ಬೈಟುಕಾಫಿ

ಪುರಾಣಿಯರು

ಪುರಾಣಿಯರು
Published On :

ಐದು ಗಂಡಂದಿರ ಪತ್ನಿಯವಳು. ಪತಿಯರು ಕಾಡಲ್ಲಿ ಅಲೆಯುವಾಗ ಅವರ ಹೆಗಲಿಗೆ ಹೆಗಲು ಕೊಟ್ಟವಳು. ಪತಿಯ ಶಪಥಪೂರೈಕೆಯಲ್ಲಿ ಪ್ರಮುಖ ಪಾಲು ಈಕೆಯದು. ಇನ್ನೊಬ್ಬಳೂ ಹದಿನಾಲ್ಕು ವರ್ಷ ಪತಿಯನ್ನು ಅನುಸರಿಸಿದವಳು. ಆತ ಅನುಮಾನದಿಂದ ನೋಡಿದಾಗ ಬೆಂಕಿಯಲ್ಲಿ ಮಿಂದು ಎದ್ದು ಬಂದವಳು. ಮತ್ತೊಬ್ಬಾಕೆ ಜೀವನದಲ್ಲಿ ಒಂದೇ ಬಾರಿ ಪತಿಯ ಸಂಗಸುಖ ಉಂಡವಳು, ಬಳಿಕ ಆತನ ತಿರಸ್ಕಾರಕ್ಕೊಳಗಾದವಳು. ಹದಿನಾರು ವರ್ಷ ಕಳೆದು ಆತ ಬಳಿಗೆ ಬಂದಾಗ, ಧೀರಮಗನೊಬ್ಬನನ್ನು ಆತನ ಕೈಗಿತ್ತು ಸುಮ್ಮನಾದವಳು.
ದ್ರೌಪದಿ, ಸೀತಾ, ಶಕುಂತಳಾ...ಬೆಳಗ್ಗೆದ್ದು ಅವರ ಹೆಸರು ನೆನೆಯಬೇಕು. ನೊಸಲಿಗೆ  ಕುಂಕುಮವಿಟ್ಟುಕೊಳ್ಳುವಾಗ, ಪತಿಯ ಪಾದಕ್ಕೆರಗುವಾಗ ಅವರದೇ ನೆನಪು. ಹಾಗಂತ ಅಜ್ಜಿ ಹೇಳುತ್ತಾ ಹೋಗುತ್ತಾಳೆ. ಅದನ್ನು ಕೇಳುತ್ತಿರುವ ಅಮ್ಮನ ಕಣ್ಣಿನಲ್ಲಿ ತುಸು ಅನುಮಾನವಿದ್ದಂತಿದೆ. ಆದರೆ ಮೊಮ್ಮಗಳ ಕಣ್ಣಿನಲ್ಲಾಗಲೇ ಅದೊಂದು ದೊಡ್ಡ ಜೋಕ್. ಅವಳೆಸೆಯುವ ಪ್ರಶ್ನೆ ಬಾಣಗಳ ಮುಂದೆ ಅಜ್ಜಿ ಚಿಂದಿ.
ಹೌದೂ, ನಮ್ಮ ಪುರಾಣೇತಿಹಾಸಗಳಲ್ಲಿ ಅಷ್ಟೊಂದು ಮಹಿಳೆಯರಿದ್ದಾರಲ್ಲ. ಎಲ್ಲ ಇಂಥವರೇನಾ? ಆಧುನಿಕ ಜನರೇಶನ್ನಿನ ಕಣ್ಣಿನಲ್ಲಿ ಗೇಲಿಗೊಳಗಾಗುವಂಥವರು? 'ಹಿಡಿ, ಇವರು ನಿನಗೆ ಆದರ್ಶ' ಅಂತ ತೋರಿಸೋ ಒಂದಷ್ಟು ಹೆಸರುಗಳು ಅಲ್ಲಿಲ್ಲವಾ? ದಿಟ್ಟೆಯರು, ವಿವೇಕಿಗಳು, ಹೋರಾಟಗಾರರು? ಮಹಿಳೆಯರ ದಿನದಂದು ಪ್ರಶ್ನೆ ಕಾಡುತ್ತದೆ.
