ಬೈಟುಕಾಫಿ

ಷಡ್ಯಂತ್ರದೊಳಗೊಂದು ಕುತಂತ್ರ

Published On :

ಭಾಗ 24
ಈ ಮಧ್ಯೆ ದಿವಾಕರರಿಗೂ, ಸಂಡೂರಿನ ರಾಜ ಮನೆತನದ ಎಂ.ವೈ.ಘೋರ್ಪಡೆಯವರಿಗೂ ಪರಿಚಯವಾಯಿತು. ಅವರಿಬ್ಬರಿಗೂ ಪರಿಚಯ ಮಾಡಿಕೊಟ್ಟವನು ನಾನೇ. ಘೋರ್ಪಡೆಯವರ ತಂದೆ ಸಂಡೂರಿನ ರಾಜರಿಗೂ, ದಿವಾಕರರಿಗೂ ಸ್ನೇಹವಿತ್ತು. ಆ ವರ್ಷ ಕರ್ಮವೀರ ವಾರಪತ್ರಿಕೆಯ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ ಇಟ್ಟುಕೊಳ್ಳಲಾಗಿತ್ತು. ಇದರಿಂದ ತಮ್ಮ ಪ್ರಚಾರ ಹೆಚ್ಚುವುದಲ್ಲದೇ ಹಣವೂ ದೊರೆಯುವುದೆಂದು ದಿವಾಕರರು ಭಾವಿಸಿದ್ದರು. ಅದಕ್ಕಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಆಮಂತ್ರಿಸುವಂತೆ ನನಗೆ ತಿಳಿಸಿದರು. ಆದರೆ ಅರಸು ಅವರಿಗೆ ಸಂಯುಕ್ತ ಕರ್ನಾಟಕದ ವಿದ್ಯಮಾನಗಳೆಲ್ಲಾ ಚೆನ್ನಾಗಿ ಗೊತ್ತಿದ್ದವು. ಆದ್ದರಿಂದ ಸಮಾರಂಭಕ್ಕೆ ಬರಲು ಅವರು ಹಿಂದೇಟು ಹಾಕಿದ್ದರು. ಆಗ ನಾನು ವಾರ್ತಾ ಇಲಾಖೆಯ ಸಚಿವ ಎಂ.ವೈ.ಘೋರ್ಪಡೆಯವರನ್ನು ಕರೆಸಬಹುದೆಂದು ಸೂಚಿಸಿದೆ. ಇದಕ್ಕೆ ಅವರು ಕೂಡಲೇ ಒಪ್ಪಿದರು. ವುಡ್‌ಲ್ಯಾಂಡ್ಸ್ ಹೋಟೆಲಿನಲ್ಲಿ ಸಮಾರಂಭ ಏರ್ಪಡಿಸಬೇಕೆಂದು ನಿರ್ಧಾರವಾಯಿತು. ಅದೇ ದಿನ ನಾನು ವಿಧಾನಸಭೆಯ ಮೊಗಸಾಲೆಯಲ್ಲಿ ಘೋರ್ಪಡೆಯವರನ್ನು ಕಂಡು ವಿಷಯ ತಿಳಿಸಿದೆ.
