ಬೈಟುಕಾಫಿ

ವಿಧಾನಸೌಧದಲ್ಲಿ ವಿಶೇಷ ಸುದ್ದಿಗಳ ಬೇಟೆ

ವಿಧಾನಸೌಧದಲ್ಲಿ ವಿಶೇಷ ಸುದ್ದಿಗಳ ಬೇಟೆ
Published On :

ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರನಾಗಿ 1956 ನೇ ಡಿಸೆಂಬರ್ ತಿಂಗಳು ಬೆಂಗಳೂರಿಗೆ ಬಂದಾಗ ಅನೇಕ ಕಾಂಗ್ರೆಸ್ ಮುಖಂಡರ ಪರಿಚಯವಾಯಿತು. ಅವರಲ್ಲಿ ಕೆಲವರನ್ನು ನಾನು ಮೊದಲೇ ನೋಡಿದ್ದೆ. ಮೈಸೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪನವರಂತೂ ನನಗೆ ಮೊದಲಿನಿಂದಲೂ ಗೊತ್ತಿತ್ತು.
ಹೊಸ ಕರ್ನಾಟಕ ರಾಜ್ಯ ಸ್ಥಾಪನೆಯಾಗುವ ಸಮಯಕ್ಕೆ ಸರಿಯಾಗಿ ನೂತನ ವಿಧಾನಸೌಧವೂ ಸಿದ್ಧವಾಗಿತ್ತು. ಅದುವರೆಗೆ ಸರ್ಕಾರದ ಎಲ್ಲಾ ಕಚೇರಿಗಳು, ಮಂತ್ರಿಗಳ ಕಚೇರಿಗಳು ಸಹ ಈಗ ರಾಜ್ಯ ಹೈಕೋರ್ಟ್ ಇರುವ ಅಠಾರಾ ಕಚೇರಿಯಲ್ಲಿ ಇದ್ದವು. ವಿಧಾನಸೌಧವನ್ನು ಕಟ್ಟಿ ಅದಕ್ಕಾಗಿ ಕೀರ್ತಿ, ಅಪಕೀರ್ತಿಗಳೆರಡನ್ನೂ ಪಡೆದ ಕೆ.ಹನುಮಂತಯ್ಯನವರ ಬಗ್ಗೆ ರಾಜ್ಯಾದ್ಯಂತ ಮೆಚ್ಚುಗೆ ಮತ್ತು ಅವಹೇಳನಗಳೆರಡೂ ಜನರಲ್ಲಿದ್ದವು. ವಿಧಾನಸೌಧವನ್ನು ಕಟ್ಟಿದ ಕೆ.ಹನುಮಂತಯ್ಯನವರು ಒಮ್ಮೆಯೂ ಆ ಕಟ್ಟಡದ ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕೂಡಲಿಲ್ಲ. ಅವರ ಸ್ಥಾನದಲ್ಲಿ ಎಸ್.ನಿಜಲಿಂಗಪ್ಪನವರು ಕುಳಿತುಕೊಂಡರು. ಅವರು ಮತ್ತು ಲೋಕೋಪಯೋಗಿ ಖಾತೆ ಮಂತ್ರಿ ಎಚ್.ಕೆ.ವೀರಣ್ಣಗೌಡರು, ಕೆಂಗಲ್ ಹನುಮಂತಯ್ಯನವರು ಕಟ್ಟಿದ ವಿಧಾನಸೌಧದಲ್ಲಿ ಕುಳಿತೇ ಅವರ ಆಡಳಿತವನ್ನು ಟೀಕಿಸುತ್ತಿದ್ದರು ಮತ್ತು ಅವರನ್ನು ಬಹಳ ಅವಹೇಳನ ಮಾಡುತ್ತಿದ್ದರು. ಎಷ್ಟೋ ವರ್ಷಗಳವರೆಗೆ ಹನುಮಂತಯ್ಯನವರ ಪ್ರತಿಮೆ ವಿಧಾನಸೌಧದ ಮುಂದೆ ಸ್ಥಾಪನೆಯಾಗುವುದಕ್ಕೆ ಅವಕಾಶ ಕೊಡಲಿಲ್ಲ. ಆದರೂ ಈಗ ಸ್ಥಾಪನೆಯಾಗಿರುವ ಪ್ರತಿಮೆ ಹನುಮಂತಯ್ಯನವರಂತಿಲ ಎಂದು ಅನೇಕರು ಟೀಕಿಸುತ್ತಿದ್ದರು. ಇದೊಂದು ವಿರೋಧಾಭಾಸ. ಹಿರಿಯ ಐಸಿಎಸ್ ಅಧಿಕಾರಿ ಪಿ.