ಇದ್ದಾರೆ. ಸ್ತ್ರೀತ್ವದ ಕೋಮಲತೆಯನ್ನು ಉಳಿಸಿಕೊಂಡೂ ದಿಟ್ಟರಾಗಿದ್ದವರು, ಮೊಲೆ ಹಾಲನ್ನುಣಿಸುತ್ತಲೇ ಧೀರತ್ವದ ಪಾಠ ಹೇಳಿಕೊಟ್ಟವರು, ಬ್ರಹ್ಮಜ್ಞಾನವೇನು ಪುರುಷರ ಗಂಟೇ ಎಂದು ಗಟ್ಟಿ ದನಿಯಲ್ಲಿ ಕೇಳಿದವರು. ಅಂಥ ಕೆಲವು ಪುರಾಣ ಸ್ತ್ರೀಯರಿಲ್ಲಿದ್ದಾರೆ. ಇವರ ಆಯ್ಕೆಯಲ್ಲಿ ಖ್ಯಾತಿಗಿಂತಲೂ ಗುಣಕ್ಕೇ ಒತ್ತು ನೀಡಲಾಗಿದೆ.
ನಾರಿರಾಜ್ಯಕ್ಕೆ ಯಾರೆಂದುಕೊಂಡಿದ್ದೀರಿ?
ಮಹಾಭಾರತದ ಅಶ್ವಮೇಧ ಪ್ರಕರಣದಲ್ಲಿ ಪ್ರಮೀಳೆಯ ಉಲ್ಲೇಖವಿದೆ. ಸ್ತ್ರೀರಾಜ್ಯಕ್ಕೆ ಅಧಿಪತಿಯಾಗಿದ್ದ ಈಕೆ,   ಯಾಗಾಶ್ವದ ರಕ್ಷಣೆಗೆ ಬಂದ ಅರ್ಜುನನ್ನು ತಡೆದಳು. ಅಂದಿನ ನಾರಿ ರಾಜ್ಯ ಇಂದಿನ ನಾರಿಕೇಳ ರಾಜ್ಯ- ಕೇರಳವೆನ್ನುತ್ತಾರೆ. ಘನಘೋರ ಯುದ್ಧದಲ್ಲಿ ಅರ್ಜುನನ್ನು ಬಳಲಿಸಿ ತನ್ನ ಬಯಕೆಯಂತೆ ಆತನನ್ನು ಮದುವೆಯಾಗೇಬಿಟ್ಟಳು. ತಾನೊಲಿದ ತರುಣನೇ ತನ್ನವನಾಗಲಿ ಎಂದು ಹಠ ತೊಡುವ ಹುಡುಗಿಯರಿಗೆ ಇವಳೇ ಹಳೆ ಮಾಡೆಲ್ಲು.
ಅವಳೊಬ್ಬಳು ವಿರಹಿಣಿ ಮಾತೆ
ಮಣಿಪುರದ ರಾಣಿ ಚಿತ್ರಾಂಗದೆ. ಈಕೆಯಲ್ಲಿ ಅರ್ಜುನನಿಂದ ಹುಟ್ಟಿದವನು ಬಭ್ರುವಾಹನ. ಅರ್ಜುನ ಎಂಥ ಅಪ್ಪನೆಂದರೆ, ಹತ್ತಾರು ವರ್ಷ ಕಳೆದು ತಿರುಗಿ ಬಂದಾಗ ಅವನಿಗೆ ಹೆಂಡತಿಯ ಪರಿಚಯವಿಲ್ಲ, ಮಗನದು ಮೊದಲೇ ಇಲ್ಲ. ಅಪ್ಪನಿಗೆ ಪಾಠ ಕಲಿಸುವ ಮಗನನ್ನು ತಯಾರು ಮಾಡಿದ ತಾಯಿ ಎಂಥವಳು! ನಮ್ಮ ಅನೇಕ ಮರೆಗುಳಿ, ಕುಡುಕ, ಧೂರ್ತ ಗಂಡಸರಿಗೆ ಇಂಥ ಪತ್ನಿಯರೇ ಸೈ.
