ಬೈಟುಕಾಫಿ

ಪತ್ರಿಕೆ ಉಳಿಸಿಕೊಳ್ಳಲು ದಿಟ್ಟ ನಿರ್ಧಾರ

ಪತ್ರಿಕೆ ಉಳಿಸಿಕೊಳ್ಳಲು ದಿಟ್ಟ ನಿರ್ಧಾರ
Published On :

'ಸಂಯುಕ್ತ ಕರ್ನಾಟಕ' ಗುಂಪಿನ ಪತ್ರಿಕೆಗಳನ್ನು ಮಾರಾಟ ಮಾಡಿದ ಲೋಕ ಶಿಕ್ಷಣ ಟ್ರಸ್ಟಿಗಳ ವಿರುದ್ಧ ನಾನು ಸುಮಾರು ಹನ್ನೆರಡು ವರ್ಷ ಹೋರಾಡಿದ್ದು ನಿಜ, ಆದರೆ ಆ ಹೋರಾಟದಲ್ಲಿ ನೇರವಾಗಿ ನನ್ನ ಹೆಸರು ಇರಲಿಲ್ಲ. ಮೂಲ ಅರ್ಜಿ ಮತ್ತು ಕೋರ್ಟಿನ ಎಲ್ಲಾ ಕಾಗದ ಪತ್ರಗಳು ಬೇರೆಯವರ ಹೆಸರಿನಲ್ಲಿಯೇ ಇದ್ದವು. ಏಕೆಂದರೆ 1974ನೇ ನವೆಂಬರ್ 21ರಂದು ಪತ್ರಿಕೆಗಳು ಮಾರಾಟವಾದಾಗ, ನಾನು ಇನ್ನೂ ಕೆಲಸದಲ್ಲಿದ್ದೆ. ಬೆಂಗಳೂರು ಕಚೇರಿಯಲ್ಲಿ ಸಹಾಯಕ ಸಂಪಾದಕನಾಗಿ ಕೆಲಸ ಮಾಡಿ, ನನಗಿಂತ ಮೊದಲೇ ನಿವೃತ್ತರಾಗಿದ್ದ ಆರ್.ಕೆ. ಜೋಷಿಯವರನ್ನು ಮೊದಲು ಮನ ಒಲಿಸಿದೆ. ಅವರೂ ಒಪ್ಪಿದರು. ನಂತರ ನನ್ನ ಬೀಗ ಡಾ. ಆರ್.ಎಸ್. ಕುಂಭಕೋಣಂರವರೂ ಮುಂದೆ ಬಂದರು. ಇವರಿಬ್ಬರು ಟ್ರಸ್ಟಿನಲ್ಲಿ ಠೇವಣಿ ಇಟ್ಟಿದ್ದರಿಂದ ಕಾನೂನು ಪ್ರಕಾರ ಅರ್ಹರಿದ್ದರು. ಬಳಿಕ ಹುಬ್ಬಳ್ಳಿ ಸುದರ್ಶನ ಟಾಕೀಸಿನ ಮ್ಯಾನೇಜರಾಗಿದ್ದ ಡಿ.ಡಿ. ಜಾಂಬಳೆ ತಾವಾಗಿ ಮುಂದೆ ಬಂದು ರುಜು ಹಾಕಿದರು. ಆ ಮೇಲೆ ಹುಬ್ಬಳ್ಳಿಯ ವರ್ತಕ ಬಿ.ಡಿ. ಅಕ್ಕಿ ಮತ್ತು ವಿಜಾಪುರದಲ್ಲಿ ಕರ್ನಾಟಕ ವೈಭವ ಪತ್ರಿಕೆಯ ಸಂಪಾದಕರಾಗಿದ್ದ ಹಾಗೂ ಕೆಲವು ವರ್ಷ ಸಂಯುಕ್ತ ಕರ್ನಾಟಕದಲ್ಲಿಯೂ ಕೆಲಸ ಮಾಡಿದ್ದ ವಿ.ಬಿ. ನಾಯಕ ಅವರು ಸಹ ದಾವೆ ಅರ್ಜಿಗೆ ರುಜು ಹಾಕಲು ತಾವಾಗಿಯೇ ಮುಂದೆ ಬಂದರು. ಆದರೆ ನಂತರ ಹಿಂದೆ ಸರಿದರು.
