ಸರ್ಕಾರಿ ಕಚೇರಿಯಂತೆ ಇತ್ತು ಪತ್ರಿಕಾ ಕಚೇರಿ!

ಧಾರವಾಡ ಜಿಲ್ಲಾ ನ್ಯಾಯಾಧೀಶರು ವಾಮದೇವರನ್ನು ರಿಸೀವರನ್ನಾಗಿ ಮಾಡುವಾಗ 'ಈಗ ನಿಲ್ಲಿಸಲ್ಪಟ್ಟಿರುವ ಸಂಯುಕ್ತ ಕರ್ನಾಟಕ ಬೆಂಗಳೂರು ಮುದ್ರಣವನ್ನು ಪುನಃ ಪ್ರಾರಂಭಿಸಲು ಸಾಧ್ಯವೆ?' ಎಂಬುದನ್ನು ಪರಿಶೀಲಿಸಲು ಮಾತ್ರ ತಿಳಿಸಿದ್ದರು. ಆದರೆ ಅವರಿಂದ ಈ ಬಗ್ಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.
ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾಯರು ತಮ್ಮ ಪ್ರಚಾರಕ್ಕಾಗಿ ಪತ್ರಿಕೆಯೊಂದನ್ನು ಹುಡುಕುತ್ತಿದ್ದರು. ರಾಜ್ಯದ ಎಲ್ಲಾ ಪತ್ರಿಕೆಗಳೂ ಅವರಿಗೆ ವಿರುದ್ಧವಾಗಿದ್ದವು. ಅವರ ಆಡಳಿತವನ್ನು ಟೀಕಿಸುತ್ತಿದ್ದವು. ಅವರ ಸ್ನೇಹಿತರಾದ ಕೆ.ಕೆ.ಮೂರ್ತಿಯವರಿಗೆ ಸಂಯುಕ್ತ ಕರ್ನಾಟಕವನ್ನು ಪುನಃ ಪ್ರಾರಂಭಿಸಿ ಅದನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳಬಾರದೇಕೆ ಎಂಬ ಆಲೋಚನೆ ಹೊಳೆಯಿತು. ಗುಂಡೂರಾಯರೊಡನೆ ಮಾತನಾಡಿ ಅವರೇ ರಿಸೀವರ್ ವಾಮದೇವರನ್ನು ಸಂಪರ್ಕಿಸಿ, ಅವರಿಗೆ ಅನೇಕ ಭರವಸೆಗಳನ್ನಿತ್ತು, ಪತ್ರಿಕೆಯನ್ನು ಕೂಡಲೇ ಪ್ರಾರಂಭಿಸಲು ಒತ್ತಾಯಿಸಿದರು. ಬ್ಯಾಂಕಿನಿಂದ ಸ್ವಲ್ಪ ಸಾಲವನ್ನೂ ಕೊಡಿಸಿದರು. ವಾಮದೇವ್ ಸಹ ಮುಖ್ಯಮಂತ್ರಿಯ ಪ್ರೀತಿ ವಿಶ್ವಾಸ ಗಳಿಸಿ, ರಾಜಕೀಯ ಅನುಕೂಲ ಪಡೆಯುವ ಉದ್ದೇಶದಿಂದ ಡಿಸೆಂಬರ್ 20ನೇ ತಾರೀಕಿನಿಂದಲೇ ಪತ್ರಿಕೆಯನ್ನು ಪ್ರಾರಂಭಿಸಲು ಸಿದ್ಧರಾದರು. ಅದರಂತೆ ಡಿಸೆಂಬರ್ 19ನೇ ತಾರೀಕು ಅವರು ಕಚೇರಿಯ ಬಾಗಿಲಿಗೆ ಒಂದು ನೋಟಿಸ್ ಹಾಕಿದರು. ಹಿಂದೆ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕೆಲಸಗಾರರು ಪ್ರಜಾವಾಣಿಯಿಂದ ಬಂದು ಸಂಯುಕ್ತ ಕರ್ನಾಟಕದಲ್ಲಿ ಸೇರಿದ್ದ ಎಸ್.ವಿ.