ಕಿರುಕ್ಷೇತ್ರ

ಶ್ರೀನಿವಾಸ ಕಲ್ಯಾಣವೆಂಬ ನಾಟಕ
ಈಟಿವಿ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಶ್ರೀನಿವಾಸ ಕಲ್ಯಾಣ ಎಂಬ ಮತ್ತೊಂದು ಪೌರಾಣಿಕ ನಾಟಕ ಶುರುವಾಗಿದೆ. ಇದನ್ನು ಧಾರಾವಾಹಿ ಎಂಬುದಕ್ಕಿಂತ ನಾಟಕ ಎಂದು ಕರೆದರೇ ಹೆಚ್ಚು ಸೂಕ್ತ. ವಾರಕ್ಕೆರಡು ದಿನ ಮಾತ್ರ ಈ ಧಾರಾವಾಹಿ ಪ್ರಸಾರವಾಗುತ್ತಿರುವುದು ವೀಕ್ಷಕರ ಪುಣ್ಯ. ಇನ್ನುಳಿದ ನಾಲ್ಕು ದಿನ ಈ ಧಾರಾವಾಹಿಯಿಂದ ಜನ ಬಚಾವಾಗಿರುವುದು ಗೋವಿಂದನ ದಯೆ. ಒಂದು ಅತ್ಯುತ್ತಮ ಪೌರಾಣಿಕ ಕಥೆಯನ್ನು ಎಷ್ಟರ ಮಟ್ಟಿಗೆ ಹದಗೆಡಿಸಬಹುದೆಂಬುದಕ್ಕೆ ಈ ಧಾರಾವಾಹಿ ಅತ್ಯುತ್ತಮ ಉದಾಹರಣೆ. ಪಾತ್ರಕ್ಕೆ ಹೊಂದದ ಪಾತ್ರಧಾರಿಗಳ ಆಯ್ಕೆ, ಹಾಕಿರುವ ಸೆಟ್ಗಳು ಎಲ್ಲವೂ ಹಳ್ಳಿಯಲ್ಲಿ ನಾಟಕವೊಂದನ್ನು ನೋಡಿದ ಅನುಭವ ತರಿಸುತ್ತದೆ. ಮೊದಲನೆಯದಾಗಿ ಶ್ರೀನಿವಾಸನ ಪಾತ್ರಧಾರಿಯೇ ಆ ಪಾತ್ರಕ್ಕೆ ಸ್ವಲ್ಪವೂ ಸರಿ ಹೊಂದುವುದಿಲ್ಲ. ನಾಟಕದ ಸೆಟ್ಗಳು, ಶ್ರೀನಿವಾಸನ ಪಾತ್ರಧಾರಿಯ ಅಭಿನಯ ಮತ್ತು ಗಡಸು ಧ್ವನಿ, ಯಾವಾಗಲೂ ತಲೆ ಮೇಲೆ ಏನೋ ಬಿದ್ದಂತಿರುವ ಆತನ ಪತ್ನಿಯ ಮತ್ತು ಹೊಸ ಕಲಾವಿದರ ಕಷ್ಟಪಟ್ಟು ಅಭಿನಯಿಸುವಿಕೆ, ಪ್ರೇಕ್ಷಕರನ್ನೂ ಕಷ್ಟಪಟ್ಟು ನೋಡುವಂತೆ ಮಾಡುತ್ತವೆ. ಅಗಲವಾಗಿ ವಿಶಾಲವಾಗಿರಬೇಕಾದ ವೈಕುಂಠವನ್ನಂತೂ ಇಲ್ಲಿ ಉದ್ದಕ್ಕೆ ರೈಲ್ವೆ ಬೋಗಿಯಂತೆ ಚಿತ್ರಿಸಲಾಗಿದೆ. ವೈಕುಂಠದ ವಿಸ್ತೀರ್ಣ 30-40 ಇದ್ದರೆ ಹೆಚ್ಚು. ಈ ಧಾರಾವಾಹಿಯಲ್ಲಿ ನಾರದರ ಪಾತ್ರದ ಬಗ್ಗೆ ಅನುಕಂಪ ಮೂಡುತ್ತದೆ. ಸಂಚಿಕೆಯೊಂದರಲ್ಲಿ ಪಾಪ ಬರಿಗಾಲಲ್ಲಿ ನಾರದರು ಪಾದುಕೆ ಇಲ್ಲದೆ ಸಮುದ್ರ ತೀರದಲ್ಲಿ ಸುತ್ತುತ್ತ ತಮ್ಮ ಕಾಲಿಗೆ ರಕ್ಷಣೆ ಪಡೆಯುತ್ತಿದುದು ಕಂಡು ಅನುಕಂಪ ಮೂಡಿತು. ದಯವಿಟ್ಟು ನಾರದರಿಗೊಂದು ಜೊತೆ ಪಾದರಕ್ಷೆ ಕೊಟ್ಟು ಅವರ ಕಾಲನ್ನು ತುರ್ತಾಗಿ ರಕ್ಷಿಸಬೇಕಾದ ಅವಶ್ಯಕತೆ ಇದೆ. ಚಿಕ್ಕ ವಯಸ್ಸಿನ ಕಲಾವಿದರಿಗೆ 70-80 ವರ್ಷಗಳ ವೃದ್ಧ ಋಷಿಗಳ ಪಾತ್ರ ಹಾಕಿ ಅಭಿನಯಿಸಿರುವುದು ಅಸಹಜವೆನಿಸುತ್ತಿದೆ. ಒಟ್ಟಿನಲ್ಲಿ ಅತ್ಯುತ್ತಮ ಕಲಾವಿದರು, ಅತ್ಯುತ್ತಮ ಅಭಿನಯ, ಪಾತ್ರಕ್ಕೆ ಹೊಂದುವಂತಹ ಸೂಕ್ತ ಕಲಾವಿದರು, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಸೆಟ್ಗಳಿದ್ದರೆ ಮಾತ್ರ ಪೌರಾಣಿಕ ಧಾರಾವಾಹಿಗಳು ಜನಮನ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ ಟಿವಿಯಲ್ಲೂ ಇಂಥ ನಾಟಕಗಳು ಹುಟ್ಟಿಕೊಳ್ಳುತ್ತವೆ. ನಾಟಕ ನೋಡಲು ಇಚ್ಚಿಸುವವರು ಈ ಧಾರಾವಾಹಿ ನೋಡಲು ಅಡ್ಡಿಯಿಲ್ಲ.