ಘೋರ್ಪಡೆಯವರು ಮೊದಲು ಒಪ್ಪಲಿಲ್ಲ. ಈ ಸಮಯದಲ್ಲಿ ಪಾಟೀಲ್ ಪುಟ್ಟಪ್ಪನವರು ತಮ್ಮ 'ಪ್ರಪಂಚ' ಪತ್ರಿಕೆಯಲ್ಲಿ ದಿವಾಕರರ ಬಗ್ಗೆ ಮತ್ತು ಅವರ ಮಗ ಅನಂತನ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರು. ಇದೇ ಕಾರಣಕ್ಕಾಗಿ ತಾವು ಬರುವುದು  ಕಷ್ಟ ಎಂದು ಘೋರ್ಪಡೆಯವರು ಹೇಳಿದರು. ಆದರೆ ನಾನು ಅವರ ಮನವೊಲಿಸಿದೆ. ಆಗ ಅವರ ತಲೆಯಲ್ಲಿ ಅನೇಕ ವಿಚಾರಗಳಿದ್ದವೆಂದು ನನ್ನ ಭಾವನೆ. ಏಕೆಂದರೆ, ಮರುದಿನ ಬೆಳಿಗ್ಗೆ ತಮ್ಮ ಮನೆಗೆ ಉಪಹಾರಕ್ಕೆ ಬರುವಂತೆ ದಿವಾಕರರನ್ನು ಮತ್ತು ಅನಂತನನ್ನೂ ಘೋರ್ಪಡೆಯವರು ಆಮಂತ್ರಿಸಿದರು. ಆ ಸಮಯದಲ್ಲಿ ಪತ್ರಿಕೆಗಳ ಮಾರಾಟದ ಪ್ರಶ್ನೆಯೂ ಚರ್ಚೆಗೆ ಬಂದಿತಂತೆ. ಪತ್ರಿಕೆ ನಡೆಸುವುದು ತಮ್ಮಿಂದ ಸಾಧ್ಯವಿಲ್ಲವೆಂದು ದಿವಾಕರರು ಸ್ಪಷ್ಟವಾಗಿ ಹೇಳಿದರಂತೆ. ಪತ್ರಿಕೆಗಳನ್ನು ತಾವು ತೆಗೆದುಕೊಳ್ಳುವುದಾಗಿ ಘೋರ್ಪಡೆಯವರು ಭರವಸೆ ಕೊಟ್ಟರು ಮತ್ತು ಇದಕ್ಕಾಗಿ ಟ್ರಸ್ಟಿನ ಆಸ್ತಿ ಹಾಗೂ ಸಾಲಸೋಲಗಳ ವಿವರಗಳನ್ನು ಸಿದ್ಧಪಡಿಸಲು ಆಡಿಟರ್‌ಗಳನ್ನು ಕಳುಹಿಸುವುದಾಗಿ ತಿಳಿಸಿದರು. ಟ್ರಸ್ಟಿನ ಆಸ್ತಿಗಳಿಗೆ ಇಷ್ಟು ಹಣ ಕೊಡಬೇಕೆಂದು ದಿವಾಕರರು ಒಮ್ಮೆಯೂ ಕೇಳಲಿಲ್ಲ. ಇಷ್ಟು ಹಣ ಕೊಡುವುದಾಗಿ ಘೋರ್ಪಡೆಯವರು ಒಮ್ಮೆಯೂ ಹೇಳಲಿಲ್ಲ. ಆಡಿಟರ್ ಹೇಳಿದಷ್ಟು ಒಪ್ಪಿಕೊಳ್ಳೋಣ ಎಂದು ಇಬ್ಬರಲ್ಲಿಯೂ ಒಪ್ಪಂದವಾಯಿತು. ಆದರೆ ಸ್ತಿರಾಸ್ಥಿಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ ತೆರಿಗೆ ಹೆಚ್ಚು ಕೊಡಬೇಕಾಗುವುದು ಎಂದು ಭಾವಿಸಿ ಅದನ್ನು ತಪ್ಪಿಸಲು ಸ್ಥಿರಾಸ್ತಿಗಳನ್ನು ಕೇವಲ ಗುತ್ತಿಗೆಯ ಮೇಲೆ ತೆಗೆದುಕೊಳ್ಳಬಹುದೆಂದು ದಿವಾಕರರೇ ಸೂಚಿಸಿದರು. ಇದರಿಂದ ಘೋರ್ಪಡೆಯವರಿಗೆ ತುಂಬಾ ಸಂತೋಷವಾಯಿತು. ಕೂಡಲೇ ತಮ್ಮ ಆಡಿಟರ್‌ಗಳಿಗೆ ತಿಳಿಸಿ ಟ್ರಸ್ಟಿನ ಚರ-ಸ್ತಿರಾಸ್ತಿಗಳ ಮೌಲ್ಯಮಾಪನ ಮಾಡಿಸಿದರು. ತಮಗೆ ಇಷ್ಟ ಬಂದಂತೆ ಆಸ್ತಿಗಳ ಮೌಲ್ಯ ಮಾಪನ ಮಾಡುವ ಹಾಗೂ ಸಂಸ್ಥೆಗಳ ಮೇಲೆ ಸಾಲಗಳ ಪ್ರಮಾಣವನ್ನು ಹೆಚ್ಚಿಸುವ ಸೂಚನೆ ಮೇರೆಗೆ ಆಡಿಟರ್‌ಗಳು ಕೆಲಸ ಮಾಡಬೇಕೆಂದು ಘೋರ್ಪಡೆಯವರು ಗುಪ್ತವಾಗಿ ಸೂಚನೆ ಕೊಟ್ಟಿದ್ದರೆಂದು ಗೊತ್ತಾಯಿತು. ದುರ್ದೈವದಿಂದ ಟ್ರಸ್ಟಿನ ಪರವಾಗಿ ಒಬ್ಬ ಆಡಿಟರನೂ ಇರಲಿಲ್ಲ. ಕೇವಲ ಆಫೀಸ್ ಲೆಕ್ಕಪತ್ರ ವಿಭಾಗದ ಒಂದಿಬ್ಬರು ಗುಮಾಸ್ತರು ಮಾತ್ರ ಇದ್ದರು ಮತ್ತು ಅವರೂ ಸಹ ಸಂಡೂರಿನ ಕಂಪನಿ ಆಡಿಟರ್‌ಗಳು ಹೇಳಿದಂತೆ ಕೇಳುತ್ತಿದ್ದರು. ಹೀಗಾಗಿ ಟ್ರಸ್ಟಿನ ಆಸ್ತಿಯ ಮೌಲ್ಯಮಾಪನ ಕೇವಲ ಒಂದು ನಾಟಕದಂತೆ ನಡೆಯಿತು. ಅಂತೂ ಕೊನೆಯಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ಶಾಖೆಗಳಲ್ಲಿದ್ದ ಟ್ರಸ್ಟಿನ ಆಸ್ತಿಯ ಬೆಲೆ ಅರವತ್ತೇಳು ಲಕ್ಷ ರುಪಾಯಿ, ಆದರೆ ಸಾಲದ ಹೊರೆ ಐವತ್ತೈದು ಲಕ್ಷ ರುಪಾಯಿ ಎಂದು ಅಂದಾಜು ಮಾಡಲಾಯಿತು. ಬಾಕಿ ಹನ್ನೆರಡು ಲಕ್ಷವನ್ನ ಪ್ರತಿ ತಿಂಗಳು ಮೂವತ್ತು ಸಾವಿರ ರುಪಾಯಿ ಕಂತಿನಂತೆ ಕೊಡುವುದಾಗಿ ಘೋರ್ಪಡೆಯವರು ಹೇಳಿದ್ದಕ್ಕೂ ದಿವಾಕರರು ಒಪ್ಪಿದರು. ಇದು ದಿವಾಕರರ ವ್ಯವಹಾರ ಜ್ಞಾನದ ಅಭಾವವನ್ನು, ಅವ್ಯವಹಾರದ ಲಕ್ಷಣವನ್ನು, ಪುತ್ರ ಮೋಹದ ಮೂರ್ಖತನವನ್ನು ಚಿತ್ರಿಸುತ್ತದೆ.