ವಿ.ರಾವ್ ಎಂಬುವವರು ಕರ್ನಾಟಕ ಸರ್ಕಾರದ ಮೊದಲನೇ ಮುಖ್ಯ ಕಾರ್ಯದರ್ಶಿಯಾದರು. ಮುಂದೆ ಇವರು ಬಿ.ಡಿ.ಜತ್ತಿಯವರು ಉಪರಾಷ್ಟ್ರಪತಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದರು. ಬಾಲಚಂದ್ರನ್ ಅವರ ತರುವಾಯ ರೆಬೆಲೊ ಎಂಬುವವರು ಮುಖ್ಯ ಕಾರ್ಯದರ್ಶಿಗಳಾದರು. ಇವರ ಪರಿಚಯವೂ ನನಗೆ ಚೆನ್ನಾಗಿತ್ತು. ಇವರು ಧಾರವಾಡದ ಜಿಲ್ಲಾಧಿಕಾರಿಯಾಗಿದ್ದಾಗ ನಮ್ಮಿಬ್ಬರ ಪರಿಚಯವಾಗಿತ್ತು. ಇದರಿಂದ ಇವರನ್ನು ನಿರಾತಂಕವಾಗಿ ಮನೆಯಲ್ಲಿ, ಕಚೇರಿಯಲ್ಲಿ ಕಂಡು ಸುದ್ದಿಗಳನ್ನು ಪಡೆಯುವ ಸೌಲಭ್ಯ ನನಗಿತ್ತು. ಆದ್ದರಿಂದ ಎಲ್ಲಾ ಸುದ್ದಿಗಾರರು ನನ್ನ ಸ್ನೇಹಿತರಾದರು.
ಹಿಂದೂ ಪತ್ರಿಕೆಯ ರಾಮಸ್ವಾಮಿ, ಅನಂತರ ಬಂದ ಸಿ.ಎಂ.ರಾಮಚಂದ್ರ, ಇಂಡಿಯನ್ ಎಕ್ಸ್‌ಪ್ರೆಸ್‌ನ ಎಸ್.ನರಸಿಂಹನ್, ಡೆಕ್ಕನ್ ಹೆರಾಲ್ಡ್‌ನ ಎಂ.ಸಿ.ವಿ.ಮೂರ್ತಿ, ಅನಂತರ ಬಂದ ಎಸ್.ಜಿ.ಮೈಸೂರುಮಠ್, ನಾಗರಿಕ ಪತ್ರಿಕೆಯ ಶೇಷರಾಘವಚಾರ್, ಪ್ರಜಾವಾಣಿಯ ಎಸ್.ವಿ.ಜಯಶೀಲರಾವ್, ಸಿ.ವಿ.ರಾಜಗೋಪಾಲ್, ಕನ್ನಡಪ್ರಭದ ಸತ್ಯನಾರಾಯಣ ಹಾಗೂ ಹಾಗೂ ಪಿ.ಟಿ.ಐ ಸುದ್ದಿಗಾರ ಸುಬ್ಬರತ್ನಂ, ಯು.ಎನ್.ಐ. ಪತ್ರಿಕೆಯ ನಿವಾಸ್, ಟೈಮ್ಸ್ ಆಫ್ ಇಂಡಿಯಾದ ನಂಜುಂಡರಾವ್, ಅನಂತರ ಬಂದ ಕುಸುಮಾಕರ್ ಮೊದಲಾದವರು ನನ್ನ ಆತ್ಮೀಯ ಪತ್ರಿಕಾ ಮಿತ್ರರಲ್ಲಿ ಕೆಲವರು. ಅನೇಕ ಪ್ರಚಲಿತ ವಿಷಯಗಳ ಬಗ್ಗೆ ಹಾಗೂ ದಿನದ ಕಾರ್ಯಕ್ರಮಗಳ ಬಗ್ಗೆ ದೂರವಾಣಿಯಲ್ಲಿ ಮತ್ತು ಆಗಾಗ್ಗೆ ಭೇಟಿಯಾಗಿ ಚರ್ಚಿಸುತ್ತಿದ್ದೆವು. ಸುದ್ದಿ ಸಂಗ್ರಹ ವಿಷಯದಲ್ಲಿ ಪೈಪೋಟಿ ಇದ್ದರೂ ಪರಸ್ಪರರಲ್ಲಿ ಯಾವುದೇ ಕಹಿ ಭಾವನೆ ಅಥವಾ ದ್ವೇಷಾಸೂಯೆಗಳಿರಲಿಲ್ಲ. ಪ್ರತಿ ದಿನ ಮಧ್ಯಾಹ್ನ ವಿಧಾನಸೌಧದ ಮೊದಲನೇ ಮಹಡಿಯಲ್ಲಿದ್ದ ಪ್ರೆಸ್ ರೂಮಿನಲ್ಲಿ ಎಲ್ಲರೂ ಸೇರಿ ಸ್ವಲ್ಪ ಹೊತ್ತು ಹರಟೆ ಹೊಡೆದು ಅನಂತರ ಮೇಲ್ಮಹಡಿಗಳಲ್ಲಿದ್ದ ಮಂತ್ರಿಗಳ ಮತ್ತು ಅಧಿಕಾರಿಗಳ ಕೊಠಡಿಗಳಿಗೆ ನುಗ್ಗುವುದು ನಮ್ಮ ದಿನಚರಿ. ಆಗಾಗ್ಗೆ ಮಂತ್ರಿಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದರು. ಇನ್ನು ಕೆಲವು ವೇಳೆ ನಾವೇ ಮಂತ್ರಿಗಳನ್ನು ಕಂಡು ಸುದ್ದಿಗಳ ಬಗ್ಗೆ ಕೇಳುತ್ತಿದ್ದೆವು. ಮಂತ್ರಿಗಳು ಸಿಗದಿದ್ದರೆ ಕಾರ್ಯದರ್ಶಿಗಳನ್ನಾದರೂ ನೋಡುತ್ತಿದ್ದೆವು. ಅಂತೂ ವಿಧಾನಸೌಧದ ಮೂರೂ ಮಹಡಿಗಳನ್ನು ಪ್ರತಿದಿನ ಒಮ್ಮೆಯಾದರೂ ಸುತ್ತು ಹಾಕುವುದು ನಮ್ಮ ಉದ್ಯೋಗ. ಆದರೆ ಅದರಿಂದ ನಿರೀಕ್ಷಿಸಿದಷ್ಟು ಫಲ ಸಿಗುತ್ತಿರಲಿಲ್ಲ. ಒಮ್ಮೊಮ್ಮೆ ಕೇವಲ ಪ್ರೆಸ್ ನೋಟ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಆಫೀಸಿಗೆ ಹಿಂತಿರುಗುತ್ತಿದ್ದೆವು.
ಇದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲವೆಂದು ತಿಳಿದು ನಾನು ಮತ್ತೊಂದು ಉಪಾಯ ಮಾಡಿದೆ. ಅದೆಂದರೆ, ನನಗೆ ಆಗಿನ ಸರ್ಕಾರದಲ್ಲಿದ್ದ ಮಂತ್ರಿಗಳ, ಶಾಸಕರ, ಮತ್ತು ಅಧಿಕಾರಿಗಳಲ್ಲಿ ಬಹುಜನರ ಪರಿಚಯವಿತ್ತು. ಆದ್ದರಿಂದ ನಾನೊಬ್ಬನೇ ಅವರನ್ನು ಬೇರೆ ವೇಳೆಗಳಲ್ಲಿ ಕಂಡು ವಿಶೇಷ ಸುದ್ದಿಗಳನ್ನು ಪಡೆಯಬಾರದೇಕೆ ಎಂಬ ಆಲೋಚನೆ ಬಂದಿತು. ಆದರೆ ಒಬ್ಬನೇ ಸುದ್ದಿ ಸಂಗ್ರಹಕ್ಕೆ ಹೋಗುವುದು ಸರಿಯಲ್ಲ ಎಂದು ಭಾವಿಸಿ, ನಮ್ಮ ಪತ್ರಿಕೆಗೆ ಪೈಪೋಟಿಯಲ್ಲದ ಕೆಲವು ಇಂಗ್ಲೀಷ್ ಪತ್ರಿಕೆಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡೆ. ಮೊದಲು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಎಸ್.