್ತೀರಾ? ಹಾಸನ ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಇರುವ ಆಲೂರು ತಾಲೂಕು ಮಾಗಡಿಹಳ್ಳಿಯ ಕಾಡಿನಲ್ಲಿ ನಡೆದ ಕಾಳಗ ಇದು. ಸತತ 32 ದಿನ ನಡೆದ ಈ ಕದನ ಕೋಲಾಹಲದಲ್ಲಿ 22 ಕಾಡಾನೆಗಳನ್ನು ಹಿಡಿದು, ಪಳಗಿಸಲು ನಾಡಿಗೆ ಸಾಗಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದು ಎಲ್ಲರ ಮೆಚ್ಚಿಗೆಗೆ ಪಾತ್ರರಾದವರೇ ಅಭಿಮನ್ಯು, ಬಲರಾಮ, ಅರ್ಜುನ, ಹರ್ಷ, ಶ್ರೀರಾಮ, ಗಜೇಂದ್ರ, ಭೀಮ, ವರಲಕ್ಷ್ಮಿಯರು.
ಕಗ್ಗಾಡಿನ ನಿಶ್ಯಬ್ದ, ಸೂರ್ಯ ಚಂದ್ರರ ಬೆಳಕು- ನೆರಳಿನಾಟ, ದಂತಗಳ ಪರಸ್ಪರ ಘರ್ಷಣೆ, ಕಾಡು ಮೇಡು ಒಂದಾಗುವಂತೆ ಆನೆಗಳ ಘೀಳಿಡುವಿಕೆ, ಮಾವುತರು ಕಾವಾಡಿಗಳ ಸ್ಫೂರ್ತಿಯ ಅರಚಾಟಗಳಿಂದಾಗಿ ಅಷ್ಟೂ ದಿನ ಮಾಗಡಿಹಳ್ಳಿ ಕಾಡು ಕುರುಕ್ಷೇತ್ರವೇ ಆಗಿತ್ತು. ಈ ಮುಖಾಮುಖಿಯಲ್ಲಿ ನಾಡಿನಾನೆಗಳು ಕಾಡಿನಾನೆಗಳನ್ನು ಮಣಿಸಿ ವಿಜಯಿಯಾದವು.
ಸುತ್ತಲಿನ ಹಳ್ಳಿಗಳಿಗೆ ನುಗ್ಗಿ ಕಾಟ ಕೊಡುತ್ತಿದ್ದ 22 ಆನೆಗಳನ್ನು ಈ ಸಂದರ್ಭ ಬಂಧಿಸಲಾಯ್ತು. ಮದಗಜಗಳ ಘರ್ಷಣೆಯ ನಡುವೆ ಕಾವಾಡಿಗಳು ಜೀವ ಒತ್ತೆ ಇಟ್ಟು ಹೋರಾಡಿದರು. ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ತಮ್ಮ ಗಾಂಭೀರ್ಯದಿಂದ ಮೆರಗು ನೀಡಿ, ಲಕ್ಷಾಂತರ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ದಸರಾ ಆನೆಗಳು ಇಲ್ಲಿ ಮಾತ್ರ ಅಪ್ಪಟ ಯೋಧರಾಗಿಬಿಟ್ಟಿದ್ದವು.
ಅದರಲ್ಲೂ ಅಭಿಮನ್ಯುವಿನ ಧೀರತನ ಎದೆ ನಡುಗಿಸುವಂತಿತ್ತು. ಇತರೆ ಆನೆಗಳು, ಮರದ ಗಾತ್ರದ ಇರುವ ನರಹಂತಕ ಕಾಡಾನೆಗಳ ಬಳಿ ಹೋಗಲು ಹಿಂಜರಿಯುತ್ತಿದ್ದರೆ, ಅಭಿಮನ್ಯು ಮಾತ್ರ ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗುತ್ತಿದ್ದ. 'ಅಭಿ ನುಗ್ಗಲಾ... ಹೇಳ್ತೀನಿ' ಎಂದು ಮಾವುತರು ಹೇಳುವುದೇ ತಡ, ಅಭಿಮನ್ಯು, ಕಾಡೇ ನಡುಗುವಂತೆ ಘೀಳಿಡುತ್ತಾ ನುಗ್ಗುವ ಶೈಲಿಗೆ ಅಲ್ಲಿದ್ದ ಅರಣ್ಯಾಧಿಕಾರಿಗಳು ಏಕೆ, 24 ಗಂಟೆ ಆನೆಗಳೊಡನೆಯೇ ಬದುಕು ಸವೆಸುವ ಕಾವಾಡಿಗರೇ ಬೆಚ್ಚಿ ಬೀಳುತ್ತಿದ್ದರು. ನಂತರ ಬಲರಾಮ, ಅರ್ಜುನ, ಗಜೇಂದ್ರರು ಆತನಿಗೆ ಸಾಥ್ ಕೊಡುತ್ತಿದ್ದರು. ಹರ್ಷ, ಶ್ರೀರಾಮ, ವರಲಕ್ಷ್ಮಿಯರು ಕಾಡಾನೆ ಸುತ್ತಲೂ ನಿಂತು ಅಲುಗಾಡದಂತೆ ಮಾಡುತ್ತಿದ್ದವು.