ಜಯಶೀಲರಾಯರ ನೇತೃತ್ವದಲ್ಲಿ ಆಫೀಸಿನಲ್ಲಿ ನುಗ್ಗಿ, ಮೊದಲಿನ ತಮ್ಮ ತಮ್ಮ ಕುರ್ಚಿಗಳನ್ನು ಭದ್ರವಾಗಿ ಹಿಡಿದುಕೊಂಡರು ಮತ್ತು ಪತ್ರಿಕೆಯ ಪ್ರಕಟನೆಗೆ ಅಗತ್ಯವಾದ ಕೆಲಸಗಳನ್ನು ಮಾಡಿದರು. ಡಿಸೆಂಬರ್ 20ರ ಬೆಳಿಗ್ಗೆ ಪತ್ರಿಕೆ ಪ್ರಕಟವಾಯಿತು. ಇದರ ಒಂದು ಪ್ರತಿಯನ್ನು ಗುಂಡೂರಾಯರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಇಂದಿರಾ ಗಾಂಧಿಗೆ ಸಮರ್ಪಿಸಿ, ತಮ್ಮ ಸಾಧನೆಯನ್ನು ಹೇಳಿಕೊಂಡರು. ಆಗ ಅವರ ಜೊತೆಗೆ ಕೆ.ಕೆ.ಮೂರ್ತಿಯವರೂ ಇದ್ದರು.
ಅಂತೂ ಬೆಂಗಳೂರು ಸಂಯುಕ್ತ ಕರ್ನಾಟಕ ಪತ್ರಿಕೆ ಪುನಃ ಕೋರ್ಟ್ ರಿಸೀವರ್ ಮುಖಾಂತರ ಪ್ರಾರಂಭವಾಯಿತು. ಆದರೆ ಇದಕ್ಕೆ ಕೋರ್ಟ್ನ ಅನುಮತಿ ಇರಲಿಲ್ಲ. ಪತ್ರಿಕೆ ನಡೆಸುವುದಕ್ಕೆ ಹಣದ ವ್ಯವಸ್ಥೆಯೂ ಆಗಿರಲಿಲ್ಲ. ಇದನ್ನು ಕಂಡು ಟ್ರಸ್ಟಿನ ಹಿತೈಷಿಗಳು ಧಾರವಾಡ ಜಿಲ್ಲಾ ನ್ಯಾಯಲಯದಲ್ಲಿ ಒಂದು ಅರ್ಜಿಯನ್ನು ಕೊಟ್ಟು, ರಿಸೀವರರು ರಾಜಕೀಯ ಒತ್ತಡಕ್ಕೆ ಮಣಿದು, ಬೆಂಗಳೂರು ಮುದ್ರಣ ಪ್ರಾರಂಭಿಸಿರುವುದಾಗಿ ತಿಳಿಸಿದರಲ್ಲದೆ, ರಿಸೀವರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಪಡಿಸಿದರು. ಕೋರ್ಟು ಈ ಬಗ್ಗೆ ತೀರ್ಪು ಕೊಡುವ ಮೊದಲೇ ರಿಸೀವರ್ ವಾಮದೇವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು. ಪತ್ರಿಕೆಗಳನ್ನು ತೃಪ್ತಿಕರವಾಗಿ ನಡೆಸುವುದು ತಮ್ಮಿಂದ ಸಾಧ್ಯವಿಲ್ಲವೆಂದೂ, ಆದ್ದರಿಂದ ತಮ್ಮನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿದ್ದರು. ರಾಜಕೀಯ ಒತ್ತಡಕ್ಕೆ ಸಿಕ್ಕು ತಾವು ದೊಡ್ಡ ತಪ್ಪು ಮಾಡಿರುವುದಾಗಿ ಅವರಿಗೆ ಮನವರಿಕೆಯಾಗಿತ್ತು. ಮುಖ್ಯಮಂತ್ರಿ ಹಾಗೂ ಅವರ ಮಿತ್ರರು ತಮಗೆ ಸಹಾಯ ಮಾಡಬಹುದೆಂಬ ಆಸೆಯಿಂದ ಅವರು ಈ ಪ್ರಯತ್ನಕ್ಕೆ ಕೈಹಾಕಿದ್ದರು. ಆದರೆ ಪತ್ರಿಕೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಇವರು ಯಾರೂ ರಿಸೀವರರ ಹತ್ತಿರ ಸುಳಿಯಲಿಲ್ಲ.