ಅಂತೂ ನಾಲ್ಕು ಜನರ ರುಜುವಿನಿಂದ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಪತ್ರಿಕೆಗಳ ಮಾರಾಟ ಪ್ರಶ್ನಿಸಿ ದಾವೆ ಹಾಕಲಾಯಿತು. ದಾವೆ ಅರ್ಜಿ ಬೇರೆ ನಾಲ್ಕು ಜನರ ಹೆಸರಿನಲ್ಲಿದ್ದರೂ ಅದರ ಸೂತ್ರಧಾರ ನಾನೇ ಎಂಬುದು ಎಲ್ಲರ ಭಾವನೆ. ಇಷ್ಟೇ ಅಲ್ಲ, ವಕೀಲರೊಡನೆ ಸಮಾಲೋಚಿಸುವುದು ಅವರಿಗೆ ಎಲ್ಲಾ ಮಾಹಿತಿ ಒದಗಿಸುವುದು ಅರ್ಜಿ ಟೈಪ್ ಮಾಡಿಸುವುದು, ವಕೀಲರಿಗೆ ಫೀಜು ಕೊಡುವುದು ಮತ್ತು ಅವರನ್ನು ಆಗಾಗ್ಗೆ ಧಾರವಾಡ, ಬೆಳಗಾವಿಗಳಿಗೆ ಕರೆದುಕೊಂಡು ಹೋಗಿ ಕೋರ್ಟ್ ವ್ಯವಹಾರ ಮುಗಿಸಿಕೊಂಡು ಬರುವುದು ನನ್ನ ಜವಾಬ್ದಾರಿಯಾಗಿತ್ತು. ಇದಕ್ಕೆಲ್ಲಾ ಹಣ ಹೊಂದಿಸಿಕೊಳ್ಳುವುದು ದೊಡ್ಡ ಹೊರೆಯಾಗುತ್ತಿತ್ತು. ಆದರೆ ಬೆಂಗಳೂರಿನ ವಕೀಲರಾದ ಕೆ.ಐ. ಭಟ್ಟರು ಮತ್ತು ಧಾರವಾಡದಲ್ಲಿ ವಕೀಲರಾಗಿದ್ದ ಸಿ.ಬಿ.ಪಾಟೇಲರು ಮಾತ್ರ ತುಂಬಾ ಉದಾರತೆಯಿಂದ ನಡೆದುಕೊಳ್ಳುತ್ತಿದ್ದರು. ಒಮ್ಮೆಯೂ ಫೀಜಿಗೆ ಒತ್ತಾಯಿಸುತ್ತಿರಲಿಲ್ಲ. ನಾನು ಕೊಟ್ಟಾಗ, ಕೊಟ್ಟಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ವಕೀಲರ ಈ ಸಹಾಯ, ಸಹಕಾರಗಳಿಲ್ಲದೆ ಇದ್ದಿದ್ದರೆ ಹನ್ನೆರಡು ವರ್ಷಗಳ ಈ ಕಾನೂನು ಸಮರದಲ್ಲಿ ಖಂಡಿತ ಜಯ ಗಳಿಸುತ್ತಿರಲಿಲ್ಲ.
