ಫ್ಯಾಮಿಲಿ ಸಿನಿಮಾ!

ಚಿತ್ರರಂಗದಲ್ಲಿ ಮಾಸ್, ಕ್ಲಾಸ್ ಮತ್ತು ಆರ್ಟ್ ಸಿನಿಮಾಗಳಂತೆ ಕುಟುಂಬ ಸಿನಿಮಾಗಳದ್ದೂ ಸದ್ದು ಜೋರಾಗಿಯೇ ಇರುತ್ತದೆ. ಹೀಗೆ ಫ್ಯಾಮಿಲಿ ಸಿನಿಮಾಗಳಲ್ಲಿ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ದಕ್ಕಿಸಿಕೊಂಡಿರುವ ಸಿನಿಮಾ ಮಂದಿ ರಾಜಕಾರಣದಲ್ಲೂ 'ಕೌಟುಂಬಿಕ ಪಾಲಿಸಿ' ಅನುಸರಿಸುತ್ತಿದ್ದಾರೆ.
ಕನ್ನಡ ಕಿರುತೆರೆ ಜಗತ್ತಿನಲ್ಲಿ 'ಮನೆಯೊಂದು ಮೂರು ಬಾಗಿಲು' ಎನ್ನುವ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್. ಅದೇ ರೀತಿ ಸಿನಿ ಕುಟುಂಬಗಳಲ್ಲೂ 'ಒಂದೇ ಮನೆ ಹಲವು ಪಕ್ಷಗಳು' ಎನ್ನುವ ಹೊಸ ರಾಜಕೀಯ ಧಾರಾವಾಹಿ! ಏಕಕಾಲದಲ್ಲಿ ಅಮ್ಮ ಒಂದು ಪಕ್ಷವಾದರೆ, ಅಪ್ಪ ಮತ್ತೊಂದು ಪಕ್ಷದ ನೆರಳಿನಲ್ಲಿ ನಿಂತಿದ್ದಾರೆ. ಇನ್ನು ಮಗನದ್ದೂ ಮಗದೊಂದು ಪಾರ್ಟಿ. ಕೌಟುಂಬಿಕ ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರು ಈಗ ಕೌಟುಂಬಿಕ ರಾಜಕೀಯ ಡ್ರಾಮಾಗಳನ್ನೂ ನೋಡಬಹುದು! ಇದೊಂದು ರೀತಿಯಲ್ಲಿ 'ಕುಟುಂಬ ಸಮೇತರಾಗಿ ನೋಡಬಹುದಾದ' ಕೌಟುಂಬಿಕ ರಾಜಕಾರಣ!
ಈ ಕುಟುಂಬ ರಾಜಕಾರಣ ವಿಚಾರದಲ್ಲೂ ಆಂಧ್ರಪ್ರದೇಶವೇ ಮುಂದು. ತೀರಾ ಇತ್ತೀಚೆಗಷ್ಟೆ 'ಜನಸೇನಾ' ಪಕ್ಷ ಕಟ್ಟಿ ಕಾಂಗ್ರೆಸ್ ವಿರುದ್ಧ ನಟ ಪವನ್ ಕಲ್ಯಾಣ್ ಗುಡುಗುವ ಮೂಲಕ ಸ್ವಂತ ಅಣ್ಣ ಮೆಗಸ್ಟಾರ್ ಚಿರಂಜೀವಿಗೆ ಎದುರಾಗಿ ಕತ್ತಿ ಮಸೆದಿದ್ದಾರೆ. ಅದೇ ಚಿರಂಜೀವಿ ಮಗ ನಟ ರಾಮ್ಚರಣ್ ತೇಜ ಮಾತ್ರ ತಮ್ಮ ಚಿಕ್ಕಪ್ಪನ 'ಜನಸೇನಾ' ಪಕ್ಷಕ್ಕೆ ಜೈ ಎನ್ನುತ್ತಿದ್ದಾರೆ. ಮತ್ತೊಬ್ಬ ಮೆಗಾಬ್ರದರ್ ನಾಗಬಾಬು ಮಾತ್ರ ಚಿರು ಪರ ನಿಂತಿದ್ದಾರೆ. ಇಲ್ಲಿ ಒಂದೇ ಕುಟುಂಬದಲ್ಲಿ ಮೂರು ಬಣ.