ಧಾರವಾಡ ಜಿಲ್ಲಾ ನ್ಯಾಯಾಲಯ ವಾಮದೇವರನ್ನು ಬಿಡುಗಡೆ ಮಾಡಿ, ಅವರ ಸ್ಥಾನದಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿದ್ದ ಜಿಗಜಿನ್ನಿ ಎಂಬವರನ್ನು ರಿಸೀವರನ್ನಾಗಿ ನೇಮಿಸಿತು. ಇವರೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು. ವಕೀಲಿ ವೃತ್ತಿಯಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದರು. ಅವರ ಪ್ರಾಮಾಣಿಕತೆ, ದಕ್ಷತೆ ಮತ್ತು ದೂರದೃಷ್ಟಿಗಳನ್ನು ಎಲ್ಲರೂ ಮೆಚ್ಚುತ್ತಿದ್ದರು. ಸಂಯುಕ್ತ ಕರ್ನಾಟಕವನ್ನು ಭದ್ರವಾದ ಬುನಾದಿಯ ಮೇಲೆ ಕಟ್ಟಬೇಕೆಂದು ಅವರಿಗೆ ಆಸೆಯೂ ಇತ್ತು. ಅದಕ್ಕಾಗಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿ, ಸರ್ಕಾರ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಸಂಸ್ಥೆಯಲ್ಲಿ ಅಗತ್ಯವಿಲ್ಲದ ಹಾಗೂ ಅದಕ್ಷರೂ, ಅಪ್ರಮಾಣಿಕರೂ ಆದ ನೌಕರರನ್ನು ಕೆಲಸದಿಂದ ತೆಗೆದು, ಖರ್ಚು ಕಡಿಮೆ ಮಾಡಬೇಕೆಂದು ಅವರ ಅಭಿಪ್ರಾಯವಾಗಿತ್ತು. ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ಸುಮಾರು 600ಕ್ಕೂ ಹೆಚ್ಚು ನೌಕರರಿದ್ದರು. ಒಂದು ಸಣ್ಣ ಪತ್ರಿಕೆ ನಡೆಸಲು ಇಷ್ಟೊಂದು ನೌಕರರ ಅಗತ್ಯವಿರಲಿಲ್ಲ. ಒಬ್ಬರು ಮಾಡುವ ಕೆಲಸಕ್ಕೆ ಕನಿಷ್ಟ ನಾಲ್ಕು ಜನ ಇರುತ್ತಿದ್ದರು. ಮೊದಲನೇ ರಿಸೀವರಾಗಿದ್ದ ವಾಮದೇವರು ಪಾಲೇಕರ್ ಐತೀರ್ಪನ್ನು ಜಾರಿಗೆ ಕೊಟ್ಟಿದ್ದರಿಂದ ನೌಕರರ ಸಂಬಳ, ಭತ್ಯೆಗಾಗಿ ಖರ್ಚು ಮಾಡಬೇಕಾಗಿತ್ತು. ಇದರ ಮೇಲೆ ಪಿಎಫ್, ಗ್ರಾಚ್ಯುಯಿಟಿ ಇತ್ಯಾದಿಗಳಿದ್ದವು. ಇಂತಹ ಸ್ಥಿತಿಯಲ್ಲಿ ಪತ್ರಿಕೆಯನ್ನು ಸರಿಯಾದ ರೀತಿ ಮತ್ತು ಸಕಾಲದಲ್ಲಿ ಮುದ್ರಿಸಿ ಪ್ರಕಟಿಸುವುದು ಸಾಧ್ಯವೇ ಇರಲಿಲ್ಲ. ಆದ್ದರಿಂದ ಜಿಗಿಜಿನ್ನಿಯವರು ಈ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಸಲಹೆ ಮಾಡಿದ್ದರು.
