ಬೈಟುಕಾಫಿ

ಮುಖೇಶ್ ಅಬ್ಬಾನೀ

ಮುಖೇಶ್ ಅಬ್ಬಾನೀ
Published On :

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಆಸ್ತಿ ಮೌಲ್ಯ 18.5 ಬಿಲಿಯ ಡಾಲರ್. ಅರ್ಥಾತ್ 1.11 ಲಕ್ಷ ಕೋಟಿ ರುಪಾಯಿ. ಅಂದರೆ ಒಂದರ ಮುಂದೆ ಎಷ್ಟು ಸೊನ್ನೆ?
ಮುಂಬಯಿಯ ಅಂಟಿಲ್ಲಾ ಎಂಬ ಗಗನಚುಂಬಿ ಕಟ್ಟಡದ ಮುಂದೆ ನಿಂತು ಅದರ ತುದಿ ಎಲ್ಲಿದೆ ಎಂದು ನಿರುಕಿಸುವಷ್ಟೇ ವ್ಯರ್ಥ ಪ್ರಯತ್ನ ಇದು. ಅಂಟಿಲ್ಲಾ, ಮುಖೇಶ್ ಅಂಬಾನಿಯ ಮನೆ. ಭಾರತದ ಅತಿ ಶ್ರೀಮಂತನೂ ಈತನೇ.
ಮುಖೇಶ್‌ಗೂ ಮಹಾತ್ಮ ಗಾಂಧಿಗೂ ಸಾಮ್ಯತೆಯಿಲ್ಲ. ಗಾಂಧಿ ಸರಳತೆಯನ್ನೇ ಪ್ರತಿಪಾದಿಸಿದವರು. ಮುಖೇಶ್ ಅದ್ದೂರಿತನ, ವೈಭವವನ್ನು ನೆಚ್ಚಿಕೊಂಡವರು. ಥಿಯೇಟರ್‌ಗಳಿಂದ ಹೆಲಿಪ್ಯಾಡ್‌ವರೆಗೆ ಎಲ್ಲವೂ ಇರುವ ಅಂಟಿಲ್ಲಾವೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ, ಭಾರತ ಸರಕಾರವೇ ಅಂಬಾನಿಗಳ ಕೈಯೊಳಗಿದೆ ಎಂಬ ಆರೋಪವೂ ಕೇಳಿಬಂತು. ಸಿರಿವಂತನಾದರೆ ದೂಷಣೆ ಹೆಚ್ಚು.
ಈ ಮುಖೇಶ್ ಅಂಬಾನಿಯೆಂಬ ನವಕುಬೇರ ಇದ್ದಕ್ಕಿದ್ದಂತೆ ಶೂನ್ಯದಿಂದ ಅವತರಿಸಿದವನೇ? ಆತ ಭಾರತದ ಸಿರಿವಂತರಲ್ಲೊಬ್ಬನಾಗುವಲ್ಲಿ ಆತ ಅಪ್ಪನ ಧೀರುಭೈ ಮಾಡಿಟ್ಟ ಪುಣ್ಯವೇ ಸಾಕಾಗಿತ್ತೆ? ಈತನ ಯಶಸ್ಸಿನ ಕತೆಯಲ್ಲಿ ನಾವು ಕಲಿಯಬಹುದಾದ ಪಾಠಗಳಿವೆಯೆ?
ಧೀರುಭೈ ಸ್ಥಾಪಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಮೊದಲು ಮಸಾಲೆ ಸಾಮಗ್ರಿಗಳನ್ನು ರಫ್ತು ಮಾಡುತ್ತಿತ್ತು. ಈ ಮುಖೇಶ್ ಚಿಕ್ಕ ಹುಡುಗನಾಗಿದ್ದಾಗ, ಅಂಬಾನಿ ಫ್ಯಾಮಿಲಿ ಇದ್ದದ್ದು ಮುಂಬಯಿಯ ಚಿಕ್ಕ ಡಬಲ್ ಬೆಡ್‌ರೂಂ ಅಪಾರ್ಟ್‌ಮೆಂಟೊಂದರಲ್ಲಿ. ಕೆಮಿಕಲ್ ಇಂಜಿನಿಯರಿಂಗ್ ಮಾಡಿದ ಮುಖೇಶ್, ಸ್ಟಾನ್‌ಫರ್ಡ್ ವಿವಿಯಲ್ಲಿ ಎಂಬಿಎ ಮಾಡಲು ಹೋದರು. ಅಷ್ಟರಲ್ಲಾಗಲೇ ಪಾಲಿಯೆಸ್ಟರ್ ಉದ್ಯಮ ಪ್ರವೇಶಿಸಿದ್ದ ಅವರಪ್ಪ, ಜತೆಯಾಗಲು ಬರುವಂತೆ ಮಗನಿಗೆ ಕರೆ ಕಳುಹಿಸಿದರು. ಹಾಗೆ ಮುಖೇಶ್ ಎಂಬಿಎ ಡ್ರಾಪ್‌ಔಟ್.