ವರಲಕ್ಷ್ಮಿಯೂ ಧೈರ್ಯವಂತೆ. ನುಗ್ಗಲು ಯತ್ನಿಸುತ್ತಾಳೆ. ಆದರೆ ಆಕೆಗೆ ಬೃಹತ್ ಗಾತ್ರದ ಕಾಡಾನೆಗಳನ್ನು ಎದುರಿಸುವ ತಂತ್ರ ಇನ್ನೂ ಗೊತ್ತಿಲ್ಲ. ಹಾಗಾಗಿ ಆಕೆಯನ್ನು ಮುಂದೆ ಬಿಡುವುದಿಲ್ಲ. ಆದರೆ ಆಕೆ ಫೈಟ್ ಮಾಡುತ್ತಿರುವ ಅರ್ಜುನ, ಅಭಿಮನ್ಯು ಮತ್ತಿತರರರಿಗೆ ಸ್ಪೂರ್ತಿ ತುಂಬುತ್ತಾಳೆ. ಕಾರ್ಯಾಚರಣೆ ಯಶಸ್ವಿಯಾಗಬೇಕಾದರೇ ವರಲಕ್ಷ್ಮಿ ಬೇಕೇ ಬೇಕು.
ವಿಶೇಷವೆಂದರೆ ಅಭಿಮನ್ಯು, 1987ರಲ್ಲಿ ಇದೇ ಮಾಗಡಿಹಳ್ಳಿ ಸಮೀಪ ಇರುವ ದೊಡ್ಡಬೆಟ್ಟ ಕಾಡಿನಲ್ಲಿ ಸೆರೆ ಸಿಕ್ಕವನು. ಸದ್ಯ ಆತ ಬೆಳಗಾಂ ಜಿಲ್ಲೆ ದಾಂಡೇಲಿಯಲ್ಲಿ ಇಬ್ಬರನ್ನು ಕೊಂದಿರುವ ಕಾಡಾನೆಗಳನ್ನ ಹಿಡಿಯಲು ಶ್ರೀರಾಮ, ಬಲರಾಮ, ಅರ್ಜುನ ಸಮೇತ ಹೋಗುತ್ತಿದ್ದಾನೆ. <
ನಮ್ಮ ಅಭಿಮನ್ಯು, ಜೀನಿಯಸ್ ಕಣ್ರೀ. ಆತ ಮಾವುತರ ಭಾಷೆ, ಬಾಯಿ ಮತ್ತು ಕಾಲಸನ್ನೆಯನ್ನು ಕ್ಷಣಾರ್ಧದಲ್ಲಿ ಅರ್ಥೈಸಿಕೊಳ್ತಾನೆ. ಒಂದು ಸಲ ಸನ್ನೆ ಮಾಡಿದ್ರೆ ಸಾಕು, ಅಟ್ಯಾಕ್ ಮಾಡುತ್ತಾನೆ. ಆತನ ದಾಳಿಗೆ ಮಾನವರನ್ನು ಕೊಲ್ಲುವುದನ್ನೇ ರೂಢಿ ಮಾಡಿಕೊಂಡಿರುವ ದೊಡ್ಡ ಗಾತ್ರದ ಕಾಡಾನೆಗಳು ನರಂ ಆಗಿ ಹೋಗುತ್ತವೆ.   ಸೆರೆ ಸಿಕ್ಕ ಕಾಡಾನೆಗಳನ್ನು ಟ್ರಕ್ ಏರಿಸಲು ಅಭಿಮನ್ಯು ಬಿಟ್ಟರೆ ಇನ್ಯಾರಿಂದಲೂ ಸಾಧ್ಯವಿಲ್ಲ. ಇಂಥ ಸಾಹಸಿಗೆ ನನ್ನ ಪ್ರೀತಿಯ ಸೆಲ್ಯೂಟ್. ಹಾಗೇ ಇತರರಿಗೂ.
    - ಗಣೇಶ ಭಟ್, ಡಿಸಿಎಫ್
ಕಾರ್ಯಾಚರಣೆ
22 ಸೆರೆಸಿಕ್ಕ ಕಾಡಾನೆಗಳು
32 ಹಿಡಿಯಲು ತೆಗೆದುಕೊಂಡ ದಿನಗಳು.
100 ಅರಣ್ಯ ಸಿಬ್ಬಂದಿಗಳು
10 ಮಾವುತರು.
13 ಗಂಡಾನೆ, 5 ಹೆಣ್ಣಾನೆ, 4 ಮರಿಯಾನೆ
10 ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಾಡಾನೆಗಳು
10 ಕಾವಾಡಿಗರು.

-ದಯಾಶಂಕರ ಮೈಲಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.