ಕೋರ್ಟ್ ವ್ಯವಹಾರಗಳ ಖರ್ಚು
ಇನ್ನು ಹನ್ನೆರಡು ವರ್ಷಗಳವರೆಗೆ ಕೋರ್ಟಿನ ಖರ್ಚುಗಳನ್ನು ನಿರ್ವಹಿಸಿದವರು ಯಾರು ಎಂಬ ಪ್ರಶ್ನೆ. ಸುಮಾರು 12 ವರ್ಷ, ಹುಬ್ಬಳ್ಳಿ ಮುನ್ಸಿಫ್ ಕೋರ್ಟಿನಿಂದ ದೆಹಲಿ ಸುಪ್ರಿಂ ಕೋರ್ಟಿನವರೆಗೆ ನಡೆದ 35-40 ಮೊಕದ್ದಮೆಗಳಿಗಾಗಿ ಎಷ್ಟು ಹಣ ಖರ್ಚಾಗಿದೆಯೆಂಬುದನ್ನು ಊಹಿಸುವುದೂ ಸಾಧ್ಯವಿಲ್ಲ. ನಾನು ಇದರ ಲೆಕ್ಕವನ್ನೇ ಇಟ್ಟಿಲ್ಲ. ಆದರೆ ಈ ಖರ್ಚನ್ನೆಲ್ಲ ನನ್ನ ಸ್ವಂತ ಹಣದಿಂದ ನಿರ್ವಹಿಸಿದೆನೆಂದು ನಿಸ್ಸಂದೇಹವಾಗಿ ಹೇಳುತ್ತೇನೆ. ಕೋರ್ಟ್ ಖರ್ಚುಗಳಿಗಾಗಿ ನಾನು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದೇನೆಂದು ಅಪಪ್ರಚಾರ ನಡೆಯುತ್ತಿತ್ತು. ಇದು ಅಪ್ಪಟ ಸುಳ್ಳು. ನಾನು ಯಾರಿಂದಲೂ ಒಂದು ಪೈಸೆ ಕೇಳಿಲ್ಲ, ಯಾರೂ ಕೊಟ್ಟಿಲ್ಲ. ಸಂಯುಕ್ತ ಕರ್ನಾಟಕ ಸೇವೆಯಿಂದ ನಿವೃತ್ತರಾದ ಮೇಲೆ ಬಂದ ಪಿ.ಎಫ್. ಗ್ರಾಚ್ಯುಯಿಟಿ ಮುಂತಾದ ಹಣವನ್ನೆಲ್ಲ ಈ ವ್ಯಾಜ್ಯಕ್ಕಾಗಿ ಖರ್ಚು ಮಾಡಿದೆ. ನನ್ನ ಮನೆಯವರಿಗೂ ಈ ವಿಷಯ ಹೇಳಿರಲಿಲ್ಲ. ವಿದೇಶಗಳಿಂದ ನನ್ನ ಮಕ್ಕಳು ಕಳಿಸುತ್ತಿದ್ದ ಹಣವನ್ನು, ದಾವಣಗೆರೆಯಲ್ಲಿದ್ದ ನನ್ನ ಮನೆಯನ್ನು ಮಾರಿ ಬಂದ ಹಣವನ್ನು ಸಹ ಕೋರ್ಟ್ ವ್ಯವಹಾರಗಳಿಗೆ ಖರ್ಚು ಮಾಡಿದೆ. ಇಷ್ಟೇ ಅಲ್ಲ, ನನ್ನ ಹೆಂಡತಿಯ ಮೈಮೇಲಿದ್ದ ಒಡವೆಗಳನ್ನು ಸಹ ಮಾಡಿದೆ. ಬ್ಯಾಂಕಿನಲ್ಲಿ ಸಾಲ ಮಾಡಿದೆ. ಕೋರ್ಟ್ ವ್ಯವಹಾರಗಳು ಮುಗಿದ ಮೇಲೆ ಈ ಹಣದಲ್ಲಿ ಒಂದು ಪೈಸೆಯನ್ನೂ ಟ್ರಸ್ಟಿನಿಂದ ತೆಗೆದುಕೊಂಡಿಲ್ಲ. ನನಗೆ ವಿದ್ಯೆ ಉದ್ಯೋಗ ಹಾಗೂ ಅನ್ನ ಕೊಟ್ಟ ಸಂಸ್ಥೆಯ ಋಣ ತೀರಿಸಲು ನಾನು ಈ ಸಾಹಸ ಮಾಡಬೇಕಾಯಿತು. ನಾನು ಪಟ್ಟ ಶ್ರಮಕ್ಕೆ ಮಾಡಿದ ಖರ್ಚಿಗೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಈ ಬಗ್ಗೆ ಲೆಕ್ಕವೂ ಇಲ್ಲ. ಏಕೆಂದರೆ ಈ ಹಣವನ್ನು ವಾಪಸ್ಸು ಪಡೆಯುವ ಉದ್ದೇಶವೂ ನನಗಿರಲಿಲ್ಲ. ನನ್ನ ಹೋರಾಟ ಯಶಸ್ವಿಯಾದುದಕ್ಕಾಗಿ ಆನಂದವಾಗಿದೆ. ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು, ವಿದ್ಯೆಯನ್ನು ಮುಂದುವರೆಸಲಿಕ್ಕಾಗದೆ, ಉದ್ಯೋಗಕ್ಕಾಗಿ ಊರೂರು ಅಲೆದ ನನಗೆ ಅನ್ನ, ವಿದ್ಯೆ ಮತ್ತು ಉದ್ಯೋಗವನ್ನು ಕೊಟ್ಟ ಸಂಯುಕ್ತ ಕರ್ನಾಟಕದ ಋಣವನ್ನು ತೀರಿಸಿದಂತಾಯಿತೆಂದು ತೃಪ್ತಿ ಪಟ್ಟಿದ್ದೇನೆ. ಒಟ್ಟಿನಲ್ಲಿ ಸಂಸ್ಥೆಯ ಪುಣ್ಯದಿಂದ, ಸಂಯುಕ್ತ ಕರ್ನಾಟಕದ ಅಸಂಖ್ಯಾತ ಅಭಿಮಾನಿಗಳ ಅದೃಷ್ಟದಿಂದ, ಟ್ರಸ್ಟಿನ ಕೈಬಿಟ್ಟಿದ್ದ ಆಸ್ತಿಗಳು ಮತ್ತು ಪ್ರಕಟಣೆಗಳು ಪುನಃ ಟ್ರಸ್ಟಿಗೆ ಬಂದವು. ಇದು ಮಹಾಸಾಧನೆಯಲ್ಲವೆ?
ಪತ್ರಿಕೆಯ ಮಾರಾಟವನ್ನು ತಪ್ಪಿಸಬೇಕೆಂದು ಭಗೀರಥ ಪ್ರಯತ್ನ ಮಾಡಿ, ಅನೇಕ ಮಂತ್ರಿಗಳನ್ನು, ಶಾಸಕರನ್ನು ಕಂಡು ಪತ್ರಿಕೆಯ ಹಸ್ತಾಂತರ ತಪ್ಪಿಸಬೇಕೆಂದು ಕೇಳಿಕೊಂಡೆ. ಅನೇಕರು ಬೆಂಬಲ ಕೊಡುವುದಾಗಿ ಭರವಸೆ ಕೊಟ್ಟರು. ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಡಿ. ದೇವೇಗೌಡರೂ ನನ್ನ ಬೆಂಬಲಕ್ಕೆ ನಿಂತರು. ಇಷ್ಟೇ ಅಲ್ಲ, ಮಾರಾಟದ ವಿರುದ್ಧ ದಾವೆ ಹಾಕಲು ತಮ್ಮ ಬಂಧುವಿನ ಹೆಸರನ್ನು ಸೂಚಿಸಿ ವಕಾಲತ್ತಿಗೆ ರುಜು ಹಾಕಿಸಿಕೊಟ್ಟರು.