ಪತ್ರಿಕೆಗಳ ಮಾರಾಟ
ಲೋಕ ಶಿಕ್ಷಣ ಟ್ರಸ್ಟ್ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳ ಒಡೆತನ ತಮ್ಮದೆಂದೇ ದಿವಾಕರರು ಇತ್ತೀಚಿನ ವರ್ಷಗಳಲ್ಲಿ ಭಾವಿಸಿದ್ದರು. ಇದು ಸಾರ್ವಜನಿಕ ಸಂಸ್ಥೆ ಎಂಬ ಭಾವನೆ ಅವರಲ್ಲಿ ಒಮ್ಮೆಯೂ ಬಂದಿರಲಿಲ್ಲ. ತಾವು ಮತ್ತು ತಮ್ಮ ಮಗ ಹಾಗೂ ಪರಿವಾರದವರು ಮಾತ್ರ ಈ ಸಂಸ್ಥೆಯ ಆಸ್ತಿಗಳನ್ನು ಅನುಭವಿಸಲು ಹಕ್ಕುದಾರರೆಂಬ ವಿಚಾರವೂ ಅವರಲ್ಲಿ ಆಗಾಗ್ಗೆ ಹೊಳೆಯುತ್ತಿತ್ತು. ಇದಕ್ಕೆ ಮುಂದಿನ ಕೆಲವು ವರ್ಷಗಳಲ್ಲಿ ನಡೆದ ಘಟನೆಗಳೇ ಸಾಕ್ಷಿ. ಪ್ರಾರಂಭದಲ್ಲಿ ಅವರು ಟ್ರಸ್ಟಿನ ವ್ಯವಹಾರಗಳಲ್ಲಿ ತಮಗೆ ಸೂಕ್ತ ಮಾರ್ಗದರ್ಶನ ನೀಡಲು ಒಂದು ಸಲಹಾ ಸಮಿತಿಯನ್ನು ರಚಿಸಿದ್ದ ಬಗ್ಗೆ ಈಗಾಗಲೇ ಹೇಳಲಾಗಿದೆ. ಮೊಹರೆಯವರ ಉಚ್ಛಾಟನೆ ನಂತರ ಈ ಸಮಿತಿ ಮತ್ತೆ ಸೇರಲೇ ಇಲ್ಲ. ಆಮೇಲೆ ದಿವಾಕರರು ಮತ್ತೊಂದು ಸಲಹಾ ಸಮಿತಿಯನ್ನು ರಚಿಸಿದರು. ಅದರಲ್ಲಿ ತಮ್ಮ ಪ್ರಿಯ ಮಿತ್ರರಾದ ಎನ್.ಜಿ.ಗಣಪುಲೆ, ಬೀಗರಾದ ಜಿ.ಎ.ಆಚಾರ್ಯ, ಬೆಂಗಳೂರಿನ ಸುಪ್ರಸಿದ್ಧ ವಕೀಲರಾದ ಚಿನ್ನಸ್ವಾಮಿ ಹಾಗೂ ಎಚ್.ಬಿ.ದಾತಾರರು ಸದಸ್ಯರಾಗಿದ್ದರು. ಈ ಸಮಿತಿ ತನ್ನ ಮೊದಲ ಸಭೆಯಲ್ಲಿಯೇ ಕೆಲವು ನಿರ್ಧಾರಗಳನ್ನು ಕೈಗೊಂಡು ದಿವಾಕರರು ಮತ್ತು ಅವರ ಮಗ ಅನಂತ ದಿವಾಕರರು ಟ್ರಸ್ಟಿನ ಆಡಳಿತದಲ್ಲಿ ಕೈ ಹಾಕದಂತೆ ವ್ಯವಸ್ಥೆ ಮಾಡಿದರು. ಇದರಿಂದ ಸಿಟ್ಟಿಗೆದ್ದ ದಿವಾಕರರು ಕೇವಲ ಒಂದೇ ವಾರದಲ್ಲಿ ಈ ಸಮಿತಿಯನ್ನೇ ರದ್ದುಗೊಳಿಸಿದರು. ಅನಂತರ ಅವರು ಧಾರವಾಡ ಜಿಲ್ಲಾ ಕೋರ್ಟಿಗೆ ಅರ್ಜಿ ಹಾಕಿ ತಮಗೆ ಸಹಾಯ ಮಾಡಲು ಮೂರು ಜನ ಧರ್ಮದರ್ಶಿಗಳನ್ನು ನೇಮಿಸಿಕೊಳ್ಳಲು ಅನುಮತಿ ಕೊಡಬೇಕೆಂದು ಕೇಳಿಕೊಂಡರು. ಕೋರ್ಟಿನ ಅಪ್ಪಣೆ ಪಡೆದು ತಮ್ಮ ಮಗ ಅನಂತ ದಿವಾಕರ, ಅಣ್ಣನ ಮಗ ವಿ.