ನರಸಿಂಹನ್ ಮತ್ತು ನಾನು ಸ್ನೇಹಿತರಾದೆವು. ಇಬ್ಬರೂ ಬೆಳಿಗ್ಗೆ ಹತ್ತು ಗಂಟೆಗೆ ಯಾರಾದರೊಬ್ಬರ ಮನೆಗೆ ಅಥವಾ ವಿಧಾನಸೌಧದಲ್ಲಿರುವ ಅವರ ಕಚೇರಿಗೆ ಹೋಗಿ ಸಂದರ್ಶನ ಪಡೆದು ಅನೇಕ ವಿಷಯಗಳ ಬಗ್ಗೆ ಪ್ರಶ್ನೆ ಹಾಕಿ ಸ್ವಾರಸ್ಯಕರ ಹಾಗೂ ಇಡೀ ರಾಜ್ಯದ ಜನತೆಯನ್ನು ಆಕರ್ಷಿಸುವ ವಿಶೇಷ ಸುದ್ದಿಗಳನ್ನು ಸಂಗ್ರಹಿಸುತ್ತಿದ್ದೆವು. ಇವು ಕೇವಲ ಸಂಯುಕ್ತ ಕರ್ನಾಟಕ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು. ಎಸ್.ನರಸಿಂಹನ್‌ರವರು ಕಾಯಿಲೆ ಬಿದ್ದರು. ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಮುಂದೆ ಅವರು ಚಿಕಿತ್ಸೆಗಾಗಿ ಮದ್ರಾಸಿಗೆ ತೆರಳಿ ಅಲ್ಲಿಯೇ ನಿಧನರಾದರು. ಆಗ ನಾನು ವಿಶೇಷ ಸುದ್ದಿಗಳ ಬೇಟೆಗಾಗಿ ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿದ್ದ ಸಿ.ಎಂ.ರಾಮಚಂದ್ರ ಎಂಬುವವರನ್ನು ಆರಿಸಿಕೊಂಡೆ. ಅವರು ಯುವಕರು, ನನಗಿಂತ ಚಿಕ್ಕವರು. ಆದರೆ ನನ್ನಷ್ಟೇ ಉತ್ಸಾಹಶಾಲಿಗಳು. ಇಬ್ಬರೂ ಮಾಮೂಲಿನಂತೆ ಮಂತ್ರಿಗಳನ್ನು ಅಥವಾ ಅಧಿಕಾರಿಗಳನ್ನು ಅವರವರ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಭೇಟಿ ಮಾಡಿ ವಿಶೇಷ ಸುದ್ದಿಗಳನ್ನು ಪಡೆಯುತ್ತಿದ್ದೆವು. ನಮ್ಮಿಬ್ಬರ ಜಂಟಿ ಕಾರ್ಯಾಚರಣೆ ಎರಡು-ಮೂರು ವರ್ಷಗಳವರೆಗೆ ನಡೆಯಿತು. ಎಷ್ಟೋ ಜನ ನಮ್ಮ ಜೋಡಿಯನ್ನು ರಾಮ್ ಔರ್ ಶ್ಯಾಮ್ ಎಂದು ತಮಾಷೆ ಮಾಡುತ್ತಿದ್ದರು. ಅನಂತರ ನಮ್ಮ ಆಫೀಸಿನ ಅವ್ಯವಸ್ಥೆಗಳಿಂದ ಅದರಲ್ಲಿಯೂ ಅನಂತನ ಅವಾಂತರಗಳಿಂದ ನಾನು ರೋಸಿಹೋಗಿ ವಿಶೇಷ ಸುದ್ದಿಗಳ ಬೇಟೆಯನ್ನೇ ಕೈಬಿಟ್ಟೆ.
