ಸ್ತ್ರೀಯರು ಈ ತರಕಾರಿಗಳ ಬಳಕೆಯನ್ನು ಮರೆಯಬೇಡಿ

ವಿಷಕಾರಿ ಪದಾರ್ಥಗಳನ್ನು ಹೊಂದಿರುವ ಕೆಲವು ಆಹಾರಗಳು ನೇರವಾಗಿ ಸ್ತನ ಕ್ಯಾನ್ಸರ್ ಮೇಲೆ ಪರಿಣಾಮ ಬೀರಬಲ್ಲವು. ಹೀಗಾಗಿ ಆಕಸ್ಮಾತ್ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದ್ದಲ್ಲಿ ಆ ಬಳಿಕವೂ ಆಹಾರದ ಬಗ್ಗೆ ಗಮನ ಕೊಡುವುದು ಅಗತ್ಯ. ಈಸ್ಟ್ರೊಜೆನ್ ಅನ್ನು ಸಹಜವಾಗಿ ನಿಯಂತ್ರಿಸುವ ಉಪಾಯಗಳ ಬಗ್ಗೆ ಲಕ್ಷ್ಯ ಹರಿಸದಿದ್ದರೆ ಇನ್ನೊಂದು ಸ್ತನವೂ ಸೇರಿದಂತೆ ಶರೀರದ ಯಾವುದೇ ಭಾಗಕ್ಕೆ ಕ್ಯಾನ್ಸರ್ ಕೋಶ ತ್ವರಿತವಾಗಿ ವ್ಯಾಪಿಸಬಹುದು. ಒಂದು ಸಂಗತಿ ಯಾವತ್ತೂ ನೆನಪಿರಲಿ, ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಆರೋಗ್ಯಕಾರಿ ಡಯಟ್ ಆ ಚಿಕಿತ್ಸೆಗೆ ಪೂರಕವಾಗಿ ಇರುತ್ತದೆ. ಬೇಗ ಗುಣಮುಖರಾಗಲು ಔಷಧೋಪಚಾರದ ಜತೆ ಆಹಾರವೂ ಪಾತ್ರ ವಹಿಸುತ್ತದೆ. ಈ ಮಾತನ್ನು ಆಗಾಗ ಹೇಳುವ ಕಾರಣ ಎಂದರೆ, 'ನನಗೆ ಇಂಥ ಆರೋಗ್ಯ ತೊಂದರೆ ಇದೆ. ವೈದ್ಯರ ಬಳಿ ಹೋಗಿಲ್ಲ. ನೀವೇ ಪರಿಹಾರ ಸೂಚಿಸಿ' ಎಂದು ಕೋರಿ ಹಲವರು ಪತ್ರ ಬರೆಯುತ್ತಿರುತ್ತಾರೆ. ಆಹಾರದಿಂದ ಕೆಲವು ಆರೋಗ್ಯ ತೊಂದರೆಗಳು ಬರದಂತೆ ತಡೆಯಬಹುದು ಎನ್ನುವುದು ನಿಜ. ಆದರೆ ಕಾಯಿಲೆ ಶುರುವಾದ ನಂತರ 'ಆಹಾರದಿಂದಲೇ ಗುಣ ಕಾಣುವೆ' ಎನ್ನುವ ಭಾವನೆ ಸಲ್ಲದು.
ಈಸ್ಟ್ರೊಜೆನ್‌ನ ಬದ್ಧವೈರಿ ಎಂದರೆ ಕ್ಯಾಬೇಜ್, ಬ್ರಕೋಲಿ, ಕಾಲಿಫ್ಲವರ್ ಹಾಗೂ ನೆಲದೊಳಗೆ ಬೆಳೆಯುವ ತರಕಾರಿ, ಗಡ್ಡೆಗೆಣಸುಗಳು. ಇವು ಶರೀರದಲ್ಲಿನ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ಹೊರಹಾಕಬಲ್ಲದು. ಆದ್ದರಿಂದ ಮಹಿಳೆಯರು ನಿಯಮಿತವಾಗಿ ಕ್ಯಾಬೇಜ್ ಬಳಸುವುದು ಅಗತ್ಯ. 'ಇವುಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಉತ್ತೇಜನ ನೀಡುವ ಈಸ್ಟ್ರೊಜೆನ್‌ನಂಥ ಹಾರ್ಮೋನುಗಳನ್ನು ನಿಷ್ಕ್ರಿಯಗೊಳಿಸುವ ಮತ್ತು ಅಗತ್ಯಕ್ಕಿಂತ ಹೆಚ್ಚಾಗಿರುವ ಈಸ್ಟ್ರೊಜೆನ್ ಅನ್ನು ಶರೀರದಿಂದ ಹೊರದಬ್ಬುವ ನೈಸರ್ಗಿಕ ಗುಣವಿದೆ' ಎಂದು ಅಮೆರಿಕದ ಹಾರ್ಮೋನ್ ಸಂಶೋಧನಾ ಸಂಸ್ಥೆಯೇ ಪ್ರಮಾಣಪತ್ರ ನೀಡಿದೆ. ಈ ತರಕಾರಿಗಳು ಸ್ತನ ಕ್ಯಾನ್ಸರ್ ಅಷ್ಟನ್ನೇ ತಡೆಯುವುದಿಲ್ಲ, ಹಾರ್ಮೋನುಗಳ ಏರಿಳಿತದಿಂದ ಉಂಟಾಗುವ ಗರ್ಭಕೋಶ, ಗರ್ಭಾಶಯ ಕ್ಯಾನ್ಸರ್‌ಗಳಿಂದಲೂ ಮಹಿಳೆಯರನ್ನು ಪಾರು ಮಾಡಬಲ್ಲವು. ಇಂಥ ತರಕಾರಿಗಳ ಪೈಕಿ ಮುಖ್ಯವಾಗಿ ಬಳಸಲೇಬೇಕಾದದ್ದು ಎಂದರೆ ಕ್ಯಾಬೇಜ್. ಈಸ್ಟ್ರೊಜೆನ್‌ನ ಪ್ರಭಾವವನ್ನು ಶೇ 50ರಷ್ಟು ಕಡಿಮೆ ಮಾಡುವ ಶಕ್ತಿ ಇದೊಂದರಲ್ಲೇ ಇದೆ. ನಿತ್ಯ ಕೇವಲ 500 ಮಿಲಿಗ್ರಾಂನಷ್ಟು ಅಂದರೆ ಸುಮಾರು 14 ಔನ್ಸ್‌ನಷ್ಟು ಹಸಿ ಕ್ಯಾಬೇಜ್ ತಿಂದರೆ ಸಾಕು ಎನ್ನುತ್ತವೆ ಅಧ್ಯಯನಗಳು.
ಈ ತರಕಾರಿಗಳು ಶೀಘ್ರವಾಗಿ ಪರಿಣಾಮ ಬೀರಬೇಕು ಅಂತಾದರೆ ಅವುಗಳನ್ನು ಹಸಿಯಾಗಿ ಅಥವಾ ತುಸುವೇ ಬೇಯಿಸಿ ಸೇವಿಸುವುದು ಉತ್ತಮ. ಅತಿಯಾಗಿ ಬೇಯಿಸಿದರೆ ನೈಸರ್ಗಿಕ ಸತ್ವಗಳು ನಾಶವಾಗಿ ಈಸ್ಟ್ರೊಜೆನ್ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತವೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