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
ಶಕಾರಾತ್ಮಕ ಬದಲಾವಣೆ ಅಗತ್ಯ!
ರಾಮಾಯಣ ಮಹಾಭಾರತವು ನಮ್ಮ ಹಿಂದಿನ ಸಂಸ್ಕೃತಿಯ ಪ್ರತಿಬಿಂಬ. ಅದಕ್ಕೆ ಅದರದೇ ಆದ ಘನತೆ ಪದ್ಧತಿ ಇದೆ. ಆದರೆ ಈಗ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯಲ್ಲಿ ಕೆಲವು ಹಿರಿಯ ಪಾತ್ರಧಾರಿಗಳು ಉದಾಹರಣೆಗೆ ಧೃತರಾಷ್ಟ್ರ, ದೇವೇಂದ್ರನಂಥವರು ಶ ಮತ್ತು ಸ ಕಾರಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದಾರೆ. ಯಜ್ಞಯಾಗಗಳಲ್ಲಿ ನಡೆಯುವ ಕ್ರಿಯೆಗಳೂ ಸರಿಯಿಲ್ಲ. ಯಜ್ಞಕುಂಡದ ಮುಂದೆ ಸತಿಪತಿಯರು(ಪತಿಯ ಬಲಕ್ಕೆ ಸತಿ) ಅದಲುಬದಲಾಗಿ ಕುಳಿತಿರುವುದು, ಯಜ್ಞಕಾರ್ಯಗಳ ನಡುವೆಯೇ ಎದ್ದು ಹೋಗುವುದು ಇವೆಲ್ಲ ಸರಿ ಅಲ್ಲ. ಈ ಮೊದಲು ಪ್ರಸಾರವಾಗುತ್ತಿದ್ದ ಇದೇ ತಂಡದ ಸೀತೆ ಧಾರಾವಾಹಿಯಲ್ಲೂ ಇದೇ ಥರದ ಎಡವಟ್ಟುಗಳು ಸಂಭವಿಸಿದ್ದವು. ಸಾಮಾಜಿಕ ಹಾಗೂ ನವೀನ ಧಾರಾವಾಹಿಗಳಲ್ಲಿ ಹೇಗಿದ್ದರೂ ಸರಿ. ಆದರೆ ಪೌರಾಣಿಕ ಮತ್ತು ಐತಿಹಾಸಿಕ ಧಾರಾವಾಹಿಗಳಲ್ಲಿ ಇದು ತರವಲ್ಲ.
-ಎಸ್ ಎ ಭಟ್ , ಕೆಕ್ಕಾರ -581338
ಛೂಮಂತ್ರ'ಕಾಳಿಪಟ', ಭೂತಕಾಲದಲ್ಲಿ ಬದುಕು
ಈ ಟಿವಿ ಯಲ್ಲಿ ಪ್ರಸಾರವಾಗುವ 'ಗಾಳಿಪಟ'ದಲ್ಲಿ ಎಡೆಬಿಡದೆ ಕಾಡಿದ ದೆವ್ವ ಇದೀಗ ಬದುಕು ಧಾರಾವಾಹಿಗೋ ಆಟಕಾಯಿಸಿಕೊಂಡು ತನ್ನ ಆಟಾಟೋಪ ಆರಂಭಿಸುತ್ತಿರುವಂತಿದೆ. ಖಳನಾಯಕಿ ರಾಜೇಶ್ವರಿಗೆ (ಜೀವಂತವಿದ್ದರೂ ಉಳಿದವರು ಕಂಡಂತೆ ಸತ್ತಿರುವ) ಲಾವಣ್ಯಳ ಭೂತ ಕಾಟ ಕೊಡುತ್ತಿದೆ!
ಕಂದಾಚಾರ ವಿರೋಧಿ ಕಾಯ್ದೆಯಿದ್ದರೂ ಈ ದೆವ್ವ-ಗಿವ್ವ ತೋರಿಸಿ ಇಂದಿನ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಈ ನಿರ್ದೇಶಕರುಗಳಿಗೆ ಮೂಗುದಾರ ಹಾಕುವವರಿಲ್ಲವೇ? 'ತಾತ, ದೆವ್ವ ಅಂದ್ರೆ ಏನು?' ಎಂದು ಮುಗ್ಧವಾಗಿ ಕೇಳುವ ನನ್ನ ಮೊಮ್ಮಗಳಿಗೆ ಏನು ಉತ್ತರಿಸಲಿ ?
-ಕೆ. ಶ್ರೀನಿವಾಸ ರಾವ್ , ಹರಪನಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


