ಈಕೆ ಮಹಾಮಾತೆ

ಊರ್ವಶಿಯ ಶರತ್ತುಗಳನ್ನು ಪ್ರೇಮಪೀಡಿತನಾಗಿದ್ದ ಪುರೂರವ ಅಂಗೀಕರಿಸಿದನೆಂದು ಬೇರೆ ಹೇಳಬೇಕಾಗಿಲ್ಲ. ನಂತರ ಇಬ್ಬರೂ ಜೋಡಿಯಾದರು. ಊರ್ವಶಿ ಸಗ್ಗಸುಖವನ್ನು ಪುರೂರವನ ಬಾಳಿಗೆ ತಂದಳು. ಪುರೂರವನು ಊರ್ವಶಿಗೆ ಮರ್ತ್ಯದ ಬೆಳೆಯನ್ನು ಉಣಿಸಿದ. ಇಬ್ಬರೂ ಅರುವತ್ತು ಸಾವಿರ ವರ್ಷ ರತಿಸುಖವನ್ನು ಅನುಭವಿಸುತ್ತಾ ಆನಂದದಿಂದ ಕಳೆದರು.
ಷಷ್ಟಿ ವರ್ಷ ಸಹಸ್ರಾಣ್ಯನುದಿನ ಪ್ರಮೋದೋನಯತ್
ಊರ್ವಶೀ ರಹಿತಂ ಮಹ್ಯಮಾಸ್ಥಾನಂ ನಾತಿಶೋಭತೇ
ಆದರೆ ಅತ್ತ ದೇವೇಂದ್ರನ ಆಸ್ಥಾನ ಊರ್ವಶಿಯಿಲ್ಲದೆ ಬರಡಾದಂತೆನಿಸುತ್ತಿತ್ತು. ತನ್ನ ಆಸ್ಥಾನ ಬಣಗುಡುವುದನ್ನೂ, ತನ್ನ ಭೋಗ ಮನುಷ್ಯನೊಬ್ಬನ ಪಾಲಾದುದನ್ನೂ ಇಂದ್ರನಿಂದ ಸಹಿಸಲಾಗಲಿಲ್ಲ. ಆದಕ್ಕೆ ಆತನೊಂದು ಉಪಾಯ ಮಾಡಿದ. ಒಂದು ರಾತ್ರಿ ಊರ್ವಶಿಯ ಮೇಕೆಗಳನ್ನು ಕದ್ದು ಅವುಗಳಿಗೆ ಹಿಂಸೆ ಕೊಟ್ಟ. ಅವು ಕೂಗಿಕೊಂಡವು. ಊರ್ವಶಿಯ ಜತೆ ಶಯ್ಯಾಸುಖ ಅನುಭವಿಸಿ ದಣಿದು ಮಲಗಿದ್ದ ಪುರೂರವ, ಮೇಕೆಗಳ ಕೂಗನ್ನು ಕೇಳಿ ಎದ್ದು ಅವುಗಳನ್ನು ರಕ್ಷಿಸಲೆಂದು ಧಾವಿಸಿದ. ಆಗ ಊರ್ವಶಿಗೆ ಆತನ ನಗ್ನಶರೀರ ದರ್ಶನವಾಯಿತು. ಊರ್ವಶಿಗೂ ಮಾನವ ಭೋಗ ಸಾಕಾಗಿತ್ತೇನೋ. ಶರತ್ತು ಮುರಿಯಿತೆಂದು ಎದ್ದು ಪುರೂರವನನ್ನುಳಿದು ಸ್ವರ್ಗ ಸೇರಿಬಿಟ್ಟಳು.
ಇದು ಮಾನವ- ಅಪ್ಸರೆ ಸಂಬಂಧದ ಕತೆಯಷ್ಟೇ ಅಲ್ಲ. ಇವರಿಬ್ಬರ ಸಂಸಾರದಿಂದ ಆಯುಷ, ಅಮಾವಸು ಎಂಬವರು ಹುಟ್ಟಿದರು. ಆಯುಷನ ಮಗ ನಹುಷ. ನಹುಷನ ಪುತ್ರ ಯಯಾತಿ. ಅವನಿಗೆ ಯದು, ಪುರು ಮಕ್ಕಳು. ಪುರುವಿನಿಂದ ದುಷ್ಯಂತ, ಭರತ, ಶಂತನು, ಪಾಂಡವರು, ಕೌರವರು. ಯದುವಂಶದಲ್ಲಿ ಶ್ರೀಕೃಷ್ಣ. ಅಮಾವಸುವಿನ ಪೀಳಿಗೆಯಲ್ಲಿ ವಿಶ್ವಾಮಿತ್ರ, ಜಮದಗ್ನಿ, ಜಹ್ನು ಮುಂತಾದವರು. ಹೀಗೆ ಈಕೆ ಮಹಾಮಾತೆ, ಪುರಾಣಕತೆಗಳಿಗೆಲ್ಲ ಜನನಿಸ್ಥಾನ ಪಡೆದಳು.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