ಈ ಮಧ್ಯೆ ದಿವಾಕರರು ಎರಡು ದಿನ ಕಣ್ಮರೆಯಾಗಿದ್ದರು. ಹಿರಿಯ ದಿವಾಕರರು ಪಾಂಡಿಚೇರಿಗೆ ಹೋಗಿ, ಟ್ರಸ್ಟ್‌ನ ಅಧ್ಯಕ್ಷ ಕೆ.ಆರ್. ಪೊತದಾರರನ್ನು ಕಂಡು ಪತ್ರಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅವನ್ನು ಮಾರಲೇಬೇಕಾಗಿದೆಯೆಂದು ಅವರಿಗೆ ಮನವರಿಕೆ ಮಾಡಿಕೊಟ್ಟರು ಮತ್ತು ಅವರಿಂದ ತಮ್ಮ ಹೆಸರಿಗೆ ಅಧಿಕಾರ ಪತ್ರ ತೆಗೆದುಕೊಂಡು ಬಂದರು. ಇದೇ ಸಮಯದಲ್ಲಿ ಅನಂತ ಮಂಗಳೂರಿಗೆ ಹೋಗಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದ ಬಿ.ವಿ. ಭಂಡಾರಿಯವರನ್ನು ಕಂಡು ಪತ್ರಿಕೆ ಮಾರಾಟ ಮಾಡುವ ನಿರ್ಧಾರ ತಿಳಿಸಿ, ಅವರ ಪರವಾಗಿ ರುಜು ಮಾಡಲು ತಮಗೆ ಅಧಿಕಾರ ಪತ್ರ ಕೊಡಬೇಕೆಂದು ಕೇಳಿಕೊಂಡರು. ಅಷ್ಟು ಹೊತ್ತಿಗೆ ಭಂಡಾರಿಯವರಿಗೆ ಅನಂತನ ಬಗ್ಗೆ, ಅವನ ಅವಾಂತರಗಳ ಬಗ್ಗೆ ದುರಾಡಳಿತದ ಬಗ್ಗೆ ಸಾಕಷ್ಟು ಜಿಗುಪ್ಸೆ ಉಂಟಾಗಿ, ಯಾವಾಗ ಈ ಸಂಸ್ಥೆಯಿಂದ ಹೊರಗೆ ಹೋದೇನೋ ಎಂದು ಚಿಂತಿಸುತ್ತಿದ್ದರು. ಕೂಡಲೇ ಅಧಿಕಾರ ಪತ್ರ ಕೊಟ್ಟರು ಮತ್ತು ಟ್ರಸ್ಟಿನ ಲೆಕ್ಕಪತ್ರ ಕೇಳಿದರು. ತಮ್ಮ ಗೈರುಹಾಜರಿಯಲ್ಲಿ ಲಕ್ಷಾಂತರ ರು. ದುರುಪಯೋಗ ಆಗಿರುವ ವದಂತಿಗಳು ತಮಗೆ ಬಂದಿವೆ ಎಂದು ತಿಳಿಸಿದರು. ಇದರಿಂದ ಅನಂತ ತುಂಬ ಗಾಬರಿಯಾದ. ಆದರೂ ಮೇಲ್ನೋಟಕ್ಕೆ ತೋರಿಸಿಕೊಳ್ಳದೆ ಎಲ್ಲಾ ಸರಿಯಾಗಿದೆ ಎಂದು ಉಡಾಫೆ ಹೊಡೆದ. ಅವರು ತಾವು ಬೆಂಗಳೂರಿಗೆ ಬರುವ ಹೊತ್ತಿಗೆ ಟ್ರಸ್ಟ್‌ನ ಎಲ್ಲಾ ಲೆಕ್ಕಪತ್ರಗಳನ್ನು ಸಿದ್ಧವಾಗಿಟ್ಟಿರಬೇಕೆಂದು ತಿಳಿಸಿದರು. ಈ ಪತ್ರದ ಪ್ರತಿಗಳನ್ನು ಪಾಂಡಿಚೇರಿಯಲ್ಲಿದ್ದ ನವಜಾತರಿಗೂ ಆರ್.ಆರ್. ದಿವಾಕರರಿಗೂ ಕಳಿಸಿಕೊಟ್ಟರು. ಇದು ಆರ್.ಆರ್. ದಿವಾಕರರಿಗೆ ಬಹಳ ಕಸಿವಿಸಿಯುಂಟುಮಾಡಿತು. ಮತ್ತು ಮಗನ ಉಚ್ಛಾಟನೆಯಾಗುವುದು ಖಂಡಿತ ಎಂದು ಭಾವಿಸಿ, ಅವನನ್ನು ಉಳಿಸಿಕೊಳ್ಳಲು ಬಹಳ ಯೋಚನೆ ಮಾಡಿದರು. ಮಗನನ್ನು ಟ್ರಸ್ಟಿನಿಂದ ಹೊರಗೆ ಹಾಕಿಸಬೇಕು. ಇಲ್ಲವೇ ಈ ಇಬ್ಬರು ಧರ್ಮದರ್ಶಿಗಳನ್ನೂ ವಜಾ ಮಾಡಬೇಕು. ಇವರೆಡೇ ದಿವಾಕರರ ಮುಂದಿದ್ದ ಮಾರ್ಗಗಳು.