ಸರ್ಕಾರದ ಮುಷ್ಠಿಯಲ್ಲಿ ಪತ್ರಿಕೆಗಳು
ಅಷ್ಟರಲ್ಲಿ ಮುಖ್ಯಮಂತ್ರಿ ಗುಂಡೂರಾಯರಿಗೆ ಇನ್ನೊಂದು ಆಲೋಚನೆ ಹೊಳೆಯಿತು. ಅದೆಂದರೆ ಸುಗ್ರೀವಾಜ್ಞೆ ಮುಖಾಂತರ ಟ್ರಸ್ಟಿನ ಚರಸ್ಥಿರ ಆಸ್ತಿಗಳನ್ನು ಸರ್ಕಾರ ವಹಿಸಿಕೊಂಡರೆ, ಅವುಗಳ ಜೊತೆಗೆ ಪತ್ರಿಕೆಗಳೂ ಸಹ ತಮ್ಮ ಅಧೀನಕ್ಕೆ ಬರುವವೆಂದು ತಿಳಿದರು. ತಮ್ಮ ಮಿತ್ರ ಕೆ.ಕೆ.ಮೂರ್ತಿಯವರೊಡನೆ ಸಮಾಲೋಚಿಸಿ ಒಂದು ಆದೇಶ ಹೊರಡಿಸಿದರು. ಇದು ನನಗೆ ಮೊದಲು ಗೊತ್ತಾಗಲಿಲ್ಲ. ಸರ್ಕಾರಿ ಆದೇಶದ ಕರಡು ಪ್ರತಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ದೆಹಲಿಗೆ ಹೋಗಿತ್ತು. ರಾಜ್ಯ ಸರ್ಕಾರದ ಓರ್ವ ಅಧಿಕಾರಿ ಇದನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದರು. ಗಣರಾಜ್ಯದ ನಿಮಿತ್ತ ರಾಜ್ಯಪಾಲರು ಏರ್ಪಡಿಸಿದ್ದ ಸತ್ಕಾರ ಕೂಟಕ್ಕೆ ನಾನು ಹೋಗಿದ್ದಾಗ ಅಂದಿನ ಹಣಕಾಸಿನ ಕಾರ್ಯದರ್ಶಿ ಎನ್.ಕೆ.ಪ್ರಭಾಕರರಾಯರು ನನಗೆ ಈ ವಿಷಯ ತಿಳಿಸಿ, ಇಷ್ಟರಲ್ಲಿಯೇ ನಿಮ್ಮ ಪತ್ರಿಕೆಯನ್ನು ವಶಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು. ನನಗೆ ಗಾಬರಿಯಾಯಿತು. ಕೂಡಲೇ ನನ್ನ ವಕೀಲರಾದ ಕೆ.ಐ.ಭಟ್ಟರನ್ನು ಕಂಡು ಈ ವಿಷಯ ತಿಳಿಸಿ ಇದನ್ನು ವಿರೋಧಿಸುವ ಬಗ್ಗೆ ಸಮಾಲೋಚನೆ ಮಾಡಿದೆ.