ಎಸ್.ದಿವಾಕರ ಮತ್ತು ಅಕ್ಕನ ಮಗ ಹೆಚ್.ಜಿ.ಗುತ್ತಲ್ ಂಬುವವರನ್ನು ಸಹ ಧರ್ಮದರ್ಶಿಗಳನ್ನಾಗಿ ನೇಮಿಸಿದರು. ಆದರೆ ಮುಂದೆ ಕೆಲವೇ ದಿನಗಳಲ್ಲಿ ಈ ಸಹಧರ್ಮದರ್ಶಿಗಳಲ್ಲಿಯೇ ಭಿನ್ನಾಭಿಪ್ರಾಯ ತಲೆದೋರಿ, ಅದೂ ಕೆಲಸ ಮಾಡದಂತಾಯಿತು. ಸಹಧರ್ಮದರ್ಶಿ ಹೆಚ್.ಜಿ.ಗುತ್ತಲರವರು ಅನಂತ ದಿವಾಕರರ ವಿರುದ್ದ ಅನೇಕ ಗಂಭೀರ ಆಪಾದನೆಗಳನ್ನು ಮಾಡಿ ಬೆಳಗಾವಿಯ ಚಾರಿಟಿ ಕಮಿಷನ್ನಿಗೆ ದೂರು ಕೊಟ್ಟರು. ಇದರಿಂದ ಸಿಟ್ಟಿಗೆದ್ದ ದಿವಾಕರರು ಸಹಧರ್ಮದರ್ಶಿಗಳನ್ನೂ ವಜಾ ಮಾಡಿದರು. ಅಂದರೆ ಟ್ರಸ್ಟಿನ ಆಡಳಿತ ಪುನಃ ಅವರ ಕೈಗೆ ಮತ್ತು ಅವರ ಮುಖಾತಂರ ಅನಂತ ದಿವಾಕರರ ಕೈಗೆ ಬಂದಿತು. ಮುಂದೆ ಕೆಲವೇ ದಿನಗಳಲ್ಲಿ ಈ ಅನಂತ ದಿವಾಕರರನ್ನು ಸಂಯುಕ್ತ ಕರ್ನಾಟಕದ ಶಾಖೆಯ ವ್ಯವಸ್ಥಾಪಕರನ್ನಾಗಿಯೂ, ಲೋಕ ಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿಯನ್ನಾಗಿಯೂ ನೇಮಿಸಿದರು. ಅಲ್ಲಿಯವರೆಗೆ ಎಂ.ಹೆಚ್.ಕೌಜಲಗಿಯವರು ಟ್ರಸ್ಟಿನ ಕಾರ್ಯದರ್ಶಿಗಳಾಗಿದ್ದರು. ತಮ್ಮ ಸ್ಥಾನದಲ್ಲಿ ಅನಂತ ದಿವಾಕರರನ್ನು ನೇಮಿಸಿದ್ದರಿಂದ ಅವರಿಗೆ ತುಂಬಾ ನೋವಾಯಿತು. ಆದರೂ ಅವರು ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಎಂ.ಹೆಚ್.