80ರ ದಶಕದಲ್ಲಿ ಮುಂಬಯಿಯಿಂದ ದೂರ ಹಳ್ಳಿಯಲ್ಲಿ ಸ್ಥಾಪಿಸಿದ್ದ ನೂಲೆಳೆ ತಯಾರಿಕೆ ಪ್ಲಾಂಟ್‌ನಲ್ಲಿ ಮೇಲ್ವಿಚಾರಕನಾಗಿ ಮುಖೇಶ್ ಕೆರಿಯರ್ ಆರಂಭ. ಅಲ್ಲೇ ಬಿಸಿನೆಸ್ ಪಾಠ, ನಾಯಕತ್ವ ಕಲಿಕೆ. ತದನಂತರವೇ ರಿಲಯನ್ಸ್ ಕಂಪನಿಯು ಪೆಟ್ರೋಕೆಮಿಕಲ್ಸ್, ಪೆಟ್ರೋಲಿಯಂ ರಿಫೈನಿಂಗ್, ದೂರಸಂಪರ್ಕ, ಮನರಂಜನೆ, ತೈಲ ಮತ್ತು ಅನಿಲ ಶೋಧ ಮುಂತಾದ ಕ್ಷೇತ್ರಗಳಿಗೆ ಕಾಲಿಟ್ಟು ಒಂದೊಂದನ್ನೇ ಗೆದೆಯುತ್ತ ಹೋದದ್ದು.
2002ರಲ್ಲಿ ಧೀರುಭೈ ಅಂಬಾನಿ ವಿಲ್ ಬರೆದಿಡದೆ ಸತ್ತಾಗ, ಮುಖೇಶ್ ಮತ್ತು ಅನಿಲ್‌ರ ಆಸ್ತಿ ವ್ಯಾಜ್ಯ ಪರಿಹರಿಸಲು ತಾಯಿ ಮಧ್ಯಪ್ರವೇಶಿಸಬೇಕಾಯಿತು. ಅನಿಲ್‌ಗೆ ಮನರಂಜನೆ, ದೂರಸಂಪರ್ಕ ಮತ್ತು ಮುಖೇಶ್‌ಗೆ ಪೆಟ್ರೋಕೆಮಿಕಲ್ಸ್, ಪೆಟ್ರೋಲಿಯಂ ರಿಫೈನಿಂಗ್, ಜವಳಿ ಎಂದು ಅಲ್ಲೇ ನಿರ್ಣಯವಾದ್ದು. ಇಂದು ಮುಖೇಶ್ ತನ್ನ ಮುಂದಿನ ವಾರ್ಷಿಕ ಆದಾಯವನ್ನು 40 ಶತಕೋಟಿ ಡಾಲರ್ ಮತ್ತು ಉದ್ಯೋಗಿಗಳ ಸಂಖ್ಯೆ 15ರಿಂದ 30 ದಶಲಕ್ಷಕ್ಕೇರಿಸಲು ಸ್ಕೆಚ್ ಹಾಕುತ್ತಿದ್ದಾರೆ ಅಂದರೆ ನೀವೇ ಲೆಕ್ಕ ಹಾಕಿ.
ಇಷ್ಟೆಲ್ಲ ಇದ್ದರೂ ಮುಖೇಶ್ ಇತರ ಬಿಲಿಯನೇರ್‌ಗಳಂತಲ್ಲ. ಇಂದೂ ಅವರು ಇಂಗ್ಲಿಷ್‌ಗಿಂತ ಮಾತನಾಡಲಿಷ್ಟಪಡುವುದು ಗುಜರಾತಿಯನ್ನೇ. ಭಾರತೀಯ ವಾತಾವರಣದಲ್ಲೇ ತಮ್ಮ ಕುಟುಂಬ ಇರಬೇಕೆಂದು ಬಯಸುತ್ತಾರವರು. ಸಂಜೆ ಕೆಲಸ ಮುಗಿಸಿ ಬಂದಾಗ, 'ಅಪ್ಪಾ, ನಿನ್ನ ಬಿಜಿನೆಸ್ಸು ಸೃಷ್ಟಿಸುತ್ತಿರುವ ಪ್ಲಾಸ್ಟಿಕ್ ವೇಸ್ಟ್ ಎಷ್ಟು ಗೊತ್ತಾ?' ಎಂದು ಪ್ರಾಯಕ್ಕೆ ಬಂದ ಮಗಳು ಎಸೆಯುವ ಪ್ರಶ್ನೆಯನ್ನೂ ಮೌನವಾಗಿ ಆಲಿಸಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರಂತೆ ಮುಖೇಶ್!