ಬ್ರಹ್ಮಜ್ಞಾನವೇನು ನಿಮಗೆ ಮಾತ್ರವಾ?
ಶುಕ್ಲಯಜುರ್ವೇದ ರಚಿಸಿದ ಯಾಜ್ಞವಲ್ಕ್ಯ ಮಹರ್ಷಿಗೆ ಮೈತ್ರೇಯಿ ಮತ್ತು ಕಾತ್ಯಾಯನಿಯರು ಪತ್ನಿಯರು. ಅಂತಿಮ ತಪಸ್ಸಿಗೆ ತೆರಳುವಾಗ ಯಾಜ್ಞವಲ್ಕ್ಯನು ತನ್ನ ಆಸ್ತಿಯನ್ನು ಇಬ್ಬರಲ್ಲಿ ಹಂಚಹೊರಟ. ಆಗ ಮೈತ್ರೇಯಿ, ತನಗೆ ಭೌತಿಕ ಆಸ್ತಿ ಅಗತ್ಯವಿಲ್ಲ, ಮೋಕ್ಷಜ್ಞಾನ ಬೋಧಿಸಿ ಎಂದು ಹಠ ಹಿಡಿಯುತ್ತಾಳೆ. ಅದನ್ನು ಪಡೆದೇ ತೀರುತ್ತಾಳೆ. ಸ್ತ್ರೀಯರು ಬ್ರಹ್ಮಜ್ಞಾನಕ್ಕೂ ಸಮರ್ಥ ಉತ್ತರದಾಯಿಗಳೆಂದು ತೋರಿಸುತ್ತಾಳೆ. ಈಕೆ ಸ್ತ್ರೀಸಮಾನತೆಯ ಮೊದಲ ಹರಿಕಾರಿಣಿ.
ಸಗ್ಗದ ಸೊಬಗಿನ ಖನಿ
ಊರ್ವಶಿ ಸ್ವರ್ಗದ ಬೆಲೆವೆಣ್ಣೆಂದಷ್ಟೇ ತಿಳೆಯುವುದು ತಪ್ಪಾದೀತು. ಈಕೆ ವಸಿಷ್ಠ, ಅಗಸ್ತ್ಯ, ಋಷ್ಯಶೃಂಗ ಮುಂತಾದ ಅನೇಕ ಮಹಾಪುರುಷರ ಹುಟ್ಟಿಗೂ ಕಾರಣಳು. ಅಪ್ಸರೆಯರಲ್ಲೆಲ್ಲ ಈಕೆ ಮಹಾ ಸುಂದರಿ. ಈಕೆಯ ಚೆಲುವಿಗೆ ಮಣಿಯದ ಪುರುಷರೇ ಇಲ್ಲ. ಪುರಾಣಗಳಲ್ಲೆಲ್ಲಾ ಹಬ್ಬಿಕೊಂಡಿರುವ ಈಕೆಯ ಕತೆಗಳು, ಈಕೆ ಎಂಥ ಸುಂದರಿಯೂ ಜಾಣೆಯೂ ಮುಕ್ತಮನದವಳೂ ಆಗಿದ್ದಳೆಂಬುದನ್ನು ಕಾಣಿಸುತ್ತವೆ. ವರುಷ ಐವತ್ತಾದರೂ ಸುಕ್ಕನ್ನು ಬರಮಾಡಿಕೊಳ್ಳಲೊಪ್ಪದ ನಟಿಯರಿಗೆ ಈಕೆ ಆದರ್ಶವಾಗಬಹುದು.