ಮುಂದೆ ಎಂಟೇ ದಿನಗಳಲ್ಲಿ ರಾಜ್ಯ ಸರ್ಕಾರ ಲೋಕ ಶಿಕ್ಷಣ ಟ್ರಸ್ಟಿನ ಆಸ್ತಿಗಳೆಲ್ಲವನ್ನೂ ವಶಪಡಿಸಿಕೊಳ್ಳುವ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. 'ಲೋಕ ಶಿಕ್ಷಣ ಟ್ರಸ್ಟಿನ ಆಡಳಿತದ ಬಗ್ಗೆ ಅನೇಕ ದೂರುಗಳು ಬಂದಿವೆ. ಮತ್ತು ಅದರ ಧರ್ಮದರ್ಶಿಗಳಲ್ಲಿ ಜಗಳ ಮತ್ತು ತಿಕ್ಕಾಟ ನಡೆಯುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತ ವರ್ಗ ಅಸಮರ್ಥವಾಗಿದೆ. ಸಾರ್ವಜನಿಕರಿಂದ ಲಕ್ಷಾಂತರ ರುಪಾಯಿ ಠೇವಣಿ ಸ್ವೀಕರಿಸಿದ್ದು ಅವಧಿ ಮುಗಿದ ಮೇಲೆಯೂ ಅದನ್ನು ವಾಪಸ್ಸು ಕೊಟ್ಟಿಲ್ಲ. ಕೋರ್ಟಿನಲ್ಲಿ ನೂರಾರು ವ್ಯಾಜ್ಯಗಳಿವೆ. ಆದ್ದರಿಂದ ಈ ಸಂಸ್ಥೆಯ ಆಡಳಿತವನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ' ಎಂದು ಆ ಸುಗ್ರೀವಾಜ್ಞೆ ಪೀಠಿಕೆಯಲ್ಲಿ ಹೇಳಲಾಗಿತ್ತು. ಸರ್ಕಾರದ ಪರವಾಗಿ ಆಡಳಿತವನ್ನು ನಡೆಸಲು ರೇಷ್ಮೆ ಇಲಾಖೆಯ ಮುಖ್ಯ ಅಧಿಕಾರಿ ಮೀನಾಕ್ಷಿ ಸುಂದರಂ ಎಂಬವರನ್ನು ನೇಮಿಸಲಾಗಿತ್ತು. ಅವರಿಗೆ ಸಹಾಯ ಮಾಡಲು ಬೆಂಗಳೂರು ಕಚೇರಿಗೆ ಸಿ.ಸೋಮಶೇಖರ್ ಎಂಬೊಬ್ಬ ರೆವಿನ್ಯೂ ಇಲಾಖೆ ಅಧಿಕಾರಿಯನ್ನು ಮತ್ತು ಹುಬ್ಬಳ್ಳಿ ಕಚೇರಿಗೆ ವಸ್ತ್ರದ್ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ ಈ ಮೂರೂ ಜನ ಅಧಿಕಾರಿಗಳಿಗೆ ವೃತ್ತ ಪತ್ರಿಕೆಯನ್ನು ಹೇಗೆ ನಡೆಸಬೇಕೆಂದು ಸ್ವಲ್ಪವೂ ಗೊತ್ತಿರಲಿಲ್ಲ. ಸರ್ಕಾರಿ ಆಡಳಿತದ ಮಾದರಿಯಲ್ಲಿ ಪತ್ರಿಕಾಲಯದ ಆಡಳಿತವನ್ನು ನಡೆಸುತ್ತಿದ್ದರು. ಇದೇ ಸಮಯದಲ್ಲಿ ನಾನೇ ನೇಮಿಸಿದ್ದ ಮತ್ತು ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಎ.ಜಿ.ಗುಂಡಾ ಭಟ್ ಎಂಬ ಉಪಸಂಪಾದಕ ಬಹಳ ಚಾಣಾಕ್ಷತನದಿಂದ ಮೇಲಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, ಅವರ ದೌರ್ಬಲ್ಯಗಳಿಗೆ ನೆರವಾಗುತ್ತಾ, ಒಂದೊಂದೇ ಮೆಟ್ಟಿಲು ಮೇಲೇರಿದ. ಸಂಯುಕ್ತ ಕರ್ನಾಟಕದ ಹೆಸರನ್ನು ಸಾಕಷ್ಟು ದುರುಪಯೋಗಪಡಿಸಿಕೊಂಡು, ಆಸ್ತಿ ಮತ್ತು ಹಣವನ್ನು ಗಳಿಸಿದ. ಒಮ್ಮೆ ನಾನು ಸಂಯುಕ್ತ ಕರ್ನಾಟಕ ಬಿಟ್ಟ ನಂತರ, ಪರಾಗ್ ಹೋಟೆಲ್ನಲ್ಲಿ ನನ್ನ ಮಿತ್ರ, ಕನ್ನಡಪ್ರಭದ ಕೆ.ಸತ್ಯನಾರಾಯಣ ಅವರ ಜೊತೆ ಕಾಫಿ ಕುಡಿಯುತ್ತಾ ಕುಳಿತಿದ್ದಾಗ ಇದೇ ವ್ಯಕ್ತಿ ಸಿಗರೇಟು ಸೇದುತ್ತಾ ನನ್ನನ್ನು ನೋಡದೆ ಎದುರಿಗೇನೇ ಹೋದ. ಆತನ ವರ್ತನೆಗೆ ಇದೊಂದು ಉದಾಹರಣೆ. ಮುಂದೇ ಇದೇ ವ್ಯಕ್ತಿ ತನ್ನ ಸಹೋದ್ಯೋಗಿಗಳನ್ನ ಹಾಗೂ ಧರ್ಮದರ್ಶಿಗಳನ್ನು ದಾರಿ ತಪ್ಪಿಸಿ, ಯಾವ ರೀತಿ ಟ್ರಸ್ಟಿನ ಹಂಗಾಮಿ ಕಾರ್ಯದರ್ಶಿಯಾದ ಎಂಬುದು ಇನ್ನೊಂದು ಸ್ವಾರಸ್ಯಕರ ಕಥೆ. ಈತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದು ನಾನೇ. ಈತನಿಗೆ ಪತ್ರಿಕೋದ್ಯಮದ ಜ್ಞಾನವಾಗಲೀ ಆಡಳಿತದ ಅನುಭವವಾಗಲೀ ಸ್ವಲ್ಪವೂ ಇಲ್ಲ. ತನ್ನ ಇಡೀ ಸೇವೆಯ ಅವಧಿಯಲ್ಲಿ ಒಂದು ಸುದ್ದಿಯನ್ನೂ ಬರೆದಿಲ್ಲ. ಒಂದು ಪತ್ರ ವ್ಯವಹಾರ ಮಾಡಿಲ್ಲ. ಆದರೂ ಪತ್ರಿಕೆಯ ಜಂಟಿ ಸಂಪಾದಕನಾದ ಮತ್ತು ಹಂಗಾಮಿ ಕಾರ್ಯದರ್ಶಿಯೂ ಆದ. ಇದರ ರಹಸ್ಯವೇನು ಎಂಬುದನ್ನು ಹೇಳುವುದಕ್ಕಿಂತ ಊಹಿಸುವುದೇ ಮೇಲು.