ಹೀಗೊಂದು ಸರ್ವೆ
ಇತ್ತೀಚೆಗೆ ಚೀನಾ ಮೂಲದ ಹುರೂನ್ ಎಂಬ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಂತೆ, ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾನಿ ಹೊರಹೊಮ್ಮಿದ್ದಾರೆ. ಅವರ ಆಸ್ತಿ ಮೌಲ್ಯ 18.5 ಶತಕೋಟಿ ಡಾಲರ್. 68 ಬಿಲಿಯ ಡಾಲರ್ ಹೊಂದಿ ಲಿಸ್ಟ್‌ನ ಟಾಪ್‌ನಲ್ಲಿರುವವರು ಬಿಲ್ ಗೇಟ್ಸ್. ಈ ಪಟ್ಟಿಯಲ್ಲಿರುವ ಇನ್ನಿತರ ಭಾರತೀಯರು- ಲಕ್ಷ್ಮಿ ಮಿತ್ತಲ್, ಅಜೀಂ ಪ್ರೇಂಜಿ, ದಿಲೀಪ್ ಸಾಂಘ್ವಿ, ಪಲ್ಲೋಂಜಿ ಮಿಸ್ತ್ರಿ ಮತ್ತು ಹಿಂದುಜಾ.  


ಧೀರುಭೈ ಅಂಬಾನಿಯ ಬಿಸಿನೆಸ್ ರಹಸ್ಯಗಳು

ಮಾಹಿತಿ ಕಲೆಹಾಕು
 ಅವಕಾಶ ಕಂಡುಕೊಳ್ಳು
ಒಂದು ಕಕ್ಷೆಯಿಂದ ಇನ್ನೊಂದಕ್ಕೆ ನೆಗೆ
ಪ್ರಾಜೆಕ್ಟ್‌ಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸು
ಬೃಹತ್ ಆಗಿ, ಜಾಗತಿಕವಾಗಿ ಯೋಚಿಸು
ಅತ್ಯುತ್ತಮ ಸಿಬ್ಬಂದಿ ಇಟ್ಟುಕೋ, ಒಳ್ಳೆ ಸಂಬಳ ನೀಡು
ಷೇರುದಾರರಿಗೆ ಸರಿಯಾಗಿ ಪಾವತಿ ಕೊಡು

ಮುಖೇಶ್ ಅಂಬಾನಿ ಹೇಳಿದ ಉದ್ಯಮ ತಂತ್ರಗಳು


- ಅಧಿಕಾರಸ್ಥರನ್ನು ಸರಿಯಾಗಿಟ್ಟುಕೋ. (ಯುಪಿಎಯ ಬೆನ್ನೆಲುಬೇ ಮುಖೇಶ್ ಎಂದು ಕೇಜ್ರಿವಾಲ್ ಆರೋಪಿಸಿದ್ದರಲ್ಲಿ ಸತ್ಯವಿದೆಯಾ?)
-  ಎದುರಾಳಿಗಳನ್ನು ಎದುರಿಸುವಾಗ ಮಮಕಾರ ಬೇಡ. (ಅನಿಲ್ ಅಂಬಾನಿ ಜತೆಗಿನ ವ್ಯಾಜ್ಯ ನೆನಪಿಸಿಕೊಳ್ಳಿ)
- ಹೊಸ ಅವಕಾಶಗಳನ್ನು ಸೃಷ್ಟಿಸಿಕೊ. (4ಜಿ ತಂತ್ರಜ್ಞಾನದತ್ತ ಕಣ್ಣು ನೆಟ್ಟಿದ್ದಾರೆ)
-  ಜನಪ್ರಿಯನಾಗುವ ಅವಕಾಶ ಕಳೆದುಕೊಳ್ಳದಿರು. (ಐಪಿಎಲ್ ಟೀಂ ಮಾಲೀಕತ್ವ ಹೊಂದಿದ್ದಾರೆ)
-  ಮೌಲ್ಯಗಳ ಬಗ್ಗೆ ಗೌರವ ಇರಲಿ. (ಕೌಟುಂಬಿಕ ಚೌಕಟ್ಟು ಮೀರಿ ಹೋಗುವುದಿಲ್ಲ)

- ಹರಿ ಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.