ಅಶೋಕ ಹೋಟೆಲ್‌ನಲ್ಲಿ ಸಭೆ
1973ನೇ ಅಕ್ಟೋಬರ್ 23ರಂದು ಲೋಕಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿಗಳ ಸಭೆ ನಡೆಯುವುದೆಂದು ಗೊತ್ತಾಗಿತ್ತು. ಸಭೆಯನ್ನು ಬೆಂಗಳೂರಿನ ಅಶೋಕ ಹೋಟೆಲಿನಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮೂವರು ಧರ್ಮದರ್ಶಿಗಳು ನವಜಾತ ಭಂಡಾರಿ ಮತ್ತು ಎ.ಆರ್. ದಿವಾಕರರು ಭಾಗವಹಿಸಬೇಕಾಗಿತ್ತು ಮತ್ತು ಟ್ರಸ್ಟಿನ ಲೆಕ್ಕಗಳನ್ನು ಕಾರ್ಯದರ್ಶಿ ದಿವಾಕರರು ಮಂಡಿಸಬೇಕಾಗಿತ್ತು. ಇಬ್ಬರು ಧರ್ಮದರ್ಶಿಗಳು ನವಜಾತ ಮತ್ತು ಭಂಡಾರಿ ಸಮಯಕ್ಕೆ ಸರಿಯಾಗಿ ಬಂದಿದ್ದರು. ಎ.ಆರ್. ದಿವಾಕರರಿಗಾಗಿ ಕಾಯುತ್ತಿದ್ದರು. ಒಂದು ಗಂಟೆ ತಡವಾಗಿ ಅನಂತ ಬಂದ. ಸಭೆಯೊಳಗೆ ಬರದೆ ಬಾಗಿಲಲ್ಲಿ ಕಾಯುತ್ತಾ ನಿಂತ. ಅಷ್ಟರಲ್ಲಿ ಅವರ ತಂದೆ ಆರ್.ಆರ್. ದಿವಾಕರರು ಬಂದರು. ಅವರು ಮಂಡಳಿಯ ಸದಸ್ಯರಲ್ಲವಾದ್ದರಿಂದ ಅವರನ್ನು ಒಳಗೆ ಬಿಡಲಿಲ್ಲ. ಆಗ ಆರ್.ಆರ್. ದಿವಾಕರರು ಸಿಟ್ಟಿನಿಂದ ಒಂದು ಪತ್ರವನ್ನು ಒಳಗೆ ಕಳುಹಿಸಿದರು. ಆ ಪತ್ರ ಇನ್ನಿಬ್ಬರು ಧರ್ಮದರ್ಶಿಗಳನ್ನು ಉಚ್ಛಾಟಿಸುವ ಮತ್ತು ಎ.ಆರ್. ದಿವಾಕರರನ್ನು ಏಕಮೇವ ಧರ್ಮದರ್ಶಿಯನ್ನಾಗಿ ಮಾಡಿರುವ, ನೋಟರಿ ಮುಂದೆ ಸಹಿ ಹಾಕಿದ ಘೋಷಣೆಯ ಪತ್ರವಾಗಿತ್ತು.  ಅದನ್ನು ಓದಿ ಸ್ವಲ್ಪ ಹೊತ್ತು ಇಬ್ಬರು ಧರ್ಮದರ್ಶಿಗಳು ದಂಗಾದರು. ಸಭೆಯ ಕಾರ್ಯಕಲಾಪಗಳನ್ನು ಮರುದಿನಕ್ಕೆ ಮುಂದೆ ಹಾಕಿದರು. ಮರುದಿನ ಆ ಇಬ್ಬರು ಧರ್ಮದರ್ಶಿಗಳು ಅಶೋಕ ಹೋಟೆಲ್‌ನಲ್ಲಿ ಮತ್ತೆ ಸಭೆ ಸೇರಿ ಆರ್.ಆರ್. ದಿವಾಕರರ ಘೋಷಣೆಯನ್ನು ತಿರಸ್ಕರಿಸಿದರಲ್ಲದೆ, ತಮ್ಮನ್ನು ತೆಗೆದು ಹಾಕಲು ಆರ್.