ಮನೆಯಲ್ಲಿಯೇ ಕಚೇರಿ
1956ನೇ ನವೆಂಬರ್ 1ನೇ ತಾರೀಖು ಕರ್ನಾಟಕ ರಾಜ್ಯ ಸ್ಥಾಪನೆಯಾದ ನಂತರವೂ ನಾನು ಪತ್ರಿಕಾ ವರದಿಗಾರನಾಗಿ ಮಾತ್ರ ಕೆಲಸ ಮಾಡುತ್ತಿದ್ದೆ. ಆದಷ್ಟು ಬೇಗನೇ ಬೆಂಗಳೂರಿನಲ್ಲಿಯೇ ಪತ್ರಿಕೆಯ ಮುದ್ರಣವನ್ನು ಪ್ರಾರಂಭಿಸಬೇಕೆಂದು ದಿವಾಕರರು ಆಪೇಕ್ಷಿಸುತ್ತಿದ್ದರು. ಆದರೆ ಅದು ಮೊಹರೆಯವರಿಗೆ ಇಷ್ಟವಿರಲಿಲ್ಲ. ದಿವಾಕರರ ಒತ್ತಾಯಕ್ಕೆ ಮುದ್ರಣಾಲಯಕ್ಕೆ ಯೋಗ್ಯವಾದ ಕಟ್ಟಡವನ್ನು ಹುಡುಕುತ್ತಿದ್ದೆ. ಮನೆಯಲ್ಲಿಯೇ ಕಚೇರಿಯನ್ನು ಮಾಡಿಕೊಂಡು ಅಲ್ಲಿಂದಲೇ ಸುದ್ದಿಗಳನ್ನು ಕಳುಹಿಸಿ ಎಂದು ಮೊಹರೆಯವರು ಹೇಳಿದ್ದರು. ಅದರಂತೆ ನೆಹರು ಸರ್ಕಲ್‌ನಲ್ಲಿ ಬಾಡಿಗೆ ನಿಯಂತ್ರಣಾಧಿಕಾರಿಗಳಿಂದ ಒಂದು ಮನೆ ಮಂಜೂರು ಮಾಡಿಸಿಕೊಂಡೆ, ಆದರೆ ಆ ಮನೆ ತನಗೆ ಬೇಕೆಂದೂ, ಕಚೇರಿಗಾಗಿ ನಾನು ಬೇರೆ ಮನೆ ನೋಡಬೇಕೆಂದೂ  ಮೊಹರೆಯವರ ಮಗ ನರಸಿಂಹ ನಾಯಕ್ ಹೇಳಿದ. ಇಷ್ಟೇ ಅಲ್ಲ, ಮರುದಿನ ಮಲ್ಲೇಶ್ವರದ ತನ್ನ ಮನೆಯಿಂದ ಎಲ್ಲ ಸಾಮಾನುಗಳನ್ನು ತಂದು ಅಲ್ಲಿ ತುಂಬಿದ. ಅನಂತರ ನಾನು ನೆಹರು ವೃತ್ತದಲ್ಲಿ ಪೆಟ್ರೋಲ್ ಬಂಕ್‌ನ ಪಕ್ಕದಲ್ಲಿರುವ ಇನ್ನೊಂದು ಮನೆಯನ್ನು ಬಾಡಿಗೆಗೆ ಹಿಡಿದೆ. ಮನೆ ಬಾಡಿಗೆ ತಿಂಗಳಿಗೆ 70 ರೂ. ಮುಂದೆ ಕೆಲವು ತಿಂಗಳಲ್ಲಿಯೇ ನನ್ನ ಪತ್ನಿ, ಮಕ್ಕಳು ದಾವಣಗೆರೆಯಿಂದ ಬಂದರು. ಈ ಮನೆ ಎಲ್ಲ ದೃಷ್ಟಿಯಿಂದಲೂ ನನಗೆ ಅನುಕೂಲವಾಗಿತ್ತು. ಆದರೆ ಪಕ್ಕದಲ್ಲಿ ಮದ್ರಾಸಿಗೆ ಹೋಗುವ ರೈಲು ಮಾರ್ಗ, ಕೆಳಗಡೆ ಬಿಟಿಎಸ್ ಬಸ್ಸುಗಳ ಓಡಾಟ, ಇದರ ಮೇಲೆ ಪೆಟ್ರೋಲ್ ಬಂಕಿಗೆ ಬರುವ ಲಾರಿ ಮತ್ತು ಕಾರುಗಳ ಆರ್ಭಟ, ಹೀಗೆ ಹಲವು ಬಗೆಯ ಶಬ್ದಮಾಲಿನ್ಯದಿಂದ ತುಂಬಿರುವ ಪ್ರದೇಶದಲ್ಲಿ ನನ್ನ ವಾಸ. ಆದರೂ ಮನೆ ಎಲ್ಲಾ ಅನುಕೂಲತೆಗಳಿಂದ ಕೂಡಿದ್ದರಿಂದ ಮತ್ತು ಇದಕ್ಕಿಂತ ಹೆಚ್ಚಾಗಿ ಮನೆಯ ಮಾಲೀಕರು ಬಹಳ ಒಳ್ಳೆಯವರಾಗಿದ್ದರಿಂದ ಈ ಮನೆಯನ್ನೇ ಆರಿಸಿಕೊಂಡೆ. ಮುಧೋಳದ ಹುಡುಗ ಪ್ರಹ್ಲಾದ ಕುಳಲಿ ಎಂಬುವರನ್ನು ಸುದ್ದಿಗಳನ್ನು ಕಳುಹಿಸಲು ನೇಮಿಸಿಕೊಳ್ಳಲಾಯಿತು.