ಇನ್ನು ತಾರಕರತ್ನ ಕುಟುಂಬ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಟ ಜೂನಿಯರ್ ಎನ್ಟಿಆರ್ ಹಾಗೂ ಇವರ ಚಿಕ್ಕಪ್ಪ ನಟ ಬಾಲಕೃಷ್ಣ ಟಿಡಿಪಿ ಪರ ಬೀದಿಗಿಳಿದಿದ್ದರೆ, ಬಾಲಕೃಷ್ಣ ಸೋದರಿ ಹಾಗೂ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಕಾಂಗ್ರೆಸ್ಗೆ ಕೈ ಕೊಟ್ಟು ತೀರಾ ಇತ್ತೀಚೆಗಷ್ಟೆ ಬಿಜೆಪಿ ಕೈ ಹಿಡಿದಿದ್ದಾರೆ. ಇತ್ತ ಸೋದರ ಮತ್ತು ಅಳಿಯ ಬಿಜೆಪಿಯನ್ನು ಬೈಯುತ್ತಿದ್ದರೆ, ಪುರಂದೇಶ್ವರಿ ಮಾತ್ರ ಬಿಜೆಪಿಗೆ ಜೈ ಅನ್ನಲಿದ್ದಾರೆ.
ತೆಲುಗು ಚಿತ್ರರಂಗದ ಮತ್ತೊಬ್ಬ ಬಹುಬೇಡಿಕೆಯ ನಟ ಮಹೇಶ್ ಬಾಬು. ಇವರ ಕುಟುಂಬದಲ್ಲೂ ಎರಡು ಪಕ್ಷಗಳು. ಸೂಪರ್ಸ್ಟಾರ್ ಕೃಷ್ಣ ಪತ್ನಿ ವಿಜಯ್ ನಿರ್ಮಲ ವೈಎಸ್ಆರ್ ಕಾಂಗ್ರೆಸ್ಗೆ ಜೊತೆಯಾದರೆ, ಅವರ ಪುತ್ರ ಮಹೇಶ್ ಬಾಬು ತಮ್ಮ ಬಾವ ಗಲ್ಲಾ ಜಯದೇವ್ ಜೊತೆ ಟಿಡಿಪಿ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಇವರ ಕುಟುಂಬದ ಮತ್ತೊಬ್ಬ ಸದಸ್ಯ ನರೇಶ್ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅಲ್ಲಿಗೆ ಸೂಪರ್ಸ್ಟಾರ್ ಕೃಷ್ಣ ಕುಟುಂಬದಲ್ಲೂ ಮೂರು ಬಣ.
ಕನ್ನಡದಲ್ಲೂ ಹೀಗೆ ರಾಜಕೀಯಕ್ಕಾಗಿ ಕುಮಾರ್ ಬಂಗಾರಪ್ಪ ಹಾಗೂ ಮಧುಬಂಗಾರಪ್ಪ ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಅದೇ ಸಂದರ್ಭ ಇವರ ಸೋದರಿ ಗೀತಾ ಶಿವರಾಜ್ಕುಮಾರ್ ಜೆಡಿಎಸ್ನಿಂದ ಅಖಾಡಕ್ಕಿಳಿದ್ದಾರೆ. ಅತ್ತ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಟಿಕೆಟ್ಗಾಗಿ ಒದ್ದಾಡುತ್ತಿದ್ದಾರೆ. ಗೀತಾ ಶಿವರಾಜ್ಕುಮಾರ್ ರಾಜಕೀಯ ಸೇರಿರುವುದರಿಂದ ಮುಂದೆ ರಾಜ್ ಕುಟುಂಬದಲ್ಲೂ 'ಕೌಟುಂಬಿಕ ರಾಜಕೀಯ ಸಿನಿಮಾ' ಆರಂಭವಾಗುವ ಸಾಧ್ಯತೆಗಳಿವೆ. ಈಗಾಗಲೇ, ಅತ್ತಿಗೆ ಪರ ಪ್ರಚಾರ ಮಾಡಲು ಹೋಗಲ್ಲ ಎಂದು ನಟ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ರಾಜಕೀಯ ಎಂಥ ಸ್ಟಾರ್ ಕುಟುಂಬಗಳಲ್ಲೂ ಹುಳಿ ಹಿಡುತ್ತದೆ ಎನ್ನುವುದಕ್ಕೆ ಇದು ಸ್ಯಾಂಪಲ್ ಅಷ್ಟೆ.
-ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