ಆರ್. ದಿವಾಕರರಿಗೆ ಅಧಿಕಾರವಿಲ್ಲವೆಂದೂ, ಆದ್ದರಿಂದ ತಾವೇ ಇನ್ನು ಮುಂದೆಯೂ ಧರ್ಮದರ್ಶಿಗಳಾಗಿ ಮುಂದುವರಿಯುವುದಾಗಿಯೂ ಘೋಷಿಸಿ, ಅಪಾರ ಹಣ ದುರುಪಯೋಗ ಮಾಡಿದ ಆಪಾದನೆಯ ಮೇರೆಗೆ ಅನಂತ ದಿವಾಕರರನ್ನು ಧರ್ಮದರ್ಶಿ ಸ್ಥಾನದಿಂದ ತೆಗೆದು ಹಾಕಿರುವುದಾಗಿ ನಿರ್ಣಯ ಮಾಡಿದರು. ಇದರಿಂದ ಬಿಕ್ಕಟ್ಟು ಇನ್ನಷ್ಟು ಉಲ್ಬಣವಾಯಿತು. ತನ್ನ ಉಚ್ಛಾಟನೆಯನ್ನು ಪ್ರತಿಭಟಿಸಿ ಅನಂತ ಸಿಟಿ ಕೋರ್ಟ್‌ನಲ್ಲಿ ಇನ್ನಿಬ್ಬರು ಧರ್ಮದರ್ಶಿಗಳ ವಿರುದ್ಧ ದಾವೆ ಹಾಕಿದ. ಅವರು ಆಡಳಿತದಲ್ಲಿ ಕೈಹಾಕದಂತೆ ತಡೆಯಾಜ್ಞೆ ಪಡೆದ. ಭಂಡಾರಿಯವರೂ ಅನಂತನ ವಿರುದ್ಧ ಮತ್ತೊಂದು ಸಿಟಿ ಕೋರ್ಟಿನಲ್ಲಿ ದಾವೆ ಹಾಕಿ, ಆಡಳಿತದಲ್ಲಿ ಅವನು ಕೈ ಹಾಕದಂತೆ ತಡೆಯಾಜ್ಞೆ ಪಡೆದರು. ಈ ಎರಡು ದಾವೆಗಳ ಮೇಲ್ಮನವಿ ಹೈಕೋರ್ಟಿನವರೆಗೂ ಹೋಗಿ ಟ್ರಸ್ಟಿನ ಆಡಳಿತದಲ್ಲಿ ಅನಂತ ಕೈ ಹಾಕಬಾರದೆಂದು, ಇದುವರೆಗೆ ಅವನು ವಸೂಲು ಮಾಡಿದ ಲೆಕ್ಕಗಳನ್ನು ಕೋರ್ಟಿಗೆ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿತು.
ಆದರೆ ಅನಂತ ಈ ಆದೇಶ ಪಾಲಿಸಲೇ ಇಲ್ಲ. ಕೆಲವು ತಿಂಗಳು ಸಂಸ್ಥೆಯಲ್ಲಿ ಅರಾಜಕತೆ ಇತ್ತು. ಪತ್ರಿಕೆ ಪ್ರಕಟವಾಗುತ್ತಿದ್ದರೂ ಪ್ರಸಾರ ಕುಸಿದಿತ್ತು. ಹಣಕಾಸಿನ ಸ್ಥಿತಿ ಶೋಚನೀಯವಾಗಿತ್ತು. ಸಿಬ್ಬಂದಿಯ ಸಂಬಳ, ಮುದ್ರಣ ಕಾಗದ ಖರೀದಿಗೆ ಬ್ಯಾಂಕಿನಿಂದ ಲಕ್ಷಾಂತರ ರು. ಸಾಲ ಮಾಡಬೇಕಾಯಿತು. ಈ ಮಧ್ಯೆ ಟ್ರಸ್ಟ್‌ನ ಅಧ್ಯಕ್ಷ ನವಜಾತರು ಮದ್ರಾಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮುಂದೆ ಕೆಲವೇ ದಿನಗಳಲ್ಲಿ ಬಿ.