ಸರ್ಕಾರದ ಸುಗ್ರೀವಾಜ್ಞೆಯನ್ನು ವಿರೋಧಿಸಿ ಹೈಕೋರ್ಟಿನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆ ಸುಮಾರು ಎರಡು ವರ್ಷ ನಡೆಯಿತು. ಈ ಅವಧಿಯಲ್ಲಿ ಸರ್ಕಾರದ ಆಡಳಿತಗಾರರು ಹೆಸರಿಗೆ ಮಾತ್ರ ಪತ್ರಿಕೆ ನಡೆಸುತ್ತಿದ್ದರು. ಆದರೆ ಅವರಿಗೆ ಹಣದ ತೊಂದರೆ ಇತ್ತು. ಅದರಲ್ಲಿಯೂ ಬೆಂಗಳೂರು ಕಚೇರಿಗೆ ವರಮಾನವೇ ಇರಲಿಲ್ಲ. ಕೇವಲ 6-7 ಸಾವಿರ ಪ್ರಸಾರ ಹೊಂದಿದ್ದ ಬೆಂಗಳೂರು ಮುದ್ರಣದ ಪತ್ರಿಕೆಗೆ ಜಾಹೀರಾತುಗಳು ಇರಲಿಲ್ಲ. ಸರ್ಕಾರ ವಾರ್ತಾ ಇಲಾಖೆಗೆ ಆದೇಶ ಕೊಟ್ಟು ಜಾಹೀರಾತುಗಳನ್ನು ಕೊಡಿಸುತ್ತಿತ್ತು. ಆದರೆ ಈ ಜಾಹೀರಾತುಗಳ ಹಣ ಎಂದೋ, ಎಷ್ಟೋ ತಿಂಗಳ ನಂತರ ಬರುತ್ತಿತ್ತು. ದಿನದ ಖರ್ಚಿಗೆ, ಮುದ್ರಣದ ಕಾಗದಕ್ಕೆ ಅಥವಾ ಸಿಬ್ಬಂದಿಯ ಸಂಬಳಕ್ಕೇ ಹಣವೇ ಇರುತ್ತಿರಲಿಲ್ಲ. ಪ್ರತಿ ತಿಂಗಳೂ ಹುಬ್ಬಳ್ಳಿಯಿಂದ ಹಣ ತರಿಸಿಕೊಂಡು ಪತ್ರಿಕೆ ನಡೆಸಬೇಕಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಮೇಲಧಿಕಾರಿಗಳ ಭ್ರಷ್ಟಾಚಾರ, ಅವ್ಯವಸ್ಥೆ, ಅವ್ಯವಹಾರ ಮಿತಿ ಮೀರಿದ್ದವು. ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಕೆಲಸ ಕಾರ್ಯ ನಿರ್ವಹಿಸುವುದು ಅಸಾಧ್ಯವಾದ ಮಾತಾಗಿತ್ತು. ಪತ್ರಿಕಾಲಯದ ಆಡಳಿತ ಕೇವಲ ಸರ್ಕಾರಿ ಕಚೇರಿಯ ಆಡಳಿತದಂತೆ ನಡೆಯುತ್ತಿತ್ತು. ಸಾಯಂಕಾಲ 5.30 ಗಂಟೆಯ ನಂತರ ಕಚೇರಿಯಲ್ಲಿ ಒಬ್ಬರೂ ಇರುತ್ತಿರಲಿಲ್ಲ. ಬಹುಶಃ ಆ ಸಮಯದಲ್ಲಿಯೇ ನಮ್ಮ ಭಟ್ಟರಿಗೆ ಮೇಲಧಿಕಾರಿಗಳನ್ನು ಒಲಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಸಿಗುತ್ತಿದ್ದವು. ಈ ಕಲೆ ಕರಗತವಾಗಿತ್ತು. ಚತುರೋಪಾಯಗಳಲ್ಲಿ ಅವರು ನಿಪುಣರು. ನಮ್ರ ಸೇವಕನಂತೆ ಎದುರಿಗೆ ನಟಿಸಿ, ಅನಂತರ ಅವರು ತಾವಾಗಿಯೇ ಬಾವಿಗೆ ಬೀಳುವಂತೆ ಮಾಡುವ ಜಾಣ್ಮೆ ಅವರಲ್ಲಿತ್ತು.
(ಮುಂದುವರಿಯುವುದು)
ಕೆ. ಶಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