ದಾಂಪತ್ಯಕ್ಕೊಬ್ಬಳು ಕೌನ್ಸೆಲರ್
ಅತ್ರಿ ಮಹರ್ಷಿಗಳ ಪತ್ನಿಯಾದ ಅನಸೂಯೆ ಮಹಾ ಪತಿವ್ರತೆಯೆಂದು ಹೆಸರಾದವಳು. ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನೇ ಶಿಶುಗಳನ್ನಾಗಿ ಮಾಡಿ ತೊಡೆಯ ಮೇಲೆ ಆಡಿಸಿದಳೆಂದರೆ ಈಕೆ ಯಾವ ರೇಂಜ್‌ಗೆ ಪತಿವ್ರತೆಯಾಗಿರಬೇಕು ಹೇಳಿ! ಸೀತೆ ಮುಂತಾದವರಿಗೆ ಪಾತಿವ್ರತ್ಯದ ಬಗ್ಗೆ ಬೋಧಿಸಿದವಳೂ ಈಕೆಯೇ. ಆದರ್ಶ ದಾಂಪತ್ಯದ ಬಗ್ಗೆ ಈಕೆ ಉತ್ತಮ ಕೌನ್ಸೆಲರ್ ಆಗಿದ್ದಳೆಂದರೆ ತಪ್ಪಾಗಲಿಕ್ಕಿಲ್ಲ.
ಐವರ ಮಾತೆಯ ರಾಜನೀತಿ
ಪತಿಯ ಗೈರುಹಾಜರಿಯಲ್ಲಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ಕಡುಕಷ್ಟ. ಐವರು ಮಕ್ಕಳನ್ನು ಸಾಕುವಾಗ ಕುಂತಿಗೆ ಏನೇನು ಕಷ್ಟಗಳು ಒದಗಿದವೋ ಹೇಳಲಾಸಲ್ಲ. ಅದೂ ಹಸ್ತಿನಾವತಿಯಂಥ ರಾಜಕಾರಣದ ಆಡುಂಬೋಲದಲ್ಲಿ. ಅರ್ಜುನನನ್ನು ಉಳಿಸಿಕೊಳ್ಳಬೇಕೆಂದಾಗ, ಕರ್ಣನನ್ನು ತಾನಾಗೇ ಕಷ್ಟಕ್ಕೆ ಸಿಕ್ಕಿಸುವ ವಚನಗಳನ್ನು ಪಡೆಯುವ ಕಟು ನಿರ್ಧಾರಕ್ಕೂ ಆಕೆ ಹೇಸಲಿಲ್ಲ. ರಾಜನೀತಿ ಮತ್ತು ಕ್ರೈಸಿಸ್ ಮ್ಯಾನೇಜ್‌ಮೆಂಟ್ ಈಕೆಯಿಂದ ಕಲಿಯಬಹುದೆ?
ಕಾದ ಮೇಲೆ ಮಳೆ ಬಂತು
ಕಾದಳು, ಕಾದೇ ಕಾದಳು. ಹದಿನಾಲ್ಕು ವರ್ಷ. ಹೇಗಿದ್ದಳು? ಏನು ಮಾಡುತ್ತಿದ್ದಳು? ಎಲ್ಲೂ ದಾಖಲೆಯಿಲ್ಲ. ಅಷ್ಟು ವರ್ಷ ಇಲ್ಲದ ಗಂಡನಿಗೆ ನಿಷ್ಠೆಯಿಂದಿರುವುದು, ನಂತರವೂ ಸೀತೆಯಂಥ ಅಕ್ಕನೆದುರು ಲೋ ಪ್ರೊಫೈಲ್ ಮೇಂಟೇನ್ ಮಾಡುವುದು ಕಷ್ಟ. ಸಂಯಮ, ತಪಸ್ಸಿಗೆ ಈಕೆಯ ಹೆಸರಿಡಬಹುದು.

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.