ವಿ. ಭಂಡಾರಿಯವರೂ ತೀರಿಕೊಂಡರು. ಇವರಿಬ್ಬರ ಕಣ್ಮರೆಯಿಂದ ಅನಂತನಿಗೆ ಮತ್ತೆ ಹುರುಪು ಬಂದು, ಸರ್ವಾಧಿಕಾರಿಯಂತೆ ವರ್ತಿಸಿದ. ದಿವಾಕರರು ಅವನಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಆದರೆ ಟ್ರಸ್ಟ್‌ನ ಮತ್ತು ಪತ್ರಿಕೆಯ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಸಂಸ್ಥೆಯ ಹಿರಿಯ ನೌಕರರಲ್ಲಿ ಕೆಲವರು ಸಂಕಟ ಪಡುತ್ತಿದ್ದರು. ಆಗಾಗ್ಗೆ ಗುಪ್ತ ಸ್ಥಳಗಳಲ್ಲಿ ಸೇರಿ ಚರ್ಚಿಸುತ್ತಿದ್ದರು. ಅವರಲ್ಲಿ ನಾನೂ ಒಬ್ಬ. ಸಂಸ್ಥೆಯಲ್ಲಿ ನಡೆಯುವ ಅವ್ಯವಹಾರಗಳನ್ನು ಅವಾಂತರಗಳನ್ನು ನಿವಾರಿಸಿ ಪತ್ರಿಕೆ ಸರಾಗವಾಗಿ ನಡೆಯುವಂತೆ ಮಾಡಬೇಕೆಂದು ಎಲ್ಲರೂ ಚಿಂತಿಸುತ್ತಿದ್ದರು. ಆದರೆ ಮುಂದೆ ಬಂದು ಇದಕ್ಕಾಗಿ ಹೋರಾಡಲು ಯಾರೂ ಸಿದ್ಧರಿರಲಿಲ್ಲ. ನಾವೇಕೆ ದಿವಾಕರರ ಅವಕೃಪೆಗೆ ಪಾತ್ರರಾಗಬೇಕು. ನಾಳೆ ನಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನಮ್ಮ ಗತಿಯೇನು ಎಂದು ಅನೇಕರು ಯೋಚಿಸಿ ಸಂಸ್ಥೆಯ ಚಿಂತೆಯನ್ನೇ ಕೈ ಬಿಟ್ಟರು. ನನಗೂ ಒಮ್ಮೊಮ್ಮೆ ಅದೇ ರೀತಿ ಯೋಚನೆ ಬರುತ್ತಿತ್ತು. ನನ್ನ ಹೆಂಡತಿ ಸಹ ಸಂಯುಕ್ತ ಕರ್ನಾಟಕದ ಬಗ್ಗೆ ನೀವೇಕೆ ಅಷ್ಟು ಅಲೋಚಿಸುತ್ತೀರಿ. ಅದು ನಿಮ್ಮಪ್ಪನ ಆಸ್ತಿಯೇ? ಎಂದು ಮೂದಲಿಸುತ್ತಿದ್ದಳು. ಆದರೂ ನನಗೆ ಸಂಯುಕ್ತ ಕರ್ನಾಟಕದ ಮೇಲೆ ಏನೋ ಅಭಿಮಾನ. ಅದು ಹಾಳಾಗಬಾರದು, ಇಡೀ ಕರ್ನಾಟಕದಲ್ಲಿ ಅದರ ಹೆಸರು ಜನರ ಬಾಯಲ್ಲಿ ಆಡುತ್ತಿರಬೇಕು ಎಂದು ಅನಿಸುತ್ತಿತ್ತು. ನನಗೆ ಅನ್ನ ವಿದ್ಯೆ ಉದ್ಯೋಗಗಳನ್ನು ಕೊಟ್ಟ ಈ ಸಂಸ್ಥೆಯ ಋಣ ತೀರಿಸಲು ಏನಾದರೂ ಮಾಡಲೇಬೇಕೆಂದು ಸದಾ ಅನಿಸುತ್ತಿತ್ತು.
(ಮುಂದುವರಿಯುವುದು)


ಕೆ.ಶಾಮರಾವ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.