ಕೌಜಲಗಿಯವರು ಸ್ವಲ್ಪ ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆಕೊಟ್ಟು ಬೃಂದಾವನ್ ಪ್ರೆಸ್ ಎಂಬ ಹೊಸ ಮುದ್ರಣಾಲಯ ಸ್ಥಾಪಿಸಿದರು. ಅನಂತ ದಿವಾಕರರ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ಅವರಲ್ಲಿ ದಕ್ಷತೆ ಇರಲಿಲ್ಲ, ಅರ್ಹತೆ ಇರಲಿಲ್ಲ, ಅನುಭವವೂ ಇರಲಿಲ್ಲ. ಇದರ ಜೊತೆಗೆ ಮಾನಸಿಕ ಸಮತೋಲನವೂ ಇರಲಿಲ್ಲ. ಈ ಕಾರಣಗಳಿಂದ ಸಂಸ್ಥೆಯಲ್ಲಿ ದುರಾಡಳಿತ ಪ್ರಾರಂಭವಾಯಿತು. ಅವ್ಯವಹಾರಗಳೂ ಹೆಚ್ಚಾಯಿತು. ಹಣ ದುರುಪಯೋಗ ಪ್ರಕರಣಗಳು ದಿನದಿನಕ್ಕೆ ಹೆಚ್ಚಾಗಿ, ಪತ್ರಿಕೆ ನಡೆಯುವುದೇ ಕಷ್ಟವಾಗಿತ್ತು. ಬ್ಯಾಂಕುಗಳಲ್ಲಿ ಸಾಲ ಏರುತ್ತಿತ್ತು. ಸಂಬಳ ಕೊಡುವುದಕ್ಕೂ ಮುದ್ರಣ ಕಾಗದ ಖರೀದಿ ಮಾಡುವುದಕ್ಕೂ ಹಣವಿರುತ್ತಿರಲಿಲ್ಲ. ಆಗ ದಿವಾಕರರು ತಮ್ಮ ಕೈಯಲ್ಲಿ ಈ ಸಂಸ್ಥೆಯ ಆಡಳಿತವನ್ನು ನಡೆಸುವುದು ಸಾಧ್ಯವಿಲ್ಲವೆಂದು ಮನಗಂಡು, ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದರು. ತಾವು ಟ್ರಸ್ಟಿನ ಧರ್ಮದರ್ಶಿತ್ವದಿಂದ ನಿವೃತ್ತರಾಗಿ 13-12-1973ರಂದು ತಮ್ಮ ಸ್ಥಾನದಲ್ಲಿ ಮೂರು ಧರ್ಮದರ್ಶಿಗಳನ್ನು ತಮ್ಮ ವಾರಸುದಾರರನ್ನಾಗಿ ನೇಮಿಸಿಕೊಂಡರು. ಅವರುಗಳೆಂದರೆ ಪಾಂಡಿಚೇರಿ ಆಶ್ರಮದ ಮುಖ್ಯಸ್ಥರಾದ ಸರ್ವ ನವಜಾತ, ಕೆನರಾ ಬ್ಯಾಂಕಿನ ಭಂಡಾರಿ ಮತ್ತು ತಮ್ಮ ಮಗ ಅನಂತ ದಿವಾಕರರು, ತಮ್ಮ ಅಧಿಕಾರವನ್ನೆಲ್ಲಾ ಅವರಿಗೆ ಕೊಟ್ಟು ಇನ್ನುಮುಂದೆ ತಾವು ಟ್ರಸ್ಟಿನಿಂದ ನಿವೃತ್ತರಾಗಿರುವುದಾಗಿ ಬೆಳಗಾವಿಯ ಅಸಿಸ್ಟೆಂಟ್ ಚಾರಿಟಿ ಕಮೀಷನರಿಗೆ ಅಧಿಕೃತವಾಗಿ ತಿಳಿಸಿದರು. ಆದರೆ ಈ ಹೊಸ ಧರ್ಮದರ್ಶಿಗಳು ಅಧಿಕಾರ ವಹಿಸಿಕೊಂಡ ದಿನದಿಂದಲೇ ಅಪಶಕುನಗಳು ಪ್ರಾರಂಭವಾದವು.
(ಮುಂದುವರಿಯುವುದು)

ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.