ಕನ್ನಡ ದಿನಪತ್ರಿಕೆಗಳಲ್ಲಿ ಟೆಲಿಪ್ರಿಂಟರ್ ಎಂಬ ಆಧುನಿಕ ಸೌಕರ್ಯ ಪಡೆದ ಮೊದಲನೇ ಕನ್ನಡ ಪತ್ರಿಕೆ ಸಂಯುಕ್ತ ಕರ್ನಾಟಕ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಸಹ ಎ.ಪಿ.ಐ ಎಂಬ ಸಂಸ್ಥೆ ಕಛೇರಿಯಿಂದ ಸಂಯುಕ್ತ ಕರ್ನಾಟಕ ಕಚೇರಿಗೆ ಒಂದು ಪ್ರತ್ಯೇಕ ಮಾರ್ಗ ಹಾಕಿಸಿಕೊಂಡು ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು. ಅನಂತರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಗಳನ್ನು ಹಾಕಿಸಿಕೊಂಡು ಸುದ್ದಿಗಳನ್ನು ರವಾನಿಸುತ್ತಿದ್ದೆವು. ಇದು ಅಂದಿನ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಪ್ರಥಮ ಸಾಹಸ. ಕನ್ನಡ ದಿನಪತ್ರಿಕಾ ಪ್ರಪಂಚದಲ್ಲಿ ಇಂತಹ ಪ್ರಯೋಗ ಮೊದಲು ಮಾಡಿದ್ದು ಸಂಯುಕ್ತ ಕರ್ನಾಟಕ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ಬೆಂಗಳೂರು - ಹುಬ್ಬಳ್ಳಿ ಟೆಲಿಪ್ರಿಂಟರ್ ಮಾರ್ಗವನ್ನು ಬಿ.ಡಿ.ಜತ್ತಿಯವರು ಉದ್ಘಾಟಿಸಿದರು. ಅನೇಕ ಜನ ಮಂತ್ರಿಗಳು, ಅಧಿಕಾರಿಗಳು, ಶಾಸಕರು ಮತ್ತು ಪತ್ರಿಕಾ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಯುಕ್ತ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನ. ಈ ಸೌಲಭ್ಯದ ಪರಿಣಾಮವಾಗಿ ಬೆಂಗಳೂರಿನ ಸುದ್ದಿಗಳು, ಅದರಲ್ಲಿಯೂ ರಾಜಕೀಯ ವಿದ್ಯಮಾನಗಳು ಮುಖಂಡರ ಹೇಳಿಕೆಗಳು, ತಕ್ಷಣವೇ ಪ್ರಕಟವಾಗಲು ಸಾಧ್ಯವಾಯಿತು. ಇದರ ಪರಿಣಾಮವಾಗಿ ಪತ್ರಿಕೆಯ ಪ್ರಸಾರ ಹೆಚ್ಚಿತು. ಇಡೀ ಉತ್ತರ ಕರ್ನಾಟಕದಲ್ಲಿ ಅದರ ಪ್ರತಿಷ್ಠೆಯೂ ಬೆಳೆಯಿತು.
(ಮುಂದುವರಿಯುವುದು)


-ಕೆ. ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.